ಮಂಗಳವಾರ, ಮೇ 18, 2021
22 °C

ಸಿಕ್ಸ್ ಪ್ಯಾಕ್ ಅರುಣ್

ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ನಾಯಕ ನಟನಿಗೆ ದೇಹಭಾಷೆಯೇ ಸಿರಿ. ಹೆಸರು ಮಾಡಿರುವ ನಾಯಕರೂ ಮೈಕಟ್ಟಿಗೆ ಸಿಕ್ಸ್ ಪ್ಯಾಕ್, ಎಯ್ಟ ಪ್ಯಾಕ್ ರೂಪು ಕೊಟ್ಟು ಹೊಸ ಇಮೇಜ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗಕ್ಕೆ ಅಡಿಯಿಡುವ ದೃಷ್ಟಿಯಿಂದಲೇ `ಸಿಕ್ಸ್ ಪ್ಯಾಕ್' ಕಸರತ್ತು ನಡೆಸುತ್ತಿರುವವರು `ನಾನು ನಮ್ಮುಡ್ಗಿ' ಚಿತ್ರದ ನಾಯಕ ಅರುಣ್ ಗೌಡ.

ಅರುಣ್ ನಾಯಕತ್ವದ ಮೊದಲ ಚಿತ್ರ ಇದು. ರಂಗಭೂಮಿ ಕಲಾವಿದರಾದ ಅರುಣ್, ಶ್ರೀನಗರ ಕಿಟ್ಟಿಯ `ಖೋ ಖೋ' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಿರ್ವಹಿಸಿದ್ದರು. `ಪ್ಯಾಟೆ ಮಂದಿ ಕಾಡಿಗೆ ಹೋದ್ರು' ರಿಯಾಲಿಟಿ ಶೋದಲ್ಲಿ ಅಂತಿಮ ಹಂತದವರೆಗೆ ಸಾಗಿದವರು. ಜೀ ವಾಹಿನಿಯ `ಒಗ್ಗರಣಿ ಡಬ್ಬಿ' ಕಾರ್ಯಕ್ರಮದ ನಿರೂಪಕ. ನಾಯಕ ನಟನಾಗುವ ಕನಸುಳ್ಳ ಅರುಣ್ ತಮ್ಮ ದೈಹಿಕ ಕಸರತ್ತಿನ ಕುರಿತು `ಮೆಟ್ರೊ' ಜತೆ ಮಾತನಾಡಿದ್ದಾರೆ.ನಟನಾಗುವ ದೃಷ್ಟಿಯಿಂದಲೇ ಸಿಕ್ಸ್ ಪ್ಯಾಕ್ ಕಸರತ್ತು ನಡೆಸುತ್ತಿದ್ದೀರಾ?

ಹೌದು. ಸಿನಿಮಾಕ್ಕಾಗಿಯೇ ವರ್ಕ್‌ಔಟ್ ಮಾಡುತ್ತಿರುವುದು. ಬಾಲ್ಯದಿಂದಲೇ ನಟನಾಗುವ ಬಯಕೆ ಇತ್ತು. `ನಾನು ನಮ್ಮಡ್ಗಿ' ಚಿತ್ರದಲ್ಲಿ ನನ್ನದು ಕಾಲೇಜು ಹುಡುಗನ ಪಾತ್ರ. ಈ ಚಿತ್ರದ ನಿರ್ದೇಶಕರು ನಾಯಕನಿಗೆ ಫಿಟ್‌ನೆಸ್ ಅವಶ್ಯ. ಕಾಲೇಜು ಹುಡುಗನ ಪಾತ್ರವಾದ ಕಾರಣ ದೇಹ ತುಸು ಹುರಿಗೊಂಡಿಬೇಕು. ದೇಹಭಾಷೆ ಗಮನಿಸಿಯೇ ಈತ ನಾಯಕ ನಟನಿಗೆ ಸೂಕ್ತ ಎನ್ನುವ ಭಾವನೆಯನ್ನು ಪ್ರೇಕ್ಷಕರು ತಾಳಬೇಕು ಎಂದಿದ್ದರು. ಆ ಕಾರಣದಿಂದ ನಾಲ್ಕೂವರೆ ತಿಂಗಳಿನಿಂದ ಕರಸತ್ತು ನಡೆಸುತ್ತಿದ್ದೇನೆ.ನಿಮ್ಮ ಆಹಾರ ಕ್ರಮದ ಬಗ್ಗೆ ತಿಳಿಸಿ?

ಬೆಳಿಗ್ಗೆ ಐದಕ್ಕೆ ದಿನಚರಿ ಆರಂಭ. 5.30ರಿಂದ ಜಿಮ್‌ನಲ್ಲಿ ದೇಹ ದಂಡನೆ. ಕಸರತ್ತಿಗೂ ಮುನ್ನ ಎರಡು ಲೀಟರ್ ನೀರು ಕುಡಿದು, ಐದು ಮೊಟ್ಟೆ ಮತ್ತು ರಾತ್ರಿ ನೀರಿನಲ್ಲಿ ನೆನೆಸಿಟ್ಟ ಐದು ಬಾದಾಮಿ ಸೇವಿಸುತ್ತೇನೆ. ಎರಡು ಗಂಟೆಗಳ ಕಸರತ್ತಿನ ನಂತರ ಎರಡು ಎಳೆನೀರು, ಒಂದು ಸೇಬು, ಮೊಳಕೆ ಕಾಳಿನ ಜತೆ ಐದು ಮೊಟ್ಟೆ ಹಾಗೂ ಬೆಳಗಿನ ಉಪಾಹಾರವಾಗಿ ಮೂರು ಚಪಾತಿ ಜತೆಗೆ ಅರೆಬೆಂದ ತರಕಾರಿ ತಿನ್ನುತ್ತೇನೆ. ಮಧ್ಯಾಹ್ನ ಅನ್ನ ಮಾತ್ರ ಸೇವಿಸುತ್ತೇನೆ. ಸಂಜೆ ಗ್ರೀನ್ ಟೀ ಅಥವಾ ಒಂದು ಲೋಟ ಹಾಲಿನ ಜತೆ ಬಿಸ್ಕತ್ತು. ರಾತ್ರಿ ಎರಡು ಚಪಾತಿ, ಒಂದು ಸೇಬು. ದಿನಕ್ಕೆ ಎರಡು ಲೋಟ ಮೂಸಂಬಿ ಹಣ್ಣಿನ ರಸ. ಚಿತ್ರೀಕರಣದ ಸಂದರ್ಭದಲ್ಲಿ ಕೆಲವು ವೇಳೆ ಈ ಆಹಾರ ಕ್ರಮವನ್ನು ಪಾಲಿಸಲು ಸಾಧ್ಯವಾಗುವುದಿಲ್ಲ. ಆಗ ಹಣ್ಣಿನ ಸೇವನೆಗೆ ಹೆಚ್ಚು ಗಮನ ಹರಿಸುತ್ತೇನೆ.ಆಹಾರದಲ್ಲಿ ಪಥ್ಯವೇನಾದರೂ ಇದೆಯೇ?

ವಾರಕ್ಕೆ ಮೂರ‌್ನಾಲ್ಕು ಬಾರಿ ಮಾಂಸಾಹಾರ ಸೇವಿಸುತ್ತಿದ್ದವನು ನಾನು. ಈಗ ನಾನ್‌ವೆಜ್‌ಗೆ ಪೂರ್ಣ ವಿರಾಮ. ಚಿಕನ್ ತಿಂದರೆ ಪ್ರೊಟೀನ್ ಸಿಗುತ್ತದೆ ನಿಜ. ಆದರೆ ಚಿಕನ್ ಒಂದನ್ನೇ ತಿನ್ನಲು ನಾಲಿಗೆ ಒಪ್ಪುವುದಿಲ್ಲ. ಮಟನ್ ಸಹ ಬೇಕು. ಮಟನ್ ಸೇವನೆಯಿಂದ ಕೊಬ್ಬಿನಂಶ ಹೆಚ್ಚಿ ಹೊಟ್ಟೆ ಬರುವ ಸಂಭವವಿದೆ. ಆದ್ದರಿಂದ ಪೂರ್ಣವಾಗಿ ಸಸ್ಯಾಹಾರಿಯಾಗಿದ್ದೇನೆ. ಸ್ನೇಹಿತರ ಜತೆ ಮೋಜಿನ ಕೂಟಗಳಿಗೆ ಹೋದರೂ ಮದ್ಯದಿಂದ ದೂರ. ಮನೆ ಆಹಾರವನ್ನೇ ಹೆಚ್ಚು ಅವಲಂಬಿಸಿದ್ದೇನೆ.ಚಿತ್ರೀಕರಣದ ಒತ್ತಡದ ನಡುವೆಯೂ ಸಕ್ರಿಯವಾಗಿ ಜಿಮ್‌ಗೆ ಹೋಗುವಿರಾ?

ಆದಷ್ಟೂ ಜಿಮ್‌ನಿಂದ ತಪ್ಪಿಸಿಕೊಳ್ಳುವುದಿಲ್ಲ. ಕೆಲವು ಸಂದರ್ಭದಲ್ಲಿ ಚಿತ್ರೀಕರಣದ ಒತ್ತಡದಿಂದ ಜಿಮ್‌ನಿಂದ ದೂರವಾಗಬೇಕಾಗುತ್ತದೆ. ಆಗ ಮನೆಯಲ್ಲಿಯೇ ಕಸರತ್ತು ನಡೆಸುತ್ತೇನೆ. ಜಿಮ್‌ಗೆ ಹೋಗದ ಅವಧಿಯಲ್ಲಿ ಹೆಚ್ಚು ಗಮನವಹಿಸುವುದು ಹೊಟ್ಟೆಯ ಮೇಲೆ. 10 ದಿನ ಜಿಮ್‌ನಲ್ಲಿ ಕಸರತ್ತು ನಡೆಸಿ ನಾಲ್ಕೈದು ದಿನ ಜಿಮ್‌ನಿಂದ ದೂರ ಉಳಿದರೆ ಹೊಟ್ಟೆ ಬರುತ್ತದೆ. ಸ್ಕಿಪ್ಪಿಂಗ್‌ಗೆ ಕೆಲ ಕಾಲ ಮೀಸಲಿಟ್ಟು, ನಿರಂತರವಾಗಿ 100 `ದಂಡಾ' (ಪುಷ್-ಅಪ್ಸ್) ಹೊಡೆಯುತ್ತೇನೆ.ಮಾನಸಿಕ ಆರೋಗ್ಯವನ್ನು ಹೇಗೆ ಕಾಯ್ದುಕೊಂಡಿದ್ದೀರಿ?

ಮನಸ್ಸಿನ ನೆಮ್ಮದಿಗಾಗಿ ಫ್ರೀಸ್ಟೈಲ್ ನೃತ್ಯದ ಮೊರೆಹೋಗುತ್ತೇನೆ. ಸಂಗೀತ ಕೇಳುತ್ತೇನೆ. ಪುಸ್ತಕ ಓದುತ್ತೇನೆ. ಯೋಗಾಭ್ಯಾಸ ನಡೆಸುತ್ತೇನೆ. ಸೂರ್ಯ ನಮಸ್ಕಾರಕ್ಕೆ ಹೆಚ್ಚು ಒತ್ತು. ಮುಂಜಾನೆ ಸೂರ್ಯನ ಕಿರಣಗಳಿಗೆ ಮುಖವೊಡ್ಡುವುದರಿಂದ ಮನಸ್ಸು ಹಗುರವಾಗುತ್ತದೆ. ನಿತ್ಯ ಜಿಮ್‌ನಲ್ಲಿ ಬೆವರಿಳಿಸುವುದರಿಂದ ಏಳು ಗಂಟೆಗಳ ಕಾಲ ನಿದ್ದೆ ಅತ್ಯಗತ್ಯ. ಕೆಲಸ ಒತ್ತಡವಿದ್ದರೂ ರಾತ್ರಿ ಹತ್ತುಗಂಟೆಗೆ ಮಲಗುತ್ತೇನೆ.ಹೊಸ ಇಮೇಜಿನಿಂದ ಅವಕಾಶಗಳು ಸಿಕ್ಕಿವೆಯೇ?

ಎರಡು ಚಿತ್ರಗಳಲ್ಲಿ ನಟಿಸುವ ಅವಕಾಶ ಬಂದಿದೆ. ನಿರ್ದೇಶಕರೊಬ್ಬರು ನನ್ನನ್ನು ಭೇಟಿ ಮಾಡಿದ್ದು, ತಮ್ಮ ಮುಂದಿನ ಚಿತ್ರಕ್ಕೆ ನಾಯಕ ನೀವು. ಮೊದಲಾರ್ಧದ ಚಿತ್ರೀಕರಣದ ನಂತರ ಒಂದು ತಿಂಗಳು ಬಿಡುವು ನೀಡುತ್ತೇವೆ ದೇಹವನ್ನು ಇನ್ನೂ ಸ್ವಲ್ಪ ಹುರಿಗೊಳಿಸಿ ಎಂದಿದ್ದಾರೆ. ತರಬೇತುದಾರರ ಬಗ್ಗೆ ಹೇಳಿ?

ಮಿ.ಕರ್ನಾಟಕ ವಿಜೇತ ಹರೀಶ್ ಮತ್ತು ಮಿ. ಇಂಡಿಯಾ ವಿಜೇತ ರವಿ ನನಗೆ ದೈಹಿಕ ಕಸರತ್ತು ಹೇಳಿಕೊಡುತ್ತಿರುವ ಗುರುಗಳು. ಕನ್ನಡದ ಬಹುತೇಕ ನಟರು ಇವರ ಬಳಿ ದೇಹ ದಂಡಿಸುತ್ತಿದ್ದಾರೆ. ತೆಲುಗಿನ ರಾಮ್ ಚರಣ್ ತೇಜ ಅವರಿಗೂ ಹರೀಶ್ ಕಸರತ್ತಿನ ಗುಟ್ಟು ಹೇಳಿದವರು. ಜಿಮ್ ಪ್ರವೇಶಕ್ಕೂ ಮುನ್ನ ಮದ್ಯಪಾನ, ಧೂಮಪಾನದಿಂದ ದೂರ ಉಳಿದು, ಸಕ್ರಿಯವಾಗಿ ಜಿಮ್‌ಗೆ ಬರುವವರಿಗೆ ಮಾತ್ರ ಆದ್ಯತೆ ನೀಡುತ್ತಾರೆ. ನನಗೆ ನಟನೆಯಲ್ಲಿ `ಉಸಿರಾಟ ಪಾಠ' (ವಾಯ್ಸ ಎಕ್ಸಸೈ) ಹೇಳಿಕೊಟ್ಟವರು ರಂಗಕರ್ಮಿ ಮೌನೇಶ್ ಎಲ್. ಬಡಿಗೇರ್. ಹೊಟ್ಟೆಯಿಂದ ಉಸಿರನ್ನು ತೆಗೆದುಕೊಳ್ಳುವುದರಿಂದ ಹೊರಡುವ ಮಾತಿನ ದೃಢತೆ. ಉಸಿರು ಮತ್ತು ಧ್ವನಿಯ ನಡುವಿನ ಸಂಬಂಧವನ್ನು ತಿಳಿಸಿದರು. `ಉಸಿರಾಟದ ಪಾಠ' ನನ್ನ ನಟನೆಗೆ ಹೆಚ್ಚು ಅನುಕೂಲವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.