ಶನಿವಾರ, ಮೇ 15, 2021
23 °C
ಗುರುಸಾಯಿದತ್, ಜಯರಾಮ್‌ಗೆ ಸೋಲು

ಸೆಮಿಫೈನಲ್‌ಗೆ ಸೈನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಕಾರ್ತ (ಪಿಟಿಐ/ಐಎಎನ್‌ಎಸ್): ಫಾರ್ಮ್‌ಗೆ ಮರಳಿದಂತೆ ಕಾಣುತ್ತಿರುವ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಇಂಡೊನೇಷ್ಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.ಇಸ್ಟೋರಾ ಗೆಲೋರಾ ಬಂಗ್ ಕರ್ನೊ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸೈನಾ 21-16, 21-19ರಲ್ಲಿ ಸ್ಪೇನ್‌ನ ಕರೊಲಿನಾ ಮರಿನ್ ಅವರನ್ನು ಪರಾಭವಗೊಳಿಸಿದರು. ಹೋದ ಬಾರಿ ಇಲ್ಲಿ ಚಾಂಪಿಯನ್ ಆಗಿದ್ದ ಸೈನಾ ಈ ಪಂದ್ಯದಲ್ಲಿ ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸಬೇಕಾಯಿತು.ವಿಶ್ವ ಎರಡನೇ ರ್‍ಯಾಂಕ್‌ನಲ್ಲಿರುವ ಭಾರತದ ಆಟಗಾರ್ತಿ ಈ ಗೆಲುವಿಗಾಗಿ 39 ನಿಮಿಷ ತೆಗೆದುಕೊಂಡರು. ಎರಡೂ ಗೇಮ್‌ಗಳು ನಿಕಟ ಪೈಪೋಟಿಯಿಂದ ಕೂಡಿದ್ದವು. ಮೊದಲ ಗೇಮ್ ಒಂದು ಹಂತದಲ್ಲಿ 12-12ರಲ್ಲಿ ಸಮಬಲವಾಗಿತ್ತು. ಆ ಬಳಿಕ ಸೈನಾ ಸಂಪೂರ್ಣ ಮೇಲುಗೈ ಸಾಧಿಸಿದರು. ಎರಡನೇ ಗೇಮ್‌ನಲ್ಲಿ ಸ್ಪೇನ್‌ನಆಟಗಾರ್ತಿ ಒಮ್ಮೆಲೇ 9-4ರಲ್ಲಿ ಮುನ್ನಡೆ ಸಾಧಿಸಿದರು. ಆದರೆ ಸೈನಾ ಬಲಿಷ್ಠ ಸ್ಮ್ಯಾಷ್‌ಗಳ ಮೂಲಕ 10-10 ಸಮಬಲಕ್ಕೆ ಕಾರಣರಾದರು. ಮತ್ತೆ ಮುನ್ನಡೆ ಕಂಡುಕೊಂಡ ಕರೊಲಿನಾ 19-15ರಲ್ಲಿ ಮುನ್ನಡೆದರು. ಈ ಗೇಮ್ ಗೆಲ್ಲಲು ಅವರಿಗೆ ಎರಡು ಪಾಯಿಂಟ್ ಅಗತ್ಯವಿತ್ತು. ಆದರೆ ಸೈನಾ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಸತತ ಆರು ಪಾಯಿಂಟ್ ಗೆದ್ದು ನಾಲ್ಕರ ಘಟ್ಟಕ್ಕೆ ಮುನ್ನಡೆದರು.ಸೈನಾ ಸೆಮಿಫೈನಲ್‌ನಲ್ಲಿ ವಿಶ್ವದ ಮೂರನೇ ರ್‍ಯಾಂಕ್‌ನ ಆಟಗಾರ್ತಿ ಜರ್ಮನಿಯ ಜೂಲಿಯಾನೆ ಶೆಂಕ್ ಎದುರು ಪೈಪೋಟಿ ನಡೆಸಲಿದ್ದಾರೆ. ಅವರ ಎದುರಿನ ಮುಖಾಮುಖಿಯಲ್ಲಿ ಸೈನಾ 8-3ರಲ್ಲಿ ಮೇಲುಗೈ ಹೊಂದಿದ್ದಾರೆ.ಆದರೆ ಪುರುಷರ ವಿಭಾಗದಲ್ಲಿ ಭಾರತದ ಹೋರಾಟ ಅಂತ್ಯಗೊಂಡಿತು. ಕಣದಲ್ಲಿದ್ದ ಆರ್‌ಎಂವಿ ಗುರುಸಾಯಿದತ್ ಹಾಗೂ ಅಜಯ್ ಜಯರಾಮ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡರು. ಗುರುಸಾಯಿದತ್ 21-19, 11-21, 10-21ರಲ್ಲಿ ಇಂಡೊನೇಷ್ಯಾದ ಟಾಮಿ ಸುಗಿಯಾರ್ತೊ ಎದುರು ಪರಾಭವಗೊಂಡರು. ಜಯರಾಮ್ 16-21, 15-21ರಲ್ಲಿ ಜರ್ಮನಿಯ ಮಾರ್ಸ್‌ ಜ್ವಿಬ್ಲರ್ ಎದುರು ಪರಾಭವಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.