ಶನಿವಾರ, ಮೇ 28, 2022
27 °C

ಸಾಂಸ್ಕೃತಿಕ ರಾಜಕೀಯ ದಾಖಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಕೀಯ ಬರೆಯುವ ಕಾಲ ಇದಾಗಿದೆ. ಹಿಂದಿನ ಕಾಲದ ಲೇಖಕರ ಕೃತಿಗಳ ಅಧ್ಯಯನದಿಂದ ಇತಿಹಾಸ ರಚಿಸಬೇಕಿದೆ” ಎಂದು ವಿಮರ್ಶಕ ಡಾ. ಜಿ.ಎಸ್. ಆಮೂರ ಹೇಳಿದರು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗಳಗನಾಥ- ನಾ.ಶ್ರೀ.ರಾಜಪುರೋಹಿತ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ಡಾ. ವೀಣಾ ಶಾಂತೇಶ್ವರ ಅವರಿಗೆ ಗಳಗನಾಥ ಹಾಗೂ ಡಾ. ಎಂ.ಎಂ.ಕಲಬುರ್ಗಿ ಅವರಿಗೆ ರಾಜಪುರೋಹಿತ ಪ್ರಶಸ್ತಿ ನೀಡಿ ಮಾತನಾಡಿದರು.“ಆಗಿನ ಕಾಳದಲ್ಲಿ ಮಹಾರಾಷ್ಟ್ರಕ್ಕೆ ಕರ್ನಾಟಕ ದಾಸ್ಯವಾಗಿತ್ತು. ಆಗ ಇಂಗ್ಲಿಷ್ ಅಥವಾ ಮರಾಠಿ ಮಾತ್ರ ಓದಬೇಕಿತ್ತು. ಆ ಸಂದರ್ಭದಲ್ಲಿ ಗಳಗನಾಥರು ಹಾಗೂ ರಾಜಪುರೋಹಿತರು ಕನ್ನಡ ಸಾಹಿತ್ಯ ರಚಿಸಿದರು. ಕನ್ನಡ ಸಾಹಿತ್ಯಕ್ಕೆ ಮಾರ್ಗ ಪ್ರವರ್ತಕರಾದರು. ಮರಾಠಿಯನ್ನು ವಿರೋಧಿಸಿ ಕನ್ನಡ ಕಟ್ಟಿ ಬೆಳೆಸಿದ ಸ್ವಾಭಿಮಾನಿಗಳಾಗಿದ್ದ ಇವರಿಬ್ಬರ ಕೃತಿಗಳಿಗಿಂತ ಅವರ ಬದುಕು ಹೆಚ್ಚು ಆದರ್ಶವೆನಿಸುತ್ತದೆ. ಲೇಖಕರಾದವರಲ್ಲಿ ಪ್ರಾಮಾಣಿಕತೆ ಇರಬೇಕು, ಅದು ಗಳಗನಾಥರಲ್ಲಿತ್ತು” ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ, ಗಳಗನಾಥರು, ರಾಜಪುರೋಹಿತರಂಥವರು ಕನ್ನಡಕ್ಕೆ ಒಳ್ಳೆಯ ಬುನಾದಿ ಹಾಕಿದ್ದರಿಂದಲೇ ಇಂದಿನ ಜಾಗತೀಕರಣದ ಸಂದರ್ಭದಲ್ಲೂ ಕನ್ನಡ ಸದೃಢವಾಗಿರಲು ಕಾರಣ. ತಮ್ಮ ಇಲಾಖೆಯಿಂದ ಪ್ರತಿಷ್ಠಾನದ ಕಾರ್ಯಕ್ರಮಕ್ಕೆ ಅನುದಾನ ನೀಡುವುದಾಗಿ ಪ್ರಕಟಿಸಿದರು.“ಇಂದಿನ ಪೀಳಿಗೆಗೆ ಬೇಕಾದಂಥ ಕನ್ನಡ ಕಟ್ಟಿಕೊಡುವ ದೊಡ್ಡ ಜವಾಬ್ದಾರಿಯಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಕನ್ನಡ ಕಟ್ಟುವ ಕೆಲಸ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಗಳಗನಾಥರು, ರಾಜಪುರೋಹಿತರು ಪ್ರಸ್ತುತರಾಗಿದ್ದಾರೆ ಎಂದೆನಿಸುತ್ತದೆ” ಎಂದರು. ರಾಜಪುರೋಹಿತ ಪ್ರಶಸ್ತಿ ಸ್ವೀಕರಿಸಿ ಡಾ. ಎಂ.ಎಂ.ಕಲಬುರ್ಗಿ, ಗಳಗನಾಥ ಅವರಂಥವರು ಹುಟ್ಟಿಬರಲು ಶತಮಾನದ ಕಾಲ ಬೇಕು. ನನ್ನ ದೃಷ್ಟಿಯಲ್ಲಿ ಸಂಶೋಧನೆ ಸೃಜನಶೀಲತೆಗಿಂತ ಭಿನ್ನವಲ್ಲ. ಆ ಕಾಲದಲ್ಲಿ ಲೇಖಕರು ಸಮಾಜದ ಜಾಗೃತಿಗಾಗಿ ಬರೆದರು. ಗಳಗನಾಥರ ಬರಹ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಉದ್ದೇಶ ಹೊಂದಿದ್ದರೆ, ರಾಜಪುರೋಹಿತರು ಪರಂಪರೆಯನ್ನು ಜಾಗೃತಗೊಳಿಸಿದರು ಎಂದು ಹೇಳಿದರು.ಆ ಕಾಲದಲ್ಲಿ ಕನ್ನಡದ ಮೇಲೆ ಪರಭಾಷೆ ದಾಳಿ ಆದಾಗ ಕನ್ನಡ ಭಾಷಾ ಅಸ್ಮಿತಿ ಮೂಡಿಸಲು ಸಂಶೋಧನೆ ಅಗತ್ಯವಿತ್ತು. ಆದರೆ ಇವತ್ತು ಸಂಶೋಧನಾ ಕ್ಷೇತ್ರದಲ್ಲಿ ರಾಜಪುರೋಹಿತರ ಹೆಸರನ್ನೇ ಮರತಿದ್ದಾರೆ. ಪುರೋಹಿತರು ಪ್ರಥಮ ದರ್ಜೆ ಸಂಶೋಧಕರು ಎಂದು ಅಭಿಪ್ರಾಯಪಟ್ಟರು. ಗಳಗನಾಥರ ಪ್ರಶಸ್ತಿ ಸ್ವೀಕರಿಸಿದ ಡಾ. ವೀಣಾ ಶಾಂತೇಶ್ವರ, ತಮ್ಮ ಶಿಕ್ಷಕ ವೃತ್ತಿಯ ಅನುಭವ ಹಂಚಿಕೊಂಡರು. ರಾಜಪುರೋಹಿತರ ಪುತ್ರಿ ಸರೋಜಿನಿ ಮಾತನಾಡಿದರು. ಡಾ. ಶ್ಯಾಮಸುಂದರ ಬಿದರಕುಂದಿ ಅಭಿನಂದನಪರ ಭಾಷಣ ಮಾಡಿದರು. ಡಾ. ಆರ್.ಕೆ. ಮುಳಗುಂದ ಸ್ವಾಗತಿಸಿದರು. ಪ್ರೊ. ದುಷ್ಯಂತ ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಜಗೌಡ ಪಾಟೀಲ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.