ಸೋಮವಾರ, ಮೇ 17, 2021
28 °C

ಸಾಲ ಪಡೆಯದಿದ್ದರೂ ಬ್ಯಾಂಕಿನ ನೋಟಿಸ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಸಾಲ ಪಡೆಯದೇ ಇರುವ ಸುಮಾರು 50ಕ್ಕೂ ಹೆಚ್ಚು ರೈತರಿಗೆ ನಗರದ ಕಾರ್ಪೊರೇಷನ್ ಬ್ಯಾಂಕ್ ಶಾಖೆಯು ಸಾಲ ತೀರುವಳಿ ಯೋಜನೆ ಅಡಿಯಲ್ಲಿ ಸಾಲ ಮರುಪಾವತಿ ಮಾಡುವಂತೆ ತಿಳಿವಳಿಕೆ ನೋಟಿಸ್ ಜಾರಿ ಮಾಡಿದ್ದು ರೈತರು ಕಂಗಾಲಾಗಿದ್ದಾರೆ. ತಾಲ್ಲೂಕಿನ ಹೊನ್ನಾಘಟ್ಟ ಗ್ರಾಮವೊಂದರಲ್ಲೇ 30ಕ್ಕೂ ಹೆಚ್ಚು ಜನ ರೈತರಿಗೆ ಬಾಂಕ್ ವತಿಯಿಂದ ನೋಟಿಸ್ ಜಾರಿಮಾಡಲಾಗಿದೆ. ಐದು ಸಾವಿರ ರೂಪಾಯಿಗಳ ಸಾಲಕ್ಕೆ 4,900 ರೂಗಳನ್ನು ಪಾವತಿ ಮಾಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.`ನಮ್ಮ  ಗ್ರಾಮವನ್ನು ಕಾರ್ಪೊರೇಷನ್ ಬ್ಯಾಂಕ್ ದತ್ತು ಪಡೆದಿದ್ದು ಕೃಷಿ ಸೇರಿದಂತೆ ಯಾವುದೇ ಸಾಲ ಬೇಕಾದರೂ ಹಾಗೂ ಹಣಕಾಸಿನ ವ್ಯವಹಾರ ಇದ್ದರೂ ಸಹಾ ಕಾರ್ಪೊರೇಷನ್ ಬ್ಯಾಂಕಿನಲ್ಲೇ ನಡೆಸಬೇಕು. ಈ ನಿಟ್ಟಿನಲ್ಲಿ  ಬಾಂಕಿನಲ್ಲಿ ಉಳಿತಾಯ ಖಾತೆ ಹೊಂದಿರುವ ಎಲ್ಲರಿಗೂ ತಲಾ ಐದು ಸಾವಿರ ರೂಪಾಯಿ ಸಾಲ ಮರುಪಾವತಿ ಮಾಡುವಂತೆ ನೋಟೀಸ್ ಜಾರಿ ಮಾಡಲಾಗಿದೆ.

 

ಈ ಬಗ್ಗೆ ಬ್ಯಾಂಕಿನಲ್ಲಿ ಮಾಹಿತಿ ಕೇಳಿದರೆ ಉತ್ತರವೇ ಸಿಗುತ್ತಿಲ್ಲ. ನೋಟಿಸ್‌ನಲ್ಲಿ ಬ್ಯಾಂಕಿನವರು ತಮಗೆ ಬೇಕಾದ ಖಾತೆ ನಂಬರ್ ಹಾಕಿಕೊಂಡು ಸಾಲವನ್ನು ಈ ಖಾತೆ ನಂಬರ್‌ಗೆ ಕಟ್ಟಬೇಕು. ಈಗ ನೀಡಿರುವ ಅವಕಾಶ ಉಪಯೋಗಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಹೆದರಿಸುತ್ತಿದ್ದಾರೆ~ ಎಂದು ಆರೋಪಿಸುತ್ತಾರೆ ಹೊನ್ನಾಘಟ್ಟ ಗ್ರಾಮದ ರೈತ ಎಚ್.ಸಿ.ವೆಂಕಟೇಶ್ ಪ್ರಸಾದ್ ಹಾಗೂ ಅಶ್ವತ್ಥ್‌ನಾರಾಯಣ.`ಎಲ್ಲಾ ನಾಗರಿಕರೂ ಬ್ಯಾಂಕ್ ಸೇವೆಯಿಂದ ವಂಚಿತರಾಗಬಾರದು. ಬ್ಯಾಂಕುಗಳು ತಮ್ಮ  ಸೇವಾ ಕ್ಷೇತ್ರದ ವ್ಯಾಪ್ತಿಯ ಎಲ್ಲರಿಗೂ ಉಳಿತಾಯ ಖಾತೆಗಳನ್ನು ಮಾಡಿಸುವ ಹಾಗೂ ಉಳಿತಾಯ ಖಾತೆ ಹೊಂದಿರುವ ಎಲ್ಲರಿಗೂ ಐದು ಸಾವಿರ ರೂಪಾಯಿಗಳವರೆಗೆ ದಾಖಲಾತಿ ಇಲ್ಲದೆ ಸಾಲ ನೀಡುವ ಯೋಜನೆಗೆ 2007ರಲ್ಲಿ  ಭಾರತೀಯ ರಿಸರ್ವ್ ಬ್ಯಾಂಕ್ ಉಪಗೌರ‌್ನರ್ ಚಕ್ರವರ್ತಿ ಅವರು ಹೊನ್ನಾಘಟ್ಟ ಗ್ರಾಮದಲ್ಲಿ ಚಾಲನೆ ನೀಡಿದ್ದರು.

 

ಈ ಯೋಜನೆಯನ್ನೇ ನೆಪಮಾಡಿಕೊಂಡ ಬ್ಯಾಂಕ್‌ನವರು ಖಾತೆ ಹೊಂದಿರುವ ಎಲ್ಲರಿಗೂ ಸಾಲ ಮರುಪಾವತಿ ಮಾಡುವಂತೆ ಸಾಮೂಹಿಕವಾಗಿ ನೋಟಿಸ್ ಜಾರಿ ಮಾಡಿದ್ದಾರೆ~ ಎಂದು ರಾಜ್ಯ ರೈತಶಕ್ತಿ ರಾಜ್ಯ ಘಟಕದ ಅಧ್ಯಕ್ಷ ಮಹೇಶ್ ದೂರಿದ್ದಾರೆ. ಬ್ಯಾಂಕ್ ವ್ಯವಸ್ಥಾಪಕಿ ಸ್ಪಷ್ಟನೆ: ಗುಮಾಸ್ತರ ತಪ್ಪಿನಿಂದಾಗಿ ಎಲ್ಲರಿಗೂ ನೋಟಿಸ್ ಜಾರಿ ಆಗಿದೆ. ಈ ಬಗ್ಗೆ ಸಾಲಗಾರರ ಪಟ್ಟಿ ಪರಿಶೀಲನೆ ನಂತರ ನೋಟಿಸ್‌ಗಳನ್ನು ಹಿಂದಕ್ಕೆ ಪಡೆಯಲಾಗುತ್ತದೆ ಎಂದು ಕಾರ್ಪೊರೇಷನ್ ಬ್ಯಾಂಕ್ ನಗರ ಶಾಖೆಯ ವ್ಯವಸ್ಥಾಪಕಿ ಗಾಯಿತ್ರಿ ಸ್ಪಷ್ಟನೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.