ಸೋಮವಾರ, ಮೇ 23, 2022
30 °C

ಸಿಐಡಿ ಅಧಿಕಾರಿಗಳಿಂದ ತನಿಖೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ದಾಂಧಲೆ

ಮಡಿಕೇರಿ: ಡಿಸೆಂಬರ್ 22ರಂದು ಮಡಿಕೇರಿ ನಗರಸಭೆಯ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಘಟಕ ಮಂಗಳವಾರ ತನಿಖೆ ಪ್ರಾರಂಭಿಸಿತು.ಸಿಐಡಿ ಘಟಕದ ಡಿವೈಎಸ್‌ಪಿ ಎಂ. ರಾಮಕೃಷ್ಣ ನೇತೃತ್ವದ ತಂಡ ಮಂಗಳವಾರ ನಗರಕ್ಕೆ ಆಗಮಿಸಿ ತನಿಖೆ ನಡೆಸಿತು. ನಗರಸಭೆ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ದೂರುಗಳನ್ನು ಪಡೆದುಕೊಂಡಿರುವ ತಂಡ, ತನಿಖೆ ಕೈಗೊಂಡಿದೆ.ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿರುವುದು ಹಾಗೂ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ಕುರಿತು ಪ್ರತ್ಯೇಕವಾಗಿ ಮೂರು ದೂರುಗಳು ದಾಖಲಾಗಿವೆ ಎಂದು ಸಿಐಡಿ ಡಿವೈಎಸ್‌ಪಿ ಎಂ. ರಾಮಕೃಷ್ಣ ತಿಳಿಸಿದ್ದಾರೆ.ನಗರಸಭೆ ಆವರಣದಲ್ಲಿ ನಡೆದ ದಾಂಧಲೆಗೆ ಕಾರಣರಾದವರ ಬಗ್ಗೆ ಮಾಹಿತಿ ಕಲೆ ಹಾಕುವ ಕುರಿತು ಸಿಐಡಿ ಪೊಲೀಸ್ ಉನ್ನತಾಧಿಕಾರಿಗಳು ತನಿಖೆಗೆ ಆದೇಶಿಸಿರುವುದರಿಂದ ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಹೇಳಿದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿ ಡಾ.ಎಂ.ಆರ್. ರವಿ, ಗುಪ್ತಚರ ಇಲಾಖೆ, ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಸಾರ್ವಜನಿಕರಿಂದಲೂ ಮಾಹಿತಿ ಪಡೆಯಲಾಗುವುದು. ಅಲ್ಲದೆ, ಸಾರ್ವಜನಿಕ ಆಸ್ತಿ ಹಾನಿಯಾಗಿರುವ ಕುರಿತು ಲೋಕೋಪಯೋಗಿ ಇಲಾಖೆಯಿಂದಲೂ ಅಂದಾಜು ನಷ್ಟದ ವರದಿ ಪಡೆಯಲಾಗುವುದು ಎಂದರು.

ಸಿಐಡಿ ತಂಡದಲ್ಲಿ ಎಸ್‌ಐ ಶಿವಕುಮಾರ್, ಎಎಸ್‌ಐ ನಾಗಭೂಷಣ್ ಮತ್ತು ಸಿಬ್ಬಂದಿಗಳಿದ್ದು, ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಪತ್ರಕರ್ತರು ಹಾಗೂ ಪೊಲೀಸರಿಂದ ಮಾಹಿತಿ ಕಲೆ ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.