ಮಂಗಳವಾರ, ಮೇ 11, 2021
26 °C

ಸನ್ನದ್ಧತೆಯ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ತರ ಭಾರತಕ್ಕೆ ಪ್ರವಾಹ ಹೊಸದಲ್ಲ. ಆದರೆ ಈ ಬಾರಿ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ  ಜಲ ಪ್ರಳಯವನ್ನು ನೆನಪಿಸುವಂತಹ ಪ್ರವಾಹದ ಬಿರುಸಿಗೆ  ಸಾವು, ನೋವುಗಳೊಂದಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 150 ಜನರು ಪ್ರಾಣ ಕಳೆದುಕೊಂಡಿದ್ದು, 75,000ಕ್ಕೂ ಹೆಚ್ಚು ಮಂದಿ ನಿರಾಶ್ರಿತ ರಾಗಿದ್ದಾರೆ.

ಪ್ರವಾಹದ ಅಪಾಯಗಳನ್ನು ದಕ್ಷವಾಗಿ ನಿರ್ವಹಿಸುವಲ್ಲಿನ ಸನ್ನದ್ಧತೆಯ ಕೊರತೆಯನ್ನು ಈ ವಿದ್ಯಮಾನ ಮತ್ತೊಮ್ಮೆ ನೆನಪಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಮಳೆ ತಡವಾಗಿ ಆರಂಭವಾಗುವುದು ಮತ್ತು ನಿರೀಕ್ಷಿಸದೆ ಇದ್ದಾಗ ಬಿರುಸಾಗಿ ಬೀಳುವುದು ಸಾಮಾನ್ಯವಾಗಿದೆ.

ಹವಾಮಾನದ ಈ ವೈಪರೀತ್ಯಕ್ಕೆ ಪರಿಸರ ಮಾಲಿನ್ಯ ಕಾರಣ ಎಂದು ವಿಜ್ಞಾನಿಗಳು ತಿಳಿಸಿದರೂ ಅವರ ಮುನ್ನೆಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದೆ ಮಾಲಿನ್ಯ ನಿಯಂತ್ರಣಕ್ಕೆ ಯಾವುದೇ ಸಮರ್ಥ ಕ್ರಮ ಕೈಗೊಳ್ಳದ ಕಾರಣ ಸಕಾಲದಲ್ಲಿ ಮಳೆ ಬಾರದಿರುವುದು; ಬಂದರೆ ಮುಸಲ ಧಾರೆ, ಕೈಕೊಟ್ಟರೆ ತೀವ್ರ ಬರಗಾಲ ಪರಿಸ್ಥಿತಿ ಎಂಬಂತಾಗಿದೆ.

  ಉತ್ತರಪ್ರದೇಶ, ಬಿಹಾರ, ಉತ್ತರಾಖಂಡ, ಗುಜರಾತ್, ನೆರೆಯ ಆಂಧ್ರಪ್ರದೇಶ ಹಲವಾರು ಬಾರಿ ಪ್ರವಾಹ, ಭೂಕಂಪದಂತಹ ನೈಸರ್ಗಿಕ ವಿಪತ್ತುಗಳಿಗೆ ಸಿಲುಕಿವೆ. ಕರ್ನಾಟಕವೂ ಮಳೆ, ಪ್ರವಾಹಗಳಿಂದ ಸಾಕಷ್ಟು ಬಳಲಿದೆ. ತಮಿಳುನಾಡು ಸುನಾಮಿಯಿಂದ ತತ್ತರಿಸಿದ್ದು ಇದೆ. ಇಂತಹ ನೈಸರ್ಗಿಕ ವಿಪತ್ತುಗಳನ್ನು  ಸಮರ್ಥವಾಗಿ ಎದುರಿಸುವಲ್ಲಿ ಹೆಚ್ಚಿನ ದಕ್ಷತೆಯ ಅಗತ್ಯವಿದೆ.

ಇದಕ್ಕಾಗಿಯೇ  2006ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು (ಎನ್‌ಡಿಎಂಎ) ಸ್ಥಾಪಿಸಲಾಗಿದೆ. ಪ್ರಧಾನಿಯವರು ಈ ಪ್ರಾಧಿಕಾರದ ಅಧ್ಯಕ್ಷರು. ವಿಪತ್ತಿನ ಕುರಿತಾದ ಮುನ್ಸೂಚನೆ, ಸಿದ್ಧತೆ ಹಾಗೂ ವ್ಯವಸ್ಥಿತ ಪರಿಹಾರ ಕಾರ್ಯಗಳು ವಿಪತ್ತು ನಿರ್ವಹಣೆಯಲ್ಲಿ ಮುಖ್ಯವಾದದ್ದು. ಆದರೆ  ಇದರ ಅನುಷ್ಠಾನದಲ್ಲಿ ಸಾಕಷ್ಟು ದೋಷಗಳಿವೆ ಎಂದು  ಮಹಾಲೇಖಪಾಲರು (ಸಿಎಜಿ) ಈ ವರ್ಷದ ಏಪ್ರಿಲ್‌ನಲ್ಲಿ ನೀಡಿರುವ ವರದಿಯಲ್ಲಿ ಎತ್ತಿ ತೋರಿಸಿದ್ದಾರೆ.ವಿಪತ್ತು ನಿರ್ವಹಣೆಗೆ ಸಂಬಂಧಪಟ್ಟ ಸಂಸ್ಥೆಗಳ ಸ್ಥಾಪನೆ ಮತ್ತು ನಿಧಿ ಸ್ಥಾಪನೆಯ ವಿಚಾರದಲ್ಲಿ ಪ್ರಗತಿ ಸಾಧಿಸಲಾಗಿದೆ ನಿಜ. ಆದರೆ ವಿವಿಧ ವಿಪತ್ತುಗಳನ್ನು ಎದುರಿಸಲು ಅಣಿಯಾಗುವ ಹಂತದಲ್ಲೇ ದೋಷವಿದೆ. ದೇಶದ ಕರಾವಳಿಯ ಶೇ 76ರಷ್ಟು ಭಾಗ ಚಂಡಮಾರುತ ಮತ್ತು ಸುನಾಮಿ ಬೆದರಿಕೆ ಎದುರಿಸುತ್ತಿದೆ.

ಶೇ 59ರಷ್ಟು ಪ್ರದೇಶಗಳು ಭೂಕಂಪ, ಶೇ 10ರಷ್ಟು ಪ್ರದೇಶಗಳು ಪ್ರವಾಹಕ್ಕೆ ಒಳಗಾಗುತ್ತವೆ. ನೆರೆಯ  ಚೀನಾ ಮತ್ತು ನೇಪಾಳದ ನದಿಗಳು ತುಂಬಿ ಹರಿದರೆ, ಅಲ್ಲಿನ ಅಣೆಕಟ್ಟೆಗಳು ಒಡೆದರೆ ಭಾರತದ ಗಡಿ ಗ್ರಾಮಗಳಿಗೆ ವಿಪತ್ತು ಖಚಿತ. ಪರಿಸ್ಥಿತಿ ಹೀಗಿರುವಾಗ ವಿವಿಧ ವಿಪತ್ತುಗಳನ್ನು ಎದುರಿಸುವ ವಿಷಯದಲ್ಲಿ ವಿವಿಧ ಇಲಾಖೆಗಳ ಮಧ್ಯೆ  ಸಂಪರ್ಕ ಕೊರತೆಯಿದ್ದು, ಪ್ರವಾಹ ಪೀಡಿತರ ಶೋಧ ತಂಡಗಳ ಸಾಮರ್ಥ್ಯ ಹಾಗೂ ಪರಿಹಾರ ವಿತರಣೆಗಳಲ್ಲಿ ದೋಷವಿದೆ ಎಂಬಂಥ ಸಿಎಜಿ ವರದಿ ನಮ್ಮ ಕಣ್ತೆರೆಸಬೇಕು.

ದೇಶದಲ್ಲಿ ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಕಂಡಿದೆ. ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿಯೇ ಸಂಭವಿಸಿದೆ. ಹೀಗಿದ್ದೂ ವಿಪತ್ತುಗಳ ನಿರ್ವಹಣೆಯಲ್ಲಿ ಇಂದಿಗೂ ಎದುರಿಸುತ್ತಿರುವ ಸನ್ನದ್ಧತೆಯ ವೈಫಲ್ಯ, ದೂರದೃಷ್ಟಿಯ ಕೊರತೆ ನಿವಾರಿಸಿಕೊಳ್ಳುವುದು ಆದ್ಯತೆಯಾಗಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.