ಗುರುವಾರ , ಜೂನ್ 17, 2021
29 °C

ಸನ್ನಡತೆ ನಿರ್ಧಾರ ಪ್ರಶ್ನಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 285 ಕೈದಿಗಳನ್ನು ಸುವರ್ಣ ಕರ್ನಾಟಕ ವರ್ಷಾಚರಣೆ (2006ರಲ್ಲಿ) ಸಂದರ್ಭದಲ್ಲಿ ಬಿಡುಗಡೆ ಮಾಡಿದ ಕ್ರಮ ಸಂವಿಧಾನಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಬಿಡುಗಡೆ ಆದೇಶವನ್ನು ರದ್ದು ಮಾಡುವ ಕುರಿತು ಈಗಿನ ಸರ್ಕಾರ ಮತ್ತು ರಾಜ್ಯಪಾಲರು ಸಮಾಲೋಚನೆ ನಡೆಸುವಂತೆ ಕೋರ್ಟ್ ಸೂಚಿಸಿದೆ. ಶಿಕ್ಷೆ ಇನ್ನೂ ಆರು ವರ್ಷ ಬಾಕಿ ಇರುವಾಗಲೇ 285 ಅಪರಾಧಿಗಳನ್ನು ಸನ್ನಡತೆಯ ಹೆಸರಿನಲ್ಲಿ ಬಿಡುಗಡೆ ಮಾಡಿದ ನಿರ್ಧಾರವೇ ಸಂಶಯಾಸ್ಪದ. ಇಷ್ಟು ದೊಡ್ಡ ಸಂಖ್ಯೆಯ ಅಪರಾಧಿಗಳು ಏಕಕಾಲಕ್ಕೆ ಸನ್ನಡತೆ ಮೈಗೂಡಿಸಿಕೊಂಡರೇ? ಅಂದಿನ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಒತ್ತಾಯಕ್ಕೆ ಮಣಿದು ರಾಜ್ಯಪಾಲ ಟಿ.ಎನ್. ಚತುರ್ವೇದಿ ಕೈದಿಗಳ ಬಿಡುಗಡೆಗೆ ಅನುಮತಿ ನೀಡಿದ್ದರು. ಜೀವಾವಧಿ ಶಿಕ್ಷೆಗೆ ಒಳಗಾದವರನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲು ಅನುಮತಿ ನೀಡುವ ಮೊದಲು ರಾಜ್ಯಪಾಲರು ಕಾನೂನು ಹಾಗೂ ಸಂವಿಧಾನ ತಜ್ಞರ ಸಲಹೆ ಪಡೆಯಬೇಕಿತ್ತು. ಹಾಗೆ ಮಾಡದೆ ರಾಜ್ಯಪಾಲರು ಕರ್ತವ್ಯಲೋಪ ಎಸಗಿದರು. ಹಿಂದಿನ ಸರ್ಕಾರವೂ ಸಂವಿಧಾನಕ್ಕೆ ಅಪಚಾರ ಎಸಗಿದೆ. ಈ ಪ್ರಕರಣವನ್ನು ಈಗಿನ ಸರ್ಕಾರ ಮತ್ತು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಬೇಕು. ಸಂವಿಧಾನಬಾಹಿರ ಬಿಡುಗಡೆ ಆದೇಶವನ್ನು ರದ್ದು ಮಾಡುವುದೇ ಸರಿಯಾದ ಕ್ರಮ. ಅಷ್ಟೇ ಅಲ್ಲ, 285 ಕೈದಿಗಳ ಬಿಡುಗಡೆ ಮಾಡಲು ಶಿಫಾರಸು ಮಾಡಿದ ಸರ್ಕಾರದ ಉದ್ದೇಶ ಕುರಿತೂ ತನಿಖೆಯಾಗಬೇಕು. ಬಿಡುಗಡೆಯಾಗಿರುವ ಕೈದಿಗಳ ಹಿನ್ನೆಲೆಯನ್ನು ಜಾಲಾಡಿದರೆ ದುರುದ್ದೇಶ ಬೆಳಕಿಗೆ ಬರುತ್ತದೆ. ದುರುದ್ದೇಶ ಸಾಬೀತಾದರೆ ಅದಕ್ಕೆ ಸಂಬಂಧಪಟ್ಟವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇನ್ನಷ್ಟು ಕೈದಿಗಳನ್ನು ಬಿಡುಗಡೆ ಮಾಡಿಸುವ ಉದ್ಧಟತನಕ್ಕೆ ಬಿ.ಎಸ್. ಎಡಿಯೂರಪ್ಪ ನೇತೃತ್ವದ ಸರ್ಕಾರವೂ ಕೈಹಾಕಿತ್ತು. 2010ರಲ್ಲಿ ಸರ್ಕಾರ ಐದು ಮತ್ತು ಏಳು ವರ್ಷಗಳಷ್ಟು ಶಿಕ್ಷೆ ಮುಗಿಸಿದ ಅಪರಾಧಿಗಳ ದೊಡ್ಡ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿ ಬಿಡುಗಡೆಗೆ ಶಿಫಾರಸು ಮಾಡಿತ್ತು. ಆದರೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಪ್ರತಿಯೊಬ್ಬ ಕೈದಿಯ ಸನ್ನಡತೆಯ ವಿವರ ಕೇಳುವ ಮೂಲಕ ಅನುಮತಿ ನಿರಾಕರಿಸಿದ್ದರು. ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ಆಗಲೇಬೇಕು ಎನ್ನುವುದು ಪ್ರತಿ ಪ್ರಕರಣದ ಸಂತ್ರಸ್ತರ ಆಶಯ. ಆದರೆ ಕೆಲ ವಿಶಿಷ್ಟ ಪ್ರಕರಣದಲ್ಲಿ ಅಪರಾಧಿಯ ಸನ್ನಡತೆಯನ್ನು ಪರಿಗಣಿಸಿ ಬಿಡುಗಡೆಗೆ ಸರ್ಕಾರ ಶಿಫಾರಸು ಮಾಡಬಹುದು. ಅದನ್ನು ರಾಜ್ಯಪಾಲರು ಪರಿಗಣಿಸಬಹುದು. ಆದರೆ ಯಾವುದೇ ಸರ್ಕಾರ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡಿಸಲು ಶಿಫಾರಸು ಮಾಡಿದರೆ ಅದರ ಹಿಂದೆ ರಾಜಕೀಯ ದುರುದ್ದೇಶ ಇರುತ್ತದೆ.  ಕೈದಿಗಳನ್ನು ಸಾಮೂಹಿಕವಾಗಿ ಸನ್ನಡತೆಯ ಆಧಾರದಲ್ಲಿ ಅವಧಿಗೆ ಮೊದಲೇ ಬಿಡುಗಡೆಗೆ ಶಿಫಾರಸು ಮಾಡಿದರೆ ರಾಜ್ಯಪಾಲರು ಅಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಸರ್ಕಾರದ ಒತ್ತಾಯಕ್ಕೆ ಮಣಿದರೆ ಅಪರಾಧಗಳಿಗೆ ಉತ್ತೇಜನ ಕೊಟ್ಟಂತಾಗುತ್ತದೆ. ಅದು ನ್ಯಾಯಾಂಗ ವ್ಯವಸ್ಥೆಗೆ ಮಾಡುವ ಅವಮಾನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.