ಗುರುವಾರ , ಮೇ 13, 2021
16 °C

ಸರ್ವೇ ಅಕ್ರಮ: ಎಸಿ ವಿಚಾರಣೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಮಂಗಲ: ಪಾಂಡವಪುರ ಉಪ ವಿಭಾಗಾಧಿಕಾರಿ ಮತ್ತು ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ಭೂ ಸಮೀಕ್ಷೆ ಪ್ರಕರಣಗಳಲ್ಲಿ ಆಗಿದೆ ಎನ್ನಲಾಗಿರುವ ಅವ್ಯವಹಾರ ಪ್ರಕರಣ  ತಿರುವು ಪಡೆದುಕೊಂಡಿದ್ದು, ಉಪ ವಿಭಾಗಾಧಿಕಾರಿ ಅವರ ಮೇಲೆ ಸಂಶಯ ಇರುವ ಹಿನ್ನೆಲೆಯಲ್ಲಿ ಅವರ ನೇತೃತ್ವದಲ್ಲಿ ಅವ್ಯವಹಾರ ಆರೋಪಗಳ ತನಿಖೆ ನಡೆಯುವುದಕ್ಕೆ ನಾಗಮಂಗಲದ ಹಿಂದಿನ ತಹಶೀಲ್ದಾರ್ ಎಂ.ಎಸ್.ನಿರಂಜನಬಾಬು ತಕರಾರು ತೆಗೆದಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರಿಗೂ ಲಿಖಿತ ಮನವಿ ಸಲ್ಲಿಸಿರುವ ಅವರು, ಪತ್ರಿಕಾ ವರದಿಗಳನ್ನು ಆಧರಿಸಿ ಉಪ ವಿಭಾಗಾಧಿಕಾರಿ ಜಿ.ಪ್ರಭು ರವರು ಉಲ್ಲೇಖಿಸಿರುವ ಹಲವಾರು ಪ್ರಕರಣಗಳಲ್ಲಿ ಅವರೇ ಅಕ್ರಮವಾಗಿ ಸರ್ಕಾರದ ಜಮೀನು ಖಾತೆ ಮಾಡಿಕೊಟ್ಟಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.ಈಗ  ಅವರೇ ಖುದ್ದು ಪ್ರಕರಣಗಳ ತನಿಖೆ ಮಾಡುವುದು ನೈತಿಕವಾಗಿ ಸರಿಯಲ್ಲ. ಖುದ್ದು ಅವ್ಯವಹಾರ ಎಸಗಿರುವಾಗ ತನಿಖೆ ಮಾಡುವುದು,  ಮತ್ತೊಬ್ಬ ಅಧಿಕಾರಿಯ ಮೇಲೆ ದೋಷಾರೋಪ ಮಾಡುವುದು ಸೂಕ್ತವಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಉಪವಿಭಾಗಾಧಿಕಾರಿ ಅವರ ಅವಧಿಯಲ್ಲಿಯೇ ಸರ್ಕಾರಿ ಜಮೀನು ಅಕ್ರಮವಾಗಿ ಇಂಡೀಕರಣವಾಗಿರುವ ಪ್ರಕರಣಗಳಿವೆ. ಹೀಗಾಗಿ, ಅವರೇ ತನಿಖೆ ನಡೆಸಿದರೆ  ಸಹಜ ನ್ಯಾಯ ಆಗುವುದಿಲ್ಲ. ಸಾಕ್ಷ್ಯಗಳ ನಾಶದ ಸಾಧ್ಯತೆಯೂ ಇದೆ. ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾದ ತನಿಖೆ ಅಗತ್ಯವಿದ್ದು ಜಿಲ್ಲಾಧಿಕಾರಿಗಳು,ಅವರ ಮೇಲ್ಪಟ್ಟ ಅಧಿಕಾರಿಗಳ ತನಿಖಾ ತಂಡ ತನಿಖೆ ನಡೆಸಲಿ. ತನಿಖೆಯ ವ್ಯಾಪ್ತಿಗೆ  ಉಪವಿಭಾಗಾಧಿಕಾರಿಗಳನ್ನು ಒಳಪಡಿಸಲಿ ಎಂದು ಕೋರಿದ್ದಾರೆ.ನಾಗಮಂಗಲ ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ ಅವರ ಮಾತುಗಳಿಗೆ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ಗುರಿ ಮಾಡಿ ದೋಷಾರೋಪ ಮಾಡಲಾಗಿದೆ. ಹಿಂದೆ ದೇವಲಾಪುರ ಹೋಬಳಿ ನಲ್ಕುಂದಿ ಗ್ರಾಮದ ಗೋಮಾಳದ 4 ಎಕರೆ ಜಮೀನನ್ನು ಉಪ ವಿಭಾಗಾಧಿಕಾರಿಗಳ ನಡಾವಳಿ ಪತ್ರದ  ಆಧಾರದಲ್ಲಿ ಗಂಗಮ್ಮ ಕೋಂ ನಾರಪ್ಪ ಇವರಿಗೆ ದಾಖಲೆಗಳನ್ನು ಪರಿಶೀಲಿಸದೇ ಇಂಡೀಕರಣ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ತನಿಖೆ ನಡೆಸಿ ತಾವು  ಗ್ರಾಮ ಲೆಕ್ಕಿಗ, ರಾಜಸ್ವ ನಿರೀಕ್ಷಕ, ಆರ್‌ಆರ್‌ಟಿ ವಿಷಯ ನಿರ್ವಾಹಕರು, ಭೂಮಿ ಯೋಜನೆ ಆಪರೇಟರ್‌ಗೂ ನೋಟೀಸ್ ನೀಡಿ ದೋಷಾರೋಪಣ ಪಟ್ಟಿ ತಯಾರಿಸಿದ್ದು, ಡಿ.ಸಿ ಕಚೇರಿಗೆ ವರದಿ ನೀಡಿರುತ್ತೇನೆ ಎಂದು ಸ್ಮರಿಸಿದ್ದಾರೆ.ಇದು ಸೇರಿದಂತೆ ಅನೇಕ ವಿಷಯಗಳ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಗಳು, ನಾನು ನಾಗಮಂಗಲದಿಂದ ವರ್ಗಾವಣೆ ಆದ ನಂತರ ತಾಲ್ಲೂಕಿನಲ್ಲಿ ಅಕ್ರಮ ಖಾತೆ ಇನ್ನಿತರ ವಿಷಯಗಳ ಬಗ್ಗೆ ತನಿಖೆ ಮಾಡುವುದಾಗಿ ಡಿಸಿಯಿಂದ ಆದೇಶ ಪಡೆದು ತನಿಖೆಗೆ ಮುಂದಾಗಿದ್ದಾರೆ ಎಂದಿದ್ದಾರೆ.ಹೈಕೋರ್ಟ್ ಆದೇಶ ಮತ್ತು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆದು ತಮ್ಮ ಅವಧಿಯಲ್ಲಿ ಎಚ್.ಎನ್.ಕಾವಲ್ ನ ಒಂದು ನಂಬರ್ ದುರಸ್ತಿ ಮಾಡಿದ್ದು, ಇದನ್ನು ಹೊರತು ಪಡಿಸಿ  ಯಾವುದೇ ದರಖಾಸ್ತು ಜಮೀನಿನ ಸಾಗುವಳಿ ಚೀಟಿ ನೀಡಿಲ್ಲ, ಸರ್ಕಾರಿ ಜಮೀನಿನ ಖಾತೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಆರೋಪಗಳ ನಿರಾಕರಣೆ: ಆದರೆ, ಇದನ್ನು ಉಪ ವಿಭಾಗಾಧಿಕಾರಿ ಪ್ರಭು ನಿರಾಕರಿಸಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತನಿಖೆ ನಡೆಸುತ್ತಿದ್ದು, ಯಾರನ್ನೂ ಗುರಿ ಆಗಿಸಿಲ್ಲ. ನಾನು ಸೇರಿದಂತೆ ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಎಂದರು.ಅವರು ನೀಡಿರುವ ಅಂಶಗಳು ಆಧಾರವಿಲ್ಲದ್ದು. ತಮ್ಮನ್ನು ರಕ್ಷಿಸಿಕೊಳ್ಳಲು ಹೀಗೆ ದೂರು ನೀಡಿದ್ದಾರೆ ಎಂದು ಈ ಕುರಿತು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.