ಮಂಗಳವಾರ, ಮೇ 24, 2022
30 °C
ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಥೋಡ್ ಅಭಿಮತ

`ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಪ್ರಸ್ತುತ ಕವಲು ದಾರಿಯಲ್ಲಿರುವ ಸಮಾಜವನ್ನು ಸರಿದಾರಿಗೆ ತರುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನಸಿಂಗ್ ರಾಥೋಡ ಹೇಳಿದರು.ಹಾವೇರಿ ಪ್ರೆಸ್ ಕ್ಲಬ್, ಮಿಡಿಯಾ ಕ್ಲಬ್, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲ ಹಾಗೂ ಜಿಲ್ಲಾ ವಾರ್ತಾ ಇಲಾಖೆ ಆಶ್ರಯದಲ್ಲಿ ಸೋಮವಾರ ನಗರದ ಜಿಲ್ಲಾ ವಾರ್ತಾ ಸಭಾಂಗಣದಲ್ಲಿ ನಡೆದ `ಪತ್ರಿಕಾ ದಿನಾಚರಣೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸುದ್ದಿ ಕೊಡುವ ಭರದಲ್ಲಿ ಅಪೂರ್ಣ ಹಾಗೂ ಅಸತ್ಯವಾದ ಮಾಹಿತಿ ಜನತೆಗೆ ತಲುಪಬಾರದು. ಅದರಿಂದ ಜನರ ಮೇಲಷ್ಟೇ ಅಲ್ಲದೇ ಸಮಾಜದ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಸುದ್ದಿಯ ಸತ್ಯಾಸತ್ಯತೆ ಅರಿತು ಪ್ರಕಟಿಸಿದಾಗ ಮಾತ್ರ ಸಮಾಜಕ್ಕೂ ಹಾಗೂ ಮಾಧ್ಯಮಗಳ ವಿಶ್ವಾಸರ್ಹತೆಗೂ ಅನುಕೂಲವಾಗಲಿದೆ ಎಂದರು.ಪತ್ರಿಕೆಗಳು ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ಅಂಶಗಳನ್ನು ಒದಗಿಸುವ ಮಾಹಿತಿ ಕಣಜಗಳಾಗಿವೆ ಎಂದ ಅವರು, ಬೇರೆಬೇರೆ ಭಾಷಾ ವಿಷಯಗಳ ಜ್ಞಾನದೊಂದಿಗೆ ಪತ್ರಕರ್ತರು ಮಾನಸಿಕವಾಗಿ ಬಲಿಷ್ಟರಿದ್ದಾಗ ಮಾತ್ರ ಸಮಾಜ ಕಟ್ಟವ ಕೆಲಸದಲ್ಲಿ ಸಂತೃಪ್ತಿ ಕಾಣಬಹುದು ಎಂದು ಹೇಳಿದರು.ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಸಮುದಾಯ ಸ್ವಸಾಮರ್ಥ್ಯ ಹಾಗೂ ಆತ್ಮ ವಿಶ್ವಾಸದಿಂದ ಅಧ್ಯಯನ ಕೈಗೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದ ಅವರು, ಯುವಕರು ವಿದ್ಯಾರ್ಥಿ ಜೀವನದಲ್ಲಿಯೇ ಹಣ ಹಾಗೂ ರಾಜಕೀಯ ಬೆಂಬಲಕ್ಕೆ ಜೋತು ಬೀಳಬಾರದು. ಕಲಿಕಾ ಹಂತದಲ್ಲಿ ಕ್ರಿಯಾಶೀಲರಾಗಿ ಗುಣಾತ್ಮಕ ಶಿಕ್ಷಣ ಪಡೆಯಬೇಕು. ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯಗಳನ್ನು ಕೆಎಎಸ್, ಐಎಎಸ್, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ದುಕೊಂಡು ಅಭ್ಯಾಸ ಮಾಡಿದಾಗ ಮಾತ್ರ ಉನ್ನತ ಹುದ್ದೆಯ ಕನಸಿನ ಗುರಿ ಮಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಹುಬ್ಬಳ್ಳಿ ಸಮಾಚಾರ ಕೇಂದ್ರದ ನಿವೃತ್ತ ಸಹಾಯಕ ನಿರ್ದೇಶಕ ಪಿ.ಎಸ್.ಪರ್ವತಿ ಪತ್ರಿಕಾರಂಗದ ಮಹತ್ವ ಮತ್ತು ಅವಕಾಶಗಳ ಕುರಿತು ಉಪನ್ಯಾಸ ನೀಡಿದ ಅವರು, ಯಾರನ್ನು ನಂಬಲಾರದಂತಹ ಈಗಿನ ಕಾಲದಲ್ಲಿ ಎಲ್ಲರೂ ಪತ್ರಿಕೆಗಳನ್ನು ನಂಬಬೇಕು. ಪತ್ರಿಕೋದ್ಯಮ ಸಾಕಷ್ಟು ಜ್ಞಾನ ಹಾಗೂ ಶ್ರಮದಿಂದ ಸಮಾಜಮುಖಿಯಾಗಿ ಕೆಲಸ ಮಾಡುವ ಕ್ಷೇತ್ರವಾಗಿ ಎಂದು ತಿಳಿಸಿದರು.ಪತ್ರಿಕೋದ್ಯಮ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಮುದ್ರಣ, ವಿದ್ಯುನ್ಮಾನ ಮಾಧ್ಯಮದಲ್ಲಿ, ರೇಡಿಯೋದಲ್ಲಿ, ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ, ಆನ್‌ಲೈನ್ ಪತ್ರಿಕೋದ್ಯಮ, ಅಕಾಡೆಮಿ ಸೇರಿದಂತೆ ಇತ್ಯಾದಿಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ, ಈ ಕ್ಷೇತ್ರಕ್ಕೆ ಬರುವ ಯುವ ಮನಸುಗಳು ಸಾಕಷ್ಟು ಪೂರ್ವ ತಯಾರಿಯೊಂದಿಗೆ ಬರಬೇಕು ಎಂದು ಸಲಹೆ ಮಾಡಿದರು.ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳನ್ನು ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಓದುಗರು, ಸಾಹಿತ್ಯ ಆಸಕ್ತರು  ಹಾಗೂ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಕೊಂಡು ಓದುವ ಮನೋಭಾವ ಬಳೆಸಿಕೊಳ್ಳುವ ಜೊತೆಗೆ ಪತ್ರಿಕೆಗಳ ಬೆಳವಣಿಗೆಗೆ ಸಹಕರಿಸಬೇಕು ಎಂದರು. ಜಿಲ್ಲಾ ವಾರ್ತಾಧಿಕಾರಿ ಸಿ.ಪಿ.ಮಾಯಾಚಾರಿ, ಜಿಲ್ಲೆಯಲ್ಲಿ ಇಲಾಖೆ ಸಹಾಯಕ ನಿರ್ದೇಶಕರಾಗಿ ತಮ್ಮಂದಿಗೆ ಸೌಹಾರ್ದಯುತವಾಗಿ ಬೆರೆತು ಸಹಾಯ ಸಹಕಾರ ನೀಡಿದ ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ವಂದನೆ ಸಲ್ಲಿಸಿದರು.ಇದೇ ವೇಳೆ ಹುಬ್ಬಳ್ಳಿ ಸಮಾಚಾರ ಕೇಂದ್ರದ ನಿವೃತ್ತ ಸಹಾಯಕ ನಿರ್ದೇಶಕ ಪಿ.ಎಸ್.ಪರ್ವತಿ, ಜಿಲ್ಲಾ ವಾರ್ತಾಧಿಕಾರಿ ಸಿ.ಪಿ.ಮಾಯಾಚಾರಿ ಹಾಗೂ ಟಿ.ವಿ.9 ಛಾಯಾಗ್ರಾಹಕ ಶಾಂತಕುಮಾರ್ ಅವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಹಾವೇರಿ ಪ್ರೆಸ್ ಕ್ಲಬ್ ಅಧ್ಯಕ್ಷ ಗಂಗಾಧರ ಹೂಗಾರ, ಕಾರ್ಯದರ್ಶಿ ಶಿವಾನಂದ ಗೊಂಬಿ, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಜೆ.ಸಿ.ಹಾದಿಮನಿ, ಮೀಡಿಯಾ ಕ್ಲಬ್ ಅಧ್ಯಕ್ಷ ಶಿವಕುಮಾರ ಹುಬ್ಬಳ್ಳಿ, ಕಾರ್ಯದರ್ಶಿ ರವಿ ಮುಖಿ ಹಾಜರಿದ್ದರು.ಸಮಾರಂಭದಲ್ಲಿ ಜೆಡಿಯು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಕೋರಿಶೆಟ್ಟರ,  ಜಿ.ಪಂ.ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹನುಮಂತಗೌಡ ಗೊಲ್ಲರ, ಜಿ.ಪಂ.ಮಾಜಿ ಸದಸ್ಯ ಎಸ್.ಎಫ್.ಎನ್.ಗಾಜಿಗೌಡ್ರ, ಶಿಕ್ಷಕರು, ಪತ್ರಕರ್ತರು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಿಂಗಪ್ಪ ಚಾವಡಿ ಸ್ವಾಗತಿಸಿದರು. ವಿಜಯ್ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಷಡಕ್ಷರಯ್ಯ ನಿರೂಪಿಸಿದರು. ಪ್ರಕಾಶ ಜೋಷಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.