ಸೋಮವಾರ, ಜೂಲೈ 6, 2020
24 °C

ಸಣ್ಣ ಕತೆಯಲ್ಲಿ ನುಸುಳಿದ ನಕ್ಷತ್ರ

ಬಿ.ಎಸ್. ಶೈಲಜಾ Updated:

ಅಕ್ಷರ ಗಾತ್ರ : | |

ಸಣ್ಣ ಕತೆಯಲ್ಲಿ ನುಸುಳಿದ ನಕ್ಷತ್ರ

ಒಹೆನ್ರಿಯ ಕತೆಗಳು ಸುಪ್ರಸಿದ್ಧ. ಆತನ ಆಕಾಶ ಜ್ಞಾನ ಕತೆಗಳಲ್ಲಿಯೂ ಕಂಡುಬರುತ್ತದೆ. ಕಥಾನಾಯಕಿಯೊಬ್ಬಳು ಪ್ರತಿ ರಾತ್ರಿ ಆಕಾಶವನ್ನು ನೋಡುವ ಹವ್ಯಾಸ ಬೆಳೆಸಿಕೊಂಡಿದ್ದಳು. ಬಿಲ್ಲಿ ಜಾಕ್ಸನ್ ಎಂದು ನಕ್ಷತ್ರವೊಂದಕ್ಕೆ ಹೆಸರನ್ನೂ ಇಟ್ಟಿದ್ದಳು. ಅದು ಕೆಸಿಯೋಪಿಯಾ ಪುಂಜದ ಮೂರನೆಯ ಪ್ರಖರ ನಕ್ಷತ್ರ - ಗಾಮಾ. ಸುಮಾರು 40 ವರ್ಷಗಳಿಗೊಮ್ಮೆ ಪ್ರಕಾಶಮಾನವಾಗುವ ಈ ನಕ್ಷತ್ರ ಖಗೋಳ ವೀಕ್ಷಕರಿಗೆ ಬಹಳ ಶತಮಾನಗಳಿಂದ ಪರಿಚಿತ.ಇಂಗ್ಲೀಷ್ ಅಕ್ಷರ ಅಥವಾ   ಎಂಬಂತೆ ಕಾಣುವ ಐದು ನಕ್ಷತ್ರಗಳಲ್ಲಿ ಮಧ್ಯದ್ದು ಗಾಮಾ. ಇದು ಕೆಲವೊಮ್ಮೆ ಆಲ್ಫಾ (ಪ್ರಕಾಶದಲ್ಲಿ ಮೊದಲನೆಯ ಸ್ಥಾನ ಪಡೆದದ್ದು)ಗಿಂತ ಪ್ರಕಾಶಮಾನವಾಗಿ ಕಾಣುತ್ತದೆ. 610 ಜ್ಯೋತಿರ್ವರ್ಷ ದೂರದಲ್ಲಿರುವ ವಾಗಲೂ ಇದು ಪ್ರಕಾಶವಾಗಿರುವುದರಿಂದ 10000ಕೆಲ್ವಿನ್ ಗಿಂತ ಹೆಚ್ಚು ಉಷ್ಣತೆಯ ಬಿ ವರ್ಗದ ನಕ್ಷತ್ರ ಎಂದು ತಿಳಿಯಬಹುದು. ಇದನ್ನು ವಿವರವಾಗಿ ಅಭ್ಯಸಿಸಿದ ಮೇಲೆ ಇದೊಂದು ಯಮಳ ನಕ್ಷತ್ರ ಎಂದು ತಿಳಿಯಿತು.ಸಂಗಾತಿ ಸೂರ್ಯನಂತಹ ನಕ್ಷತ್ರ. ಸುಮಾರು 204 ದಿನಗಳ ಕಕ್ಷೆ. ಇದು ನೀಲಿ ನಕ್ಷತ್ರ; ಇತರ ನಕ್ಷತ್ರಗಳಿಗೆ ಹೋಲಿಸಿದರೆ ಬಹಳ ವೇಗವಾಗಿ ಆವರ್ತಿಸುತ್ತಿದೆ. ಇದರ ರೋಹಿತದಲ್ಲಿ  ್ಲಹೀರಿಕೆಯ ಕಪ್ಪು ರೇಖೆಗಳ ಬದಲು ಉತ್ಸರ್ಜನೆಯ ಬಣ್ಣದ ರೇಖೆಗಳು ಕಂಡು ಬರುತ್ತವೆ. ಆದ್ದರಿಂದ ಇದನ್ನು ಗುರುತಿಸುವಾಗ ಬಿ ಪಕ್ಕದಲ್ಲಿ ಇ ಎಂಬ ಅಕ್ಷರವನ್ನೂ ಸೇರಿಸಿ ಗುರುತಿಸುತ್ತಾರೆ. ಬಹುಶಃ ಹೆಚ್ಚಿನ ಪ್ರಮಾಣದಲ್ಲಿ ವಸ್ತು ಹೊರ ಬೀಳುತ್ತಿರುವುದೇ ಉತ್ಸರ್ಜನ ರೋಹಿತಕ್ಕೆ ಕಾರಣ. ಅಂದರೆ ನಕ್ಷತ್ರದ ಸುತ್ತ ಕವಚ ಅಥವಾ ಚಿಪ್ಪಿನ ಹಾಗೆ ಅನಿಲ ಆವರಿಸಿದೆ.ದೂರದರ್ಶಕದ ಬಳಕೆಯಾದ ಮೇಲೆ ಇದೇ ರೀತಿಯ ಅನಿಲದ ಆವರಣ ಪಡೆದ ಇನ್ನೂ ಅನೇಕ ನಕ್ಷತ್ರಗಳು ಕಂಡು ಬಂದವು. ಎಲ್ಲಕ್ಕೂ ಒಟ್ಟಾಗಿ ಗಾಮಾ ಕ್ಯಾಸ್ ನಕ್ಷತ್ರಗಳು ಎಂದೇ ಹೆಸರು. ಇದರ ಸಂಗಾತಿ ಸೂರ್ಯನಷ್ಟೇ ದ್ರವ್ಯರಾಶಿಯದಾದರೂ ಅದರ ವಿಕಾಸದ ವಿವರ ತಿಳಿದಿಲ್ಲ.ಅಂದರೆ ಅದು ನಡು ವಯಸ್ಸಿನದೇ (ಹೈಡ್ರೋಜನ್ ಬೈಜಿಕ ಕ್ರಿಯೆ ನಡೆಸುತ್ತದೆಯೇ) ಅಥವಾ ಅವಸಾನ ಹಂತ ತಲುಪಿರುವ ಶ್ವೇತ ಕುಬ್ಜವೇ ಅಥವಾ ನ್ಯೂಟ್ರಾನ್ ನಕ್ಷತ್ರವೇ - ಈ ಬಗ್ಗೆ ವಿವರಗಳು ತಿಳಿದಿಲ್ಲ.ಈ ನಕ್ಷತ್ರ ಎಕ್ಸ್ ಕಿರಣಗಳನ್ನೂ ಧಾರಾಳವಾಗಿ ಹೊಮ್ಮಿಸುತ್ತದೆ ಎಂಬ ಅಂಶ ಬಾಹ್ಯಾಕಾಶ ನೌಕೆಗಳಿಂದ ತಿಳಿದಿದೆ. ಅಯಸ್ಕಾಂತ ಕ್ಷೇತ್ರಗಳ ಪ್ರಭಾವವನ್ನೂ ಗುರುತಿಸಲು ಸಾಧ್ಯವಾಗಿದೆ. ನಕ್ಷತ್ರದ ಸುತ್ತ ಹರಡಿರುವ ನೆಬ್ಯುಲಾ ನಕ್ಷತ್ರದ ಬೆಳಕನ್ನು ಪ್ರತಿಫಲಿಸುತ್ತದೆ. ಅತಿ ಪ್ರಕಾಶ ಪಡೆದ ಭಾಗ ನಕ್ಷತ್ರದ ದಿಕ್ಕಿಗೇ ಇದೆ.ದೊಡ್ಡ ದೂರದರ್ಶಕದ ಮೂಲಕ ಗಮನಿಸಿ ನೋಡಿದರೆ ಇದರ ಪಕ್ಕದಲ್ಲಿ ಇನ್ನೊಂದು ಕ್ಷೀಣ ಚುಕ್ಕೆ ಕಾಣುತ್ತದೆ. ಅದು ಇದೇ ದಿಕ್ಕಿನಲ್ಲಿ ಬಹಳ ದೂರದಲಿರ್ಲುವ ನಕ್ಷತ್ರ; ಎರಡರ ನಡುವೆ ಗುರುತ್ವಾಕರ್ಷಣೆ ಇದ್ದಂತಿಲ್ಲ. ಯಮಳದ ಸಂಗಾತಿಯನ್ನು ಬಿ ಎಂದೂ ಇದನ್ನು ಸಿ ಎಂದೂ ಗುರುತಿಸುತ್ತಾರೆ.ಚೀನಾ ಮತ್ತು ಅರಬ್ ವೀಕ್ಷಕರು ಸಾವಿರಾರು ವರ್ಷಗಳ ಹಿಂದೆಯೇ ಇದು ಚಂಚಲ ನಕ್ಷತ್ರ ಎಂದು ಗುರುತಿಸಿದ್ದರು. ತ್ಸಿಹ್ ಎಂಬುದು ಚೀನೀ ಹೆಸರು. ಬಾಹ್ಯಾಕಾಶ ನೌಕೆಯಲ್ಲಿ ್ಲಚಲನೆಯ ಗತಿ ನಿರ್ಧರಿಸಲು ಈ ನಕ್ಷತ್ರವನ್ನೇ ಆಧಾರವಾಗಿ  ಗಗನಯಾತ್ರಿ ಇವಾನ್ ಗ್ರಿಸಂ ಬಳಸಿದ್ದ.ಆತ ಅಪೋಲೋ 1 ನೌಕೆಯ ಅಪಘಾತದಲ್ಲಿ 1967ರಲ್ಲಿ ಮಡಿದ ಮೇಲೆ ನವಿ ಎಂದು ಲಾಗ್ ಬುಕ್‌ನಲ್ಲಿ ್ಲ ಸೂಚಿಸಿದ್ದ ನಕ್ಷತ್ರ ಯಾವುದು ಎಂದು ಜಿಜ್ಞಾಸೆ ಆರಂಭವಾಗಿತ್ತು. ತನ್ನ ಹೆಸರನ್ನೇ ತಿರುಗು ಮುರುಗು ಮಾಡಿ ಈ ನಕ್ಷತ್ರಕ್ಕೆ ನವಿ ಎಂದು ಹೆಸರಿಸಿದ್ದ ಎಂದು ಊಹಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.