ಶುಕ್ರವಾರ, ಫೆಬ್ರವರಿ 26, 2021
31 °C

ಸಸಿಗಳಿಗೂ ಜನ್ಮದಿನ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಸಿಗಳಿಗೂ ಜನ್ಮದಿನ ಸಂಭ್ರಮ

ಗುಂಡ್ಲುಪೇಟೆಯ ಸರ್ಕಾರಿ ಕನ್ನಡ, ತಮಿಳು ಹಾಗೂ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳ ಆವರಣದಲ್ಲಿ ಅಂದು ಹಬ್ಬದ ವಾತಾವರಣ. ಆವರಣದ ತುಂಬ ತಳಿರು ತೋರಣ. ಮಕ್ಕಳು, ಶಿಕ್ಷಕರಲ್ಲಿ ಹೊಸ ಹುರುಪು, ಉಲ್ಲಾಸ.ಇದಕ್ಕೆಲ್ಲ ಕಾರಣ ಶಾಲೆಯಲ್ಲಿ ಏರ್ಪಾಡಾಗಿದ್ದ ಹುಟ್ಟುಹಬ್ಬ. ಆದರೆ ಮಕ್ಕಳ ಹುಟ್ಟುಹಬ್ಬವಲ್ಲ. ಮಕ್ಕಳಂತೆ ಅಥವಾ ಅದಕ್ಕೂ ಹೆಚ್ಚು ಅಕ್ಕರೆಯ ಪೋಷಣೆಯಿಂದ ಶಾಲಾ ಆವರಣದಲ್ಲಿ ಆಳೆತ್ತರ ಬೆಳೆದು ನಿಂತ ಹೊಂಗೆ ಹಾಗೂ ಚೆರ‌್ರಿ ಗಿಡಗಳ ಹುಟ್ಟು ಹಬ್ಬ!ಸರಿಯಾಗಿ ಅಂದು ಒಂದು ವರ್ಷ ತುಂಬಿದ ಗಿಡಗಳು ಎರಡನೇ ವರ್ಷಕ್ಕೆ ಕಾಲಿಟ್ಟಿದ್ದವು. ಈ ಗಿಡಗಳ ಕೊರಳಿಗೆ ಪರಿಸರದ ರಕ್ಷಣೆಯ ಫಲಕ ತೂಗು ಹಾಕಲಾಗಿತ್ತು. `ಗಿಡ ನೆಟ್ಟು ಬರ ಅಟ್ಟು; ಗಿಡವಿರಲಿ, ಮಳೆಬರಲಿ~ ಮುಂತಾದ ಫಲಕಗಳು ಪರಿಸರ ಪ್ರಜ್ಞೆ ಜಾಗೃತಗೊಳಿಸುತ್ತಿದ್ದವು. ವರ್ಷದ ಹಿಂದೆ ಬರಡಾಗಿದ್ದ ಶಾಲಾ ಆವರಣ ಹಸಿರಿನಿಂದ ಕಂಗೊಳಿಸುತ್ತಿತ್ತು.ಈ ಸಂಭ್ರಮದ ಹಿಂದೆ ಒಂದು ಕಥೆಯೂ ಇದೆ. ಕಳೆದ ವರ್ಷ ಶಾಲೆಯ ಶಿಕ್ಷಕ ವೆಂಕಟರಾಮ್ ಅವರು `ಚಿಗುರು~ ಸಂಸ್ಥೆಯನ್ನು ಸಂಪರ್ಕಿಸಿ ಶಾಲಾ ಆವರಣದಲ್ಲಿ ಸಸಿ ನೆಡಲು ನೆರವು ಕೋರಿದರು.ಅದರಂತೆ ಅಲ್ಲಿ 50 ಹೊಂಗೆ ಹಾಗೂ ಚೆರ‌್ರಿ ಸಸಿಗಳನ್ನು ನೆಡಲಾಯಿತು. ಆದರೆ ಮೊದಲ ದಿನವೇ `ಈ ಸಸಿಗಳು ಬದುಕುವುದಿಲ್ಲ. ನೋಡುತ್ತಿರಿ. ಏಕೆಂದರೆ ಜನ ಇದನ್ನು ಬಿಡೊಲ್ಲ~ ಎಂಬ ಅಪಶಕುನ, ಕೊಂಕು ಮಾತುಗಳು ಕೇಳಿಬಂದವು. ಆದರೂ ವೆಂಕಟರಾಮ್ ಅವರ ಉತ್ಸಾಹಕ್ಕೆ ಭಂಗ ಬರಲಿಲ್ಲ.ಮರು ದಿನ ಬೆಳಿಗ್ಗೆ ಶಾಲೆಗೆ ಬಂದಾಗ ಮಾತ್ರ ಅವರಿಗೆ ಆಘಾತವಾಗಿತ್ತು. 15 ಸಸಿಗಳು ಬುಡ ಸಮೇತ ಕಾಣೆಯಾಗಿದ್ದು ನೋಡಿ ಅವರಿಗೆ ವೇದನೆ. ಕುಹಕಿಗಳ ಮಾತು ನಿಜವಾಗಿತ್ತು. ಸಮಸ್ಯೆಯ ಆಳ ಅರಿವಾಗಿತ್ತು. ಹಾಗೇ ಹುಡುಕುತ್ತ ಹೋದಾಗ ಕಾಂಪೌಂಡ್ ಹಿಂಭಾಗ ಸಸಿಗಳು ಅನಾಥವಾಗಿ  ಬಿದ್ದಿದ್ದವು. ಅವನ್ನು ತಂದು ಮತ್ತೆ ನೆಟ್ಟು ಸುತ್ತಮುತ್ತಲಿನ ಮನೆಗಳವರ ಸಹಕಾರ ಕೋರಿದರು. ಮರಗಳ ಮಹತ್ವ ಮನವರಿಕೆ ಮಾಡಿಕೊಟ್ಟರು.ಶನಿವಾರ, ಭಾನುವಾರ ಆಟವಾಡಲು ಶಾಲಾ ಮೈದಾನಕ್ಕೆ ಬರುವ ದೊಡ್ಡ ಹುಡುಗರ ಮನವೊಲಿಸಿದರು. ಅವರಲ್ಲೂ ಸಸ್ಯ ಪ್ರೇಮ ಬೆಳೆಸುವಲ್ಲಿ ಸಫಲರಾದರು.ನಂತರ ಒಂದೊಂದು ಸಸಿಗೂ 5 ಮಕ್ಕಳ ತಂಡ ರಚಿಸಿ ಅವನ್ನು ಪೋಷಿಸುವ, ನೀರುಣಿಸುವ ಕೆಲಸ ವಹಿಸಲಾಯಿತು. ವೆಂಕಟರಾಮ್ ಅವರ ಜತೆಗೆ ಶಿಕ್ಷಕಿಯರಾದ ನಾಗಶೆಟ್ಟಿ, ಶಿಲ್ಪಾ ಹಾಗು ಸಯೀದಾ ಮೇಲ್ವಿಚಾರಣೆ ವಹಿಸಿಕೊಂಡರು. ಆದರೂ ಎಲ್ಲೋ ಒಂದು ಕಡೆ ಆತಂಕ ಮನೆ ಮಾಡಿತ್ತು. ನಿತ್ಯ ಬೆಳಿಗ್ಗೆ ಬಂದ ತಕ್ಷಣದ ಮೊದಲ ಕೆಲಸ `ಯಾವ ಸಸಿ ಹಾಳಾಗಿದೆ, ನಾಪತ್ತೆಯಾಗಿದೆ~ ಎಂದು ನೋಡುವುದು.

 

ಇದರ ಮಧ್ಯೆ ದಸರಾ ರಜೆ ಬಂತು. ಈ ಅವಧಿಯಲ್ಲಿ ಗಿಡಗಳಿಗೆ ಯಾರಾದರೂ ಏನಾದರೂ ಮಾಡಿದರೆ ಎಂಬ ದಿಗಿಲು. ಮತ್ತೆ ಹಸಿರು ಸಂಸ್ಥೆಯನ್ನು ಸಂಪರ್ಕಿಸಿ ರಜಾ ಕಾಲದಲ್ಲಿ ಪೋಷಿಸುವಂತೆ ಒಪ್ಪಿಸಿದರು. ಒಂದು ವರ್ಷದ ಅವಿರತ ಶ್ರಮದ ಫಲವಾಗಿ ಶಾಲಾ ಆವರಣಕ್ಕೀಗ ಹಸಿರಿನ ಮೆರುಗು ಬಂದಿದೆ.`ಯಾಕೆ ಈ ಗಿಡಗಳ ಜನ್ಮದಿನ ಆಚರಿಸಬಾರದು~ ಎಂದು ಆಲೋಚಿಸಿದ ವೆಂಕಟರಾಮ್, ವಿಷಯವನ್ನು ಮಕ್ಕಳು ಮತ್ತು ಸಹೋದ್ಯೋಗಿಗಳ ಗಮನಕ್ಕೆ ತಂದರು. ಎಲ್ಲ ಸೇರಿ ಹುಟ್ಟುಹಬ್ಬದ ದಿನ ಗಿಡಗಳಿಗೆ ಅರಿಶಿಣ, ಕುಂಕುಮ ಹಚ್ಚಿ, ಹೂ ಮುಡಿಸಿ, ಫಲ ನೈವೇದ್ಯ ಮಾಡಿ ಆರತಿ ಬೆಳಗಿದರು.

 

`ಸಸ್ಯಗಳ ಹುಟ್ಟುಹಬ್ಬ~ ಎಂದು ಬರೆಸಿದ್ದ ಕೇಕ್ ಕತ್ತರಿಸಿ ಮಕ್ಕಳಿಗೆಲ್ಲ ಹಂಚಿದರು. ಇದೇ ಸಂದರ್ಭದಲ್ಲಿ ಗಿಡಗಳು, ಪರಿಸರದ ಮಹತ್ವದ ಬಗ್ಗೆ ಉಪನ್ಯಾಸವೂ ಇತ್ತು. ಅಪರೂಪದ ಉತ್ಸವದಲ್ಲಿ ಪಾಲ್ಗೊಂಡ ಸಂತಸ ಅಲ್ಲಿದ್ದವರಲ್ಲಿ ಮನೆ ಮಾಡಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.