ಬುಧವಾರ, ಜೂನ್ 16, 2021
28 °C

ಸಿಂಹಳೀಯರ ಸದ್ದಡಗಿಸಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ: ಆಸ್ಟ್ರೇಲಿಯಾ ಪ್ರವಾಸದ ಕಹಿ ನೆನಪುಗಳನ್ನು ಅಳಿಸಿ ಹಾಕುವ ಯತ್ನದಲ್ಲಿರುವ ಭಾರತ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ  ಮಂಗಳವಾರ ರಾತ್ರಿ ಗೆದ್ದ ಖುಷಿಯಲ್ಲಿದ್ದ ಆಟಗಾರರ ದೇಹಭಾಷೆಯೇ ಅದಕ್ಕೆ ಸಾಕ್ಷಿ.

ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪಾರಮ್ಯ ಮೆರೆದ ಮಹಿ ಬಳಗ 50 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಸದೆಬಡಿಯಿತು. ಭಾರತ ಮುಂದಿಟ್ಟಿದ್ದ 305 ರನ್‌ಗಳ ಗುರಿ ಮುಟ್ಟಲು ಲಂಕಾಕ್ಕೆ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಹುಮ್ಮಸ್ಸಿನಿಂದ ಮುನ್ನುಗ್ಗುತ್ತಿದ್ದ ಈ ತಂಡದವರು 45.1 ಓವರ್‌ಗಳಲ್ಲಿ 254 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡರು.

ಭಾರತದ ಈ ಗೆಲುವಿನಲ್ಲಿ ಬ್ಯಾಟ್ಸ್ ಮನ್ ಹಾಗೂ ಬೌಲರ್‌ಗಳಿಗೆ ಸಮಪಾಲು ಸಲ್ಲಬೇಕು. ಅದರಲ್ಲೂ ಪ್ರಮುಖವಾಗಿ ವಿರಾಟ್ ಕೊಹ್ಲಿ (108; 120 ಎ, 7 ಬೌಂ) ಹಾಗೂ ಇರ್ಫಾನ್ ಪಠಾಣ್ (32ಕ್ಕೆ4) ಗೆಲುವಿನ ಗೋಪುರ ಕಟ್ಟುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು. ಉಪನಾಯಕರಾಗಿ ಬಡ್ತಿ ಪಡೆದಿರುವ ಕೊಹ್ಲಿಗೆ ಇದು ಸತತ ಎರಡನೇ ಶತಕ. ಲಂಕಾ ಎದುರಿನ ಕೊನೆಯ ಪಂದ್ಯದಲ್ಲೂ ಭಾರತದ ಜಯಕ್ಕೆ ಕಾರಣವಾಗಿದ್ದು ವಿರಾಟ್ ಕಟ್ಟಿದ್ದ ಅದ್ಭುತ ಇನಿಂಗ್ಸ್.

ಆದರೆ ಲಂಕಾದ ಪಾಲಿಗೆ ಕಂಟಕವಾಗಿದ್ದು 36ನೇ ಓವರ್. 35ನೇ ಓವರ್‌ನ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದ್ದ ಸಿಂಹಳೀಯ ಪಡೆಗೆ ಗೆಲ್ಲಲು 90 ಎಸೆತಗಳಲ್ಲಿ 109 ರನ್‌ಗಳು ಬೇಕಿದ್ದವು. ಕೈಯಲ್ಲಿ ಏಳು ವಿಕೆಟ್ ಇದ್ದವು. ಆದರೆ ಈ ತಂಡ ಕಡ್ಡಾಯ ಬ್ಯಾಟಿಂಗ್ ಪವರ್ ಪ್ಲೇ ತೆಗೆದುಕೊಂಡಿದ್ದು ಪಂದ್ಯದ ಹಣೆಬರಹವನ್ನೇ ಬದಲಾಯಿಸಿತು.

36ನೇ ಓವರ್ ಬೌಲ್ ಮಾಡಿದ ಅಶ್ವಿನ್ ಎರಡು ವಿಕೆಟ್ ಕಬಳಿಸಿದರು. ಪಂದ್ಯದ 39ನೇ ಓವರ್‌ನಲ್ಲಿ ವಿನಯ್ ಕುಮಾರ್ ಸತತ ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸಿದ್ದು ಮತ್ತೊಂದು ತಿರುವು ನೀಡಿತು. ಪವರ್‌ಪ್ಲೇನ ಐದು ಓವರ್‌ಗಳಲ್ಲಿ ಮಾಹೇಲ ಜಯವರ್ಧನೆ ಪಡೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು. ಹಾಗಾಗಿ ನಾಯಕ ಜಯವರ್ಧನೆ (78; 59 ಎ, 10 ಬೌಂ, 2 ಸಿ.) ಹಾಗೂ ಕುಮಾರ ಸಂಗಕ್ಕಾರ (65; 87 ಎ, 2 ಬೌಂ, 1 ಸಿ) ಪ್ರಯತ್ನ ಸಾಕಾಗಲಿಲ್ಲ.

ಟಾಸ್ ಗೆದ್ದ ಲಂಕಾ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಭಾರತದ ಬ್ಯಾಟ್ಸ್ ಮನ್‌ಗಳು ಆರಂಭದಲ್ಲಿ ತಡವರಿಸಿದರೂ ಪಿಚ್‌ನ ಮರ್ಮ ಅರಿಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಶತಕಗಳ ಶತಕದ ನಿರೀಕ್ಷೆಯ ಸರಪಳಿಯನ್ನು ಮತ್ತಷ್ಟು ಉದ್ದ ಬೆಳೆಸಿದ ಸಚಿನ್ ಯುವ ವೇಗಿ ಲಕ್ಮಲ್ ಹಾಕಿದ ಫುಲ್‌ಟಾಸ್ ಎಸೆತದಲ್ಲಿ ಚೆಂಡನ್ನು ಶಾರ್ಟ್ ಎಕ್ಸ್‌ಟ್ರಾ ಕವರ್‌ನಲ್ಲಿದ್ದ ಜಯವರ್ಧನೆ ಕೈಗೆ ಒಪ್ಪಿಸಿದರು.

ಆಗ ಜೊತೆಗೂಡಿದ ಕೊಹ್ಲಿ ಹಾಗೂ ಗಂಭೀರ್ (100; 118 ಎ, 7 ಬೌಂ) ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಇವರಿಬ್ಬರು ಪೈಪೋಟಿಯಲ್ಲಿ ರನ್ ಗಳಿಸಿದರು. ಆದರೆ ಅಪಾಯಕಾರಿ ಹೊಡೆತಗಳಿಗೆ ಮುಂದಾಗಲಿಲ್ಲ. ಅದಕ್ಕೆ ಸಾಕ್ಷಿ ಇವರಿಬ್ಬರ 205 ರನ್‌ಗಳ ಜೊತೆಯಾಟದಲ್ಲಿ ಬಂದಿದ್ದು ಕೇವಲ 13 ಬೌಂಡರಿ. ವಿಶೇಷವೆಂದರೆ ಈ ಇಬ್ಬರೂ ಆಟಗಾರರಿಗೆ ಇದು 10ನೇ ಶತಕ.

ಬಳಿಕ ಜೊತೆ ಸೇರಿದ ನಾಯಕ ದೋನಿ (ಅಜೇಯ 46; 26 ಎ, 6 ಬೌಂಡರಿ, 1ಸಿಕ್ಸರ್) ಹಾಗೂ ಸುರೇಶ್ ರೈನಾ (ಅಜೇಯ 30;  17 ಎ, 3 ಬೌಂಡರಿ, 1 ಸಿಕ್ಸರ್) ಅಬ್ಬರದ ಆಟದ     ಮೂಲಕ ಭಾರತದ ಮೊತ್ತವನ್ನು 300 ರನ್‌ಗಳ ಗೆರೆಯನ್ನು ದಾಟಿಸಿದರು. ಅವರಿಬ್ಬರು ಮುರಿಯದ ನಾಲ್ಕನೇ ವಿಕೆಟ್‌ಗೆ 43 ಎಸೆತಗಳಲ್ಲಿ 78 ರನ್ ಸೇರಿಸಿದರು.

ಫರ್ವೀಜ್ ಮಹಾರೂಫ್ (57ಕ್ಕೆ 2) ಮಾತ್ರ ಲಂಕಾ ಪರ ಅಲ್ಪ ಪ್ರಭಾವಿ ಎನಿಸಿದರು.

ಸ್ಕೋರ್ ವಿವರ

ಭಾರತ 50 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 304

ಗೌತಮ್ ಗಂಭೀರ್ ಸಿ ತರಂಗ ಬಿ ಫರ್ವೀಜ್ ಮಹಾರೂಫ್ 100

ಸಚಿನ್ ತೆಂಡೂಲ್ಕರ್ ಸಿ ಜಯವರ್ಧನೆ ಬಿ ಸುರಂಗ ಲಕ್ಮಲ್  06

ವಿರಾಟ್ ಕೊಹ್ಲಿ ಸಿ ತಿರಿಮಾನೆ ಬಿ ಫರ್ವೀಜ್ ಮಹಾರೂಫ್ 108

ಮಹೇಂದ್ರ ಸಿಂಗ್ ದೋನಿ ಔಟಾಗದೆ  46

ಸುರೇಶ್ ರೈನಾ ಔಟಾಗದೆ  30

ಇತರೆ (ಲೆಗ್‌ಬೈ-7, ವೈಡ್-7)  14

ವಿಕೆಟ್ ಪತನ: 1-19 (ತೆಂಡೂಲ್ಕರ್; 5.3); 2-224 (ಗಂಭೀರ್; 42.3); 3- 226 (ಕೊಹ್ಲಿ; 42.5)

ಬೌಲಿಂಗ್: ನುವಾನ್ ಕುಲಶೇಖರ 10-0-67-0 (ವೈಡ್-1), ಸುರಂಗ ಲಕ್ಮಲ್ 10-1-67-1 (ವೈಡ್-2), ತಿಲಕರತ್ನೆ ದಿಲ್ಶಾನ್ 10-0-54-0, ಸೀಕುಗೆ ಪ್ರಸನ್ನ 9-0-45-0 (ವೈಡ್-1), ಫರ್ವೀಜ್ ಮಹಾರೂಫ್ 10-0-57-2 (ವೈಡ್-2), ಚಾಮರ ಕಪುಗೆದೆರಾ 1-0-7-0

ಶ್ರೀಲಂಕಾ 45.1 ಓವರ್‌ಗಳಲ್ಲಿ 254

ಮಾಹೇಲ ಜಯವರ್ಧನೆ ಸಿ ದೋನಿ ಬಿ ಇರ್ಫಾನ್ ಪಠಾಣ್  78

ತಿಲಕರತ್ನೆ ದಿಲ್ಶಾನ್ ಸಿ ಕೊಹ್ಲಿ ಬಿ ಇರ್ಫಾನ್ ಪಠಾಣ್  07

ಕುಮಾರ ಸಂಗಕ್ಕಾರ ಸಿ ರವೀಂದ್ರ ಜಡೇಜಾ ಬಿ ಆರ್.ಅಶ್ವಿನ್  65

ದಿನೇಶ್ ಚಂಡಿಮಾಲ್ ಬಿ ಆರ್.ಅಶ್ವಿನ್  13

ಲಹಿರು ತಿರಿಮಾನೆ ಎಲ್‌ಬಿಡಬ್ಲ್ಯು ಬಿ ಆರ್.ಅಶ್ವಿನ್  29

ನುವಾನ್ ಕುಲಶೇಖರ ಬಿ ಆರ್.ವಿನಯ್ ಕುಮಾರ್  11

ಉಪುಲ್ ತರಂಗ ಬಿ ಇರ್ಫಾನ್ ಪಠಾಣ್  17

ಚಾಮರ ಕಪುಗೆದೆರಾ ಸಿ  ಕೊಹ್ಲಿ ಬಿ ಆರ್.ವಿನಯ್ ಕುಮಾರ್ 00

ಫರ್ವೀಜ್ ಮಹಾರೂಫ್ ಸಿ ರೈನಾ ಬಿ ವಿನಯ್ ಕುಮಾರ್  18

ಸೀಕುಗೆ ಪ್ರಸನ್ನ ಸಿ ತೆಂಡೂಲ್ಕರ್ ಬಿ ಇರ್ಫಾನ್ ಪಠಾಣ್  08

ಸುರಂಗ ಲಕ್ಮಲ್ ಔಟಾಗದೆ  00

ಇತರೆ (ಲೆಗ್‌ಬೈ-2, ವೈಡ್-6)  08

ವಿಕೆಟ್ ಪತನ: 1-31 (ದಿಲ್ಶಾನ್; 4.1); 2-124 (ಜಯವರ್ಧನೆ; 18.3); 3-152 (ಚಂಡಿಮಾಲ್; 25.3); 4-196 (ಸಂಗಕ್ಕಾರ; 35.1); 5-198 (ತಿರಿಮಾನೆ; 35.5); 6-216 (ಕುಲಶೇಖರ; 38.3); 7-216 (ಕಪುಗೆದೆರಾ; 38.4); 8-241 (ತರಂಗ; 41.6); 9-254 (ಮಹಾರೂಫ್; 44.6); 10-254 (ಪ್ರಸನ್ನ; 45.1).

ಬೌಲಿಂಗ್: ಇರ್ಫಾನ್ ಪಠಾಣ್ 8.1-1-32-4, ಪ್ರವೀಣ್ ಕುಮಾರ್ 7-0-47-0 (ವೈಡ್-1), ಆರ್.ವಿನಯ್ ಕುಮಾರ್ 9-0-55-3 (ವೈಡ್-3), ರವೀಂದ್ರ ಜಡೇಜಾ 4-0-31-0, ಸುರೇಶ್ ರೈನಾ 5-0-34-0, ಆರ್.ಅಶ್ವಿನ್ 9-0-39-3 (ವೈಡ್-2), ರೋಹಿತ್ ಶರ್ಮ 3-0-14-0

ಫಲಿತಾಂಶ: ಭಾರತಕ್ಕೆ 50 ರನ್‌ಗಳ ಗೆಲುವು. ಪಾಯಿಂಟ್: ಭಾರತ-4, ಶ್ರೀಲಂಕಾ-0. ಪಂದ್ಯ ಶ್ರೇಷ್ಠ: ವಿರಾಟ್ ಕೊಹ್ಲಿ. ಭಾರತದ ಮುಂದಿನ ಪಂದ್ಯ: ಬಾಂಗ್ಲಾದೇಶ ವಿರುದ್ಧ (ಮಾ.16).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.