ಮಂಗಳವಾರ, ಜನವರಿ 21, 2020
28 °C
ಸೇವೆ ಮುಂದುವರಿಕೆಗೆ ಆಗ್ರಹಿಸಿ ಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆ

ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನ

ಬೆಳಗಾವಿ: ತಮ್ಮ ಸೇವೆಯನ್ನು ಮುಂದು­ವ­ರಿಸುವಂತೆ ಒತ್ತಾಯಿಸಿ ಇಲ್ಲಿನ ಮಜ­ಗಾಂವದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸುತ್ತಿದ್ದ ಮಹಾನಗರ ಪಾಲಿಕೆಯ ಗುತ್ತಿಗೆ ಪೌರಕಾರ್ಮಿಕರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿ­ಕೊಳ್ಳಲು ಯತ್ನಿಸಿದ ಘಟನೆ ನಡೆಯಿತು.ಕಸ ಹೊಡೆಯುವ ಕೆಲಸ ಮಾಡು­ತ್ತಿದ್ದ 55 ಗುತ್ತಿಗೆ ಪೌರ ಕಾರ್ಮಿಕರನ್ನು ಅಕ್ಟೋಬರ್‌ 22ರಿಂದ ಕೈಬಿಡಲಾಗಿತ್ತು. ಹೀಗಾಗಿ ತಮ್ಮನ್ನೇ ಕೆಲಸಕ್ಕೆ ತೆಗೆದು­ಕೊಳ್ಳಬೇಕು ಎಂದು ಕಾರ್ಮಿಕ ಇಲಾಖೆ ಕಚೇರಿ ಎದುರು ಬುಧವಾರವು ಧರಣಿ ಕುಳಿತಿದ್ದರು. ಬೇಡಿಕೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಚನ್ನವ್ವ ಹಾಗೂ ಯಲ್ಲವ್ವ ಎಂಬು­ವವರು ಸೇರಿದಂತೆ ನಾಲ್ವರು ಏಕಾಏಕಿ ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದು­ಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು. ತಕ್ಷಣವೇ ಮಧ್ಯಪ್ರವೇಶಿ­ಸಿದ ಪೊಲೀಸರು ಮುಂದಾಗಲಿದ್ದ ಅನಾ­ಹುತವನ್ನು ತಪ್ಪಿಸಿದರು. ನಾಲ್ವರನ್ನು ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.ಹಿನ್ನೆಲೆ: ನಗರದ ವಡಗಾವಿ, ಶಹಾಪುರ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಮಹಾನಗರ ಪಾಲಿಕೆಯು ಮೋಹನ್‌ ಎಂಬುವವರಿಗೆ ಗುತ್ತಿಗೆ ನೀಡಿತ್ತು. ಅವರ ಬಳಿ 55 ಕಾರ್ಮಿಕರು ಕಳೆದ ಎಂಟು– ಹತ್ತು ವರ್ಷಗಳಿಂದ ಕೆಲಸ ಮಾಡು­ತ್ತಿದ್ದರು. ಕಾರಣಾಂತರದಿಂದ ಇವರ ಗುತ್ತಿಗೆಯನ್ನು ರದ್ದುಗೊಳಿಸಿದ ಪಾಲಿ­ಕೆಯು, ಇಲ್ಲಿನ ಕೆಲಸವನ್ನು ವೈ.ಬಿ. ಗೊಲ್ಲರ ಎಂಬುವವರಿಗೆ ಎರಡು ತಿಂಗಳ ಹಿಂದೆ ಗುತ್ತಿಗೆ ನೀಡಿತ್ತು.ಗೊಲ್ಲರ ಅವರು ಈ ಹಿಂದಿನ ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿದ್ದ 55 ಕಾರ್ಮಿಕರನ್ನು ಕೈ ಬಿಟ್ಟು ಬೇರೆ­ಯವರನ್ನು ಕೆಲಸಕ್ಕೆ ನೇಮಿಸಿ­ಕೊಂಡಿ­ದ್ದರು. ಇದರಿಂದಾಗಿ ಕೆಲಸ ಕಳೆದು­ಕೊಂಡ ಕಾರ್ಮಿಕರು, ಗೊಲ್ಲರ ಅವರಿಗೆ ನೀಡಿದ ಗುತ್ತಿಗೆಯನ್ನು ರದ್ದುಗೊಳಿಸಿ ತಮ್ಮನ್ನೇ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂದು ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿದ್ದರು. ಸಹಾಯಕ ಕಾರ್ಮಿಕ ಆಯುಕ್ತ ಕೆ.ಜಿ. ಜಾನ್ಸನ್‌ ಅವರು ಸಂಧಾ­ನ­ಕಾರರಾಗಿ  ಮಾತುಕತೆ ನಡೆ­ಸುತ್ತಿದ್ದರು. ಪಾಲಿಕೆಯವರು ಹಳೆಯ ಕಾರ್ಮಿಕರನ್ನೇ ಮುಂದುವರಿಸಬೇಕು ಎಂಬ ಷರತ್ತನ್ನು ವಿಧಿಸದೇ ಗುತ್ತಿಗೆ ನೀಡಿರುವುದೇ ಸಮಸ್ಯೆ ಉಲ್ಭವಿಸಲು ಕಾರಣ ಎನ್ನಲಾಗಿದೆ.ಎರಡು ತಿಂಗಳಿನಿಂದ ಕೆಲಸ ಇಲ್ಲದೇ ಊಟಕ್ಕೆ ತೊಂದರೆಯಾಗುತ್ತಿದೆ. ನಮಗೆ ನ್ಯಾಯ ಸಿಗುವುದು ವಿಳಂಬ­ವಾಗುತ್ತಿದೆ ಎಂದು ಆಕ್ರೋಶಗೊಂಡ ಕಾರ್ಮಿಕರು ಸೀಮೆ ಎಣ್ಣೆ ಸುರಿದು­ಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು.ಬಳಿಕ ಉಪ ಕಾರ್ಮಿಕ ಆಯುಕ್ತ ಇ. ಲಕ್ಷ್ಮಪ್ಪ ಅವರು ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರೂ ಪ್ರಯೋಜನ­ವಾಗಿಲ್ಲ. ರಾತ್ರಿಯವರೆಗೂ ಕಾರ್ಮಿಕರ ಪ್ರತಿಭಟನೆ ಮುಂದುವರಿದಿತ್ತು.

ಪ್ರತಿಕ್ರಿಯಿಸಿ (+)