ಶನಿವಾರ, ಮೇ 15, 2021
23 °C
ನಗರ ಸಂಚಾರ

ಸಾಂಕ್ರಾಮಿಕ ರೋಗ ಭೀತಿ: ಆತಂಕ

ಕೆ.ಎಸ್.ಸುನಿಲ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂಕ್ರಾಮಿಕ ರೋಗ ಭೀತಿ: ಆತಂಕ

ಗದಗ: ಬರದಿಂದ ತತ್ತರಿಸಿದ್ದ ಜನತೆಗೆ ನಗರದಲ್ಲಿ ಸುರಿಯುತ್ತಿರುವ ಮಳೆ ಒಂದೆಡೆ ಸಂತಸ ಉಂಟು ಮಾಡಿದರೆ ಮತ್ತೊಂದೆಡೆ ಸಾಂಕ್ರಾಮಿಕ ರೋಗದ ಭೀತಿ ಉಂಟು ಮಾಡಿದೆ.ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿದೆ. ನಿರೀಕ್ಷೆಯಂತೆ  ನಗರದ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ. ಆದರೆ ಕೆಲ ದಿನಗಳಿಂದ ಅವಳಿ ನಗರದಲ್ಲಿ ಡೆಂಗೆ, ಚಿಕೂನ್ ಗುನ್ಯಾ, ಮಲೇರಿಯಾ ಪ್ರಕರಣಗಳು ಕಾಣಿಸಿಕೊಂಡಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.ಇತ್ತೀಚಿಗೆ ನಗರದ ಗಂಗಿಮಡಿಯಲ್ಲಿ ಜ್ವರದಿಂದ ಬಳಲುತ್ತಿದ್ದ ಐದು ವರ್ಷದ ಬಾಲಕಿ ಮೃತಪಟ್ಟಳು. ಡೆಂಗೆ ಜ್ವರದಿಂದ ಬಾಲಕಿ ಸತ್ತಿದ್ದಾಳೆ ಎಂಬುದು ಪೋಷಕರ ಆರೋಪ. ಆದರೆ ಆರೋಗ್ಯಾಧಿಕಾರಿಗಳು ಡೆಂಗೆ ಜ್ವರದಿಂದ ಮೃತಪಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅದು ಏನೇ ಇರಲಿ ಆರೋಗ್ಯ ಇಲಾಖೆ ಎಚ್ಚೇತ್ತುಕೊಂಡು ಸಾಂಕ್ರಾಮಿಕ ರೋಗದ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.ನಗರದ ಹೊರ ವಲಯದಲ್ಲಿರುವ ತಾಂಡಾಗಳಲ್ಲೂ ಚಿಕೂನ್‌ಗುನ್ಯಾ, ಮಲೇರಿಯಾದಿಂದ ಜನರು ನರಳುತ್ತಿದ್ದಾರೆ. ನಗರದ ಕುಷ್ಠರೋಗ ಕಾಲೊನಿಯಲ್ಲಿ ಸೇರಿದಂತೆ ವಿವಿಧ ಕೊಳಚೆ ಪ್ರದೇಶದಲ್ಲಿ ವಾಸಿಸುವ ಜನರು ಚಿಕೂನ್ ಗುನ್ಯಾದಿಂದ ನರಳುತ್ತಿದ್ದಾರೆ. ಜಿಲ್ಲೆಯಲ್ಲಿ 185 ಶಂಕಿತ ಪ್ರಕರಣಗಳಲ್ಲಿ 50 ಜನರ ರಕ್ತದ ಮಾದರಿ ತಪಾಸಣೆಗೆ ಕಳುಹಿಸಲಾಗಿತ್ತು. ಅದರಲ್ಲಿ 14 ಮಂದಿಗೆ ಡೆಂಗೆ ಇರುವುದು ಪತ್ತೆಯಾಗಿದೆ. ಇದು ಜನರಲ್ಲಿ ಮತ್ತಷ್ಟು ಭೀತಿ ಉಂಟು ಮಾಡಿದೆ.ಅವಳಿ ನಗರದ ಬಹುತೇಕ ಚರಂಡಿಗಳು ಕೊಳಚೆಯಿಂದ ತುಂಬಿ ಹೋಗಿವೆ. ಕಸದ ತೊಟ್ಟಿಗಳು ಭರ್ತಿಯಾಗಿ ರಸ್ತೆ ಮೇಲೆ ಕಸದ ರಾಶಿ ಹರಡಿದೆ. ಎಷ್ಟೋ ಕಡೆ ವಿಲೇವಾರಿಯಾಗದೇ ಕಸಗಳು ಕೊಳೆಯುತ್ತಿವೆ. ಕೆಲವೆಡೆ ಚರಂಡಿ ಬಳಿಯೇ ನೀರಿನ ಟ್ಯಾಂಕ್ ಇದ್ದು, ಗಲೀಜು ನಡುವೆಯೇ ಜನರು ನೀರು ತುಂಬಿಸಿಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ಬಹಳ ದಿನ ಒಂದೇ ಕಡೆ ನೀರು ನಿಲ್ಲಿಸುವುದರಿಂದ ಅಥವಾ ಸಂಗ್ರಹಿಸಿ ಇಡುವುದರಿಂದ ಈಡೀಸ್ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದ ಡೆಂಗೆ ಜ್ವರ ಕಾಣಿಸಿಕೊಳ್ಳುತ್ತಿದೆ. ಸೊಳ್ಳೆಗಳು ಉತ್ಪಾದನಾ ಆಗದಂತೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.ಆಸ್ಪತ್ರೆಗಳಲ್ಲಿ ವೈದ್ಯಕೀಯ ತ್ಯಾಜ್ಯ ವಸ್ತುಗಳ ವಿಲೇವಾರಿ ಕಾರ್ಯ ಹಾಗೂ ಸ್ವಚ್ಛತಾ ಕಾರ್ಯದ ಕಡೆಗೆ ಅಧಿಕಾರಿಗಳ ಗಮನ ಹರಿಸಬೇಕಾಗಿದೆ. ಈಗಾಗಲೇ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ವತಿಯಿಂದ ಸ್ಟೇಷನ್ ಹತ್ತಿರದ ವಿವೇಕಾನಂದ ಕೊಳಚೆ ಪ್ರದೇಶದಲ್ಲಿ ಡೆಂಗೆ ಜ್ವರ ಕುರಿತು ಜಾಗೃತಿ ಮೂಡಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಮನೆ ಮನೆಗೆ ತೆರಳಿ ಡೆಂಗೆ, ಚಿಕೂನ್ ಗುನ್ಯಾ ಕುರಿತು ಅರಿವು ಮೂಡಿಸುವ ಕರಪತ್ರಗಳನ್ನು ವಿತರಿಸುತ್ತಿದ್ದಾರೆ. ನೀರು ಶೇಖರಣಾ ತೊಟ್ಟಿಗಳನ್ನು ಪರಿಶೀಲನೆ ನಡೆಸಿ ಲಾರ್ವಾ ಕಂಡು ಬಂದ ಕಡೆ ಅದನ್ನು ಬರಿದು ಮಾಡಲಾಗುತ್ತಿದೆ.ಸೊಳ್ಳೆಗಳನ್ನು ನಿಯಂತ್ರಿಸಲು ಧೂಮೀಕರಣ ಮಾಡಲಾಗುತ್ತಿದೆ. ಹಳೆಯ ಟೈರ್ ಮತ್ತು ಟ್ಯಾಂಕ್‌ಗಳಲ್ಲಿ ಹೆಚ್ಚು ದಿನಗಳ ಕಾಲ ನೀರು ಸಂಗ್ರಹಿಸದಂತೆ ನೋಡಿಕೊಳ್ಳಬೇಕು. ಮತ್ತಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೆ ರೋಗ ಹರಡುವುದನ್ನು ನಿಯಂತ್ರಿಸಬಹುದು.`ಹಳೇ ಜಿಲ್ಲಾಸ್ಪತ್ರೆಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಡೆಂಗೆ ಪೀಡಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಹಾಗೂ 24್ಡ7 ಕಾರ್ಯನಿರ್ವಹಿಸಲು ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರತಿ ತಾಲ್ಲೂಕಿಗೆ ನೋಡೆಲ್ ಅಧಿಕಾರಿ ನೇಮಕ ಮಾಡಲಾಗಿದೆ.  ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ' ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ.ಚನ್ನಶೆಟ್ಟಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.