ಸೋಮವಾರ, ಮೇ 17, 2021
24 °C

ಸುರಂಗ ಮಾರ್ಗ ಉದ್ಘಾಟನೆಗೆ ಸಿದ್ಧ

ಪ್ರಜಾವಾಣಿ ವಾರ್ತೆ/ ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಇರುವ ರಾಜ್ಯ ಹೆದ್ದಾರಿಯ ಒಂದು ಬದಿಯಲ್ಲಿರುವ ಜಿಲ್ಲಾಸ್ಪತ್ರೆ ಹಾಗೂ ಮತ್ತೊಂದು ಬದಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ವಿಭಾಗವನ್ನು ಸಂಪರ್ಕಿಸುವ ಸುರಂಗ ಮಾರ್ಗ  ನಿರ್ಮಾಣ ಕಾಮಗಾರಿಯು ಅಂತಿಮ ಹಂತಕ್ಕೆ ತಲುಪಿದೆ.ಜಿಲ್ಲಾ ಆಸ್ಪತ್ರೆ ಹಾಗೂ ಅದರ ಎದುರಿಗಿದ್ದ ಮಹಿಳಾ ಮತ್ತು ಮಕ್ಕಳ ವಿಭಾಗದ ನಡುವೆ ರಾಜ್ಯ ಹೆದ್ದಾರಿ ಹಾದುಹೋಗಿದ್ದರಿಂದ ಇಲ್ಲಿ ನಡೆದಾಡುವ ರೋಗಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು. ದಿನ ಕಳೆದಂತೆ ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಗೂ ಪ್ರವಾಸಿಗರ ಆಗಮನ ಹೆಚ್ಚಾಗಿದ್ದರಿಂದ ಸಂಚಾರಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತ್ತು.ಇದರ ಹಿನ್ನೆಲೆಯಲ್ಲಿ ಸುರಂಗ ಮಾರ್ಗವೊಂದನ್ನು ನಿರ್ಮಿಸಿಕೊಡಬೇಕೆಂದು ಹಲವು ವರ್ಷಗಳಿಂದ ಸಾರ್ವಜನಿಕರು ಒತ್ತಾಯಿಸಿದ್ದರು. ಅದರಂತೆ ಸಾರ್ವಜನಿಕರ ಬೇಡಿಕೆ ಈಡೇರುವ ಕಾಲ ಈಗ ಸನ್ನಿಹವಾಗಿದೆ. ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯ ಶೇ 80ರಷ್ಟು ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಸುರಂಗ ಮಾರ್ಗ ಉದ್ಘಾಟನೆಗೊಳ್ಳಲಿದೆ.ಎರಡು ವರ್ಷದ ಹಿಂದೆ ಚಾಲನೆ

ಎರಡು ವರ್ಷಗಳ ಹಿಂದೆ ಮೈಸೂರು- ಮಡಿಕೇರಿ- ಸಂಪಾಜೆ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿಯನ್ನು ಕೆಆರ್‌ಡಿಸಿಎಲ್ ಸಂಸ್ಥೆಯು ಕೈಗೆತ್ತಿಕೊಂಡಿತ್ತು. ಆ ಸಂದರ್ಭದಲ್ಲಿ ಸುರಂಗ ಮಾರ್ಗವನ್ನು ನಿರ್ಮಿಸಬೇಕೆನ್ನುವ ಪ್ರಸ್ತಾವನೆ ಸಲ್ಲಿಕೆಯಾಯಿತು.ಇದರಂತೆ, ಸುರಂಗ ನಿರ್ಮಾಣ ಕಾಮಗಾರಿಯನ್ನು ಕೆಆರ್‌ಡಿಸಿಎಲ್ ಸಂಸ್ಥೆಯು ಪೂರ್ಣಗೊಳಿಸಿ ಕೊಟ್ಟಿತು. ಬಾಕಿ ಉಳಿದ ಕೆಲಸವನ್ನು ಅಂದಾಜು 92 ಲಕ್ಷಗಳ ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಆರೋಗ್ಯ ಇಲಾಖೆ ತೀರ್ಮಾನಿಸಿತು. ಕರ್ನಾಟಕ ರಾಜ್ಯ ಆರೋಗ್ಯ ಪದ್ಧತಿ ಸುಧಾರಣಾ ಯೋಜನೆಯ ಮೂಲಕ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು. ಇದುವರೆಗೆ ಸುಮಾರು 68 ಲಕ್ಷ ರೂಪಾಯಿಗಳ ಹಣ ಬಿಡುಗಡೆಯಾಗಿದೆ.ಬಹುತೇಕ ಕಾಮಗಾರಿಯು ಪೂರ್ಣಗೊಂಡಿದ್ದು, ಇನ್ನುಳಿದಿರುವ ಕೆಲಸವನ್ನು ಸದ್ಯದಲ್ಲಿಯೇ ಪೂರ್ಣಗೊಳಿಸಿ, ಸುರಂಗ ಮಾರ್ಗವನ್ನು ಉದ್ಘಾಟಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಮುಖ್ಯ ಎಂಜಿನಿಯರ್ ಪ್ರಭಾಕರ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.