ಸೋಮವಾರ, ಏಪ್ರಿಲ್ 12, 2021
23 °C

ಸಿಕ್ಸ್‌ಪ್ಯಾಕ್ ಬಲು ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸಿಕ್ಸ್‌ಪ್ಯಾಕ್ ಹತ್ತು ಲಕ್ಷದ ಬಾಬತ್ತು~ ಎಂದರು ನಟ ಪ್ರೇಮ್. ಸಿಕ್ಸ್‌ಪ್ಯಾಕ್‌ಗಾಗಿ ಜಿಮ್‌ನಲ್ಲಿ ಬೆವರು ಸುರಿಸುವಷ್ಟೇ ಹಣವನ್ನೂ ಸುರಿಯಬೇಕು ಎಂಬ ಅರ್ಥ ಅವರ ಮಾತಿನಲ್ಲಿತ್ತು.`ಶತ್ರು~ ಮತ್ತು `ಚಂದ್ರ~ ಚಿತ್ರಗಳಿಗಾಗಿ ಸಿಕ್ಸ್‌ಪ್ಯಾಕ್ ಮಾಡಿಕೊಂಡ ಅನುಭವ ಅವರದು. ಎರಡು ಚಿತ್ರಗಳಿಗೂ ಎಂಟೆಂಟು ತಿಂಗಳು ಸಾಮು ಮಾಡಿದ್ದ ಪ್ರೇಮ್ ಅವರಿಗೆ ಸಿಕ್ಸ್‌ಪ್ಯಾಕ್ ಎಂಬುದು ಪ್ರಸವ ವೇದನೆಗೆ ಸಮಾನ ಎನಿಸಿದೆ.`ಶತ್ರು~ ಚಿತ್ರದಲ್ಲಿ ಅವರಿಗೆ ಪೊಲೀಸ್ ಅಧಿಕಾರಿಯ ಪಾತ್ರ. ಕ್ಲೈಮ್ಯಾಕ್ಸ್ ಫೈಟ್‌ಗೆ ಸಿಕ್ಸ್‌ಪ್ಯಾಕ್ ಮಾಡಿಕೊಳ್ಳಬೇಕಿತ್ತಂತೆ. ಹಾಗೆಯೇ ಚಿತ್ರದುದ್ದಕ್ಕೂ ದೇಹವನ್ನು ಫಿಟ್ ಆಗಿಟ್ಟುಕೊಳ್ಳಬೇಕೆಂಬ ಚಿತ್ರತಂಡದ ಮಾತಿಗೆ ತಲೆದೂಗಿದ ಪ್ರೇಮ್ ಮೊದಲ ಬಾರಿಗೆ ಸಿಕ್ಸ್‌ಪ್ಯಾಕ್‌ಗಾಗಿ ದೇಹ ಒಡ್ಡಿಕೊಂಡರು. ತಮ್ಮ ಫಿಟ್‌ನೆಸ್ ಗುರು ಪಾನಿಪುರಿ ಕಿಟ್ಟಿ ಅವರ ಸಲಹೆ ಅನುಸರಿಸಿ ದಿನಕ್ಕೆ ಎಂಟು ಗಂಟೆ ಕಾಲ ಜಿಮ್‌ನಲ್ಲಿ ಕಳೆದರು.`ಪ್ರತಿದಿನ 25ರಿಂದ 30 ಮೊಟ್ಟೆ, ತರಕಾರಿಗಳು, ಡ್ರೈ ಚಿಕನ್, ಪ್ರೊಟೀನ್ ಪುಡಿ ಸೇವಿಸಬೇಕು. ಕೇವಲ ಡಯಟ್‌ಗಾಗಿಯೇ ಹೇರಳವಾಗಿ ದುಡ್ಡು ಖರ್ಚು ಮಾಡಬೇಕಾಗಿರುತ್ತದೆ~ ಎನ್ನುತ್ತಾರೆ.`ಜಿಮ್‌ನಲ್ಲಿ ಬೆವರು ಸುರಿಸಿದರಷ್ಟೇ ಸಾಲದು. ಅದಕ್ಕೆ ತಕ್ಕಂತೆ ದೇಹಕ್ಕೆ ವಿಶ್ರಾಂತಿಯನ್ನೂ ನೀಡಬೇಕಿರುತ್ತದೆ. ಅದಕ್ಕೆ ನಾನು ಏಕಾಏಕಿ ಸಿಕ್ಸ್‌ಪ್ಯಾಕ್ ಮಾಡಿಕೊಳ್ಳಲು ಒಪ್ಪುವುದಿಲ್ಲ. ಪಾತ್ರಕ್ಕೆ ಅದರ ಅಗತ್ಯ ಎಷ್ಟಿದೆ ಎಂಬುದನ್ನು ನಿರ್ದೇಶಕರೊಂದಿಗೆ ಚರ್ಚಿಸಿ ದೀರ್ಘಾವಧಿ ಸಮಯ ಕೇಳಿಕೊಂಡು ಮುಂದುವರಿಯುತ್ತೇನೆ~ ಎಂಬ ಎಚ್ಚರ ಅವರದು.`ಚಂದ್ರ~ ಚಿತ್ರದಲ್ಲಿ ಪ್ರೇಮ್‌ಗೆ ರಾಜಮನೆತನಕ್ಕೆ ಹತ್ತಿರವಾದ ಪಾತ್ರ. ಅದು ರಾಜಕುಮಾರನ ಗೆಟಪ್ ಹೋಲುತ್ತದೆ ಎಂದು ನಿರ್ದೇಶಕರು ಹೇಳಿದ್ದಕ್ಕೆ ಮತ್ತು ಚಿತ್ರದಲ್ಲಿ ಬರಿಮೈ ಹೋರಾಟ ಇರುವುದರಿಂದ ಸಿಕ್ಸ್‌ಪ್ಯಾಕ್ ಅಗತ್ಯ ಇತ್ತಂತೆ. ಅದಕ್ಕಾಗಿ ಮತ್ತೆ ಜಿಮ್‌ನತ್ತ ಮುಖ ಮಾಡಿದ ಪ್ರೇಮ್ ಸಿಕ್ಸ್‌ಪ್ಯಾಕ್ ಮೂಡಿಸಿಕೊಂಡರಂತೆ.`ಯೋಗ್ಯ ಮೈಕಟ್ಟನ್ನು ನಿಭಾಯಿಸಲು ವ್ಯಾಯಾಮ ಮುಖ್ಯ. ಅದರಿಂದ ದೇಹಕ್ಕೆ ಯಾವುದೇ ಹಾನಿ ಇಲ್ಲ. ಆದರೆ ಸಿಕ್ಸ್‌ಪ್ಯಾಕ್ ನಿಭಾಯಿಸುವುದು ಒತ್ತಡದ ಕೆಲಸ. ಸಿಕ್ಸ್‌ಪ್ಯಾಕ್ ಮಾಡುವ ಕೊನೆಯ ದಿನಗಳಲ್ಲಿ ಹೆಚ್ಚು ನೀರನ್ನು ಕುಡಿಯಬಾರದು ಎನ್ನಲಾಗುತ್ತದೆ. ಆಗ ಕಿಡ್ನಿ ಮೇಲೆ ಒತ್ತಡ ಬೀಳುತ್ತದೆ. ಅದು ಆರೋಗ್ಯಕ್ಕೆ ತೊಂದರೆ ತರಬಹುದು. ಹಾಗಾಗಿ ಹೆಚ್ಚು ವಿಶ್ರಾಂತಿ ಬೇಕಾಗುತ್ತದೆ~ ಎಂದು ಎಚ್ಚರಿಕೆ ನೀಡುವ ಪ್ರೇಮ್ ಸಿಕ್ಸ್‌ಪ್ಯಾಕ್ ವಿರೋಧಿ ಏನಲ್ಲ.`ವಿಭಿನ್ನ ರೀತಿಯ ಪಾತ್ರಗಳನ್ನು ನಿರ್ವಹಿಸುವುದು ನನಗಿಷ್ಟ. ಅದೊಂಥರಾ ಮಜಾ ನೀಡುತ್ತದೆ. ಪಾತ್ರಕ್ಕಾಗಿ ಬಾಡಿ ಟೋನ್ ಮಾಡಿಕೊಳ್ಳುವುದು ಸವಾಲಿನ ಕೆಲಸ. ಆದರೆ ಅದು ಅತಿಯಾಗಬಾರದು ಅಷ್ಟೇ~ ಎನ್ನುವ ಅವರು `ಚಾರ್‌ಮಿನಾರ್~ ಚಿತ್ರಕ್ಕಾಗಿ ಗುರುತು ಸಿಕ್ಕದಷ್ಟು ತೆಳ್ಳಗಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.