ಭಾನುವಾರ, ಏಪ್ರಿಲ್ 11, 2021
25 °C

ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದ ಕುಸ್ಮಾ: 7 ದಿನ ಶಾಲೆ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಅನುಷ್ಠಾನದಲ್ಲಿ ಅಲ್ಪಸಂಖ್ಯಾತ ಶಾಲೆಗಳ ಕುರಿತ ಗೊಂದಲ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಸಂಘ (ಕುಸ್ಮಾ) ಜುಲೈ 16ರಿಂದ 22ರವರೆಗೆ `ಶಾಲೆ ಬಂದ್~ ನಡೆಸಲಿದೆ. ಈ ಮೂಲಕ `ಕುಸ್ಮಾ~ ರಾಜ್ಯ ಸರ್ಕಾರದೊಂದಿಗೆ ಸಂಘರ್ಷದ ಹಾದಿ ತುಳಿದಿದೆ.

ಬೆಂಗಳೂರಿನ 460 ಖಾಸಗಿ ಶಾಲೆಗಳೂ ಸೇರಿದಂತೆ ರಾಜ್ಯದಾದ್ಯಂತ 1800 ಶಾಲೆಗಳಲ್ಲಿ ಬಂದ್ ನಡೆಸಲಾಗುವುದು ಎಂದು `ಕುಸ್ಮಾ~ ಪ್ರಕಟಿಸಿದೆ. ಈ ಮಧ್ಯೆ, `ಕುಸ್ಮಾ~ ಬೇಡಿಕೆಗಳಿಗೆ ಸಹಮತ ಇದ್ದರೂ ಬಂದ್‌ನಲ್ಲಿ ಪಾಲೊಳ್ಳುವುದಿಲ್ಲ ಎಂದು ಖಾಸಗಿ ಶಾಲೆಗಳ ಇತರ ಸಂಘಟನೆಗಳು ಸ್ಪಷ್ಟಪಡಿಸಿವೆ.

`ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಗೆ ಬರುವ ಶಾಲೆಗಳು ಯಾವುವು ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಲಾಗಿತ್ತು. ಒಟ್ಟು ವಿದ್ಯಾರ್ಥಿಗಳಲ್ಲಿ ಶೇಕಡ 75 ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳನ್ನು ಮಾತ್ರ ಶಿಕ್ಷಣ ಹಕ್ಕು ಕಾಯ್ದೆಯಡಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಎಂದು ಪರಿಗಣಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಸರ್ಕಾರದ ಆದೇಶದಲ್ಲಿ ಮತ್ತೆ ತಾರತಮ್ಯ ಎಸಗಲಾಗಿದೆ. ಜಾತಿ ಹಾಗೂ ಪ್ರಾಂತ್ಯವಾರು ಭಾಷಾ ಅಲ್ಪಸಂಖ್ಯಾತರು ಯಾರು ಎಂಬುದನ್ನು ಸ್ಪಷ್ಟಪಡಿಸಿಲ್ಲ~ ಎಂದು `ಕುಸ್ಮಾ~ ಆರೋಪಿಸಿದೆ.

`ಸಂಘಟನೆಯ ವ್ಯಾಪ್ತಿಯಲ್ಲಿ ಸಿಬಿಎಸ್‌ಇ, ಐಸಿಎಸ್‌ಇ, ರಾಜ್ಯ ಪಠ್ಯಕ್ರಮದ 1800 ಖಾಸಗಿ ಶಿಕ್ಷಣ ಸಂಸ್ಥೆಗಳು ಇವೆ. ಕಾಯ್ದೆ ಅನುಷ್ಠಾನ ಮಾಡುವಾಗ ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಈ ಕಾಯ್ದೆಯೇ ಅಪೂರ್ಣ. ಸರ್ಕಾರದ ನಿಲುವನ್ನು ಖಂಡಿಸಿ ಮೊದಲ ಹಂತದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಸರ್ಕಾರದ ಬೆದರಿಕೆ ತಂತ್ರಗಳಿಗೆ ಜಗ್ಗುವುದಿಲ್ಲ. ಪ್ರತಿಭಟನೆ ಕೈ ಬಿಡುವ ಪ್ರಶ್ನೆಯೇ ಇಲ್ಲ~ ಎಂದು ಕುಸ್ಮಾ ಅಧ್ಯಕ್ಷ ಜಿ.ಎಸ್. ಶರ್ಮ `ಪ್ರಜಾವಾಣಿ~ಗೆ ಭಾನುವಾರ ತಿಳಿಸಿದರು.

`ಮೂರು ತಿಂಗಳಿಂದ ಕಾಯ್ದೆಯ ಗೊಂದಲದ ಬಗ್ಗೆ ಸರ್ಕಾರಕ್ಕೆ ನಿರಂತರವಾಗಿ ಪತ್ರ ಬರೆದು ಗಮನ ಸೆಳೆಯಲಾಗಿತ್ತು. ಖಾಸಗಿ ಶಾಲೆಗಳ ಬೇಡಿಕೆಗೆ ಯಾವ ಹಂತದಲ್ಲೂ ಸ್ಪಂದಿಸಿಲ್ಲ. ಗೊಂದಲ ನಿವಾರಣೆಗೆ ಶಿಕ್ಷಣ ಇಲಾಖೆ ಒಂದೇ ಒಂದು ಸಭೆ ಕರೆದಿಲ್ಲ. ಸರ್ಕಾರದ ನೀತಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಉಳಿವಿಗಾಗಿ ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ~ ಎಂದು ಸಂಘದ ಕಾರ್ಯದರ್ಶಿ ಎ. ಮರಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

70 ಶಾಲೆಗಳಿಗೆ ನೋಟಿಸ್ ಜಾರಿ: `ಅಧಿಕಾರಿಗಳ ತಪ್ಪುಗಳನ್ನು ಮರೆಮಾಚಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಶಿಕ್ಷಣ ಇಲಾಖೆ ಸವಾರಿ ಮಾಡಲು ಹೊರಟಿದೆ. ಆರ್‌ಟಿಇ ಸಮರ್ಪಕ ಅನುಷ್ಠಾನ ಮಾಡಿಲ್ಲ ಎಂಬ ಕಾರಣ ನೀಡಿ ಹಾಸನ, ಬೆಂಗಳೂರು, ತುಮಕೂರು, ಬಳ್ಳಾರಿ, ಚಾಮರಾಜನಗರ, ಉಡುಪಿ, ಗದಗ ಜಿಲ್ಲೆಯ ಒಟ್ಟು 70 ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ. ಶಾಲೆಗಳಿಗೆ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಶಾಲಾ ಬಂದ್ ಮಾಡಿ ಜೈಲಿಗೆ ತಳ್ಳಲಾಗುವುದು ಎಂದು ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಇಂತಹ ಪ್ರವೃತ್ತಿಗೆ ತಡೆಯೊಡ್ಡಲು ಬಂದ್ ಅನಿವಾರ್ಯ~ ಎಂದು ಅವರು ಸ್ಪಷ್ಟಪಡಿಸಿದರು.

ಪೋಷಕರಿಗೆ ಮನವರಿಕೆ: `ಯಾವ ಶಾಲೆಗೂ ರಜೆ ಘೋಷಿಸಿಲ್ಲ. ಬದಲು ಬಂದ್ ಮಾಡಲಾಗುತ್ತಿದೆ~ ಎಂದು ಸ್ಪಷ್ಟಪಡಿಸಿದ ಅವರು, `ಬಂದ್‌ಗೆ ಪೋಷಕರು ಆತಂಕ ವ್ಯಕ್ತಪಡಿಸಿ ವಿರೋಧ ವ್ಯಕ್ತಪಡಿಸಿದ್ದರು. ಅವರಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಒಂದು ವಾರದಲ್ಲಿ 30 ಗಂಟೆಗಳ ತರಗತಿ ನಷ್ಟವಾಗಲಿದೆ. ಬಳಿಕ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಸರಿದೂಗಿಸಲಾಗುವುದು. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ~ ಎಂದರು.

`ಮೂರು ತಿಂಗಳಿಂದ ಸಂಘಟನೆಯ ಜೊತೆಗೆ ಮಾತುಕತೆಗೆ ಮುಂದಾಗದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೋಮವಾರ ಸಭೆ ಕರೆದು ಚರ್ಚಿಸಲಾಗುವುದು ಎಂದಿದ್ದಾರೆ. ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ. ನಮ್ಮ ಬೇಡಿಕೆಯನ್ನು ಮುಂದಿಡಲಾಗುವುದು. ಅಧಿಕಾರಿಗಳು ಭರವಸೆ ಕೊಟ್ಟರೂ ಬಂದ್ ಹಿಂತೆಗೆದುಕೊಳ್ಳುವುದಿಲ್ಲ. ಶಾಲೆಗಳ ಮಾನ್ಯತೆ ರದ್ದುಪಡಿಸಿದರೂ ಬೆದರುವುದಿಲ್ಲ. ಸರ್ಕಾರಕ್ಕೆ ಸ್ಪಷ್ಟ ಸಂದೇಶ ಸಿಕ್ಕಿ ಎಚ್ಚರಿಕೆಯ ಗಂಟೆಯಾಗಬೇಕು ಎಂಬುದು ಬಂದ್ ಉದ್ದೇಶ~ ಎಂದು ಅವರು ತಿಳಿಸಿದರು.

`ಬಂದ್ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದ್ದು, ಮಕ್ಕಳ ಶಿಕ್ಷಣ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಇದಕ್ಕೆ ಶಾಲೆಗಳ ಆಡಳಿತ ಮಂಡಳಿ ಮತ್ತು ಮುಖ್ಯ ಶಿಕ್ಷಕರು ನೇರ ಹೊಣೆಗಾರರಾಗುತ್ತಾರೆ. ಖಾಸಗಿ ಶಾಲೆಗಳು ತಮ್ಮ ಸಮಸ್ಯೆಯನ್ನು ಲಿಖಿತವಾಗಿ ತಿಳಿಸಿದರೆ ಕಾನೂನಿನ ಇತಿಮಿತಿಯಲ್ಲಿ ಪರಿಶೀಲಿಸಲಾಗುವುದು~ ಎಂದು ಬೆಂಗಳೂರು ಗ್ರಾಮಾಂತರ ಡಿಡಿಪಿಐ ಎಚ್.ವಿ.ವೆಂಕಟೇಶಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಸಭೆ

ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (ಕುಸ್ಮಾ) ಶಾಲಾ ಬಂದ್ ನಡೆಸುತ್ತಿರುವ ಕಾರಣ ಸಂಘಟನೆಯ ಪದಾಧಿಕಾರಿಗಳ ಜೊತೆಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಶಿಕ್ಷಣ ಇಲಾಖೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಗರದ ಸರ್ವ ಶಿಕ್ಷಣ ಅಭಿಯಾನದ ಕಚೇರಿಯಲ್ಲಿ ಸಭೆ ಕರೆದಿದೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ. ಕುಮಾರ್ ನಾಯಕ್, ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಎ. ದೇವಪ್ರಕಾಶ್ ಸಭೆಯಲ್ಲಿ ಭಾಗವಹಿಸುವರು.

ಕುಸ್ಮಾ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

`ಬಂದ್‌ಗೆ ಬೆಂಬಲ ಇಲ್ಲ~

`ಕುಸ್ಮಾ ನಡೆಸುತ್ತಿರುವ ಶಾಲಾ ಬಂದ್‌ಗೆ ಬೆಂಬಲ ಇಲ್ಲ~ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಹಾಗೂ ರಾಜ್ಯ ಸ್ವತಂತ್ರ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (ಕೆಎಫ್‌ಐಎಸ್‌ಎಂ) ಸ್ಪಷ್ಟಪಡಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.