ಸೋಮವಾರ, ಜೂನ್ 21, 2021
27 °C

ಸಾಂಸ್ಕೃತಿಕ ಕ್ಷೇತ್ರ: ಜನರ ನಿರಾಸಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂಸ್ಕೃತಿಕ ಕ್ಷೇತ್ರ: ಜನರ ನಿರಾಸಕ್ತಿ

ಬೆಂಗಳೂರು: `ರಾಜ್ಯದ ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ರಾಜ್ಯ ಸರ್ಕಾರ ನೆರೆಯ ರಾಜ್ಯಗಳಿಗಿಂತ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ರಾಜ್ಯದ ಜನರಿಂದ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಾಕಷ್ಟು ಉತ್ತೇಜನ ದೊರೆಯುತ್ತಿಲ್ಲ~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ವಿಷಾದಿಸಿದರು.ನಗರದಲ್ಲಿ ಭಾನುವಾರ ಸ್ನೇಹ ಬುಕ್ ಹೌಸ್ ಹಾಗೂ ಶ್ರದ್ಧಾ ಪ್ರತಿಷ್ಠಾನ ಆಯೋಜಿಸಿದ್ದ ನಿರ್ಮಲಾ ಸಿ. ಎಲಿಗಾರ್ ಅವರ `ಕೌದಿ~ ಮತ್ತು ಕಿರಣ್ ಪ್ರಸಾದ್ ರಾಜನಹಳ್ಳಿ ಅವರೊಂದಿಗೆ ಸೇರಿ ರಚಿಸಿರುವ `ಗರಿ~ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ ಹಾಗೂ ಆಂದ್ರ ಪ್ರದೇಶಗಳಲ್ಲಿ ಸಾಮಾನ್ಯ ಜನತೆಯೇ ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ಅಲ್ಲಿನ ಸರ್ಕಾರಗಳು ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚೇನೂ ಕೊಡುಗೆ ನೀಡುತ್ತಿಲ್ಲ. ಆದರೆ ರಾಜ್ಯದಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ಇದೆ. ಸರ್ಕಾರದಿಂದ ಪ್ರೋತ್ಸಾಹವಿದ್ದರೂ ಜನತೆಯ ಸಹಭಾಗಿತ್ವವಿಲ್ಲದೇ ಸಾಂಸ್ಕೃತಿಕ ಲೋಕ ಬೆಳೆಯಲು ಸಾಧ್ಯವಿಲ್ಲ~ ಎಂದು ಅವರು ಕಳವಳ ವ್ಯಕ್ತ ಪಡಿಸಿದರು.`ಕೌದಿ~ ಪುಸ್ತಕದ ಬಗ್ಗೆ ಮಾತನಾಡಿದ ಅವರು, `ಓದುಗರ ಹೃದಯಕ್ಕೆ ನೇರವಾಗಿ ಪ್ರವೇಶಿಸುವ ಕಾವ್ಯ ಪ್ರತಿಭೆ ನಿರ್ಮಲಾ ಅವರ ಕವಿತೆಗಳಿಗಿದೆ. ತಮ್ಮ ಕಾರ್ಯಕ್ಷೇತ್ರದ ಒತ್ತಡಗಳ ನಡುವೆಯೂ ವೃತ್ತಿಗೆ ಅಡ್ಡಿಯಾಗದಂತೆ ತಮ್ಮ ಬರಹವನ್ನು ಅವರು ಕಾಯ್ದುಕೊಂಡಿರುವುದು ಶ್ಲಾಘನೀಯ~ ಎಂದರು.ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, `ಎಲ್ಲ ಶಾಸ್ತ್ರಗಳ ಮೂಲ ಉದ್ದೇಶವೂ ಮಾನವನ ಏಳಿಗೆಯೇ ಆಗಿದೆ. ಆದರೆ ಲೌಕಿಕ ಶಾಸ್ತ್ರಗಳ ಅತಿಯಾದ ಅವಲಂಬನೆಯಿಂದ ಆಧ್ಯಾತ್ಮಿಕ ಕ್ಷೇತ್ರವನ್ನು ಮನುಷ್ಯ ಮರೆಯುತ್ತಿದ್ದಾನೆ. ವೈಜ್ಞಾನಿಕವಾಗಿ ಎಷ್ಟೇ ಬೆಳೆದರೂ ಭಗವಂತನ ಅಸ್ಥಿತ್ವವನ್ನು ಮನುಷ್ಯ ಮರೆಯಬಾರದು~ ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಟಿ.ಲಲಿತಾ ನಾಯಕ್, ರಂಗಭೂಮಿ ಕಲಾವಿದೆ ಬಿ.ಜಯಶ್ರೀ, ಸಮಾಜ ಸೇವಕಿ ಎಸ್.ಜಿ.ಸುಶೀಲಮ್ಮ, ಹಿರಿಯ ಚಲನಚಿತ್ರ ನಟಿ ಹರಿಣಿ ಸೇರಿದಂತೆ 18 ಜನ ಾಧಕಿಯರನ್ನು ಸನ್ಮಾನಿಸಲಾಯಿತು.

ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕ ಡಾ.ಮಹೇಶ್ ಜೋಷಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಾಹಿತಿ ಜರಗನಹಳ್ಳಿ ಶಿವಶಂಕರ್, ಕೃತಿಗಳ ಲೇಖಕಿಯರಾದ ನಿರ್ಮಲಾ ಸಿ. ಎಲಿಗಾರ್ ಹಾಗೂ ಕಿರಣ್ ಪ್ರಸಾದ್ ರಾಜನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.