ಸೋಮವಾರ, ಜುಲೈ 26, 2021
21 °C

ಸಿನಿಮಾ ಬೆನ್ನೇರಿ ನವೀನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟನಾಗಿ ಬದುಕು ಆರಂಭಿಸಿದ ನವೀನ್ ದ್ವಾರಕಾನಾಥ್ ಬಳಿಕ ಮಕ್ಕಳ ಕಿರುಚಿತ್ರ ನಿರ್ದೇಶನದತ್ತ ಹೊರಳಿದವರು. ಸಿ.ಆರ್.ಸಿಂಹ ಅವರ ನಾಟಕ ತಂಡದಲ್ಲಿದ್ದ ಅವರು ತಮ್ಮ ದುಡಿಮೆಯ ಹಣವನ್ನು ಮಕ್ಕಳ ಕಿರುಚಿತ್ರ ನಿರ್ಮಾಣಕ್ಕೆ ಸುರಿಯುತ್ತಿದ್ದಾರೆ. ಮೊದಲಿಗೆ ಕಾಲೇಜು ಹುಡುಗರ ಒತ್ತಡದ ಜೀವನ ಮತ್ತು ಆತಂಕದ ಬದುಕನ್ನು ಕುರಿತು 14 ನಿಮಿಷದ ‘ದಿ ಶ್ಯಾಡೋ’ ಹೆಸರಿನ ಕಿರುಚಿತ್ರ ನಿರ್ದೇಶಿಸಿ ನಿರ್ಮಿಸಿದ್ದ ನವೀನ್, ನಂತರ ಬಾಲ ಕಾರ್ಮಿಕರ ಬದುಕು ಬವಣೆ ಇದ್ದ 40 ನಿಮಿಷಗಳ ‘ಅರಿವಿನ ಹಾದಿ’ ಕಿರುಚಿತ್ರ ನಿರ್ಮಾಣ ಮಾಡಿ ನಿರ್ದೇಶಿಸಿದರು. ಅವರ ‘ದಿ ಶ್ಯಾಡೋ’ ಕಿರುಚಿತ್ರ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಪ್ರದರ್ಶನ ಕಂಡಿತ್ತು. ‘ಅರಿವಿನ ಹಾದಿ’ಯನ್ನು ಅವರು ಗ್ರಾಮಗಳಲ್ಲಿ ಮತ್ತು ಎನ್‌ಜಿಒಗಳಲ್ಲಿ ಉಚಿತ ಪ್ರದರ್ಶನ ನೀಡಿದರು.ಇದೀಗ ಹೆಣ್ಣುಶಿಶು ಹತ್ಯೆ ಮತ್ತು ರೈತರ ಆತ್ಮಹತ್ಯೆ ಕುರಿತು ‘ಮರಳಿದ ಬೆಳಕು’ ಹೆಸರಿನ 40 ನಿಮಿಷದ ಕಿರುಚಿತ್ರದ ತಯಾರಿಯಲ್ಲಿದ್ದಾರೆ. ಈ ಕಿರುಚಿತ್ರದ ಹಾಡೊಂದರಲ್ಲಿ ನಿಧಿ ಸುಬ್ಬಯ್ಯ, ಸಿ.ಆರ್.ಸಿಂಹ, ಸೃಜನ್, ರವಿಶಂಕರ್ ನಟಿಸಲಿದ್ದಾರೆ ಎನ್ನುವ ನವೀನ್, ‘ಲಾಭಕ್ಕಾಗಿ ನಾನು ಸಿನಿಮಾ ಮಾಡುತ್ತಿಲ್ಲ. ಸಾಮಾಜಿಕ ಕಾಳಜಿಯಿಂದ ಸಿನಿಮಾ ಮಾಡುತ್ತಿದ್ದೇನೆ. ನನ್ನ ಕೆಲಸದಿಂದ ಒಂದು ಸಣ್ಣ ಬದಲಾವಣೆಯಾದರೂ ಅದು ನನಗೆ ಸಾರ್ಥಕ್ಯ ಭಾವ ನೀಡುತ್ತದೆ’ ಎನ್ನುತ್ತಾರೆ.ಅವರೊಂದಿಗೆ ಅವರದೇ ಮನೋಭಾವ ಇರುವ ಕೆಲವು ಗೆಳೆಯರೂ ಇದ್ದಾರೆ. ಅರ್ಪಿತಾ ಕುಂಡಜ್ಜಿ, ನಿರಂಜನ, ಅಲಕಾನಂದ, ಶಶಿ, ಪ್ರಾಣೇಶಾಚಾರ್ಯ ಈ ಗೆಳೆಯರೆಲ್ಲಾ ಒಟ್ಟಾಗಿ ಸೇರಿ ಆಲಾಪ್ ಹೆಸರಿನ ತಂಡ ಕಟ್ಟಿಕೊಂಡು ‘ಮರಳಿದ ಬೆಳಕು’ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ‘ಫ್ಲಾಪ್ ಆದ ಸಿನಿಮಾ ನೋಡುವುದು, ಪ್ರೇಕ್ಷಕರನ್ನು ಗಮನಿಸುವುದು ನಮ್ಮ ಹವ್ಯಾಸ’ ಎನ್ನುವ ನವೀನ್‌ಗೆ ಕಾರ್ಪೊರೇಟ್ ಸಿನಿಮಾ, ಜಾಹೀರಾತುಗಳ ಚಿತ್ರೀಕರಣ ಮಾಡಿದ ಅನುಭವವೂ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.