ಬುಧವಾರ, ಏಪ್ರಿಲ್ 21, 2021
24 °C

ಸುನಾಮಿ: ನಲುಗಿದ ಜಪಾನ್,ನೂರಾರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಎಪಿ/ರಾಯಿಟರ್ಸ್‌): ಜಪಾನ್‌ನ ಈಶಾನ್ಯ ಭಾಗದ ಕಡಲಲ್ಲಿ ಸಂಭವಿಸಿದ ಭಾರಿ ಭೂಕಂಪ ಮತ್ತು ಅದರಿಂದ ಎದ್ದ ಅಬ್ಬರದ ಸುನಾಮಿ ಅಲೆಗೆ 360ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ.ಸಾವು- ನೋವಿನ ಪ್ರಮಾಣ ಇನ್ನೂ ಹೆಚ್ಚಿರಬಹುದು ಎಂದು ಶಂಕಿಸಲಾಗಿದ್ದು ವಿಶೇಷ ಕಾರ್ಯಪಡೆ ಮತ್ತು ರಕ್ಷಣಾ ಪಡೆಗಳ ಯೋಧರು ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಇದುವರೆಗೆ ಸೆಂಡಾಯ್ ನಗರದ ಕಡಲ ತೀರದಲ್ಲಿ 300 ಶವಗಳು ಪತ್ತೆಯಾಗಿವೆ.ಮಿಯಾಗಿ ರಾಜ್ಯದಲ್ಲಿ ಶುಕ್ರವಾರ ಬೆಳಿಗ್ಗೆ (ಅಂತರರಾಷ್ಟ್ರೀಯ ಕಾಲಮಾನ 11.16) ಸಂಭವಿಸಿದ ಪ್ರಬಲ ಭೂಕಂಪ ಮತ್ತು 10-13 ಮೀಟರ್ ಎತ್ತರಕ್ಕೆ ಎದ್ದ ಭಾರಿ ಗಾತ್ರದ ಸುನಾಮಿ ಅಲೆಗಳಿಗೆ ದೊಡ್ಡ ದೊಡ್ಡ ಕಟ್ಟಡಗಳು, ಹಡಗುಗಳು, ವಾಹನಗಳು ಮತ್ತು ಬೆಳೆದು ನಿಂತ ಬೆಳೆಗಳು ತರಗೆಲೆಗಳಂತೆ ಕೊಚ್ಚಿಕೊಂಡು ಹೋಗಿವೆ.ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆ 8.9ರಷ್ಟು ಇತ್ತು. 140 ವರ್ಷಗಳ ಇತಿಹಾಸದಲ್ಲಿ ಇಷ್ಟು ಪ್ರಬಲವಾದ ಭೂಕಂಪ ಜಪಾನ್‌ನಲ್ಲಿ ಎಂದೂ ಸಂಭವಿಸಿರಲಿಲ್ಲ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.ಎರಡು ಅಣು ವಿದ್ಯುತ್ ಸ್ಥಾವರಗಳಲ್ಲಿ ಭೂಕಂಪದ ನಂತರ ತೊಂದರೆ ಕಾಣಿಸಿಕೊಂಡಿದ್ದರಿಂದ ದೇಶದ ಅಣು ಸ್ಥಾವರಗಳಲ್ಲಿ ತುರ್ತು ಸ್ಥಿತಿಯನ್ನು ಘೋಷಿಸಿ, ಎಲ್ಲಾ ಸ್ಥಾವರಗಳನ್ನು ಕೂಡಲೇ ಸ್ಥಗಿತಗೊಳಿಸಲಾಗಿದೆ. ಯಾವುದೆ ಪರಮಾಣು ಘಟಕದಲ್ಲಿ ವಿಕಿರಣ ಸೋರಿಕೆ ಉಂಟಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶಾಂತಿ ಮಹಾಸಾಗರದ ಕಡಲ ತೀರದಲ್ಲಿ ಇರುವ ಮಿಯಾಗಿಯ ಒಂಗಾವಾ ಪರಮಾಣು ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿರುವದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ನಿವಾಸಿಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಭೂಕಂಪ ಮತ್ತು ಸುನಾಮಿ ಅಲೆಯ ಹೊಡೆತಕ್ಕೆ ಸಿಕ್ಕು ನೂರಾರು ಜನರು ಗಾಯಗೊಂಡಿದ್ದಾರೆ ಹಾಗೂ ಅನೇಕ ಜನರು ಕಾಣೆಯಾಗಿದ್ದಾರೆ. ಕಾಣೆಯಾದವರಲ್ಲಿ ಮಕ್ಕಳ ಸಂಖ್ಯೆಯೇ ಜಾಸ್ತಿ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಾಣೆಯಾಗಿರುವ ಮಕ್ಕಳು ಸಮುದ್ರ ಪಾಲಾಗಿರಬಹುದು ಎಂದು ಶಂಕಿಸಲಾಗಿದೆ.ಜಪಾನ್‌ನ ಈಶಾನ್ಯ ಭಾಗ ಮತ್ತು ಕಂಟೊ ಪ್ರದೇಶದಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿದೆ. ಫುಕುಶಿಮಾದ ಮಿನಾಮಿ ಸೋಮಾದ ಕಲ್ಯಾಣ ಕೇಂದ್ರದ ಕಟ್ಟಡ ಕುಸಿದಿದ್ದರಿಂದ ಆರು ಜನರು ಸತ್ತಿದ್ದಾರೆ.ಟೋಕಿಯೊದಲ್ಲಿ ಹೋಟೆಲ್‌ವೊಂದು ಕುಸಿದು ಬಿದ್ದಿದ್ದರಿಂದ 35 ಜನರಿಗೆ ಗಾಯಗಳಾಗಿದ್ದು ಇತರ ಕಡೆಗಳಲ್ಲಿ 15 ಮಂದಿ ಗಾಯಗೊಂಡಿದ್ದಾರೆ.ಈಶಾನ್ಯ ಭಾಗದ ಕಡಲ ತೀರದಲ್ಲಿ ಸುನಾಮಿ ಅಲೆ 10-13 ಮೀಟರ್ ಎತ್ತರಕ್ಕೆ ಚಿಮ್ಮಿ ಭಾರಿ ರಭಸದಲ್ಲಿ ದಡಕ್ಕೆ ನೀರು ನುಗ್ಗಿದ್ದರಿಂದ ಕಟ್ಟಡಗಳು, ವಾಹನಗಳು ಕೊಚ್ಚಿಕೊಂಡು ಹೋಗಿವೆ. ಇದರ ಜತೆಗೆ ಸಮುದ್ರದಲ್ಲಿದ್ದ ಹಡಗು, ದೋಣಿಗಳು ಸುನಾಮಿ ಅಲೆಯ ಹೊಡೆತಕ್ಕೆ ಸಿಕ್ಕು ಚೆಲ್ಲಾಪಿಲ್ಲಿಯಾಗಿವೆ. ನೂರು ಪ್ರಯಾಣಿಕರನ್ನು ಸಾಗಿಸುತ್ತಿದ್ದ ಹಡಗೊಂದು ಕೊಚ್ಚಿಕೊಂಡು ಹೋಗಿದ್ದು, ರೈಲೊಂದು ಹಳಿ ತಪ್ಪಿದೆ ಎಂದು ಜಪಾನ್‌ನ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.ರೈಲು ಸಂಚಾರ ಸ್ಥಗಿತ: ರಸ್ತೆ, ಇತರ ಮೂಲಸೌಕರ್ಯಗಳು, ಸೆಂಡಾಯ್ ವಿಮಾನ ನಿಲ್ದಾಣ ಜಲಾವೃತಗೊಂಡಿದೆ. ಪ್ರಮುಖ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದೇಶದಾದ್ಯಂತ ಬುಲೆಟ್ ರೈಲು ಸೇರಿದಂತೆ ಎಲ್ಲಾ ರೈಲುಗಳ ಸಂಚಾರವನ್ನು ಸ್ಥಗಿಗೊಳಿಸಲಾಗಿದೆ.ಟೋಕಿಯೊದಲ್ಲಿ ಸುಮಾರು 39 ಲಕ್ಷ ಮನೆಗಳ ವಿದ್ಯುತ್ ಸಂಪರ್ಕ ಕಡಿದುಹೋಗಿದ್ದು, ಜನರು ಪರದಾಡುತ್ತಿದ್ದಾರೆ. ಜತೆಗೆ ಮೊಬೈಲ್ ಫೋನ್‌ಗಳು ಸ್ಥಗಿತಗೊಂಡು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.ಗಾಬರಿಗೊಂಡಿರುವ ಜನರು ಕಟ್ಟಡಗಳ ಮೇಲ್ಭಾಗಕ್ಕೆ ತೆರಳಿ ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ. ಅನೇಕ ಕಟ್ಟಡಗಳಲ್ಲಿ ಮಹಿಳೆಯರು ಕಿಟಕಿಯ ಮೂಲಕ ಬಿಳಿ ವಸ್ತ್ರವನ್ನು ತೂರಿಸಿ ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾರೆ.ಹುಕೈಡೊ ದ್ವೀಪದ ಹಿರೂ ಮತ್ತು ಕುಶಿರೊ ನಗರಗಳಲ್ಲಿ ಎತ್ತರದ ಸುನಾಮಿ ಅಲೆಗಳು ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿವೆ.ತೈಲ ಸ್ಥಾವರಗಳಿಗೆ ಬೆಂಕಿ: ಟೋಕಿಯೊದ ಪೂರ್ವ ಭಾಗದ ಇಚಿಹರಾ, ಚಿಬಾದಲ್ಲಿ ತೈಲ ಸ್ಥಾವರಗಳು ಹೊತ್ತಿ ಉರಿಯುತ್ತಿದ್ದು ಭಾರಿ ಪ್ರಮಾಣದ ನಷ್ಟ ಉಂಟಾಗಿದೆ. ಭೂಮಿ ಕಂಪಿಸಿದ ರಭಸಕ್ಕೆ ಟೋಕಿಯೊ ಮತ್ತು ಇತರ ಕಡೆಗಳಲ್ಲಿ ಕಟ್ಟಡಗಳು ಅಲುಗಾಡಿದವು ಹಾಗೂ ಕೆಲವು ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.ವಿಶೇಷ ಕಾರ್ಯಪಡೆ: ಪರಿಹಾರ ಕಾರ್ಯಗಳಿಗಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಪ್ರಧಾನಿ ನಾವೊಟೊ ಕಾನ್ ತಿಳಿಸಿದ್ದಾರೆ. ತೊಂದರೆ ಒಳಗಾಗಿರುವ ಜನರನ್ನು ರಕ್ಷಿಸಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.