ಮಂಗಳವಾರ, ಜೂನ್ 15, 2021
23 °C

ಸಾಗರ: ಅಧಿಕಾರಿಗೆ ದಿಗ್ಭಂದನ ಹಾಕಿ ಪ್ರತಿಭಟನೆ, ಅನ್ನದಾತನಿಗೆ ಅನ್ಯಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಅಧಿಕಾರಿಗೆ ದಿಗ್ಭಂದನ ಹಾಕಿ ಪ್ರತಿಭಟನೆ, ಅನ್ನದಾತನಿಗೆ ಅನ್ಯಾಯ

ಸಾಗರ: ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿರುವ ಬತ್ತದ ಖರೀದಿ ಕೇಂದ್ರ ಅಕ್ಷರಶಃ ಅವ್ಯವಸ್ಥೆಯ ಗೂಡಾಗಿದೆ. ಖರೀದಿ ಕೇಂದ್ರದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಉಡಾಫೆ ಮನೋಭಾವದಿಂದಾಗಿ ಅನ್ನದಾತನಿಗೆ ತೀವ್ರ ಅನ್ಯಾಯವಾಗುತ್ತಿದೆ.ಕಳೆದ ಮೂರು ದಿನಗಳಿಂದ ಬತ್ತದ ಖರೀದಿ ಕೇಂದ್ರದ ಎದುರು ತಾಲ್ಲೂಕಿನ ವಿವಿಧ ಭಾಗಗಳಿಂದ ಸುಮಾರು 3 ಸಾವಿರ ಬತ್ತದ ಮೂಟೆಗಳೊಂದಿಗೆ ಆಗಮಿಸಿರುವ 60ಕ್ಕೂ ಹೆಚ್ಚು ರೈತರು ಬೀಡು ಬಿಟ್ಟಿದ್ದಾರೆ. ಬತ್ತವನ್ನು ಸಾಗಿಸುವ ಸಂಬಂಧ ಸಾರಿಗೆ ಗುತ್ತಿಗೆ ಹಿಡಿದಿರುವ ಗುತ್ತಿಗೆದಾರರು ಸಕಾಲದಲ್ಲಿ ವಾಹನವನ್ನು ಕಳುಹಿಸದೇ ಇರುವುದರಿಂದ ರೈತರು ಹಗಲು-ರಾತ್ರಿ ತಾವು ತಂದಿರುವ ಬತ್ತದ ಮೂಟೆಗಳನ್ನು ಕಾಯುತ್ತ ದಿನ ಕಳೆಯುತ್ತಿದ್ದಾರೆ.ಸರ್ಕಾರದ ಸುತ್ತೋಲೆಯ ಪ್ರಕಾರ ಖರೀದಿ ಕೇಂದ್ರದಲ್ಲಿ ರೈತರು ಬತ್ತವನ್ನು ನೀಡಿದ ತಕ್ಷಣ ಅವರಿಗೆ ಹಣ ಸಂದಾಯ ಮಾಡಬೇಕು. ಆದರೆ, ಬತ್ತವನ್ನು ಕೇಂದ್ರಕ್ಕೆ ನೀಡಿ ತಿಂಗಳು ಕಳೆದರೂ ಹಣ ಸಂದಾಯವಾಗದೇ ರೈತರು ಪರದಾಡುತ್ತಿದ್ದಾರೆ.ಇಲ್ಲಿನ ಖರೀದಿ ಕೇಂದ್ರದ ಅವ್ಯವಸ್ಥೆ ಯಾವ ಮಟ್ಟಿಗೆ ಇದೆ ಎಂದರೆ ರೈತರು ತಂದ ಬತ್ತವನ್ನು ತೂಕ ಮಾಡಲು ಒಂದು ತೂಕದ ಯಂತ್ರ ಕೂಡ ಇಲ್ಲ. ನಿಯಮಗಳ ಪ್ರಕಾರ ಒಂದು ಚೀಲ ಬತ್ತ 75 ಕೆ.ಜಿ. ಬರಬೇಕು. ರೈತರು ಬತ್ತದ ಚೀಲದ ತೂಕವಾದ ಒಂದು ಕೆ.ಜಿ.ಯನ್ನು ಸೇರಿಸಿ ಒಟ್ಟು 77 ಕೆ.ಜಿ. ತೂಕ ಬರುವಂತೆ ಚೀಲದಲ್ಲಿ ಬತ್ತವನ್ನು ತುಂಬಿಕೊಂಡು ಬಂದಿದ್ದಾರೆ. ಆದಾಗ್ಯೂ ಅನೇಕ ರೈತರಿಗೆ ಹಣ ಸಂದಾಯವಾಗುವ ತೂಕ ಕಡಿಮೆ ಇದೆ ಎಂದು ಕಡಿಮೆ ಹಣ ಪಾವತಿ ಮಾಡಲಾಗುತ್ತಿದೆ.ಈ ನಡುವೆ ರೈತರ ಅಸಹಾಯಕತೆಯ ಲಾಭವನ್ನು ರೈಸ್‌ಮಿಲ್‌ಗಳ ಮಾಲೀಕರು ಪಡೆಯುತ್ತಿದ್ದಾರೆ. ಖರೀದಿ ಕೇಂದ್ರದಲ್ಲಿ ಒಂದು ಕ್ವಿಂಟಲ್‌ಗೆ ರೂ 1,340 ರೈತರಿಗೆ ಪಾವತಿಯಾಗುತ್ತದೆ. ಆದರೆ, ಕೇಂದ್ರದ ಅವ್ಯವಸ್ಥೆಯಿಂದ ಬೇಸತ್ತಿರುವ ರೈತರು ರೈಸ್‌ಮಿಲ್ ಮಾಲೀಕರ ಮೊರೆ ಹೋಗುತ್ತಿದ್ದಾರೆ. ಈ ವ್ಯಾಪಾರಸ್ಥರು ರೈತರಿಂದ ಕ್ವಿಂಟಲ್‌ಗೆ ರೂ 850ರಿಂದ 900ವರೆಗೆ ಬತ್ತ ಖರೀದಿಸಿ ಅದನ್ನೇ ಖರೀದಿ ಕೇಂದ್ರಕ್ಕೆ ಮಾರಾಟ ಮಾಡುವ ವ್ಯವಸ್ಥಿತ ಜಾಲ ಸೃಷ್ಟಿಯಾಗಿದೆ.ಮಂಗಳವಾರ ರೊಚ್ಚಿಗೆದ್ದ ರೈತರು ಕರ್ನಾಟಕ ಆಹಾರ ನಿಗಮದ ಹಿರಿಯ ಸಹಾಯಕ ಸಾಂಬಶಿವಯ್ಯ ಅವರಿಗೆ ದಿಗ್ಭಂದನ ವಿಧಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ಬತ್ತವನ್ನು ಸಾಗಿಸಲು ಗುತ್ತಿಗೆ ಹಿಡಿದಿರುವ ಸಾರಿಗೆ ಗುತ್ತಿಗೆದಾರರು ಸಕಾಲದಲ್ಲಿ ವಾಹನಗಳನ್ನು ಕಳುಹಿಸುತ್ತಿಲ್ಲ. ಹೀಗಾಗಿ, ರೈತರಿಗೆ ತೊಂದರೆಯಾಗುತ್ತಿದೆ~ ಎಂದರು.ಈ ಬಗ್ಗೆ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಿದ್ದೀರ ಎಂದು ಕೇಳಿದರೆ ನನಗೆ ಆ ಅಧಿಕಾರ ಇಲ್ಲ ಎಂದರು. ಈ ಕುರಿತು ಮೇಲಧಿಕಾರಿಗಳಿಗೆ ಲಿಖಿತವಾಗಿ ದೂರ ಸಲ್ಲಿಸಿದ್ದೀರಾ ಎಂದರೆ, ಇಲ್ಲ ಎಂದು ಸಾಂಬಶಿವಯ್ಯ ಉತ್ತರಿಸಿದರು.`ಸಾರಿಗೆ ಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ನ್ಯಾಯಬೆಲೆ ಅಂಗಡಿಗಳಿಗೆ ಸಾಮಗ್ರಿ ಪೂರೈಸುವ ಲಾರಿಗಳಲ್ಲೇ ಬತ್ತವನ್ನು ಸಾಗಿಸಿ ಅಕ್ರಮ ಲಾಭ ಗಳಿಸಬೇಕು ಎಂಬ ಅಧಿಕಾರಿಗಳ ಧೋರಣೆಯಿಂದ ರೈತರಿಗೆ ತೊಂದರೆ ಆಗುತ್ತಿದೆ~ ಎಂದು ಪ್ರತಿಭಟನೆಯಲ್ಲಿ ನಿರತರಾಗಿದ್ದ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ದೂರಿದರು.ತಾಲ್ಲೂಕು ಕೇಂದ್ರದಿಂದ 70 ಕಿ.ಮೀ. ದೂರದಲ್ಲಿರುವ ಸಂಕಣ್ಣಶ್ಯಾನುಭಾಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರಾಠಿ ಗ್ರಾಮದ ಎಂ.ಜೆ. ಶ್ರೀಧರ್‌ಜೈನ್ ಅಪಘಾತದಲ್ಲಿ ಕಾಲನ್ನು ಕಳೆದುಕೊಂಡಿರುವ ರೈತ.ಇವರು ತಾವು ಬೆಳೆದ 25 ಚೀಲ ಬತ್ತವನ್ನು ಖರೀದಿ ಕೇಂದ್ರಕ್ಕೆ ನೀಡಲು ಸೋಮವಾರ ಬೆಳಿಗ್ಗೆಯಿಂದಲೂ ಕೇಂದ್ರದ ಎದುರು ಕಾಯುತ್ತಿದ್ದಾರೆ. ಹೀಗೆ ಸೇರಿರುವ ಎಲ್ಲಾ ರೈತರು ಇದನ್ನೆಲ್ಲಾ ಸರಿಪಡಿಸಬೇಕಾದ ಜನಪ್ರತಿನಿಧಿಗಳು ರೆಸಾರ್ಟ್‌ನಲ್ಲಿ ಸೇರಿ ರಾಜಕಾರಣ ಮಾಡುತ್ತಿರುವ ಬಗ್ಗೆ ಹಿಡಿ ಶಾಪ ಹಾಕುತ್ತಿರುವ ದೃಶ್ಯ ಎದ್ದು ಕಾಣುತ್ತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.