ಗುರುವಾರ , ಫೆಬ್ರವರಿ 25, 2021
19 °C
ಸುವರ್ಣಗ್ರಾಮ ಯೋಜನೆ ಮಂಜೂರಾಗಿ 2 ವರ್ಷ

ಸುಧಾರಿಸದ ಆದಿಜಾಂಬವರ ಬಡಾವಣೆ

ಮಹಾದೇವ್ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

ಸುಧಾರಿಸದ ಆದಿಜಾಂಬವರ ಬಡಾವಣೆ

ಸಂತೇಮರಹಳ್ಳಿ: ಗ್ರಾಮದ ಆದಿಜಾಂಬವರ ಬಡಾವಣೆಗೆ ಸುವರ್ಣಗ್ರಾಮ ಯೋಜನೆ ಮಂಜೂರಾಗಿ 2 ವರ್ಷ ಕಳೆದಿದೆ. ಆದರೂ ಇದುವರೆವಿಗೂ ಬಡಾವಣೆ ಸಂಪೂರ್ಣವಾಗಿ ಅಭಿವೃದ್ಧಿ ಕಂಡಿಲ್ಲ. ಕೇವಲ 2 ಬೀದಿಗಳಿಗೆ ಮಾತ್ರ ಸೀಮೆಂಟ್ ರಸ್ತೆ ನಿರ್ಮಿಸಲಾಗಿದೆ. ಉಳಿದ ರಸ್ತೆಗಳು ದುರಸ್ತಿ ಕಾಣದೇ ಹಾಳಾಗಿವೆ.

ರಸ್ತೆಯ ಮಗ್ಗುಲಲ್ಲಿ ಕಸದ ರಾಶಿಗಳಿಂದ ಅನೈರ್ಮಲ್ಯ ಉಂಟಾಗಿದೆ. ಬಹಳ ವರ್ಷಗಳ ಹಿಂದಿನ ಚರಂಡಿಗಳು ಸಂಪೂರ್ಣವಾಗಿ ಹಾಳಾಗಿವೆ. ದುರಸ್ತಿಗೊಳಿಸದ್ದರಿಂದ ಮನೆಗಳಿಂದ ತ್ಯಾಜ್ಯವಾದ ಕಲ್ಮಶ ನೀರು ನಿಲ್ಲುತ್ತಿದೆ. ಚರಂಡಿಯಲ್ಲಿ ಕಸ ಕಡ್ಡಿ, ಪ್ಲಾಸ್ಟಿಕ್‌ಗಳಿಂದ ಹೂಳು ತುಂಬಿಕೊಂಡಿದೆ. ತ್ಯಾಜ್ಯ ನೀರು ಸಮರ್ಪಕವಾಗಿ ಹರಿದು ಹೋಗುತ್ತಿಲ್ಲ. ಕಳೆ ಗಿಡಗಳು ಬೆಳೆದುಕೊಂಡಿವೆ. ಕತ್ತರಿಸಿ ಸ್ವಚ್ಛತೆ ಕಾಪಾಡದ ಕಾರಣ ದುರ್ವಾಸನೆ ಹರಡುತ್ತಿದ್ದು, ಇದರಿಂದ ಸೊಳ್ಳೆ ಕ್ರಿಮಿ ಕೀಟಗಳು ಆವಾಸ ಸ್ಥಾನ ಮಾಡಿಕೊಂಡಿವೆ. ಜತೆಗೆ ರೋಗ ರುಜಿನಗಳಿಗೂ ಕಾರಣವಾಗಿದೆ.ಚರಂಡಿಯ ಅವ್ಯವಸ್ಥೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಬಡಾವಣೆಯ ಸ್ವಚ್ಛತೆ ಕಾಪಾಡಿ ಎಂಬ ನಿವಾಸಿಗಳ ಮನವಿಗೆ ಯಾರೂ ಗಮನ ಹರಿಸಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.ಹೊಸ ಬಡಾವಣೆ ನಿರ್ಮಾಣಗೊಂಡು 15 ವರ್ಷ ಕಳೆದಿದೆ. ಇದುವರೆಗೂ ಚರಂಡಿ ನಿರ್ಮಿಸಿಲ್ಲ. ಪರಿಣಾಮವಾಗಿ ನಿವಾಸಿಗಳು ಮನೆಗಳ ಮುಂಭಾಗವೇ ತ್ಯಾಜ್ಯ ನೀರನ್ನು ಹರಿಸುತ್ತಿದ್ದಾರೆ. ಕೊಚ್ಚೆ ನೀರನ್ನೇ ತುಳಿದುಕೊಂಡು ನಿವಾಸಿಗಳು ಮನೆ ಸೇರಬೇಕಾಗಿದೆ. ಮಳೆಗಾಲದಲ್ಲಿ ಚರಂಡಿ ನೀರು ಮಿಶ್ರಣವಾಗಿ ರಸ್ತೆಯಲ್ಲಿ ಹರಿಯುತ್ತಿದೆ. ರಸ್ತೆಯನ್ನಾದರೂ ದುರಸ್ತಿಗೊಳಿಸಿ ಜನಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ನಿವಾಸಿಗಳ ಕೂಗಿಗೆ ಯಾರೂ ಗಮನ ಹರಿಸಿಲ್ಲ ಎಂದು ನಿವಾಸಿಗಳು ದೂರುತ್ತಾರೆ.ಗ್ರಾಮದ ಆದಿಜಾಂಬವರ ಬಡಾವಣೆಯ ಸ್ಥಿತಿ ಹದಗೆಟ್ಟಿದೆ. ಆದ್ದರಿಂದ ಸುವರ್ಣಗ್ರಾಮ ಯೋಜನೆಯಡಿಯಲ್ಲಿ ಚರಂಡಿ ಅಭಿವೃದ್ಧಿಪಡಿಸಿ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ನಿವಾಸಿಗಳಾದ ಮಹದೇವಸ್ವಾಮಿ, ಚಂದ್ರು ಒತ್ತಾಯಿಸಿದ್ದಾರೆ.***

ಸುವರ್ಣ ಗ್ರಾಮದ ಬಗ್ಗೆ ಮಾಹಿತಿ ಇಲ್ಲ. ಗ್ರಾಮದ ಬಡಾವಣೆಯ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಹೊಸದಾಗಿ ಚರಂಡಿ ನಿರ್ಮಿಸಲು ಯೋಜನೆ ರೂಪಿಸಿ ಕ್ರಮಕೈಗೊಳ್ಳಲಾಗುವುದು.

ಶ್ರುತಿ, ಗ್ರಾ.ಪಂ. ಕಾರ್ಯದರ್ಶಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.