ಸೋಮವಾರ, ಮೇ 16, 2022
28 °C

ಸತ್ತವನ ಬದುಕಿಸುವ ಯತ್ನ ವಿಫಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ‘ಸತ್ತವ’ನನ್ನು ಬದುಕಿಸಲು ಸತತ 24 ಗಂಟೆಗೂ ಹೆಚ್ಚುಕಾಲ ಯತ್ನಿಸಿದ ‘ಪವಾಡ’ ಕೊನೆಗೂ ಕೈಗೂಡದಿರುವ ವಿಚಿತ್ರ ಘಟನೆ ಇಲ್ಲಿ ನಡೆದಿದೆ. ಇಲ್ಲಿಯ ಅಬ್ದುಲ್‌ರಜಾಕ ದರ್ಗಾ (ಜೋಡಗುಮ್ಮಟ) ಹತ್ತಿರದ ನಿವಾಸಿ ಮುನಾಫ್ ಲಷ್ಕರಿ (32) ಕೊನೆಗೂ ‘ಜೀವ ಸಹಿತ ಎದ್ದುಬಾರದ’ ‘ದುರ್ದೈವಿ’.ಮುನಾಫ್ ಲಷ್ಕರಿ ಬಾಗಲಕೋಟೆ ಜಿಲ್ಲೆಯ ಕಂದಗಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಪಲ್ಸ್ ಪೋಲಿಯೊಕಾರ್ಯಕ್ರಮದ ಸಂದರ್ಭದಲ್ಲಿ ಹಾವು ಕಚ್ಚಿ ಆಸ್ಪತ್ರೆಯಲ್ಲಿ ಮಂಗಳವಾರ (ಮಾ.1ರಂದು ) ರಾತ್ರಿ ಮೃತಪಟ್ಟಿದ್ದರು.ಬುಧವಾರ (ಮಾ.2ರಂದು) ಬೆಳಿಗ್ಗೆ ಆತನ ಹುಟ್ಟೂರು ವಿಜಾಪುರಕ್ಕೆ ಶವವನ್ನು ಕಳಿಸಿಕೊಡಲಾಗಿತ್ತು. ಬುಧವಾರ ಮಧ್ಯಾಹ್ನ 1ರ ನಂತರ ಶವಸಂಸ್ಕಾರ ನಡೆಸಲು ಸಮಯ ನಿಗದಿಮಾಡಿ ಸಂಬಂಧಿಕರೆಲ್ಲರಿಗೂ ಮಾಹಿತಿ ನೀಡಲಾಗಿತ್ತು. ಗೋರಿಯನ್ನೂ ಸಿದ್ಧ ಪಡಿಸಿಕೊಳ್ಳಲಾಗಿತ್ತು.‘ಶವವನ್ನು ಮನೆಗೆ ತಂದಾಗ ಕೈಯೊಂದು ಅಲುಗಾಡಿದಂತಾಯಿತು. ಮುನಾಫ್ ಇನ್ನೂ ಸತ್ತಿಲ್ಲ. ಜೀವಂತವಾಗಿಯೇ ಇದ್ದಾನೆ ಎಂದು ಒಬ್ಬ ಹೇಳಿದರು. ಹಾವು ಕಚ್ಚಿದವರಿಗೆ ಔಷಧಿ ನೀಡುವ ‘ಸಾಧಕ’ರೊಬ್ಬರನ್ನು ಹಳ್ಳಿಯಿಂದ ಕರೆತರಲಾಯಿತು. ಈ ‘ಸಾಧಕ’ ಬುಧವಾರ ಮಧ್ಯಾಹ್ನದಿಂದ ಗುರುವಾರ ಬೆಳಿಗ್ಗೆಯ ವರೆಗೂ ಔಷಧಿ ನೀಡುವ ಏನೆಲ್ಲ ಕಸರತ್ತು ನಡೆಸಿದರೂ ಪ್ರಯೋಜವಾಗಲಿಲ್ಲ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.ಸತ್ತ ವ್ಯಕ್ತಿಯನ್ನು ಬದುಕಿಸುವ ಈ ‘ಪವಾಡ’ವನ್ನು ಕಣ್ಣಾರೆ ಕಾಣಲು ಮೃತನ ಮನೆಯಲ್ಲಿ ಅಪಾರ ಸಂಖ್ಯೆಯ ಜನ ನೆರೆದಿದ್ದರು. ಕೆಲವರು ರಾತ್ರಿ ಇಡೀ ಅಲ್ಲಿಯೇ ಬಿಡಾರ ಹೂಡಿ ಕಣ್ಣು ಪಿಳುಕಿಸದೇ ಪವಾಡ ನಡೆಯುವುದನ್ನೇ ದಿಟ್ಟಿಸುತ್ತಿದ್ದರು. ಆದರೆ, ‘ಸಾಧಕ’ ಮತ್ತು ‘ಮುನಾಫ್’ನ ದುರಾದೃಷ್ಟವೋ ಗೊತ್ತಿಲ್ಲ.  ‘ಅದೃಷ್ಟ’ ಕೈಗೂಡಲಿಲ್ಲ. ಅವರೆಲ್ಲರ ಹಾರೈಕೆ, ಆಸೆ ಈಡೇರಲೇ ಇಲ್ಲ.

‘ಹಾವು ಕಚ್ಚಿ ಬಹಳ ಸಮಯವಾಗಿದ್ದರಿಂದ ಬದುಕಿಸುವುದು ಕಷ್ಟ’ ಎಂದು ಆ ‘ಸಾಧಕ’ ಕೈ ಚೆಲ್ಲಿ ಅಲ್ಲಿಂದ ‘ಮರೆಯಾದ’. ಕೊನೆಗೆ ಓಣಿಯ ಹಿರಿಯರೆಲ್ಲರೂ ಸೇರಿ ಶವವನ್ನು ಸಂಸ್ಕಾರ ಮಾಡಲು ನಿರ್ಧರಿಸಿ ಎಲ್ಲರಿಗೂ ಮತ್ತೆ ಮಾಹಿತಿ ನೀಡಿದರು. ಗುರುವಾರ (ಮಾ.3ರಂದು) ಬೆಳಿಗ್ಗೆ 11ಕ್ಕೆ ಮನಗೂಳಿ ರಸ್ತೆಯಲ್ಲಿರುವ ಹಜರತ್ ಮುರ್ತುಜಾ ಖಾದ್ರಿ ಖಬರಸ್ಥಾನದಲ್ಲಿ ಮನಾಫ್‌ನ ಪಾರ್ಥಿವ ಶರೀರದ ಸಂಸ್ಕಾರ ನಡೆಸಲಾಯಿತು.ಈ ಘಟನೆ ಇಡೀ ವಿಜಾಪುರ ನಗರದಲ್ಲಿ ಪ್ರಮುಖ ಚರ್ಚಾ ವಿಷಯವಾಗಿತ್ತು. ಎಲ್ಲರಲ್ಲಿಯೂ ಕುತೂಹಲ ಕೆರಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.