ಸೋಮವಾರ, ಜೂನ್ 14, 2021
23 °C

ಸಾಧನೆಯ ಹಾದಿಯಲ್ಲಿ ಯುವ ವಿಜ್ಞಾನಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಶನಿವಾರ ಜಿಲ್ಲೆಯ ಮೂವರು ವಿದ್ಯಾರ್ಥಿಗಳಿಗೆ ಬಾಲವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 

ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಪಿ. ಅಚ್ಯುತಾನಂದ ಹಾಗೂ ಅದೇ ಶಾಲೆಯ ಜರೋನ್ ಅಬ್ರಹಾಂ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಯುವವಿಜ್ಞಾನಿ ಪ್ರಶಸ್ತಿ ಗಳಿಸಿದರೆ ಗೋಣಿಕೊಪ್ಪಲು ಅರವತ್ತೊಕ್ಲುವಿನ ಸರ್ವದೈವತ ಪ್ರೌಢಶಾಲೆಯ ಎಂ.ಡಿ.ಮಾಚಯ್ಯ ತೃತೀಯ ಯುವವಿಜ್ಞಾನಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.ವಿಜ್ಞಾನ ಮತ್ತು ತಂತ್ರಜ್ಞಾನ ಜನಪ್ರಿಯಗೊಳಿಸುವ ಮತ್ತು ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಉದ್ದೇಶದಿಂದ 1980ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ನೆರವಿನೊಂದಿಗೆ ಕಳೆದ ಮೂರು ವರ್ಷಗಳಿಂದ ಯುವ ವಿಜ್ಞಾನಿ ಪುರಸ್ಕಾರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ.ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳಲ್ಲಿ ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೊಂದಿದ್ದು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವೈಜ್ಞಾನಿಕ ಮನೋಭಾವನೆ, ಬೆಳೆಸಲು ಹಾಗೂ ವಿದ್ಯಾರ್ಥಿಗಳನ್ನು ಭವಿಷ್ಯದ ವಿಜ್ಞಾನಿಗಳನ್ನಾಗಿಸಲು ಕರಾವಿಪ ಶ್ರಮಿಸುತ್ತಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸದಸ್ಯ ಟಿ.ಜಿ.ಪ್ರೇಮ್‌ಕುಮಾರ್.ಯುವವಿಜ್ಞಾನಿ ಪುರಸ್ಕೃತರ ಅನಿಸಿಕೆ ಜಲಜನಕ ಇಂಧನ ಸಂಶೋಧನೆ

ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಪಿ.ಅಚ್ಯತಾನಂದ ವಿರಾಜಪೇಟೆಯ ಎಂಜಿನಿಯರ್ ಪ್ರಕಾಶ್ ಹಾಗೂ ಸುಂದರಮ್ಮ ದಂಪತಿಗಳ ಪುತ್ರ. ಪೋಷಕರಿಂದ ಹಾಗೂ ಶಾಲೆಯ ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ಪಡೆದಿರುವ ಅಚ್ಯತಾನಂದನಿಗೆ ವಿಜ್ಞಾನ ವಿಷಯದಲ್ಲಿ ತುಂಬಾ ಆಸಕ್ತಿ.2009-10ರ ಸಾಲಿನಲ್ಲಿ ಎನ್.ಎನ್. ಎಂ. ಎಸ್. ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರೆ ಕರಾವಿಪ ಏರ್ಪಡಿಸುವ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಎರಡು ವರ್ಷ ಪ್ರಶಸ್ತಿ ಪಡೆದಿದ್ದಾರೆ.  ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಿರುವುದಲ್ಲದೆ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾನೆ. `2010-11ರ ಸಾಲಿನಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ಯಲ್ಲಿ ಎರಡನೇ ಸ್ಥಾನ ಲಭಿಸಿತ್ತು. ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಈ ವರ್ಷ ಯುವವಿಜ್ಞಾನಿ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದೆ. ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಮೂಡಿಸಿರುವ ಜಲಜನಕ ಇಂಧನದ ಬಗ್ಗೆ ಸಂಶೋಧನೆ ಕೈಗೊಳ್ಳುತ್ತೇನೆ ಎಂದು ಪಿ.ಅಚ್ಯುತಾನಂದ ತಿಳಿಸಿದ್ದಾರೆ.ಹೊಸತು ಆವಿಷ್ಕಾರದತ್ತ ಆಸಕ್ತಿ


 ಜಿಲ್ಲಾ ಮಟ್ಟದ ಯುವವಿಜ್ಞಾನಿ ಪ್ರಶಸ್ತಿ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿರುವ ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿ ಜರೋನ್ ಅಬ್ರಹಾಂ ಎಂ.ಎ.ಜಾರ್ಜ್ ಮತ್ತು ಫ್ರಾನ್ಸಿನಾ ದಂಪತಿ ಪುತ್ರ. ತಂದೆ ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾಯಿ ಫ್ರಾನ್ಸಿನಾ ವಿರಾಜಪೇಟೆಯ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಪೋಷಕರ ಹಾಗೂ ಶಿಕ್ಷಕರ ಉತ್ತಮ ಪ್ರೋತ್ಸಾಹದಿಂದ ವಿಜ್ಞಾನ ವಿಷಯದಲ್ಲಿ ಸಾಧನೆ ಮಾಡುತ್ತಿರುವ ಈತ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸತತ ಮೂರು ವರ್ಷ ಉತ್ತಮ ಮಾದರಿಗಳನ್ನು ತಯಾರಿಸಿ ಪಾಲ್ಗೊಂಡಿದ್ದಾನೆ. ವಿಜ್ಞಾನದ ರಸಪ್ರಶ್ನೆ ಕಾರ್ಯಕ್ರಮ ಈತನ ಆಸಕ್ತಿಯ ವಿಷಯ. ಶಿಕ್ಷಕರ ಪ್ರೋತ್ಸಾಹದಿಂದ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದಾನೆ. ವೈಜ್ಞಾನಿಕ ರಂಗದಲ್ಲಿ ಸಂಶೋಧನೆ ಮಾಡಿ ಹೊಸತನ್ನು ಕಂಡು ಹಿಡಿಯುವ ಆಸಕ್ತಿ ಈತನದು.ವೈಜಾನಿಕ ರಂಗದಲ್ಲೇ ಸಾಧನೆ

ಗೋಣಿಕೊಪ್ಪಲು ಅರವತ್ತೊಕ್ಲುವಿನ ಸರ್ವದೈವತ ಪ್ರೌಢಶಾಲೆಯ ವಿದ್ಯಾರ್ಥಿ ಎಂ.ಡಿ.ಮಾಚಯ್ಯ ಮೂಡೇರ ದೇವಯ್ಯ ಮತ್ತು ಕೆ.ಕೆ. ಮುತ್ತಮ್ಮ ದಂಪತಿ ಪುತ್ರ. ತಂದೆ ಕಾಫಿ ಬೆಳೆಗಾರರು. ತಾಯಿ ಟಿ.ಶೆಟ್ಟಿಗೇರಿಯ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಉತ್ತಮ ಅಂಕಗಳಿಸಿರುವ ಮಾಚಯ್ಯ ವಿಜ್ಞಾನ ವಸ್ತುಪ್ರದರ್ಶನ, ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾನೆ. ಅರಣ್ಯ ಪರಿಸರ ಇಲಾಖೆ ಈಚೆಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿರುವ ಎಂ.ಡಿ. ಮಾಚಯ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಕಳೆದ ವರ್ಷ ಏರ್ಪಡಿಸಿದ್ದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಇನ್‌ಸ್ಪಯರ್ ಅವಾರ್ಡ್ ಪಡೆದಿದ್ದಾನೆ.ಅ್ಯಂಟಿ ಗ್ರಾವಿಟಿ , ಮೈಕ್ರೋ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಸೇರಿದಂತೆ ವಾತಾವರಣದ ಮಾಲಿನ್ಯವನ್ನು ಕಡಿಮೆ ಮಾಡುವ ಪೊಲ್ಯುಷನ್ ರೆಡ್ಯೂಸರ್‌ನ್ನು ಸಂಶೋಧಿಸುವ ಹೆಬ್ಬಯಕೆಯನ್ನು ಹೊಂದಿದ್ದಾನೆ.

ವೈಜ್ಞಾನಿಕ ರಂಗದಲ್ಲಿ ಸಾಧನೆ ಮಾಡಲು ಪೋಷಕರ ಸಹಕಾರ ಹಾಗೂ ಶಿಕ್ಷಕರ ಮಾರ್ಗದರ್ಶನ ಅತ್ಯಗತ್ಯ ಎನ್ನುತ್ತಾರೆ ಎಂ.ಡಿ. ಮಾಚಯ್ಯ.                                    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.