ಭಾನುವಾರ, ಏಪ್ರಿಲ್ 11, 2021
32 °C

ಸೈಕಲ್ ಪೋಲೊ ಆಟ; ರೋಚಕ ರಸದೂಟ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಸೈಕಲ್ ಪೋಲೊ ಆಟ; ರೋಚಕ ರಸದೂಟ

ಮೈಸೂರಿನ ವಿಲೇಜ್ ಹಾಸ್ಟೆಲ್ ಮೈದಾನದಲ್ಲಿ ವೇಗವಾಗಿ `ಚಕ್ಕರ್~ ಹಾಕುತ್ತಿದ್ದ ಬೈಸಿಕಲ್‌ಗಳು. ಅವುಗಳ ಮೇಲಿದ್ದ ಹುಡುಗರು ಒಂದು ಕೈಯಲ್ಲಿ ಸೈಕಲ್ ನಿಯಂತ್ರಿಸುತ್ತಿದ್ದರೆ, ಇನ್ನೊಂದು ಕೈಯಲ್ಲಿದ್ದ ಮ್ಯಾಲೆಟ್ (ಸ್ಟಿಕ್) ನೆಲದ ಮೇಲೆ ಉರುಳುತ್ತಿದ್ದ ಚೆಂಡನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನ ನಡೆಸಿತ್ತು.ಹೌದು; ಇದು ಸೈಕಲ್ ಪೋಲೊ ಆಟದ ರೋಮಾಂಚಕಾರಿ ದೃಶ್ಯ. ಅಪಾಯಕಾರಿ ಸಾಹಸ ಕ್ರೀಡೆಯಾಗಿರುವ ಸೈಕಲ್ ಪೋಲೊಗೆ ಈಗ `ಅರಮನೆ ನಗರಿ~ಯೇ ರಾಜಧಾನಿ.ರಾಜ, ಮಹಾರಾಜರ ಕಾಲದಲ್ಲಿ ಕುದುರೆಯ ಮೇಲೆ ಕುಳಿತು ಆಡುತ್ತಿದ್ದ ಪೋಲೊದ ಮುಂದುವರಿದ ಅವತಾರವೇ ಸೈಕಲ್ ಪೋಲೊ. ಇಲ್ಲಿ ಕುದುರೆಯ ಬದಲಿಗೆ ಬೈಸಿಕಲ್ ಬಳಕೆಯಾಗುತ್ತದೆ. ಆಗಿನ ಕಾಲದಲ್ಲಿ ರಾಜಮನೆತನಗಳಿಗೆ ಮೀಸಲಾಗಿದ್ದ ಈ ಕ್ರೀಡೆ ಈಗ ಬಡಕುಟುಂಬದ ಮಕ್ಕಳ ಕೈಗೂ ಎಟುಕುತ್ತಿದೆ. ರಾಜ್ಯದ ಬೆಳಗಾವಿ, ಕೋಲಾರ, ಬಾಗಲಕೋಟೆ, ಧಾರವಾಡ, ದಾವಣಗೆರೆ, ಮೈಸೂರಿನಲ್ಲಿ ಕೆಲವು ವರ್ಷಗಳಿಂದ ಈ ಆಟ ಪ್ರವರ್ಧಮಾನಕ್ಕೆ ಬರುತ್ತಿದೆ.ಮೈಸೂರಿನಲ್ಲಿ ಈಗ ಜೂನಿಯರ್ ಬಾಲಕ ಮತ್ತು ಬಾಲಕಿಯರ ತಂಡಗಳು ಮತ್ತು ಪುರುಷ ಹಾಗೂ ಮಹಿಳಾ ತಂಡಗಳು ಇವೆ.  ದಸರಾ ಮಹೋತ್ಸವದ ಸಾಹಸ ಕ್ರೀಡಾ ವಿಭಾಗದಲ್ಲಿ ಸೈಕಲ್ ಪೋಲೊ ನಡೆಯುತ್ತದೆ. ಮಾನಸಗಂಗೋತ್ರಿಯ ವಿಲೇಜ್ ಹಾಸ್ಟೆಲ್ ಮೈದಾನದಲ್ಲಿ ಆಟಗಾರರು ಅಭ್ಯಾಸ ನಡೆಸುತ್ತಾರೆ. ಇಲ್ಲಿ ಸೈಕಲ್ ಪೋಲೊ ಜನಪ್ರಿಯವಾಗಲು ಮೂಲತಃ ಧಾರವಾಡದವರಾದ ವಿಜಯಲಕ್ಷ್ಮೀ ಪಾಟೀಲ ಮತ್ತು ಅರುಣಕುಮಾರ್ ಪಾಟೀಲ ದಂಪತಿ ಕಾರಣ. ಅರುಣ ಪಾಟೀಲರು ಸದ್ಯ ಕೇರಳದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಜಿಮ್ನಾಸ್ಟಿಕ್ಸ್ ತರಬೇತುದಾರರಾಗಿದ್ದಾರೆ.ಸಾಗಿ ಬಂದ ಹಾದಿ: ಇತಿಹಾಸದ ಪುಟಗಳನ್ನು ತಿರುವಿದರೆ ರಾಜಸ್ತಾನದಲ್ಲಿ ಆನೆ ಪೋಲೊ, ಉಳಿದ ರಾಜ್ಯಗಳಲ್ಲಿ ಕುದುರೆ ಪೋಲೊಗಳು ನಡೆಯುತ್ತಿರುವ ಕುರಿತು ಸಾಕಷ್ಟು ಮಾಹಿತಿ ಸಿಗುತ್ತದೆ. ರಾಜ ಪರಿವರದವರು ಈ ಕ್ರೀಡೆಯನ್ನು ಆಡುತ್ತಿದ್ದರು. ಕೆಲವು ದೇಶಗಳಲ್ಲಿ  ಕೊಳಗಳು, ನದಿಗಳಲ್ಲಿ ಕಯಾಕಿಂಗ್ ಪೋಲೊ ಆಡುತ್ತಿದ್ದರು.ನಂತರದ ದಿನಗಳಲ್ಲಿ ಸೈಕಲ್ ಮತ್ತು ಮೋಟಾರ್ ಸೈಕಲ್ ಮೂಲಕ ಆಡುವ ರೂಢಿ ಬೆಳೆಯಿತು. ಬೈಸಿಕಲ್‌ಗಳು ಸರ್ವೇಸಾಮಾನ್ಯವಾಗಿ ಸಿಗುವುದರಿಂದ ಆಟ ಹೆಚ್ಚು ಜನಪ್ರಿಯವಾಯಿತು. ಆದರೆ ಭಾರತದಲ್ಲಿ ಇದುವರೆಗೂ ಈ ಆಟ ಇನ್ನೂ ಹೆಚ್ಚು ಪ್ರಚಾರ ಪಡೆದಿಲ್ಲ. ಆದರೆ ಜಾಗತಿಕ ಮಟ್ಟದಲ್ಲಿ ಭಾರತದ ಸಾಧನೆ ದೊಡ್ಡದು.ವಿಶ್ವ ಸೈಕಲ್ ಪೋಲೊ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದೆ. ಅಮೆರಿಕದ ರಿಚ್‌ಲ್ಯಾಂಡ್‌ನಲ್ಲಿ 1994ರಲ್ಲಿ ನಡೆದ ಮೊಟ್ಟಮೊದಲ ವಿಶ್ವ ಸೈಕಲ್ ಪೋಲೊ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದ ಭಾರತ, 1999ರಲ್ಲಿ ಕೆನಡಾದಲ್ಲಿ,  2000ದಲ್ಲಿ ದೆಹಲಿಯಲ್ಲಿ, 2001ರಲ್ಲಿ ಲಂಡನ್‌ನಲ್ಲಿ ಟೂರ್ನಿ ನಡೆದಾಗ ಸತತವಾಗಿ ಸ್ವರ್ಣ ಸಂಭ್ರಮ ಆಚರಿಸಿತ್ತು. 2002ರಲ್ಲಿ ಪ್ಯಾರಿಸ್‌ನಲ್ಲಿ ನಡೆದಾಗ ಕಂಚಿನ ಪದಕ ಪಡೆದಿದ್ದ ಭಾರತ, 2004ರಲ್ಲಿ ಕೆನಡಾದಲ್ಲಿ ಮತ್ತೊಂದು ಕಂಚಿನ ಸಾಧನೆ ಮಾಡಿತ್ತು.ಇಷ್ಟೆಲ್ಲ ಸಾಧನೆಯ ನಂತರವೂ ಸರಿಯಾದ ಉತ್ತೇಜನ ಸಿಗದೇ ಆಟ ಸೊರಗಿತ್ತು. ಆದರೆ ಭಾರತೀಯ ಸೈಕಲ್ ಪೋಲೊ ಫೆಡರೇಷನ್ 30 ರಾಜ್ಯಗಳ ತಂಡಗಳಿಗೆ ಮಾನ್ಯತೆ ನೀಡಿವೆ. ಜೋಧಪುರದಲ್ಲಿ 2011ರಲ್ಲಿ ಪ್ರಥಮ ಏಷ್ಯನ್ ಸೈಕಲ್ ಪೋಲೊ ಚಾಂಪಿಯನ್‌ಷಿಪ್ ನಡೆದಾಗ ಭಾರತ ಪ್ರಶಸ್ತಿ ಗೆದ್ದಿತ್ತು. ಪಾಕಿಸ್ತಾನ ರನ್ನರ್ಸ್ ಅಪ್ ಆಗಿತ್ತು.ಕೇರಳ, ಮಹಾರಾಷ್ಟ್ರ, ಛತ್ತೀಸಗಡ್, ಜಾರ್ಖಂಡ್, ಮಧ್ಯಪ್ರದೇಶ, ದೆಹಲಿ, ಆಂಧ್ರಪ್ರದೇಶಗಳಲ್ಲಿ ಈ ಆಟ ಹೆಚ್ಚು ಜನಪ್ರಿಯವಾಗಿದೆ. ಕರ್ನಾಟಕದಲ್ಲಿ ಈಗ ಸ್ವಲ್ಪಮಟ್ಟಿಗೆ ಬೆಳೆಯುತ್ತಿದೆ. ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ, ಭಾರತೀಯ ಒಲಿಂಪಿಕ್ ಸಂಸ್ಥೆ (ಐಓಎ) ಈ ಕ್ರೀಡೆಗೆ ಮಾನ್ಯತೆ ನೀಡಿವೆ. ನಿಯಮಗಳ ಚೌಕಟ್ಟು: 150 ಮೀಟರ್ ಉದ್ದ ಮತ್ತು 100 ಮೀಟರ್ ಅಗಲವಿರುವ ಮೈದಾನದಲ್ಲಿ ಈ ಆಟ ನಡೆಸಲಾಗುತ್ತದೆ. ಸಬ್ ಜೂನಿಯರ್ ಮತ್ತು ಮಹಿಳಾ ವಿಭಾಗದ ಪಂದ್ಯಗಳಿಗೆ 120 ಮೀಟರ್ ಉದ್ದ ಮತ್ತು 80 ಮೀಟರ್ ಅಗಲದ ಮೈದಾನ ಇರುತ್ತದೆ. ಹಾಕಿ ಮತ್ತು ಫುಟ್‌ಬಾಲ್ ಕ್ರೀಡೆಗಳಲ್ಲಿ ಇರುವಂತೆ ಎರಡು ಬದಿಯಲ್ಲಿ ಒಂದೊಂದು ಗೋಲುಪೆಟ್ಟಿಗೆ ಇರುತ್ತದೆ.ಈ ಕ್ರೀಡೆಯ ಒಂದು ಪಂದ್ಯವನ್ನ್ನು ನಾಲ್ಕು ಚಕ್ಕರ್(ಸುತ್ತು)ಗಳಾಗಿ  ವಿಂಗಡಿಸಲಾಗಿದೆ. ಪ್ರತಿಯೊಂದು ಚಕ್ಕರ್ 7.5 ನಿಮಿಷ ಅವಧಿಯದ್ದಾಗಿರುತ್ತದೆ. ಸೀನಿಯರ್ ವಿಭಾಗದ ಫೈನಲ್ ಪಂದ್ಯದಲ್ಲಿ ಐದು ಚಕ್ಕರ್ ಆಡಿಸಲಾಗುತ್ತದೆ.ಒಂದು ತಂಡದಲ್ಲಿ ನಾಲ್ಕು ಜನ ಆಟಗಾರರು ಮತ್ತು ನಾಲ್ಕು ಜನ ಕಾಯ್ದಿಟ್ಟ ಆಟಗಾರರು ಇರುತ್ತಾರೆ. ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಿಭಾಗಗಳ  ಪುರುಷ ಮತ್ತು ಮಹಿಳಾ ವಿಭಾಗಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಬಳಸುವ ಸೈಕಲ್ ಯಾವುದೇ ಕಂಪೆನಿಯದ್ದಾದರೂ ಇರಬಹುದು. ಅಳತೆಗೆ ನಿರ್ಬಂಧವಿಲ್ಲ. ಆದರೆ ಸೈಕಲ್‌ಗೆ ಮಟ್‌ಗಾರ್ಡ್, ಬೆಲ್, ಸ್ಟ್ಯಾಂಡ್, ಕ್ಯಾರಿಯರ್ ಮತ್ತು ಗೆಯರ್‌ಗಳು ಇರಬಾರದು.ಈ ಆಟದಲ್ಲಿ ಬಳಸಲಾಗುವ ಮ್ಯಾಲೆಟ್ ಅಂದರೆ ಸ್ಟಿಕ್ ಬಿದಿರಿನಿಂದ ತಯಾರಿಸಲಾಗಿರುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗ ಫೈಬರ್‌ನಿಂದ ಮಾಡಿದ ಸ್ಟಿಕ್‌ಗಳು ಬಳಕೆಯಾಗುತ್ತಿವೆ. ನೇರವಾದ ಬೆತ್ತದ ಕೆಳತುದಿಯಲ್ಲಿ ಸುತ್ತಿಗೆ ಮಾದರಿಯಲ್ಲಿ ಕಟ್ಟಿಗೆಯ ಗೋಲವನ್ನು ಜೋಡಿಸಲಾಗಿರುತ್ತದೆ. ಅದರ ಮೂಲಕವೇ ಚೆಂಡನ್ನು ಹೊಡೆಯಬೇಕು. ಸೈಕಲ್ ಎತ್ತರಕ್ಕೆ ತಕ್ಕಂತೆ ಮ್ಯಾಲೆಟ್‌ನ ಅಳತೆಯೂ ಇರುತ್ತದೆ. ಹಲವು ವರ್ಷಗಳ ಹಿಂದೆ ಬಿದಿರಿನಿಂದ ಮಾಡಿದ ಚೆಂಡನ್ನು ಉಪಯೋಗಿಸಲಾಗುತ್ತಿತ್ತು. ನಂತರ ಸುರಕ್ಷತೆಯ ದೃಷ್ಟಿಯಿಂದ ಟೆನಿಸ್ ಬಾಲ್ ಬಳಸಲಾಗುತ್ತಿದೆ. ಇದೀಗ ಕಾಸ್ಕೋ ಇಂಟರ್‌ನ್ಯಾಷನಲ್ ಸಂಸ್ಥೆಯು ಸೈಕಲ್ ಪೋಲೊಗಾಗಿಯೇ ಚೆಂಡನ್ನು ತಯಾರಿಸುತ್ತಿದ್ದು, 85 ರಿಂದ 90 ಗ್ರಾಂ ತೂಕ, 24 ಸೆಂಟಿಮೀಟರ್ ಸುತ್ತಳತೆ ಮತ್ತು 39 ಇಂಚುಗಳವರೆಗೆ ಪುಟಿಯುವ ಸಾಮರ್ಥ್ಯ ಹೊಂದಿದೆ. ಆಟಗಾರರು ಹೆಡ್‌ಗಾರ್ಡ್ (ಹೆಲ್ಮೆಟ್)ಮತ್ತು ಕಾಲುಗಳಿಗೆ ಪ್ಯಾಡ್‌ಗಳನ್ನು ಹಾಕಿಕೊಳ್ಳುವುದು ಕಡ್ಡಾಯ. ಆದರೆ ಇವು ಸ್ಪಲ್ಪ ದುಬಾರಿಯಾಗಿರುವುದರಿಂದ ಸ್ಥಳೀಯ ಮಟ್ಟದ ಪಂದ್ಯಗಳಲ್ಲಿ ಬಳಕೆ ಕಡಿಮೆ.ನೋಡಲು ಎಷ್ಟು ರೋಮಾಂಚಕಾರಿಯೋ, ಆಡಲು ಅಷ್ಟೇ ಅಪಾಯಕಾರಿ ಆಟ ಇದು. ವೇಗವಾಗಿ ಸೈಕಲ್ ಪೆಡಲ್ ತುಳಿಯುತ್ತ ಎದುರಾಳಿಯ ಹಿಡಿತದಿಂದ ಚೆಂಡನ್ನು ಕಸಿದು ಗೋಲುಪೆಟ್ಟಿಗೆ ಸೇರಿಸಲು ಎಲ್ಲರನ್ನೂ ಮೀರಿಸಿ ಸಾಗುವ ಆಟಗಾರರನ್ನು ವೀಕ್ಷಿಸುವಾಗ ಮೈನವಿರೇಳುತ್ತದೆ. ಅದನ್ನು ನೋಡಿಯೇ ಅನುಭವಿಸಬೇಕು.  

 

  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.