ಭಾನುವಾರ, ಏಪ್ರಿಲ್ 11, 2021
32 °C

ಸನ್ಯಾಸ ಸ್ವೀಕರಿಸಿದ ಟೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಇಲ್ಲಿನ ಸರಕಾರಿ ಬಾಲಿಕೆಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ನಡೆದ ಭವ್ಯ ಮತ್ತು ವಿಧಿವತ್ತಾದ ಧಾರ್ಮಿಕ ಸಮಾರಂಭದಲ್ಲಿ ಜೈನ ಧರ್ಮ ಸನ್ಯಾಸಿನಿ ದೀಕ್ಷಾ ಸ್ವೀಕರಿಸಿದ ಟೀನಾ ಬೆಹನ ಜಯಂತಿಲಾಲ ಓಸ್ವಾಲ ಅವರು ಸಾದ್ವಿ ಪ್ರಿಯಾಪ್ರಜ್ಞಾಶ್ರೀಜಿ ಎಂದು ಮರುನಾಮಕರಣಗೊಂಡರು. ಇದಕ್ಕೂ ಮೊದಲು ಟೀನಾ ಅವರ ಕೇಶ ಮುಂಡನ ನಡೆಯಿತು. ನಂತರ ಬಿಳಿವಸ್ತ್ರ ಧರಿಸಿದ ಅವರು ಪ.ಪೂ.ಭವ್ಯಚಂದ್ರ ವಿಜಯಜಿ ಶ್ರೀಗಳಿಂದ ಸನ್ಯಾಸಿ ದೀಕ್ಷಾ ಸ್ವೀಕರಿಸಿದರು. ತಮ್ಮ ಮನಸ್ಸನ್ನು ಶುಭ್ರಗೊಳಿಸಿಕೊಳ್ಳುವುದರ ಸಂಕೇತವಾಗಿ ಕೆಲವು ವಿಧಿವಿಧಾನಗಳನ್ನು ಪಾಲಿಸಿದರು.ನಂತರ ಮಾತನಾಡಿದ ಪ.ಪೂ.ಭವ್ಯಚಂದ್ರ ವಿಜಯಜಿ ಶ್ರೀಗಳು ಪರಮಾತ್ಮನ ಮಾರ್ಗದಲ್ಲಿ ಸಾಗುವ ನಿಟ್ಟಿನಲ್ಲಿ ಬೇಕಾಗುವ ಆತ್ಮಪರಿಶುದ್ಧತೆಗೆ ಇಂದಿನ ಸನ್ಯಾಸ ದೀಕ್ಷಾ ಸಮಾರಂಭ ಪ್ರೇರಣೆಯಾಗಲಿ ಎಂದು ಸನ್ಯಾಸ ದೀಕ್ಷಾ ಸ್ವೀಕರಿಸಿದ ನೂತನ ಸಾದ್ವಿ ಪ್ರಿಯಾಪ್ರಜ್ಞಾಶ್ರೀ ಅವರಿಗೆ ಬೋಧನೆ ಮಾಡಿದರು. ಸನ್ಯಾಸ ದೀಕ್ಷಾ ಸ್ವೀಕರಿಸಿದ ನೂತನ ಸಾದ್ವಿಯ ಮರುನಾಮಕರಣಕ್ಕೆ ಭಂಡಾರಿ ಪರಿವಾರದವರು 9,99,999 ರೂಪಾಯಿಗಳ ಸವಾಲು ಪಡೆದದ್ದು ಸನ್ಯಾಸ ದೀಕ್ಷಾ ಸಮಾರಂಭದ ಮಹತ್ವವನ್ನು ಸಾರುವಂತಿತ್ತು.ಸನ್ಯಾಸ ದೀಕ್ಷಾ ಸ್ವೀಕರಿಸುತ್ತಿದ್ದಂತಯೇ ಅಲ್ಲಿ ನೆರೆದಿದ್ದ ಬಹುತೇಕ ಎಲ್ಲರೂ ಕುಣಿದು ಕುಪ್ಪಳಿಸಿದರು. ವಾದ್ಯಗಳನ್ನು ನುಡಿಸಿ ಸಂಭ್ರಮಿಸಿದರು. ಮುಂಬೈನಿಂದ ಆಗಮಿಸಿದ್ದ ರೂಪೇಶಕುಮಾರ ವೋರಾ ಕಾರ್ಯಕ್ರಮವನ್ನು ನಿರೂಪಿಸಿದರು. ಪ.ಪೂ.ಸಿದ್ಧಸೇನ ವಿಜಯಜಿ ಶ್ರೀಗಳು ಕೂಡ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಸಾದ್ವಿ ಪ್ರಿಯಾಪ್ರಜ್ಞಾಶ್ರೀಜಿ ಅವರು ಪೂರ್ಣಾಪ್ರಜ್ಞಾಶ್ರೀಜಿ ಅವರನ್ನು ತಮ್ಮ ಗುರುಗಳನ್ನಾಗಿ ಸ್ವೀಕರಿಸಿದರು. ಜೈನ ಧರ್ಮನಾಥ ಶ್ವೇತಾಂಬರ ಮೂರ್ತಿ ಪೂಜೆ ಸಂಘ ಜಮಖಂಡಿ ಇವರು ಸಮಾರಂಭವನ್ನು ಆಯೋಜಿಸಿದ್ದರು. ಸಹಕಾರಿ ಧುರೀಣ ಅರುಣಕುಮಾರ ಶಹಾ, ವಕೀಲ ಎಂ.ಸಿ ಭಂಡಾರಿ, ಕಾಂತಿಲಾಲ ಓಸ್ವಾಲ ಹಾಗೂ ನೂತನ ಸಾದ್ವಿ ಪ್ರಿಯಾಪ್ರಜ್ಞಾಶ್ರೀಜಿ ಅವರ ಪೂವಾಶ್ರಮದ ತಂದೆ-ತಾಯಿ ಬಂಧು-ಬಳಗ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.