ಶನಿವಾರ, ಜೂನ್ 12, 2021
28 °C

ಸಿಂಧನೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸವರಾಜ ಅವರು ರಾಮತ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದಿದ್ದಗಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ಪಾವತಿಸಿಲ್ಲ ಎನ್ನುವ ಕಾರಣದಿಂದ ಉಂಟಾದ ವಿವಾದ ಸಿಂಧನೂರಿನಲ್ಲಿ ಗುರುವಾರ ಉದ್ರಿಕ್ತ ಪರಿಸ್ಥಿತಿಯನ್ನು ನಿರ್ಮಿಸಿತ್ತು.ಕಾರ್ಯನಿರ್ವಾಹಕ ಅಧಿಕಾರಿಯ ಮೇಲೆ ಹಲ್ಲೆ ಮಾಡಿರುವ ಗ್ರಾಮ ಪಂಚಾಯಿತಿ ಸದಸ್ಯ ಭೂಪನಗೌಡ, ಚನ್ನಬಸವನಗೌಡ, ಯಲ್ಲಪ್ಪ, ಷರೀಫ್ ಮತ್ತಿತರರನ್ನು ಬಂಧಿಸುವಂತೆ ಒತ್ತಾಯಿಸಿ ತಾಲ್ಲೂಕು ಪಂಚಾಯಿತಿ ಮುಂಭಾಗದಲ್ಲಿ ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ಧರಣಿ ನಡೆಸಿದರೆ, ಮತ್ತೊಂದು ಭಾಗದಲ್ಲಿ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಇಒ ಶರಣಬಸವರಾಜ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ನಡೆಸಿದ ಧರಣಿ ಸತ್ಯಾಗ್ರಹದಿಂದ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಳ್ಳುವಂತಾಯಿತು.ತಾಲ್ಲೂಕು ಪಂಚಾಯಿತಿ ಸಿಬ್ಬಂದಿಯವರಿಗೆ ಧರಣಿ ನಡೆಸಲು ಅನುಮತಿ ನೀಡಿದ ಪಿಎಸ್‌ಐ ಲಿಂಗಪ್ಪ ಎನ್.ಆರ್. ತಮಗೇಕೆ ಅನುಮತಿ ನೀಡುತ್ತಿಲ್ಲವೆಂದು ವಾದಕ್ಕಿಳಿದರು. ತದನಂತರ ಪಿಎಸ್‌ಐ ಲಿಂಗಪ್ಪ ಧರಣಿ ವಾಪಸ್ಸು ತೆಗೆದುಕೊಳ್ಳುವಂತೆ ತಾ.ಪಂ. ಸಿಬ್ಬಂದಿಯನ್ನು ಮನವೊಲಿಸಿ ಯಶಸ್ವಿಯಾದರು. ತದನಂತರ ಅದೇ ಜಾಗದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಧರಣಿ ನಡೆಸಿದರು. ಒಂದು ಹಂತದಲ್ಲಿ ನೌಕರರು ಹಾಗೂ ಜನಪ್ರತಿನಿಧಿಗಳ ನಡುವೆ ಘರ್ಷಣೆ ಆಗುತ್ತದೆಯೋ ಏನೋ ಎಂದು ಸಾರ್ವಜನಿಕರು ಕುತೂಹಲದಿಂದ ತಾಲ್ಲೂಕು ಪಂಚಾಯಿತಿ ಮುಂಭಾಗದಲ್ಲಿ ನೆರೆದಿದ್ದರು.

ಪ್ರತಿ ಕೇಸು ದಾಖಲಿಸಲು ಆಗ್ರಹ: ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಳ್ಳು ದೂರು ನೀಡಿ ಪ್ರಕರಣ ದಾಖಲಿಸಿದ್ದು, ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ, ಹೀಯಾಳಿಸಿರುವ ಇಒ ಶರಣಬಸವರಾಜರ ಮೇಲೆ ಪ್ರಕರಣ ದಾಖಲಿಸಿಕೊಳ್ಳುವಂತೆ ಗ್ರಾಮ ಪಂಚಾಯಿತಿ ಸದಸ್ಯರು ಪೊಲೀಸರಿಗೆ ಒತ್ತಾಯಿಸಿದರು.ಬೆಂಬಲ: ಕರ್ತವ್ಯ ನಿರತ ಇಒ ಶರಣಬಸವರಾಜ ಅವರ ಮೇಲೆ ದುಷ್ಕರ್ಮಿಗಳ ಹಲ್ಲೆ ನಡೆಸಿರುವುದನ್ನು ಖಂಡಿಸಿ ಗುರುವಾರ ತಾ.ಪಂ. ಕಚೇರಿ ಮುಂದೆ ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ನಡೆಸುತ್ತಿದ್ದ ಧರಣಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಬಲ ಸೂಚಿಸಿತು. ಸರ್ಕಾರಿ ನಿಯಮಗಳನ್ನು ಉಲ್ಲಂಘಿ ಸಿ ಬಿಲ್ ಪಾವತಿ ಮಾಡುವಂತೆ ಪಟ್ಟು ಹಿಡಿದು ದುಷ್ಕರ್ಮಿಗಳು ನಡೆಸಿದ ಹಲ್ಲೆ ಖಂಡನೀಯ. ಕೂಡಲೇ ಹಲ್ಲೆ ನಡೆಸಿದವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.