ಬುಧವಾರ, ಮೇ 19, 2021
24 °C

ಸೂಚ್ಯಂಕ ಹೊಸ ದಾಖಲೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಮುಂಬರುವ 12ರಿಂದ 18 ತಿಂಗಳ ಅವಧಿಯಲ್ಲಿ ಗಮನಾರ್ಹ ಏರಿಕೆ ದಾಖಲಿಸಲಿದ್ದು 2012ರ  ಆಗಸ್ಟ್ ತಿಂಗಳ ಹೊತ್ತಿಗೆ 23 ಸಾವಿರದ ಗಡಿ ತಲುಪಬಹುದು ಎಂದು ರಿಲಯನ್ಸ್ ಮ್ಯೂಚುವಲ್ ಫಂಡ್ ಅಂದಾಜಿಸಿದೆ.ಷೇರು ಮಾರುಕಟ್ಟೆ ಮತ್ತು ವಹಿವಾಟಿಗೆ ಸಂಬಂಧಿಸಿದಂತೆ ಸ್ಥಳೀಯ ಮತ್ತು ಜಾಗತಿಕ ಪ್ರತಿಕೂಲತೆಗಳ ತೀಕ್ಷ್ಣತೆಯು ಮುಂದಿನ ಒಂದು ವರ್ಷಾವಧಿಯಲ್ಲಿ ಸಾಕಷ್ಟು ತಗ್ಗಲಿವೆ. ಜತೆಗೆ,  ಕೇಂದ್ರ ಸರ್ಕಾರವು ಜಾರಿಗೆ ತರಲಿರುವ ಹೊಸ ಆರ್ಥಿಕ ಸುಧಾರಣಾ  ಕ್ರಮಗಳು  ಉದ್ದಿಮೆ ಸಂಸ್ಥೆಗಳ ಮತ್ತು ಹೂಡಿಕೆದಾರರ ಉತ್ಸಾಹ ಹೆಚ್ಚಿಸಲಿವೆ ಎಂದೂ ಸಂಸ್ಥೆಯು ಸಿದ್ಧಪಡಿಸಿರುವ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.ಷೇರು ವಹಿವಾಟಿನಲ್ಲಿ ಸದ್ಯಕ್ಕೆ ಕಂಡು ಬರುತ್ತಿರುವ ಕಳವಳ ದೀರ್ಘಕಾಲ ಇರಲಾರದು. ಸದ್ಯದ ನಿರಾಶಾದಾಯಕ ಪರಿಸ್ಥಿತಿಯು ಮುಂದೆಯೂ ಇರಲಾರದು. ಉದ್ದಿಮೆ ಸಂಸ್ಥೆಗಳ ಗಳಿಕೆ ಮತ್ತು ಇತರ ಕಾರಣಗಳ ಪ್ರಭಾವದಿಂದ ಸಂವೇದಿ ಸೂಚ್ಯಂಕವು 2012ರ ಆಗಸ್ಟ್ ತಿಂಗಳ ಹೊತ್ತಿಗೆ ಸಾರ್ವಕಾಲಿಕ ದಾಖಲೆ  ತಲುಪಲಿದೆ. ಇದು 2008ರ ಜನವರಿ 10ರಂದು ಸೂಚ್ಯಂಕವು ತಲುಪಿದ್ದ 21,206.77 ಅಂಶಗಳಿಗಿಂತ ಸಾಕಷ್ಟು ಹೆಚ್ಚಿಗೆ ಇರಲಿದೆ.ಮಾರುಕಟ್ಟೆಯ ಮೂಲಾಧಾರಗಳು ಸದೃಢವಾಗಿದ್ದರೆ ಮತ್ತು ಕಾರ್ಪೊರೇಟ್ ಗಳಿಕೆಯು ಅತ್ಯುತ್ತಮ ಮಟ್ಟದಲ್ಲಿ ಇದ್ದರೆ, ಸೂಚ್ಯಂಕ 30 ಸಾವಿರದ ಗಡಿಯನ್ನೂ ದಾಟಬಹುದು ಎಂದೂ ರಿಲಯನ್ಸ್ ಮ್ಯೂಚುವಲ್ ಫಂಡ್ ನಿರೀಕ್ಷಿಸಿದೆ.ಅತ್ಯಂತ ಪ್ರತಿಕೂಲ ಪರಿಸ್ಥಿತಿ ಇದ್ದರೆ, ಸೂಚ್ಯಂಕವು 15,977ಕ್ಕೆ ಇಳಿಯಬಹುದು. ಸರಾಸರಿ ಮಟ್ಟವು 22,852 ಇರಬಹುದು ಎಂದೂ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.ಸದ್ಯಕ್ಕೆ ಮುಂಬೈ ಷೇರುಪೇಟೆಯ 30 ಪ್ರಮುಖ ಷೇರುಗಳ ಬೆಲೆ ಮಟ್ಟ ಪ್ರತಿನಿಧಿಸುವ ಸಂವೇದಿ ಸೂಚ್ಯಂಕವು 16 ಸಾವಿರದ ಗಡಿಯ ಆಚೆ ಈಚೆ ಹೊಯ್ದಾಡುತ್ತಿದೆ. ಒಂದು ವರ್ಷಾವಧಿಯಲ್ಲಿ  1900 ಅಂಶಗಳನ್ನು  (ಶೇ 10ರಷ್ಟು) ಕಳೆದುಕೊಂಡಿದೆ.ಅಮೆರಿಕ ಮತ್ತು ಯೂರೋಪ್ ಒಕ್ಕೂಟದಲ್ಲಿನ ಸಾಲದ ಬಿಕ್ಕಟ್ಟಿನ ಫಲವಾಗಿ ಷೇರುಪೇಟೆಯಲ್ಲಿ ಕಂಡು ಬರುತ್ತಿರುವ ಕುಸಿತವು ಹೂಡಿಕೆದಾರರು ಷೇರು ಖರೀದಿಗೆ ಅತ್ಯುತ್ತಮ ಅವಕಾಶ ಕಲ್ಪಿಸಿಕೊಡಲಿದೆ ಎಂದು `ರಿಲಯನ್ಸ್ ಎಂಎಫ್~ ಕಳೆದ ತಿಂಗಳು ಪ್ರಕಟಿಸಿದ್ದ ವರದಿಯಲ್ಲಿ ಅಭಿಪ್ರಾಯಪಟ್ಟಿತ್ತು.ಒತ್ತಡದಲ್ಲಿ ಷೇರುಪೇಟೆ: ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಮತ್ತು ಜಾಗತಿಕ ವಿದ್ಯಮಾನಗಳ ಕಾರಣಕ್ಕೆ ದೇಶಿ ಷೇರುಪೇಟೆ ತೀವ್ರ ಒತ್ತಡಕ್ಕೆ ಗುರಿಯಾಗಿದೆ. ಇದಕ್ಕೆ ಪೇಟೆಯು ಸಾಕಷ್ಟು ಬೆಲೆಯನ್ನೂ ತೆತ್ತಿದೆ. ಆದರೆ, ಈ ಪರಿಸ್ಥಿತಿ ಅಲ್ಪಾವಧಿಯಾಗಿದೆ. ಒಂದು ವರ್ಷಾವಧಿಯಲ್ಲಿ  ಈ ಪರಿಸ್ಥಿತಿ ಬದಲಾಗಲಿದೆ.2008ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಷೇರುಪೇಟೆಯಲ್ಲಿ ಕಂಡು ಬಂದಿದ್ದ  ತೀವ್ರತರಹದ ಆತಂಕಕಾರಿ ಪರಿಸ್ಥಿತಿ ಮತ್ತೆ ಕಂಡು ಬರಲಾರದು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.