ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಸ್ವತ ಸಮುದಾಯದ ದುರಂತ ಕಥನ

Last Updated 7 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಗೋಪಾಲಕೃಷ್ಣ ಪೈ ಅವರು ಬರೆದ ‘ಸ್ವಪ್ನ ಸಾರಸ್ವತ’ ಇತ್ತೀಚೆಗಿನ ಕನ್ನಡದ ಮಹತ್ವದ ಕಾದಂಬರಿಗಳಲ್ಲಿ ಒಂದು. ಗಾತ್ರದಲ್ಲಿಯಷ್ಟೇ ಅಲ್ಲದೇ ಮೌಲ್ಯದಲ್ಲಿಯೂ ಮಹತ್ ಆಗಿರುವ ಈ ಕಾದಂಬರಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೂ ಭಾಜನವಾಗಿದೆ.

‘ಸ್ವಪ್ನ ಸಾರಸ್ವತ’ ಗೌಡ ಸಾರಸ್ವತ ಎಂಬ ಸಮುದಾಯದ ಮಹಾನ್ ಪಲ್ಲಟದ ಪರ್‍ಯಟನೆಯ ಕಥನ. ಐನೂರು ವರ್ಷಗಳ ಹಿಂದೆ ಗೋವಾದಲ್ಲಿ ಬಲಿಷ್ಠ ಸಮುದಾಯವಾಗಿದ್ದ ಗೌಡ ಸಾರಸ್ವತರು ಪೋರ್ಚುಗೀಸರ ದಬ್ಬಾಳಿಕೆ, ಹಿಂಸೆಗಳನ್ನು ತಾಳಲಾಗದೇ ತಮ್ಮ ನೆಲವನ್ನು ತೊರೆದು ಕರ್ನಾಟಕ, ಕೇರಳ ಹೀಗೆ ವಿವಿಧ ಕಡೆಗೆ ಹರಿದು ಹಂಚಿ ದಿಕ್ಕಾಪಾಲಾಗಿ ಹೋಗಿ, ಹೋದಲ್ಲಿಯೇ ನೆಲೆನಿಂತು ಹಲವು ಏಳುಬೀಳುಗಳ ನಡುವೆಯೂ ಚಿಗುರೊಡೆದು ಬೆಳೆದ ಚರಿತ್ರೆಯನ್ನು ಹೇಳುವ ಕಾದಂಬರಿಯಿದು. ಅನ್ಯರ ಸಂಕಷ್ಟದ ಸಮಯದಲ್ಲಿ ತನ್ನ ಸಮುದಾಯ, ಸಂಸ್ಕೃತಿ ನಶಿಸಿ ಹೋಗದಂತೆ ಅಡ್ಡದಾರಿಗಳನ್ನು ಹುಡುಕುವ ಮನುಷ್ಯನ ಅನವರತ ಹೋರಾಟ, ಆ ಹೋರಾಟದ ದಾರಿಯಲ್ಲಿ ಬರುವ ಏಳುಬೀಳುಗಳು ಹೀಗೆ ಹಲವು ಸಂಗತಿಗಳನ್ನು ಈ ಕಾದಂಬರಿ ತೆರೆದಿಡುತ್ತ ಹೋಗುತ್ತದೆ.

ಸ್ವಪ್ನ ಸಾರಸ್ವತದ ಮೊದಲ ಭಾಗವನ್ನು ಎಸ್. ಮಾಲತಿ, ಸಾಗರ ಅವರು ರಂಗರೂಪಕ್ಕೆ ಅಳವಡಿಸಿದ್ದಾರೆ. ಕಳೆದ 30 ವರ್ಷಗಳಿಂದ ರಂಗಭೂಮಿಯಲ್ಲಿ ದುಡಿಯುತ್ತಿರುವ ಮಾಲತಿ ಅವರು ನಾಟಕ ಅಕಾಡೆಮಿ ಸೇರಿದಂತೆ ಹಲವು ರಂಗಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ತೀರ್ಥಹಳ್ಳಿಯ ‘ನಟಮಿತ್ರರು’ ತಂಡ ಮಾಲತಿ ಅವರ ಸ್ವಪ್ನ ಸಾರಸ್ವತ ನಾಟಕವನ್ನೂ ಪ್ರಸ್ತುತಪಡಿಸಿದೆ. ಪ್ರವೀಣ್ ಎಸ್. ಹಾಲ್ಮುತ್ತೂರು ಸಹ ನಿರ್ದೇಶಕರು.

ಇತ್ತೀಚೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ‘ಲೋಕಾಯನ’ವು ಸ್ವಪ್ನ ಸಾರಸ್ವತ ನಾಟಕವನ್ನು ಸಂಯೋಜಿಸಿತ್ತು. ಸುಮಾರು ನಲ್ವತ್ತು ಜನರ ಹವ್ಯಾಸಿ ನಾಟಕ ತಂಡವೊಂದು ತೀರ್ಥಹಳ್ಳಿಯಂತಹ ಊರಿನಿಂದ ಬೆಂಗಳೂರಿಗೆ ಬಂದು ನಾಟಕ ಪ್ರದರ್ಶಿಸುವುದು ಸುಲಭದ ಕೆಲಸ ಅಲ್ಲ. ಇದಕ್ಕಾಗಿ ಲೋಕಾಯನ ಮತ್ತು ನಟಮಿತ್ರರು ತಂಡ ಅಭಿನಂದನಾರ್ಹರು.

ಮೊದಲೇ ಹೇಳಿದಂತೆ ಇಲ್ಲಿ ಸ್ವಪ್ನ ಸಾರಸ್ವತ ಕಾದಂಬರಿಯ ಮೊದಲ ಭಾಗವನ್ನಷ್ಟೆ ರಂಗಕ್ಕೆ ಅಳವಡಿಸಲಾಗಿದೆ. ಗೋವಾದಲ್ಲಿ ಕ್ರೈಸ್ತ ಧರ್ಮ ಪ್ರಚಾರಕ್ಕೆ ಅಡ್ಡಿಯಾದ ಬ್ರಾಹ್ಮಣರನ್ನು ಧರ್ಮಭ್ರಷ್ಟರನ್ನಾಗಿಸಲು ಪೋರ್ಚುಗೀಸರು ಮಾಡುವ ಹಲವು ಚಿತ್ರಹಿಂಸೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.

ಇಡೀ ಸಾರಸ್ವತ ಸಮುದಾಯದ ಸಾಕ್ಷಿಪ್ರಜ್ಞೆಯಂತೆ ನಾಗ್ಡೂ ಬೇತಾಳ ಇರುತ್ತಾನೆ. ಕಂಗೆಟ್ಟ ಸಮುದಾಯಕ್ಕೆ ಧೈರ್ಯ ತುಂಬುವ, ಸೂಕ್ತ ಮಾರ್ಗದರ್ಶನ ನೀಡುವ ಎಲ್ಲರ ಅಂತಃಶಕ್ತಿಯಂತಿರುವ ನಾಗ್ಡೂ ಬೇತಾಳ ಕೋಪ ಬಂದರೆ ಶಾಪವನ್ನೂ ಕೊಡಬಲ್ಲವನು. ಧರ್ಮ ರಕ್ಷಣೆಗೆ, ದೇವರ ರಕ್ಷಣೆಗೆ ಅವಶ್ಯ ಅಡ್ಡದಾರಿಗಳನ್ನು ಹುಡುಕಬಲ್ಲನು.

ಕಥನ ಕತೆ ಹೇಳುವ ಸೂತ್ರಧಾರಿಗಳು ಮತ್ತು ಆಡುವ ಪಾತ್ರಧಾರಿಗಳ ನಡುವೆ ಜಿಗಿಯುತ್ತಾ ಮುಂದುವರಿಯುತ್ತದೆ. ಈ ರಂಗತಂತ್ರ ಹೊಸತೇನಲ್ಲ. ಅಲ್ಲದೇ ಇಂತಹ ಕೃತಿಗಳ ರಂಗರೂಪಕ್ಕೆ ಸೂಕ್ತವಾದ ತಂತ್ರವೂ ಹೌದು. ಅಲ್ಲದೇ ಎಲ್ಲಿಯೂ ತುಂಡು ತುಂಡು ಅನ್ನಸದಂತೆ ಬಿಗಿ ಬಂಧದಲ್ಲಿ ಹೆಣೆದಿರುವ ರೀತಿಯಿಂದ ನಾಟಕ ಗೆಲ್ಲುತ್ತದೆ. ಇದರಿಂದಾಗಿಯೇ ಕಾದಂಬರಿಯ ಆಚೆ ಒಂದು ರಂಗಕೃತಿಯಾಗಿಯೂ ಸ್ವಪ್ನ ಸಾರಸ್ವತ ಮನಸ್ಸನ್ನು ತಟ್ಟುತ್ತದೆ.

ಸೂತ್ರಧಾರಿಗಳು ಕತೆ ಹೇಳುವಲ್ಲಿ ತಮ್ಮ ಶರೀರದಷ್ಟೇ ಸಮರ್ಥವಾಗಿ ಶಾರೀರವನ್ನೂ ಬಳಸಿಕೊಂಡರೆ ಜೀವಂತಿಕೆ ಹೆಚ್ಚಿ ಏಕತಾನತೆ ತಪ್ಪುವುದು. ಮೊದಲ ಭಾಗವನ್ನು ನಿರೂಪಿಸುವ ಸೂತ್ರಧಾರಿ ಆಂಗಿಕ ಭಾಷೆಯನ್ನು ಇನ್ನೂ ಸಮರ್ಥವಾಗಿ ಬಳಸಿಕೊಳ್ಳಬಹುದಿತ್ತು (ಕೈಗಳ ಚಲನೆ ಒಂದೇ ರೀತಿಯಾಗಿತ್ತು). ಉಳಿದಿಬ್ಬರು ಸೂತ್ರಧಾರಿಗಳ ಬಗ್ಗೆ ಈ ಮಾತನ್ನು ಹೇಳಲಾಗದು.

ಇಡೀ ನಾಟಕದುದ್ದಕ್ಕೂ ಹಿನ್ನೆಲೆಯಾಗಿ ಬಳಸಿಕೊಂಡ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕೇಳಲು ಇಂಪಾಗಿದ್ದರೂ ಅದು ಎಲ್ಲ ಸಂದರ್ಭಕ್ಕೂ ಹೊಂದಿಕೆಯಗುತ್ತಿರಲಿಲ್ಲ (ಸಂಗೀತ ನಿರ್ದೇಶನ: ನಾಗಭೂಷಣ ಹೆಗಡೆ). ಫ್ರೆಂಚ್ ಅಧಿಕಾರಿಯ ಅಟ್ಟಹಾಸ ಮತ್ತು ವಿಟ್ಟು ಪೈಯ ದುಃಖ ಎರಡೂ ಸಂದರ್ಭಗಳಲ್ಲಿ ಅದೇ ಸಂಗೀತ ಸಮಂಜಸ ಅನಿಸಲಿಲ್ಲ. ಹಿನ್ನೆಲೆ ಸಂಗೀತವನ್ನು ಇನ್ನೂ ಸಮರ್ಪಕವಾಗಿ ನಿರ್ವಹಿಸಬಹುದಿತ್ತು.

ಬೆಳಕಿನ ವಿನ್ಯಾಸ ಉತ್ತಮವಾಗಿದ್ದರೂ ನಿರ್ವಹಣೆಯಲ್ಲಿ ಗೊಂದಲವಿತ್ತು. ಸೂತ್ರಧಾರ ಮತ್ತು ಪಾತ್ರಧಾರಿಗಳು ಬರುವ ಮೊದಲೇ ಮತ್ತು ವೇದಿಕೆಯಿಂದ ತೆರಳುವ ಮೊದಲೇ ಬೆಳಕು ಮೂಡಿ ಗೊಂದಲವಾಗುತ್ತಿತ್ತು (ಬೆಳಕಿನ ನಿರ್ವಹಣೆ: ನಿತಿನ್). ಅಭಿನಯದ ವಿಷಯಕ್ಕೆ ಬಂದರೆ ಎಲ್ಲ ಪಾತ್ರಧಾರಿಗಳದ್ದೂ ಉತ್ತಮ ಅಭಿನಯ. ಅದರಲ್ಲೂ ನಾಗ್ಡೂ ಬೇತಾಳನ ಪಾತ್ರಧಾರಿಯ (ಸಂದೇಶ್‌ ಜವಳಿ) ಧ್ವನಿ ಮತ್ತು ಅಭಿನಯ ಪರಿಣಾಮಕಾರಿಯಾಗಿತ್ತು. ಪ್ರಸಾಧನವೂ (ಪ್ರಸಾಧನ: ಪುರುಷೋತ್ತಮ ತಲವಾಟ) ಆ ಪಾತ್ರಕ್ಕೆ ಪರಿಣಾಮಕಾರಿ ಶಕ್ತಿ ನೀಡಿತ್ತು. ವಿಟ್ಟು ಪೈ ಪಾತ್ರದಲ್ಲಿ ನಿಲೇಶ್ ಜವಳಿ ಅವರದು ಶಕ್ತ ಅಭಿನಯ. ಮೂಕ ದಡ್ಡನ ಪಾತ್ರಧಾರಿ (ಗುರುರಾಜ್‌) ಮನಸ್ಸು ಗೆಲ್ಲುತ್ತಾರೆ. ಕೃಷ್ಣ ಶರ್ಮ, ದಡ್ಡ, ಮಾಳಪ್ಪಯ್ಯ ಎಲ್ಲ ಪಾತ್ರಗಳೂ ಗಮನ ಸೆಳೆಯುತ್ತವೆ. ಫ್ರೆಂಚ್ ಅಧಿಕಾರಿ ಗೋಯಸ್ ಪಾತ್ರಧಾರಿ (ಪ್ರಜ್ವಲ್) ಅಭಿನಯ ಉತ್ತಮವಾಗಿಯೇ ಇದ್ದರೂ ಪ್ರತಿ ಮಾತಿನ ಮೊದಲು ಹಾಗೂ  ನಂತರ ತೀರಾ ಕೃತಕವಾಗಿ ‘ಹ್ಹಹ್ಹಹ್ಹ’ ಎಂದು ನಗುವುದು ಕಿರಿಕಿರಿ ಹುಟ್ಟಿಸುತ್ತದೆ.

ತಮ್ಮ ಮೂಲ ನೆಲವನ್ನು ಬಿಟ್ಟು, ಗಂಟು ಮೂಟೆ ಕಟ್ಟಿಕೊಂಡು ಗುಳೆ ಹೋಗುವ ಕೊನೆಯ ದೃಶ್ಯ ತುಂಬ ಪರಿಣಾಮಕಾರಿಯಾಗಿ ಬಂದಿದೆ. ವೇದಿಕೆಯ ಮೇಲಿನ ಬೆಳಕಿನ ಪರದೆಯಲ್ಲಿ ನೆರಳಿನಂತೇ ಸಾಲಾಗಿ ಸಾಗುವ ಜನರು ಒಂದಿಡೀ ಸಮುದಾಯವೇ ತಮ್ಮದೆಲ್ಲವನ್ನೂ ತೊರೆದು ಕಾಣದ ಊರಿಗೆ ವಲಸೆ ಹೋಗುವ ಸಂಕಟವನ್ನು ಧ್ವನಿಸುವಂತಿದೆ.

‘ಸ್ವಪ್ನ ಸಾರಸ್ವತ’ ಇಡೀ ಕಾದಂಬರಿಯನ್ನು ರಂಗಕ್ಕೆ ತರಲು ಇಂತಹ ಮೂರು ನಾಟಕಗಳನ್ನು ರಚಿಸಬೇಕಾದೀತು. ಹಲವು ಕೊರತೆಗಳ ನಡುವೆಯೂ ಮೊದಲ ಭಾಗವನ್ನು ಯಶಸ್ವಿಯಾಗಿ ರಂಗಕ್ಕೆ ಅಳವಡಿಸಿರುವ ಮಾಲತಿಯವರೇ ಮುಂದಿನ ಭಾಗವನ್ನೂ ನಾಟಕರೂಪಗೊಳಿಸಲು ಸಮರ್ಥರು ಎಂಬುದಕ್ಕೆ ಸಾಕಷ್ಟು ಕಾರಣಗಳು ಈ ನಾಟಕದಲ್ಲಿ ದೊರೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT