ಮಂಗಳವಾರ, ಏಪ್ರಿಲ್ 20, 2021
25 °C

ಸಪ್ತಪದಿಗೆ ಅಜ್ವಾ ಆಭರಣ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಮರೆಯಾಗಿ ಸೂರ್ಯ ಹೊಂಬಣ್ಣದ ಬಿಸಿಲು ಚೆಲ್ಲುವಾಗ, ಹೋಟೆಲ್ ಓಬೆರಾಯ್‌ನಲ್ಲಿ ಮಾತ್ರ ನಸುಕತ್ತಲೆ. ಮಿಣುಕು ದೀಪಗಳೇ ಬೆಳಕಿನ ಕುಡಿಯಾಗಿದ್ದವು.

ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ `ಅಜ್ವಾ~ ಸಂಗ್ರಹದ ಬಿಡುಗಡೆ ಸಮಾರಂಭವದು. ಇಶಾ ಡಿಯೊಲ್ ಮತ್ತು ಭರತ್ ತಖ್ತಾನಿ ವೇದಿಕೆಗೆ ಜೊತೆಯಾಗಿ ಬಂದರು.ಹೊಂಬಣ್ಣದ ಶೇರ್ವಾನಿ ತೊಟ್ಟ ಭರತ್ ಕಣ್ಣಲ್ಲಿ, ಇಶಾ ಬಗ್ಗೆ ಅಭಿಮಾನದ ಮಹಾಪೂರ. ಹಸಿರು ಬಣ್ಣದ ಘಾಗ್ರಾ ಚೋಲಿಗೆ ಕೆಂಬಣ್ಣದ ದುಪ್ಪಟ್ಟಾ ಹೊದ್ದು, ನಿಂತ ಇಶಾ ಕಂಗಳಲ್ಲಿ ಪ್ರೇಮ ಪ್ರವಾಹ. ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತ ನಿಂತ ಕ್ಷಣ, ಕ್ಯಾಮೆರಾಗಳಿಗೆ ಕ್ಲಿಕ್ ಮಾಡುವ ಸಮಯ.`ಅಜ್ವಾ ಸಂಗ್ರಹ ಹಗುರವಾಗಿದೆ. ಸುಂದರವಾಗಿದೆ. ಸಮಕಾಲೀನಕ್ಕೆ ಸ್ಪಂದಿಸುವಂತಿದೆ. ನನ್ನ ಮದುವೆಯ ಸಂಭ್ರಮಕ್ಕೆ ದೊರೆಯುವಂತಿದ್ದರೆ...~ ಎಂದು ಎನಿಸುತ್ತಿದೆ ಎಂದು ಇಶಾ ಹೇಳಿದರು.`ನವೆಂಬರ್ 10ರಿಂದ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಈ ಸುಂದರ ಸಂಗ್ರಹದಿಂದ ಒಂದಾದರೂ ಬೇಕು ಅಲ್ವಾ ಬೇಬಿ...~ ಎಂದು ಇಶಾ ಭರತ್‌ನತ್ತ ಕಂಗಳಲ್ಲೇ ಪ್ರಶ್ನೆಯೊಂದನ್ನೆಸೆದರು. ಭರತ್ ಅದಕ್ಕೆ `ಯಾಕಿಲ್ಲ, ಮೊದಲ ವಾರ್ಷಿಕೋತ್ಸವಕ್ಕೆ ಖಂಡಿತವಾಗಿಯೂ ಈ ಸಂಗ್ರಹದ ಒಡತಿಯಾಗುವೆ~ ಎಂಬ ಭರವಸೆಯನ್ನು ನೀಡಿದರು.ಅಜ್ವಾ ಸಂಗ್ರಹವು ಸಪ್ತಪದಿಯನ್ನು ಸಂಕೇತಿಸುವ ಮತ್ತು ಪ್ರತಿನಿಧಿಸುವ ವಿವಾಹ ಆಭರಣ ಸಂಗ್ರಹವಾಗಿದೆ. ಸಂಸ್ಕೃತದಲ್ಲಿ 7 ಎಂದರ್ಥ ಬರುವ `ಅಜ್ವಾ~ ಹೆಸರನ್ನು ಅದಕ್ಕೆಂದೇ ಆಯ್ಕೆ ಮಾಡಲಾಗಿದೆ. 70 ಗ್ರಾಂಗಳಿಂದ 300 ಗ್ರಾಮ್‌ಗಳವರೆಗಿನ ಚಿನ್ನದ ಸೆಟ್‌ಗಳು ಲಭ್ಯ.ಚಿನ್ನದ ನೆಕ್ಲೆಸ್, ಬಳೆ ಹಾಗೂ ಓಲೆಗಳು ಈ ಸಂಗ್ರಹದಲ್ಲಿರುತ್ತವೆ. ವಿಶೇಷವೆಂದರೆ ಪ್ರತಿಯೊಂದರಲ್ಲೂ `7~ರ ಮಹಾತ್ಮೆ ಇದೆ. 7 ಪದಕಗಳು, 7 ಪದರಿನ ಸರ, 7 ದಳದ ಹೂ, 7 ಸುತ್ತುಗಳು... ಹೀಗೆ ಪ್ರತಿಯೊಂದು ವಿನ್ಯಾಸವೂ 7ರ ಸುತ್ತಲೇ ಸುತ್ತುತ್ತದೆ. ಸಪ್ತಪದಿಯ ಪ್ರತಿಯೊಂದು `ಭಾಷೆ~ಯನ್ನೂ ಇದು ನೆನಪಿಸುತ್ತದೆ.ಸಪ್ತಪದಿಯ ಬಾಂಧವ್ಯದಷ್ಟೇ ಗಟ್ಟಿಯಾದ ಶಾಶ್ವತವಾದ ಪ್ರೀತಿಯನ್ನು ಇದು ತೋರಿಸುತ್ತದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ ಆಭರಣಗಳ ವಿಭಾಗದ ನಿರ್ದೇಶಕ ವಿಪಿನ್ ಶರ್ಮಾ ವಿವರಿಸಿದರು.ಹೆಚ್ಚಾಗಿ ಮದುವೆಯ ಸಂಗ್ರಹವೆಂದರೆ ವಧುವಿಗೆ ಕನಿಷ್ಠ 100 ಗ್ರಾಮ್ ಚಿನ್ನವಾದರೂ ಆಪದ್ಧನವಾಗಿ ಕೊಡುವ ಸಂಪ್ರದಾಯ ಭಾರತದಲ್ಲಿದೆ. ಅದನ್ನು ಗಮನದಲ್ಲಿರಿಸಿಕೊಂಡು 70 ಗ್ರಾಮ್‌ಗಳಿಂದ ಈ ಸಂಗ್ರಹವನ್ನು ಬಿಡುಗಡೆಗೊಳಿಸಿದ್ದೇವೆ ಎನ್ನವುದು ವಿಪಿನ್ ಅವರ ಸಮಜಾಯಿಷಿಯಾಗಿದೆ.`ಹೆಚ್ಚಾಗಿ ವಧುವಿನ ಸಂಗ್ರಹ ಎಂದರೆ ತನ್ನ ಮದುವೆಗೆ ಮತ್ತು ಆಪ್ತೇಷ್ಟರ ಮದುವೆಗೆ ಮಾತ್ರ ತೊಡುವಂಥ ಆಭರಣಗಳಾಗಿರುತ್ತವೆ. ನಂತರ ಲಾಕರ್‌ನಲ್ಲಿ ಬೀಗ ಹಾಕಿ ಭದ್ರಪಡಿಸುವುದೇ ಆಗಿರುತ್ತದೆ.

 

ಇಂಥ ಸಂಗ್ರಹದ ಬದಲಿಗೆ ವಿವಾಹದ ಸಂಗ್ರಹವನ್ನು ಪ್ರತಿನಿತ್ಯವೂ ಧರಿಸುವಂತೆ ಸಮಕಾಲೀನ ವಿನ್ಯಾಸದ ಸ್ಪರ್ಶವನ್ನು ನೀಡುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ಸಂಪ್ರದಾಯ, ಸಮಕಾಲೀನಗಳ ಫ್ಯೂಶನ್ ಆಗಿದೆ~ ಎಂಬುದು ಅವರ ವಿವರಣೆ.ವಿಪಿನ್ ಮಾತು ಮುಗಿಸುವುದರಲ್ಲಿ ಇಶಾ, ಕ್ಯಾಮೆರಾಗಳೊಂದಿಗೆ ಕಣ್ಣಲ್ಲಿಯೇ ಮಾತನಾಡುತ್ತ, ಭಾವ ಭಂಗಿಗಳನ್ನು ತೋರುತ್ತಿದ್ದರು. ಭರತ್ ಕ್ಯಾಮೆರಾಗಳಿಗೊಮ್ಮೆ, ಮನದನ್ನೆಯನ್ನೊಮ್ಮೆ ಕಣ್ತುಂಬಿಸಿಕೊಳ್ಳುತ್ತಿದ್ದರು.ಈ ಸಂಗ್ರಹಗಳು ನಗರದ ಆಭರಣ್ ಜ್ಯುವೆಲ್ಲರ್ಸ್‌, ಸಿ.ಕೃಷ್ಣ ಚೆಟ್ಟಿ ಅಂಡ್ ಸನ್ಸ್, ಜೋಯಾ ಅಲುಕ್ಕಾಸ್, ಮಲಬಾರ್ ಗೋಲ್ಡ್, ನಿಖಾರ್ ಜ್ಯುವೆಲ್ಸ್ ಮುಂತಾದ ಮಳಿಗೆಗಳಲ್ಲಿ ನ.10ರಿಂದ `ಅಜ್ವಾ~ ಸಂಗ್ರಹ ಲಭ್ಯ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.