ಭಾನುವಾರ, ಏಪ್ರಿಲ್ 11, 2021
26 °C

ಸಮಾಜ ಶುದ್ಧಿ ಕಾರ್ಯ ಆಗಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕಾಶವಾಣಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜೋತ್ಸ್ನಾ ಕಾಮತ್ ಮಹಿಳಾ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ. `ಕೈಗನ್ನಡಿಯಲ್ಲಿ ಕನ್ನಡತಿ~, `ಮಹಿಳೆ: ಅಂದು- ಇಂದು~, `ಕರ್ನಾಟಕದ ಮಧ್ಯಯುಗದಲ್ಲಿನ ಸಾಮಾಜಿಕ ಬದುಕು; ಒಂದು ಅಧ್ಯಯನ~ ಮುಂತಾದವು ಅವರ ಕೃತಿಗಳು.ಹಾಸ್ಯ ಬರಹಗಳಿಂದಲೂ ಗುರುತಿಸಿಕೊಂಡಿರುವ ಜೋತ್ಸ್ನಾ ತಮ್ಮ 76ನೇ ವಯಸ್ಸಿನಲ್ಲೂ ಅದೇ ಕ್ರಿಯಾಶೀಲತೆ ಮತ್ತು ಉತ್ಸಾಹ ಹೊಂದಿದ್ದಾರೆ. ಮಹಿಳೆಯ ಸ್ಥಾನಮಾನ ಮತ್ತು ಶಿಕ್ಷಣದಲ್ಲಿ ಆಗಬೇಕಾದ ಪ್ರಗತಿಯ ಬಗ್ಗೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಇಂದಿನ ಮಹಿಳೆಯ ಸ್ಥಾನಮಾನ ಯಾವ ರೀತಿ ಬದಲಾಗಿದೆ?

-ಆಧುನಿಕ ಪ್ರಪಂಚದಲ್ಲಿ ಮಹಿಳೆಯರ ಸಾಮಾಜಿಕ ಸ್ಥಾನಮಾನದಲ್ಲಿ ಗಣನೀಯ ಬದಲಾವಣೆಯಾಗಿದೆ. ಸಂಪ್ರದಾಯದ ಚೌಕಟ್ಟಿನಿಂದ ಹಿಂಜರಿಕೆ ಇಲ್ಲದೆ ಮಹಿಳೆ ಸಮಾಜದಲ್ಲಿ ಮುಕ್ತವಾಗಿ ಬದುಕುವ ವಾತಾವರಣ ನಿರ್ಮಾಣವಾಗಿದೆ.ನಿಜ, ಮಹಿಳೆಯ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನ ಪ್ರಗತಿ ಹೊಂದಿದೆ ಎಂಬ ಹೆಮ್ಮೆಯ ಜೊತೆಗೆ ಯಾವ ವರ್ಗದ ಮಹಿಳೆಯ ಸ್ಥಿತಿ ಬದಲಾಗಿದೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ನಗರ ಮತ್ತು ಗ್ರಾಮೀಣ ಮಹಿಳೆಯರ ನಡುವಿನ ವ್ಯತ್ಯಾಸವನ್ನು ಅಧ್ಯಯನ ಮಾಡಿದರೆ ಗ್ರಾಮೀಣ ಮಹಿಳೆಯ ಸ್ಥಾನಮಾನದಲ್ಲಾದ ಬದಲಾವಣೆ ಅತ್ಯಲ್ಪ ಎನ್ನಬಹುದು.ಕೆಲವೆಡೆ ಯಾವ ಅಭಿವೃದ್ಧಿಯೂ ಆಗಿಲ್ಲ ಎಂದು ನಿಖರವಾಗಿ ಹೇಳಬಹುದು. ಮಹಿಳಾ ಅಭಿವೃದ್ಧಿಗಾಗಿ ಎಷ್ಟೇ ಕಾರ್ಯಕ್ರಮಗಳನ್ನು ಅಳವಡಿಸಿದರೂ, ಗ್ರಾಮೀಣ ಮಹಿಳೆಯ ಜೀವನ ಕ್ರಮ, ಶೈಲಿ, ಸಾಮಾಜಿಕ ಸ್ಥಾನಮಾನದ ಪ್ರಗತಿಯಲ್ಲಿ ವಿಫಲರಾಗಿದ್ದೇವೆ.ಈ ವೈಫಲ್ಯಗಳಿಗೆ ಕಾರಣಗಳನ್ನು ಹುಡುಕಲು ಹೋದರೆ ಸ್ಪಷ್ಟವಾಗಿ ಗೋಚರಿಸುವುದು ಸಾಮಾಜಿಕ, ಆರ್ಥಿಕ ವೈರುಧ್ಯ ಹಾಗೂ ಅಂತರ. ನಗರಗಳು ಮತ್ತು ಗ್ರಾಮಗಳ ನಡುವಿನ ಅಂತರ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಅತ್ತ ಕೀಳರಿಮೆಯ ಭಾವ ಗ್ರಾಮೀಣ ಜನರಲ್ಲಿ ಕಾಣಿಸುತ್ತಿದ್ದರೆ ಇತ್ತ ಬಹುತೇಕ ನಗರವಾಸಿಗಳ ಪಾಲಿಗೆ ಗ್ರಾಮೀಣ ಜೀವನ ಕೆಳಮಟ್ಟದ್ದು ಎನಿಸಿಕೊಳ್ಳುತ್ತಿದೆ.ಮಹಿಳೆಯರ ಶೈಕ್ಷಣಿಕ ಮಟ್ಟ ಯಾವ ಗತಿಯಲ್ಲಿದೆ?

-ಮೇಲೆ ಹೇಳಿದ ಅಂಶಗಳೇ ಶೈಕ್ಷಣಿಕ ಕ್ಷೇತ್ರದಲ್ಲಿಯೂ ತಾಂಡವವಾಡುತ್ತಿರುವುದು ವಿಪರ್ಯಾಸ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ ಇರುತ್ತಾರೆ. ಇದರಿಂದ ಸ್ತ್ರೀ ಶಿಕ್ಷಣ ಬೆಳವಣಿಗೆ ಹೊಂದಿದೆ ಎಂಬ ಅಭಿಪ್ರಾಯವಿದೆ. ವಾಸ್ತವವಾಗಿ ಸ್ತ್ರೀ ಶಿಕ್ಷಣದಲ್ಲಿರುವ ತಾರತಮ್ಯ ಸ್ಪಷ್ಟವಾಗುವುದೇ ಅಲ್ಲಿ.ಇಂದಿಗೂ ಗ್ರಾಮೀಣ ಜನ ತಮ್ಮ ಗಂಡು ಮಕ್ಕಳನ್ನು ಮಾತ್ರ ನಗರಗಳಲ್ಲಿನ ಪ್ರತಿಷ್ಠಿತ ಶಾಲೆಗಳಿಗೆ ಸಾಕಷ್ಟು ಡೊನೇಷನ್ ಕೊಟ್ಟು ಓದಲು ಕಳುಹಿಸುತ್ತಿದ್ದಾರೆ. ಆದರೆ ಹೆಣ್ಣು ಮಕ್ಕಳಿಗೆ ಈ ಭಾಗ್ಯ ಇಲ್ಲ. ಹೇಗಿದ್ದರೂ ಮದುವೆಯಾಗಿ ಹೋಗುವವರಲ್ಲ, ಅವರಿಗೇಕೆ ಶಿಕ್ಷಣ ಎಂಬ ಭಾವನೆ ಪೋಷಕರಲ್ಲಿ ಇನ್ನೂ ದೂರವಾಗಿಲ್ಲ.ಶೈಕ್ಷಣಿಕ ಮಟ್ಟದಲ್ಲಿ ಸುಧಾರಣೆಯಾಗದೆ ಮಹಿಳೆಯರ ಅಭಿವೃದ್ಧಿ ನಿರೀಕ್ಷಿಸುವುದು ವ್ಯರ್ಥ. ಮುಖ್ಯವಾಗಿ ಶಿಕ್ಷಣ ಪದ್ಧತಿಯಲ್ಲಿ ಸಮಗ್ರ ಬದಲಾವಣೆಗಳಾಗುವುದು ಅತ್ಯವಶ್ಯಕ. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಿಕ್ಷಣ ಒಂದೆಡೆಯಾದರೆ, ಇನ್ನೊಂದೆಡೆ ಪಠ್ಯಕ್ರಮದಲ್ಲಿ ಸಮಗ್ರ ಬದಲಾವಣೆ ಆಗಬೇಕು.ಆತ್ಮವಿಶ್ವಾಸ, ಸ್ಫೂರ್ತಿ, ಮಾರ್ಗದರ್ಶನ ನೀಡುವ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಮಾಡುವ ಶಿಕ್ಷಣದ ಅಗತ್ಯವಿದೆ. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಅನುಗುಣವಾಗಿ ಪ್ರಪಂಚವನ್ನು ಎದುರಿಸುವ ಆತ್ಮಸ್ಥೈರ್ಯ ತುಂಬುವ ವ್ಯವಸ್ಥೆ ಬೇಕು. ಇದಕ್ಕೆ `ಸಮಾಜ ಶುದ್ಧಿ~ ಕಾರ್ಯ ನಡೆಯಬೇಕು.ಮಹಿಳೆ- ಪುರುಷರ ನಡುವಿನ ತಾರತಮ್ಯ ಇನ್ನೂ ಮುಂದುವರಿಯುತ್ತಿರುವುದಕ್ಕೆ ಪ್ರಮುಖವಾಗಿ ಯಾವ ಕಾರಣಗಳನ್ನು ಗುರುತಿಸುವಿರಿ?

-ಇಡೀ ಸಾಮಾಜಿಕ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ನಮಗೆ ಎರಡು ಭಾರತಗಳು ಗೋಚರಿಸುತ್ತವೆ. ಅಮೆರಿಕ, ಯೂರೋಪ್ ದೇಶಗಳಿಗೆ ಸೆಡ್ಡು ಹೊಡೆದು ನಿಲ್ಲುವ ಪ್ರಗತಿಯ ತುತ್ತತುದಿಗೆ ಇನ್ನೇನು ಮುಟ್ಟಲಿದ್ದೇವೆ ಎಂಬ ಭಾವನೆ ಮೂಡುತ್ತದೆ.

 

ಆದರೆ ಸ್ವಲ್ಪ ಹಿಂದೆ ತಿರುಗಿ ನೋಡಿದರೆ ಶತಶತಮಾನಗಳಿಂದ ಸಮಾಜದ ಒಟ್ಟಿಗೆ ಸಾಗುತ್ತಾ ಬಂದಿರುವ ಮೂಢನಂಬಿಕೆ, ಜಾತಿ ಪದ್ಧತಿಗಳ ಪಿಡುಗು ನಮ್ಮೆಲ್ಲ ಭರವಸೆಗಳನ್ನೂ ಹುಸಿಗೊಳಿಸುತ್ತದೆ. ವಿಧವೆ ಮುಖ ನೋಡಿದರೆ ಅಶುಭ, ಮಂಗಳ ಕಾರ್ಯಗಳಲ್ಲಿ ಅವರು ದೂರಇರಬೇಕು, ಮೇಲ್ವರ್ಗದವರಿಗೆ ಕೆಳವರ್ಗದವರ ಕೆಟ್ಟದೃಷ್ಟಿ ತಗಲುತ್ತದೆ ಮುಂತಾದ ಮೂಢನಂಬಿಕೆಗಳು ಸೇರಿದಂತೆ ನಾವು ಬಿಡಲೊಲ್ಲದ ಆಚರಣೆಗಳನ್ನು ಅನುಸರಿಸುತ್ತಲೇ ಇದ್ದೇವೆ. ಮೂಢನಂಬಿಕೆಗಳ ಹರಹು ಜಾತಿ- ವರ್ಗಗಳ ನಡುವೆ ವಿಸ್ತಾರವಾಗಿದ್ದರೂ ಅವುಗಳಿಗೆ ಹೆಚ್ಚು ಬಲಿಯಾಗುತ್ತಿರುವುದು ಮಹಿಳೆಯರು.ಜಾತಿ ಪದ್ಧತಿ ನಿರ್ಮೂಲನೆಯ ಪೊಳ್ಳು ಭರವಸೆಗಳ ಅಡಿಯಲ್ಲಿ ಅನುಷ್ಠಾನಗೊಳಿಸಿದ ಅಪೂರ್ಣ ಕಾರ್ಯಕ್ರಮಗಳು ಸಾಮಾಜಿಕ ಸ್ಥಿತಿಯ ಅಸಮತೋಲನಕ್ಕೆ ಕಾರಣವಾಗಿವೆ ಎಂದರೆ ತಪ್ಪಾಗದು.ಸಮಾಜ ಸುಧಾರಣೆ ಮಾರ್ಗ ಹೇಗೆ?


- ಜಾತಿ ಆಚರಣೆಗಳು ತೀವ್ರವಾಗಿದ್ದ ಕಾಲದಲ್ಲಿ ಸಮಾಜದ ಮೌಲ್ಯಗಳು ಕುಸಿದು ಹೋಗಿದ್ದರೂ ನಿರುದ್ಯೋಗ ಸಮಸ್ಯೆ ಇರಲಿಲ್ಲ. ಅನಕ್ಷರಸ್ಥರೇ ಹೆಚ್ಚಿದ್ದರೂ ಕಡೇಪಕ್ಷ ಬದುಕು ಸಾಗಿಸಲು ನೆರವಾಗುವಂತಹ ಕುಲಕಸುಬು ಅವರೊಂದಿಗಿತ್ತು. ಹಿಂದೆ ಜಾತಿ ಆಧಾರಿತ ಕಸುಬುಗಳನ್ನು ನೆಚ್ಚಿಕೊಂಡಿದ್ದ ಕುಟುಂಬಗಳು ಈಗ ಅತ್ತ ಸುಧಾರಣೆಯೂ ಇಲ್ಲದೆ, ಇತ್ತ ಕುಲಕಸುಬೂ ಇಲ್ಲದೆ ಅತಂತ್ರ ಸ್ಥಿತಿಗೆ ತಲುಪಿರುವುದು ಇದರ ಅವಾಂತರಕ್ಕೆ ಒಂದು ಉದಾಹರಣೆಅಷ್ಟೆ.

 

ಹಾಗೆಂದು ಜಾತಿ ನಿರ್ಮೂಲನೆಯನ್ನು ನಾನು ವಿರೋಧಿಸುತ್ತಿಲ್ಲ. ಸುಧಾರಣೆಯ ನೆಪದಲ್ಲಿ ಬದುಕಿನ ಮಾರ್ಗಗಳಿಗೆ ನಾವೇ ಬೇಲಿ ಹಾಕಿಕೊಂಡು, ಅದರೊಳಗೆ ಕನಸಿನ ಸೌಧ ಕಟ್ಟಿಕೊಳ್ಳುತ್ತಿರುವುದರ ಬಗ್ಗೆ ನನ್ನ ವಿಷಾದವಿದು.ತಾಂತ್ರಿಕವಾಗಿ ಎಷ್ಟೇ ಮುಂದುವರಿದಿದ್ದರೂ ಜಪಾನ್‌ನಂತಹ ರಾಷ್ಟ್ರಗಳಲ್ಲಿ ಗೃಹ ಕೈಗಾರಿಕೆಗೆ ಇಂದಿಗೂ ಅಪಾರ ಪ್ರೋತ್ಸಾಹ ದೊರಕುತ್ತಿದೆ. ಆದರೆ ಭಾರತದಲ್ಲಿ ಇಂತಹ ಪ್ರಯತ್ನಗಳು ಕೆಲವೇ ಸ್ವಯಂ ಸೇವಾ ಸಂಸ್ಥೆಗಳು, ಸಂಘಟನೆಗಳಿಗೆ ಸೀಮಿತವಾಗಿವೆ.ಇದನ್ನು ಹೊರತುಪಡಿಸಿ ಸರ್ಕಾರಿ ಮಟ್ಟದಲ್ಲಿ ನಿರೀಕ್ಷಿತ ಪ್ರಮಾಣದ ಉತ್ತೇಜನ ಭಾಗಶಃ ಕನಸಾಗಿಯೇ ಉಳಿದಿದೆ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕುವ ಇಚ್ಛಾಶಕ್ತಿಯೂ ಕಂಡುಬರುತ್ತಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.