ಮಂಗಳವಾರ, ಮೇ 11, 2021
26 °C

ಸಾಲ ಮನ್ನಾ ಬಾಬ್ತು ರೂ. 581 ಕೋಟಿ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾರ್ಚ್ ಅಂತ್ಯಕ್ಕೆ ಹೋಲಿಸಿದರೆ ರೈತರ ಬೆಳೆ ಸಾಲ ಮನ್ನಾ ಬಾಬ್ತು 581 ಕೋಟಿ ರೂಪಾಯಿಯನ್ನು ಸಹಕಾರಿ ಸಂಸ್ಥೆಗಳಿಗೆ ಪಾವತಿಸಬೇಕಿದೆ ಎಂದು ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರು ಮಂಗಳವಾರ ವಿಧಾನ ಪರಿಷತ್‌ಗೆ ತಿಳಿಸಿದರು.ಆಡಳಿತ ಪಕ್ಷದ ಹಿರಿಯ ಸದಸ್ಯ ವೀರಣ್ಣ ಮತ್ತಿಕಟ್ಟಿ ಅವರು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕರಿಸುವ ಪ್ರಸ್ತಾಪ ಮಂಡಿ ಸುವ ವೇಳೆ, ಬೆಳೆ ಸಾಲ ಮನ್ನಾ ವಿಷಯ ಚರ್ಚೆಗೆ ಬಂತು. ಆಗ ಪ್ರತಿಕ್ರಿಯಿಸಿದ ಸಚಿವರು, ಜನವರಿ ಅಂತ್ಯದಿಂದ ಮಾರ್ಚ್ ಅಂತ್ಯದವರೆಗೆ ಮರುಪಾವತಿ ಆಗಬೇಕಿದ್ದ ಸಾಲದ ಮೊತ್ತದ ಬಾಬ್ತು 581 ಕೋಟಿ ರೂಪಾಯಿಯನ್ನು ಸಹಕಾರಿ ಸಂಸ್ಥೆಗಳಿಗೆ ನೀಡಬೇಕಿದೆ ಎಂದರು.ಜನವರಿ ಅಂತ್ಯದವರೆಗೆ 940 ಕೋಟಿ ರೂಪಾಯಿ ಯನ್ನು ಸಹಕಾರಿ ಸಂಸ್ಥೆಗಳಿಗೆ ಮರುಪಾವತಿ ಮಾಡಬೇಕಿತ್ತು. ಆದರೆ, ಅದರಲ್ಲಿ 231 ಕೋಟಿ ರೂಪಾಯಿ ಬಾಕಿ ಇತ್ತು. ಜನವರಿ ಅಂತ್ಯದಿಂದ ಮಾರ್ಚ್ ಅಂತ್ಯದವರೆಗೆ 550 ಕೋಟಿ ರೂಪಾಯಿ ಮರುಪಾವತಿ ಆಗಬೇಕಿತ್ತು.ಮಾರ್ಚ್ ಅಂತ್ಯದ ವೇಳೆಗೆ ಸಹಕಾರಿ ಸಂಸ್ಥೆಗಳಿಗೆ ಸರ್ಕಾರ ಮರುಪಾವತಿ ಮಾಡಬೇಕಾದ ಮೊತ್ತ 781 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಮೇ 31ರಂದು ನೂತನ ಸರ್ಕಾರ 200 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ ಎಂದು ವಿವರಿಸಿದರು.ಹಿಂದಿನ ಬಿಜೆಪಿ ಸರ್ಕಾರ ರೈತರು ಸಹಕಾರಿ ಸಂಸ್ಥೆಗಳಿಂದ ಪಡೆದ 25 ಸಾವಿರ ರೂಪಾಯಿವರೆಗಿನ ಬೆಳೆ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿತ್ತು. ಒಟ್ಟು 3,600 ಕೋಟಿ ರೂಪಾಯಿ ಸಾಲ ಮನ್ನಾ ಘೋಷಿಸಲಾಗಿತ್ತು. ಆದರೆ, ಬಜೆಟ್‌ನಲ್ಲಿ 900 ಕೋಟಿ ರೂಪಾಯಿ ಮಾತ್ರ ಒದಗಿಸಿ, 2,700 ಕೋಟಿ ರೂಪಾಯಿಯಷ್ಟು ಹೊರೆಯನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಹೇರಿತ್ತು ಎಂದು ಟೀಕಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.