ಮಂಗಳವಾರ, ಮೇ 18, 2021
30 °C

`ಸಾಂವಿಧಾನಿಕ ಪ್ರಾತಿನಿಧ್ಯ- ಆತ್ಮಾವಲೋಕನ ನಡೆಯಲಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಎಲ್ಲಾ ಬಡ ವರ್ಗದ ಜನರಿಗೆ ಸಾಂವಿಧಾನಿಕ ಪ್ರಾತಿನಿಧ್ಯ ಇನ್ನೂ ಸಿಗದಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ಆತ್ಮಾವಕಲೋಕನವಾಗಲಿ' ಎಂದು ಚಿಂತಕ ವಿಲಿಯಂ ಡಿಸಿಲ್ವ ಅಭಿಪ್ರಾಯಪಟ್ಟರು.ಅಹಿಂದ ಜನ ಚಳವಳಿ ಸಂಘಟನೆಯ ಆಶ್ರಯದಲ್ಲಿ ಇಲ್ಲಿನ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ನಡೆದ ಅಹಿಂದ ಜನಜಾಗೃತಿ ಸಮಾವೇಶ ಮತ್ತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಸಾಂವಿಧಾನಿಕ ಪ್ರಾತಿನಿಧ್ಯ ವಿಷಯದಲ್ಲಿ, ಸಾಮಾಜಿಕ, ಆರ್ಥಿಕ, ಲಿಂಗತ್ವ, ಮಕ್ಕಳು, ಮಹಿಳೆಯರು, ಕೆಳವರ್ಗದವರು ಮೊದಲಾದ ವಿವಿಧ ಆಯಾಮಗಳ ಬಗ್ಗೆಯೂ ವಿಚಾರ ಮಾಡಬೇಕು. ಆಳುವವರು ಕೊಡುವುದು ಆಶ್ವಾಸನೆಗಳನ್ನು ಮಾತ್ರ. ಐದು ವರ್ಷಗಳ ಕಾಲ ಈ ವಿಷಯವನ್ನು ಜ್ವಲಂತವಾಗಿಟ್ಟರೆ ಮಾತ್ರ ಸರ್ಕಾರ ಬಗ್ಗುತ್ತದೆ' ಎಂದರು.`ಖನಿಜವನ್ನು ತೆಗೆದು ಮಾರುವುದು, ಅಣೆಕಟ್ಟು ಕಟ್ಟುವುದನ್ನೇ ಅಭಿವೃದ್ಧಿ ಎಂದು ನಾವು ಭಾವಿಸಿದ್ದೇವೆ. 63 ವರ್ಷಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ದೇಶದಲ್ಲಿ 450 ದಶಲಕ್ಷ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಅವರೆಲ್ಲ ಬಡವರೇ. ಅವರು ಎಲ್ಲಿ ಹೋದರು ಎಂಬ ಬಗ್ಗೆ ಯಾರೂ ಯೋಚಿಸಿಲ್ಲ. ನಗರಗಳ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಸಿಗಬೇಕಾದ ಪ್ರಾತಿನಿಧ್ಯದ ಬಗ್ಗೆಯೂ ಚರ್ಚೆಯಾಗಲಿ' ಎಂದರು.ವಕೀಲ ಬಿ.ಎ.ಮೊಹಮ್ಮದ್ ಹನೀಫ್ ಮಾತನಾಡಿ, `ಮೀಸಲಾತಿ ಭಿಕ್ಷೆಯಲ್ಲ. ಅದು, ತುಳಿತಕ್ಕೊಳಗಾದವರ ಹಕ್ಕು. ಇಂದಿನ ತಲೆಮಾರಿನ ಕೆಲವರಿಗೆ ಮೀಸಲಾತಿ ಬಗ್ಗೆ ಕೀಳರಿಮೆ ಇದೆ. ಈ ಕೀಳರಿಮೆ ಹೋಗಲಾಡಿಸಬೇಕಾದರೆ ಮೀಸಲಾತಿಯನ್ನು ಪ್ರಾತಿನಿಧ್ಯವನ್ನಾಗಿ ಪರಿವರ್ತಿಸಬೇಕು' ಎಂದರು.ದಲಿತ ಮುಖಂಡ ಪಿ.ಡೀಕಯ್ಯ ಮಾತನಾಡಿ, `ಮೀಸಲಾತಿಯನ್ನು ಪ್ರಾತಿನಿಧ್ಯವನ್ನಾಗಿ ಪರಿವರ್ತಿಸುವ ಬಗ್ಗೆ ಚರ್ಚೆ ನಡೆಯಬೇಕಾದುದು ವಿಧಾನಮಂಡಲದಲ್ಲಿ. ದುರದೃಷ್ಟವಶಾತ್ ಅಲ್ಲಿ ಇಂತಹ ಗಂಭೀರ ವಿಚಾರಗಳ ಬಗ್ಗೆ ಚರ್ಚೆಯೇ ನಡೆಯುವುದಿಲ್ಲ. ಮೀಸಲಾತಿಯನ್ನು ಆಡಳಿತಶಾಹಿಗಳು ತಪ್ಪಾಗಿ ಅರ್ಥೈಸಿಕೊಂಡು ಮೂಗಿನ ನೇರಕ್ಕೆ ವಿಶ್ಲೇಷಿಸಿದ್ದಾರೆ. ಅದನ್ನು ನಾವು ಬೆಪ್ಪಾಗಿ ಒಪ್ಪಿಕೊಂಡಿದ್ದೇವೆ' ಎಂದರು.`ಬಡವರಿಗೆ ಪ್ರತಿ ಕೆ.ಜಿ.ಗೆ 1 ರೂಪಾಯಿ ದರದಲ್ಲಿ ಅಕ್ಕಿ ನೀಡುವುದರ ಹಿಂದಿನ ರಾಜಕೀಯ ಸಂಚನ್ನು ನಾವು ಅರಿತಿಲ್ಲ. ಸಮುದಾಯವನ್ನು ಹಿಡಿತದಲ್ಲಿಟ್ಟುಕೊಳ್ಳಲು ಬಯಸುವ ರಾಜಕೀಯ ಮುಖಂಡರು ಸಂವಿಧಾನದ ನಿರ್ದೇಶಕ ತತ್ವಗಳ ಬಗ್ಗೆ ಉದ್ದೇಶಪೂರ್ವಕ ಅಜ್ಞಾನ ಪ್ರದರ್ಶಿಸುತ್ತಾ ಬಂದಿದ್ದಾರೆ. ಹಾಗಾಗಿಯೇ ಅಹಿಂದ ಸಮುದಾಯಕ್ಕೆ ರಾಜಕೀಯವಾಗಿ ಅರ್ಹವಾಗಿ ಸಿಗಬೇಕಾದ ಪ್ರಾತಿನಿಧ್ಯ ಇನ್ನೂ ಸಿಕ್ಕಿಲ್ಲ. ಈ ಎಲ್ಲ ಸಮಸ್ಯೆಗಳ ಮೂಲ ಇರುವುದು ಮನುವಾದದಲ್ಲಿ' ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಜಯಾನಂದ ದೇವಾಡಿಗ ಮಾತನಾಡಿ, `ಜಾತಿ ಒಂದು ಶಾಪ. ಪರಿಶಿಷ್ಟರಿಗೆ ಸಂವಿಧಾನ ಬದ್ಧವಾಗಿ ಸಿಕ್ಕ ಪ್ರಾತಿನಿಧ್ಯ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಮರೀಚಿಕೆಯಾಗಿಯೇ ಉಳಿದಿದೆ. ಮೂರೂ ಸಮುದಾಯದವರು ಪರಸ್ಪರರ ನೋವುಗಳನ್ನು ಅರ್ಥೈಸಿ ಒಗ್ಗಟ್ಟಿನಿಂದ ಪ್ರಾತಿನಿಧ್ಯಕ್ಕೆ ಹೋರಾಡಬೇಕು' ಎಂದರು.ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಕ್ರೀಡೆ, ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಅವರನ್ನು ಸನ್ಮಾನಿಸಲಾಯಿತು.ಕೇಂದ್ರ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವಾಧ್ಯಕ್ಷ ಎಂ.ಬಿ.ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು.ಚಂಚಲಾ ದಯಾಕರ್, ಪಾಲಿಕೆ ಸದಸ್ಯೆ ರಮೀಜಾ ನಾಸರ್, ಅಹಿಂದ ಮುಖಂಡರಾದ ಪುರುಷೋತ್ತಮ ಪೂಜಾರಿ, ಎಚ್.ಸಂಜೀವ ಪೂಜಾರಿ, ರೀಟಾ ನೊರೋನ್ಹ, ಯೂಸಫ್ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.