ಸದ್ಯಕ್ಕೆ ನಿವೃತ್ತಿಯಿಲ್ಲ: ಬೋಲ್ಟ್
ಲಂಡನ್: `ಕ್ರೀಡೆಯಲ್ಲಿ ಜೀವಂತ ದಂತಕತೆ ಎನಿಸಿಕೊಳ್ಳಬೇಕೆಂದು ನಾನು ಕಳೆದ ಮೂರು ವರ್ಷಗಳಿಂದ ಹೇಳುತ್ತಾ ಬಂದಿದ್ದೇನೆ. ಇದೀಗ ಅದನ್ನು ಮಾಡಿತೋರಿಸಿದ್ದೇನೆ. ಇನ್ನು ಅಲ್ಪ ವಿಶ್ರಾಂತಿ ಪಡೆಯಬೇಕು. ಆ ಬಳಿಕ ಹೊಸ ಗುರಿ ಇಟ್ಟುಕೊಂಡು ಅದನ್ನು ಈಡೇರಿಸಲು ಪ್ರಯತ್ನಿಸುವೆ~ ಎಂದು ಬೋಲ್ಟ್ ಪ್ರತಿಕ್ರಿಯಿಸಿದ್ದಾರೆ.
ಲಂಡನ್ ಕೂಟದ 100 ಮೀ. ಹಾಗೂ 200 ಮೀ. ಓಟದಲ್ಲಿ ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿರುವ ಬೋಲ್ಟ್ ಈಗ ನಿರಾಳರಾಗಿದ್ದಾರೆ. ನಿವೃತ್ತಿಯ ಬಗ್ಗೆ ಸದ್ಯ ಯಾವುದೇ ಯೋಚನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
`30 ವರ್ಷ ವಯಸ್ಸಾದ ಬಳಿಕವಷ್ಟೇ ನಿವೃತ್ತಿಯ ಕುರಿತು ಯೋಚನೆ ಮಾಡುವೆ. ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆ ಅಷ್ಟು ಸುಲಭವಲ್ಲ. ಯೋಹಾನ್ ಬ್ಲೇಕ್ ಈಗ ಅತ್ಯುತ್ತಮವಾಗಿ ಓಡುತ್ತಿದ್ದಾರೆ. ಆದ್ದರಿಂದ ಮುಂದಿನ ನಾಲ್ಕು ವರ್ಷ ಅವರು ಅದ್ಭುತ ಫಾರ್ಮ್ನಲ್ಲಿರಬಹುದು. ಅವರು ಇನ್ನಷ್ಟು ವೇಗವಾಗಿ ಓಡುವುದನ್ನು ಆರಂಭಿಸುವ ಮುನ್ನ ನಾನು ನಿವೃತ್ತಿಯಾಗುವೆ. ಆದರೆ ಶೀಘ್ರದಲ್ಲೇ ವಿದಾಯ ಹೇಳುವುದಿಲ್ಲ. ಈ ಕ್ರೀಡೆಯನ್ನು ನಾನು ಅತಿಯಾಗಿ ಪ್ರೀತಿಸುವೆ. ಈ ಕ್ರೀಡೆಯಿಂದಾಗಿಯೇ ನನಗೆ ಯಶಸ್ಸು ಹಾಗೂ ಅಭಿಮಾನಿಗಳು ದೊರೆತಿದ್ದಾರೆ~ ಎಂದರು.
ಮುಂದಿನ ಒಲಿಂಪಿಕ್ಸ್ನಲ್ಲಿ ಕಣದಲ್ಲಿರುವಿರೇ ಎಂದು ಕೇಳಿದಾಗ ಬೋಲ್ಟ್, `ಅದೊಂದು ತುಂಬಾ ಕಠಿಣ ಗುರಿ. ಇವರಿಬ್ಬರಿಗೆ (ಬ್ಲೇಕ್ ಮತ್ತು ವಾರೆನ್) ಈಗ 22 ವರ್ಷ ವಯಸ್ಸು. ರಿಯೊ ಒಲಿಂಪಿಕ್ಸ್ ವೇಳೆಗೆ ಇವರಿಗೆ 26 ಆಗಲಿದೆ. ನನಗೆ 30 ವರ್ಷ ವಯಸ್ಸಾಗುತ್ತದೆ. ಜೀವನದಲ್ಲಿ ಏನು ಬೇಕಾದರೂ ನಡೆಯಬಹುದು. ಆದರೂ ಮುಂದಿನ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವುದು ದೂರದ ಮಾತೇ ಸರಿ~ ಎಂದು ಉತ್ತರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.