ಶನಿವಾರ, ಮೇ 21, 2022
27 °C

ಸಮುದಾಯಗಳ ಭವಿಷ್ಯಕ್ಕೆ ಹೊಸರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: `ಆದಿವಾಸಿ ಸೇರಿದಂತೆ ದೇಶದಾದ್ಯಂತ ನೈಸರ್ಗಿಕ ಸಂಪನ್ಮೂಲ ನಂಬಿಕೊಂಡು ಬದುಕುತ್ತಿರುವ ಸಮುದಾಯಗಳ ಸಹಯೋಗದೊಂದಿಗೆ ಅ.9 ರಿಂದ 12 ರ ವರೆಗೆ ನಾಲ್ಕು ದಿನಗಳ ಕಾಲ ಕುಶಾಲನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ರಾಷ್ಟ್ರೀಯ ಸಮುದಾಯ ಹಕ್ಕುಗಳ ಸಂಗಮ -2011 ನಡೆಸಲು ಭರದ ಸಿದ್ಧತೆ ನಡೆಸಲಾಗಿದೆ.ಕುಶಾಲನಗರ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ (ಕಾರ್ಡ್), ಜಿಲ್ಲಾ ಬುಡಕಟ್ಟು ಕೃಷಿಕರ ಸಂಘ, ರಾಷ್ಟ್ರೀಯ ಆದಿವಾಸಿ ಆಂದೋಲನ, ಲೋಕಶಕ್ತಿ ಅಭಿಯಾನ ಸೇರಿದಂತೆ ವಿವಿಧ ಸಮುದಾಯ ಹಕ್ಕುಗಳ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಅ.9 ರ ಭಾನುವಾರ ಅಪರಾಹ್ನ 3 ಗಂಟೆಗೆ ಆರಂಭಗೊಳ್ಳಲಿರುವ ಸಮುದಾಯ ಹಕ್ಕುಗಳ ಸಂಗಮವು ಅ.12 ರ ಬುಧವಾರದಂದು ಬೃಹತ್ ಕಲಾ ಮೆರವಣಿಗೆ ಮತ್ತು ಸಾರ್ವಜನಿಕ ಸಭೆಯೊಂದಿಗೆ ಕೊನೆಗೊಳ್ಳಲಿದೆ. ಸಂಗಮಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಪ್ರತಿನಿಧಿಗಳು ಆಗಮಿಸಿದ್ದಾರೆ.ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ, ಸದ್ಬಳಕೆ ಹಾಗೂ ಅವುಗಳನ್ನು ನಂಬಿ ಜೀವನ ನಡೆಸುತ್ತಿರುವ ಸಮುದಾಯಗಳ ಜೀವನ ಕ್ರಮದ ಕುರಿತು ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ವಿ.ಎಸ್.ರಾಯ್‌ಡೇವಿಡ್ ತಿಳಿಸಿದರು.ಈ ಸಂಗಮಕ್ಕೆ ದೇಶದ 15 ರಾಜ್ಯಗಳಿಂದ ಆದಿವಾಸಿಗಳು ಸೇರಿದಂತೆ ದಲಿತ ಮತ್ತು ಅರಣ್ಯ ಕಾರ್ಮಿಕ ಸಂಘಟನೆಗಳು, ಮೀನುಗಾರರ ಸಂಘಟನೆಗಳು, ಮಹಿಳೆಯರು ಮತ್ತು ಮಕ್ಕಳ ಸಂಘಟನೆಯ ಸಾವಿರಾರು ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.ದಕ್ಷಿಣ ಭಾರತದಲ್ಲಿರುವ ವಿವಿಧ ಆದಿವಾಸಿ ಗುಂಪುಗಳನ್ನು ಒಂದೆಡೆ ಸೇರಿಸಿ ಸ್ವಯಂ ಆಡಳಿತ, ಪೇಸಾ ಆಕ್ಟ್ ಮತ್ತು ಆದಿವಾಸಿ ಹಾಗೂ ಸಾಂಪ್ರಾದಾಯಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳ ಜಾರಿಗೆ ಸರ್ಕಾರಕ್ಕೆ ಒತ್ತಾಯದ ಉದ್ದೇಶ , ಅರಣ್ಯ ಸಂರಕ್ಷಣೆ, ಹುಲಿ ಸೂಕ್ಷ್ಮತಾಣ, ರಾಷ್ಟ್ರೀಯ ಉದ್ಯಾನವನಗಳ ಘೋಷಣೆ ಮುಂತಾದ ಕಾನೂನುಗಳನ್ನು ಜಾರಿಗೆ ತರುವ ನೀತಿಯನ್ನು ವಿರೋಧಿಸುವ ಸಲುವಾಗಿ ಸಂಘಟಿತ ಹೋರಾಟವನ್ನು 1992 ರಲ್ಲಿ ಮಾನಂದವಾಡಿ, ಪಚ್ಚೆಮಲೈನಲ್ಲಿ ಹಾಗೂ 1993, 2003, 2008 ರಲ್ಲಿ ಕುಶಾಲನಗರದಲ್ಲಿ `ಆದಿವಾಸಿ ಸಂಗಮ~ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು ಎಂದು ರಾಯ್‌ಡೇವಿಡ್ ವಿವರಿಸಿದರು.ಈ ಸಂಗಮದ ಮೂಲಕ ವಿವಿಧ ಸಮುದಾಯದವರು ತಮ್ಮ ಮೂಲನೆಲೆ ಕಳೆದುಕೊಳ್ಳುತ್ತಿರುವ ಅಪಾಯದ ಬಗ್ಗೆ ಜಾಗೃತೆ ವಹಿಸಲು ಉತ್ತಮ ವೇದಿಕೆ ಒದಗಿಸಲಿದೆ ಎಂದು ದೆಹಲಿಯಿಂದ ಆಗಮಿಸಿರುವ ಇನ್ಫಾಫ್ (ಇಂಡಿಯನ್ ಸೋಸಿಯಲ್ ಆಕ್ಷನ್ ಫೋರಮ್) ನ ರಾಷ್ಟ್ರೀಯ ಕಾರ್ಯದರ್ಶಿ ವಿಲ್ಫ್ರೆಡ್ ಡಿ~ಕೋಸ್ಟ ತಿಳಿಸಿದರು.ಸಂಗಮದಲ್ಲಿ ಸಮುದಾಯದ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ದಯಾಮಣಿ ಬಾರ‌್ಲಾ, ಡಾ ಬಿ.ಡಿ.ಶರ್ಮಾ, ಮಥಾನಿ ಸಲ್ಡಾನ, ಸುಮೇಶ್, ಅಭಯ್ ಸಾಹು, ಪ್ರಶಾಂತ್ ಪೈಕೆರಾ, ಮ್ಯಾಗಲಿನ್, ಪೀಟರ್, ಒಸ್ಸೀ ಫರ್ನಾಂಡೀಸ್, ರಾಯ್ ದಯಾಲ್ ಮುಂಡಾ, ಜೆ.ಪಿ.ರಾಜು, ಪ್ರಫುಲ್ಲ ಸುಂತ್ ರೈ, ಗೌತಮ ಬಂಡೋಪಾಧ್ಯಾಯ, ಡಾ ಪ್ರದೀಪ ಪ್ರಭು, ಸಂದೀಪ್ ಪಾಂಡೆ, ಗುಮನ್ ಸಿಂಗ್, ಡಾ ಸುನೀಲನ್, ಅಖಿಲ್ ಗೋಗೈ, ಮನ್ನೀಲಾಲ್, ಸನ್ನಿಬಾಯಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.ಸಂಗಮದಲ್ಲಿ ಸಮುದಾಯದ ಸಂಪನ್ಮೂಲಗಳಾದ ಭೂಮಿ, ನೀರು ಮತ್ತು ಅರಣ್ಯದ ಮೇಲೆ ಸಂವಿಧಾನಾತ್ಮಕವಾಗಿ ಸಮುದಾಯಕ್ಕೆ ಸಿಗಬೇಕಾಗಿರುವ ಹಕ್ಕುಗಳ ಕುರಿತು ಯೋಜನೆ ಸಿದ್ಧಪಡಿಸಲಾಗುವುದು ಎಂದು ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಜೆ.ಪಿ.ರಾಜು ತಿಳಿಸಿದರು. ಬುಡಕಟ್ಟು ಕೃಷಿಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಆರ್.ಕೆ.ಚಂದ್ರು, ಜೆ.ಕೆ.ರಾಮು, ವೆಂಕಟಸ್ವಾಮಿ, ಸಂಘದ ಜಿಲ್ಲಾ ಕಾರ್ಯದರ್ಶಿ ಪಿ.ಎಸ್.ಮುತ್ತ ಸೇರಿದಂತೆ ಆದಿವಾಸಿ ಪ್ರಮುಖರು ಸಂಗಮದ ಯಶಸ್ವಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಸಂಗಮದ ಮುಖ್ಯ ಉದ್ದೇಶಗಳು: ಪ್ರಾಕೃತಿಕ ಸಂಪನ್ಮೂಲ ಮತ್ತು ಸಮುದಾಯ ಹಕ್ಕುಗಳ ಸಮಸ್ಯೆಗಳಿಗಾಗಿ ಹೋರಾಡುತ್ತಿರುವ ಜನ ಸಂಘಟನೆಗಳ ಸಂಪರ್ಕ ಸಾಧಿಸುವುದು, ಸಮುದಾಯ ಹಕ್ಕುಗಳು ಮತ್ತು ಜೀವನಾಧಾರ ಮೇಲೆ ಹೋರಾಡುತ್ತಿರುವ ಜನ ಸಂಘಟನೆಗಳ ಬೇಡಿಕೆಗಳು ಸಂಬಂಧಪಟ್ಟವರಿಗೆ ತಲುಪುವಂತೆ ವಿಸ್ತೃತಗೊಳಿಸುವುದು ಸಂಗಮದ ಮುಖ್ಯ ಉದ್ದೇಶಗಳಲ್ಲಿ ಪ್ರಮುಖವಾದುದು ಎಂದು ಸಮುದಾಯ ಸಂಘಟನೆಯ ಪ್ರಮುಖರಲ್ಲಿ ಒಬ್ಬರಾದ ಆರ್.ಕೆ.ಚಂದ್ರು ತಿಳಿಸಿದರು.ಸಮುದಾಯಗಳಿಗೆ ನೈಸರ್ಗಿಕ ಸಂಪನ್ಮೂಲ ಮತ್ತು ಜೀವನ ನಿರ್ವಹಣೆಯ ಮೇಲಿನ ಹಕ್ಕುಗಳ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಡವನ್ನು ಹೇರುವುದು, ಸಮುದಾಯದ ಕಾಳಜಿಯನ್ನು ದಾಖಲಿಸುವುದು ಮತ್ತು ಸಮುದಾಯದ ಹಕ್ಕುಗಳ ಬಗ್ಗೆ ಮುಂದಿನ ಕಾರ್ಯಯೋಜನೆಯನ್ನು ಸಂಗಮದಲ್ಲಿ ರೂಪಿಸಲಾಗುವುದು ಎಂದು ಶಮಂತಕ ಡೇವಿಡ್ ವಿವರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.