ಮಂಗಳವಾರ, ಆಗಸ್ಟ್ 11, 2020
26 °C

ಸೇವೆಗೆ ತೆರಿಗೆಯ ಭಾರ

ವಿಶ್ವನಾಥ ಬಸವನಾಳಮಠ Updated:

ಅಕ್ಷರ ಗಾತ್ರ : | |

ಸೇವೆಗೆ ತೆರಿಗೆಯ ಭಾರ

ಮೂರನೇ ಶತಮಾನದ ಖ್ಯಾತ ಅರ್ಥಶಾಸ್ತ್ರಜ್ಞ ಚಾಣಕ್ಯ, ತೆರಿಗೆ ನೀತಿಯ ಬಗ್ಗೆ ಹೀಗೆ ಹೇಳಿದ್ದ;`ತೆರಿಗೆ ಎಂಬುದು ಜನರಿಗೆ ನೋವು ತರುವಂತಿರಬಾರದು. ತೆರಿಗೆ ನೀತಿ ರೂಪಿಸುವಾಗ ಪ್ರಜೆಗಳ ಭಾವನೆಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ದುಂಬಿಯೊಂದು ಹೂವಿನಿಂದ ತನಗೆ ಬೇಕಾದಷ್ಟೇ ಪ್ರಮಾಣದ ಮಧುವನ್ನು ಹೀರಿಕೊಳ್ಳುವ ಮೂಲಕ ಪರಸ್ಪರರ ಬದುಕಿಗೆ ಹೇಗೆ ಅವಕಾಶ ಕಲ್ಪಿಸಿಕೊಡುತ್ತದೆಯೋ ಅದೇ ರೀತಿ ತೆರಿಗೆಯಿರಬೇಕು~.ಕೇಂದ್ರದ ಮಾಜಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಅವರ ಆಪ್ತರು, ಅವರದೇ ಪಕ್ಷದ ಮಿತ್ರರು `ಚಾಣಕ್ಯ~ ಎಂದೇ ಬಹುಪರಾಕ್ ಹೇಳುತ್ತಾರೆ. ಅಂತಹ ಹಣಕಾಸು ತಜ್ಞ ಪ್ರಣವ್ ಮುಖರ್ಜಿ ಅವರು ಕಳೆದ ಮಾರ್ಚ್‌ನಲ್ಲಿ ಮಂಡಿಸಿದ 2012-13ನೇ ಸಾಲಿನ ಮುಂಗಡಪತ್ರದಲ್ಲಿ `ಸೇವಾ ತೆರಿಗೆ~ಗೆ ಹೊಸತೇ ಆದ ವ್ಯಾಖ್ಯಾನ ನೀಡುವ ಭರವಸೆಯ ಮಾತು ಆಡಿದ್ದರು. ಅದೆಂತಹ ವ್ಯಾಖ್ಯಾನ ಎನ್ನುವುದು ಈಗ ಪ್ರಜೆಗಳಿಗೂ ಅರ್ಥವಾಗಿದೆ.ಮುಖರ್ಜಿ, ಈವರೆಗೂ ಕೆಲವೇ ಸೇವೆಗಳಿಗೆ ಮೀಸಲಾಗಿದ್ದ ಸೇವಾ ತೆರಿಗೆಯನ್ನು ವಿಸ್ತರಿಸುವ ಹಾಗೂ ಶೇ 10ರಷ್ಟಿದ್ದ ತೆರಿಗೆ ಪ್ರಮಾಣವನ್ನು ಶೇ 12ಕ್ಕೇರಿಸುವುದಾಗಿಯೂ ಬಜೆಟ್ ಮಂಡನೆ ವೇಳೆಯೇ ಹೇಳಿದ್ದರು. ಅದಾದ ಮೂರು ತಿಂಗಳ ಬಳಿಕ ಸೇವಾ ತೆರಿಗೆಯ ಇನ್ನೊಂದು ಮುಖ ಇದೀಗ ಪರಿಚಯವಾಗಿದೆ.ಋಣಾತ್ಮಕ ಪಟ್ಟಿಯಲ್ಲಿರುವ 38 ಸೇವೆಗಳನ್ನು ಹೊರತುಪಡಿಸಿ ಉಳಿದ 119 ಸೇವೆಗಳನ್ನು ಧನಾತ್ಮಕ ಪಟ್ಟಿಯಲ್ಲಿ ಗುರುತಿಸಲಾಗಿದೆ. ಇವುಗಳ ಮೇಲೆ ಶೇ 12ರಷ್ಟು ತೆರಿಗೆ ವಿಧಿಸಲಾಗಿದೆ (ಜುಲೈ 1ರಿಂದ ಜಾರಿಯಾಗಿದೆ).ಕಳೆದ ಹಣಕಾಸು ವರ್ಷದಲ್ಲಿ ಸೇವಾ ತೆರಿಗೆಯಿಂದ ಸರ್ಕಾರದ ಬೊಕ್ಕಸಕ್ಕೆ 97 ಸಾವಿರ ಕೋಟಿ ರೂಪಾಯಿ ಹರಿದು ಬಂದಿತ್ತು. ಇದರಿಂದ ಉತ್ತೇಜಿತವಾದ ಸರ್ಕಾರ ಇನ್ನಷ್ಟು ಸೇವೆಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸುವ ಮೂಲಕ ಪ್ರಸಕ್ತ ಹಣಕಾಸು ವರ್ಷ 124 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿದೆ.ಉತ್ತಮ ಆಡಳಿತದ ಮೂಲಕ ಪ್ರಜೆಗಳಿಗೆ ಕ್ಷೇಮ-ನೆಮ್ಮದಿ ನೀಡುವುದನ್ನೇ ಮುಖ್ಯ ಧ್ಯೇಯವಾಗಿಸಿಕೊಂಡು  `ಅರ್ಥಶಾಸ್ತ್ರ~ ರಚಿಸಿದ ಆ ಕೌಟಿಲ್ಯನೆಲ್ಲಿ? ಜನಸಾಮಾನ್ಯರ ಬೆವರಿನ ಮೇಲೆ ಸಂಪನ್ಮೂಲದ ಸೌಧ ಕಟ್ಟಲು ಹವಣಿಸುತ್ತಿರುವ `ಆಮ್ ಆದ್ಮಿ ಪಕ್ಷ~ದ ಈ ಚಾಣಕ್ಯನೆಲ್ಲಿ? ಎಂದೇ ಪ್ರಶ್ನಿಸುವಂತಾಗಿದೆ.

ಯಾರಿಗೆಲ್ಲ ಹೊರೆ

ಜನಸಾಮಾನ್ಯರೇ ಹೆಚ್ಚಾಗಿ ಬಳಸುವ ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್, ಎಕ್ಸ್‌ಪ್ರೆಸ್ ಪಾರ್ಸೆಲ್ ಸರ್ವಿಸ್ ಶೇ 12ರಷ್ಟು ದುಬಾರಿಯಾಗಲಿವೆ.  ಕಲೆಯ ಉಳಿವು ಮತ್ತು  ಬದುಕಿಗಾಗಿ ಹೋರಾಡುತ್ತಿರುವ ವೃತ್ತಿ ರಂಗಭೂಮಿ ನಟರು ಮತ್ತು ಸೃಜನಶೀಲ ಕಲೆ ಸೃಷ್ಟಿಯ ಖುಷಿಯಲ್ಲಿ ತೊಡಗಿಸಿಕೊಂಡಿರುವ ಹವ್ಯಾಸಿ ರಂಗಭೂಮಿ ಕಲಾವಿದರು, ಇನ್ನೊಂದೆಡೆ ತೀವ್ರ ಸ್ಪರ್ಧೆ, ಹಗಲು-ರಾತ್ರಿ ಎನ್ನದೇ ತೊಡಗಿಸಿಕೊಳ್ಳಬೇಕಾದ ಒತ್ತಡದ ದಿನಚರಿಯ ಕಿರುತೆರೆ ಕಲಾವಿದರೂ ಈಗ  ತಮ್ಮ ನಟನೆಯನ್ನು `ಸೇವೆ~ ಎಂದು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತಾಗಿದೆ. ಜತೆಗೆ ಅದಕ್ಕಾಗಿ ರೂ. 100 ಸಂಭಾವನೆಗೆ ರೂ. 12ರ ಲೆಕ್ಕದಲ್ಲಿ ತೆರಿಗೆಯನ್ನೂ ಪಾವತಿಸಬೇಕಾಗಿದೆ.ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ಪ್ರತಿಭಾವಂತರಿಗೆ ಕಡ್ಡಾಯವಾಗಿರುವ ಜಿಮ್ಯೋಟ್ ಮತ್ತು ಜಿಆರ್‌ಇ ಪರೀಕ್ಷೆಗಳನ್ನು ನಡೆಸುವ ಸಂಸ್ಥೆಗಳೂ ಇದೀಗ ಸೇವಾ ತೆರಿಗೆಯ ಬಿಗಿಮುಷ್ಠಿಗೆ ಸಿಲುಕಿಕೊಂಡಿವೆ.ಅನಿವಾರ್ಯ-ಆದರೆ?

ಸರ್ಕಾರದ ಆದಾಯದ ಮೂಲಗಳಲ್ಲಿ ತೆರಿಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಜನರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ವೆಚ್ಚ ಹೆಚ್ಚಾದಂತೆ ಸರ್ಕಾರದ ಆದಾಯವೂ ಹೆಚ್ಚಬೇಕಾದದ್ದು ಅನಿವಾರ್ಯ. ಆದರೆ ಯಾವ ಪ್ರಮಾಣದಲ್ಲಿ ಹಾಗೂ ಯಾರ ಮೇಲೆ ಎಂಬುದು ಪ್ರಶ್ನೆ.ಬೆಳಿಗ್ಗೆ ಎದ್ದು ಹಲ್ಲುಜ್ಜುವ ಬ್ರಷ್ ಮತ್ತು ಪೇಸ್ಟ್‌ನಿಂದ ಆರಂಭವಾಗಿ ನಂತರ ಕೆಲಸಕ್ಕೆ ತೆರಳಿ, ಹತ್ತಾರು ಚಟುವಟಿಕೆಗಳಲ್ಲಿ ಭಾಗಿಯಾಗಿ     ಮನೆಗೆ ಬಂದು ನಿದ್ರಿಸುವ ಹಾಸಿಗೆವರೆಗೂ ಮುಂದುವರಿಯುತ್ತದೆ ಎಂದರೆ ತೆರಿಗೆಯ ವ್ಯಾಪ್ತಿ-ವಿಸ್ತಾರ ಎಷ್ಟು ಎಂಬುದು ಅರಿವಾಗುತ್ತದೆ.ಭವಿಷ್ಯದ ತೆರಿಗೆ

ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಉತ್ಪನ್ನಗಳಿಗಿಂತ ಸೇವೆಗೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಸೇವಾ ತೆರಿಗೆಯನ್ನು ಭವಿಷ್ಯದ ತೆರಿಗೆ ಎಂದೇ ಬಣ್ಣಿಸಲಾಗುತ್ತಿದ್ದು ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದನ್ನು ಜಾರಿಗೆ ತರಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಯುಪಿಎ ಸರ್ಕಾರವೂ ಸೇವಾ ತೆರಿಗೆ ಮೂಲಕ ಹೆಚ್ಚಿನ ಹಣ ಸಂಗ್ರಹಕ್ಕೆ ಆದ್ಯತೆ ಕೊಟ್ಟಿದೆ. ಸರ್ಕಾರದ ಆದಾಯ ಮೂಲಗಳು ಸೊರಗುತ್ತಿರುವುದೂ ಇಂಥ `ಹೆಚ್ಚುವರಿ~ ಪ್ರಯತ್ನಗಳಿಗೆ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ.ಸಾರ್ವಜನಿಕರು ಈಗಾಗಲೇ ನೀಡುತ್ತಿರುವ ತೆರಿಗೆಗೆ ತಕ್ಕಂತೆ ಅವರಿಗೆ ಸೇವೆ ದೊರಕುತ್ತಿದೆಯೇ ಎಂದು ಕೇಳಿಕೊಂಡರೆ ನಿರಾಶಾದಾಯಕ ಉತ್ತರವೇ ಸಿಗುತ್ತದೆ.ಉದಾಹರಣೆಗೆ; ಪ್ರತಿ ವಸ್ತು ಖರೀದಿಸಿದಾಗ ಮತ್ತು ಸೇವೆ ಬಳಸಿದಾಗ ವಿಧಿಸಲಾಗುವ ಶೈಕ್ಷಣಿಕ ಶುಲ್ಕ(ಸೆಸ್) ಹಾಗೂ ಪ್ರತಿ ವಾಹನ ರಸ್ತೆಗಿಳಿದಾಗ ಜನ ತೆರುವ ರಸ್ತೆ ತೆರಿಗೆಯಿಂದ ಎಂಥ ಸೇವೆ ಲಭ್ಯವಾಗುತ್ತಿದೆ? ಬಾಲವಾಡಿಯ ಶಿಕ್ಷಣಕ್ಕೇ ಲಕ್ಷ ಲಕ್ಷ ದೋಚುವ ಶಿಕ್ಷಣ ಸಂಸ್ಥೆಗಳು, ಹದಗೆಟ್ಟ ರಸ್ತೆಗಳು, ರಸ್ತೆ ತೆರಿಗೆ ಕಟ್ಟಿದರೂ ದುಬಾರಿ ಶುಲ್ಕ ತೆತ್ತು ವಾಹನ ಚಲಾಯಿಸಬೇಕಾದ ಟೋಲ್ ಬೂತ್‌ಗಳನ್ನು ಕಂಡಾಗ ನಮ್ಮನ್ನಾಳುವವರು ನಡೆಸುತ್ತಿರುವ  ಶೋಷಣೆ ಯಾವ ರೀತಿಯದು ಎಂಬುದು ಸ್ಪಷ್ಟವಾಗುತ್ತದೆ.ತೆರಿಗೆ ಸಂಗ್ರಹದಲ್ಲಿ ವಿದೇಶದಲ್ಲಿನ ಕ್ರಮ ಅನುಸರಿಸುವ ನಮ್ಮ ಸರ್ಕಾರಗಳಿಗೆ ಅಲ್ಲಿನ ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಸಮಾಜದ ಕೊನೆಯ ಪ್ರಜೆಗೂ ಲಭ್ಯವಿರುವ ಉತ್ಕೃಷ್ಟ ದರ್ಜೆಯ ಮೂಲಸೌಲಭ್ಯ ಗಮನಕ್ಕೇ ಬರುವುದಿಲ್ಲ.ಸಾಮಾನ್ಯನಿಗೆ ಬರೆ

ಅಂಚೆ ಕಚೇರಿ ಸೇವೆಗಳು ಈಗಾಗಲೇ ಖಾಸಗಿ ಕೊರಿಯರ್ ಕಂಪೆನಿಗಳ ತೀವ್ರ ಪ್ರತಿಸ್ಪರ್ಧೆ ಎದುರಿಸುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಸ್ಪೀಡ್ ಪೋಸ್ಟ್ ಹಾಗೂ ಪಾರ್ಸೆಲ್‌ನಂತಹ ಸೇವೆಗಳಿಗೆ ವಿಧಿಸಲಾಗುತ್ತಿರುವ ತೆರಿಗೆ ಜನಸಾಮಾನ್ಯರಿಗೆ ಎಳೆದಿರುವ ಬರೆ ಎಂತಲೇ ಹೇಳಬಹುದು. ಅಲ್ಲದೇ ತೀವ್ರ ಪೈಪೋಟಿ ಎದುರಿಸಲಾರದೇ ದಿನೇ ದಿನೇ ಸೊರಗುತ್ತಿರುವ ಅಂಚೆ ಕಚೇರಿಯ ಆದಾಯಕ್ಕೂ ಇದು ಮರ್ಮಾಘಾತ ನೀಡಿದರೆ ಅಚ್ಚರಿಯಿಲ್ಲ.`ಕಲೆ~ಯನ್ನೂ ಸರ್ಕಾರ `ಸರ್ವಿಸ್~ ಎಂದು ಪರಿಗಣಿಸಿರುವುದು ಕಲಾವಿದರು `ಮೂಗಿನ ಮೇಲೆ ಬೆರಳಿಡುವಂತೆ~ ಮಾಡಿದೆ. ಸೃಜನಶೀಲ ಕಲೆಗಳಲ್ಲೊಂದಾದ `ನಟನೆ~ಯನ್ನು ಅರ್ಥ ಮಾಡಿಕೊಳ್ಳಲಾರದ ಸರ್ಕಾರ ರಂಗಭೂಮಿ ಹಾಗೂ ಕಿರುತೆರೆ ಕಲಾವಿದರ ಆದಾಯಕ್ಕೂ ಸೇವಾ ತೆರಿಗೆ ಹೆಸರಿನಲ್ಲಿ ಕತ್ತರಿ ಪ್ರಯೋಗಿಸಿದೆ.

 

ಕಲೆಯ ಮೇಲಿನ ಪ್ರೀತಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕೆಲ ಬಾರಿ ಕಲಾವಿದರು ಉಚಿತ ಪ್ರದರ್ಶನ ನೀಡಿದ ಉದಾಹರಣೆಗಳೂ ಇವೆ. ಅಸ್ಥಿತ್ವಕ್ಕಾಗಿ ಹೆಣಗುತ್ತಿರುವ ರಂಗಭೂಮಿ ಹಾಗೂ ಕಿರುತೆರೆ ಕಲಾವಿದರ ಪಾಲಿಗೆ ಸೇವಾ ತೆರಿಗೆ ಎಂಬುದು ಹಿರಿಯ ಕಲಾವಿದ ಅಶೋಕ್ ಅವರು ಹೇಳುವಂತೆ ಒಂದು ಬಗೆಯಲ್ಲಿ ಕರಾಳ ಕಾನೂನೇ ಸರಿ.ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವವರು ಕಡ್ಡಾಯವಾಗಿ ಜಿಮ್ಯೋಟ್(ಜಿಎಂಎಟಿ) ಮತ್ತು ಜಿಆರ್‌ಇ ಪರೀಕ್ಷೆಗಳನ್ನು ಎದುರಿಸಲೇಬೇಕು. ಈಗ ಈ ಪರೀಕ್ಷೆಗಳನ್ನೂ ಸೇವಾ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದು ಪ್ರತ್ಯಕವಾಗಿ ಈ ಪರೀಕ್ಷಾ ಕೇಂದ್ರಗಳಿಗೆ, ಪರೋಕ್ಷವಾಗಿ ವಿದ್ಯಾರ್ಥಿಗಳಿಗೆ `ಹೊರೆ~ ಹೊರಿಸುವ ಕ್ರಮವೇ ಆಗಿದೆ.ಜಿಆರ್‌ಇ ಮತ್ತು ಜಿಮ್ಯಾಟ್ ಪರೀಕ್ಷೆಗಳು, ಅದರ ಸಿದ್ಧತೆಗಾಗಿ ಖರೀದಿಸಬೇಕಾದ ಪುಸ್ತಕಗಳು ಕೊಂಚ ದುಬಾರಿಯವು. ಜತೆಗೆ ಈಗ ಸೇವಾ ತೆರಿಗೆಯ ಹೊರೆಯೂ ಸೇರಿಕೊಂಡಿದೆ.ಇಲ್ಲಿ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಲ್ಲಿ ಬಹುಪಾಲು ಮಂದಿ ಮಧ್ಯಮ ವರ್ಗದವರು ಎಂಬುದು ಗಮನಾರ್ಹ. ಪರೀಕ್ಷಾ ಶುಲ್ಕ, ಪುಸ್ತಕ ಖರೀದಿ ಖರ್ಚಿನ ಜತೆಗೆ ಸೇವಾ ತೆರಿಗೆಯ ಭಾರವೂ ಮಧ್ಯಮ ವರ್ಗವನ್ನು ಇನ್ನಷ್ಟು ಹೈರಾಣಾಗಿಸಲಿದೆ. ಅಲ್ಲದೇ, ಆಸ್ಪತ್ರೆ ನೀಡುವ ಉಪಚಾರ ಹಾಗೂ ಸಾರ್ವಜನಿಕ ಸಾರಿಗೆಯೂ ಸೇವಾ ತೆರಿಗೆ ವ್ಯಾಪ್ತಿಗೆ ಬಂದಿದ್ದು, ಇವುಗಳ ಶುಲ್ಕದಲ್ಲೂ ಏರಿಕೆ ಆಗುವುದರಿಂದ ಜನಸಾಮಾನ್ಯರಿಗೆ ಇದು ಹೆಚ್ಚುವರಿ ಭಾರವೇ ಆಗಲಿದೆ.ಸೇವೆ ಒದಗಿಸುವವರಿಗೆ ಸೇವಾ ತೆರಿಗೆ ವಿಧಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡರೂ ಅಂತಿಮವಾಗಿ ಅದೆಲ್ಲದರ ಹೊರೆ ಗ್ರಾಹಕರ ಮೇಲೆಯೇ ಬೀಳುತ್ತದೆ. ಈಗಾಗಲೇ ಎಲ್ಲ ಬಗೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರಿಗೆ ನಿತ್ಯದ ಬದುಕು ಸಾಗಿಸುವುದೇ ಕಷ್ಟ ಎನಿಸುವಂತಿದೆ. ಈಗ `ಸಾಮಾನ್ಯರ ಬದುಕು~ ಶೇ 12ರಷ್ಟು ತುಟ್ಟಿಯಾಗಲಿದೆ.ಋಣಾತ್ಮಕ ಪಟ್ಟಿಯಲ್ಲಿರುವ ಮೀಟರ್ ಹೊಂದಿದ ಟ್ಯಾಕ್ಸಿ, ಆಟೊ ರಿಕ್ಷಾ, ಬಾಜಿ, ಜೂಜು, ಲಾಟರಿ, ಮನರಂಜನಾ ತಾಣಗಳಿಗೆ ಪ್ರವೇಶ ಶುಲ್ಕ, ಪ್ರಯಾಣಿಕರ ಹಾಗೂ ಸರಕು ಸಾಗಣೆ, ವಿದ್ಯುತ್ ಉಪಕರಣಗಳ ಸಾಗಣೆ ಸೇರಿದಂತೆ ಇತರೆ 38 ಸೇವೆಗಳಿಗೆ ಸೇವಾ ತೆರಿಗೆಯಿಂದ ವಿನಾಯಿತಿ ಇದೆ. ಆದರೆ ಈ ಸೇವೆಗಳಿಗೆ ಅನೇಕ ಷರತ್ತುಗಳನ್ನು ವಿಧಿಸಲಾಗಿದೆ.  ಆ ಷರತ್ತುಗಳನ್ನು ಮೀರಿದರೆ `ಸೇವಾ ತೆರಿಗೆ~   ತೆರಲೇಬೇಕಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.