ಗುರುವಾರ , ಮೇ 6, 2021
27 °C

ಸೋದರನ ವಿವಾಹವೇ ಕೊನೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ತಾಲ್ಲೂಕಿನ ಗೋಪಾಲ ಪುರ ಗ್ರಾಮದಲ್ಲಿ ಈಗ ನೀರವ ಮೌನ.. ಕೆಲ ದಿನಗಳ ಹಿಂದೆ ಸ್ವಗ್ರಾಮಕ್ಕೆ ಬಂದು ಸಹೋದರನ ಮದುವೆಯಲ್ಲಿ ಸಂಭ್ರಮದಿಂದ ಭಾಗವಹಿಸಿ, ದೇಶ ಸೇವೆಗೆ ತೆರಳಿದ್ದ ಯೋಧ ರಾಜಶೇಖರ್ ಸಾವಿನ ಸುದ್ದಿಯಿಂದ ಊರಿನ ಜನರು ದಿಗ್ಭ್ರಾಂತಗೊಂಡಿದ್ದಾರೆ.  ಗ್ರಾಮದಲ್ಲಿ ಈಗ ನೀರವ ಮೌನ ಆವರಿಸಿದೆ.ತಾಲ್ಲೂಕಿನ ಗೋಪಾಲಪುರ ಗ್ರಾಮದ ನಿವಾಸಿ ಸಿಆರ್‌ಪಿಎಫ್ (ಕೇಂದ್ರೀಯ ಮೀಸಲು ಪೊಲೀಸ್ ಪಡೆ) ಯೋಧ ಜಿ.ಎಸ್. ರಾಜಶೇಖರ್ ಅವರು ಉತ್ತರಪ್ರದೇಶದ ಲಖನೌದಲ್ಲಿ ಸಂಭವಿಸಿರುವ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗೋಪಾಲಪುರ ಗ್ರಾಮದ ನಿವಾಸಿ ಜಿ.ಎಸ್. ಶಾಂತಪ್ಪ ಮತ್ತು ಪಾರ್ವತಮ್ಮ ದಂಪತಿಯ ಪುತ್ರನಾದ ರಾಜಶೇಖರ್ ಅವರು ಕಳೆದ ಶುಕ್ರವಾರ ಲಖನೌದಲ್ಲಿ ಕರ್ತವ್ಯಕ್ಕೆಂದು ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ರಾಜಶೇಖರ್ ಅವರನ್ನು ಲಖನೌದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.ಹುಟ್ಟಿದ ಊರಿನಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿ, ಗುಂಡ್ಲುಪೇಟೆ ಪಟ್ಟಣದ ಶ್ರೀ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಪೂರೈಸಿದ್ದರು. 1999ರಲ್ಲಿ ಸಾಮಾನ್ಯ ಕರ್ತವ್ಯದ ಯೋಧನಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸೇರಿದ್ದ ರಾಜಶೇಖರ್ ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ 2 ವರ್ಷಗಳಿಂದ ಲಖನೌದಲ್ಲಿ ಕರ್ತವ್ಯದಲ್ಲಿದ್ದರು.ಎರಡು ವರ್ಷಗಳ ಹಿಂದೆ ತಾಲ್ಲೂಕಿನ ಬಾಚಹಳ್ಳಿ ಗ್ರಾಮದ ಶ್ವೇತಾ ಎಂಬುವರನ್ನು ಮದುವೆಯಾಗಿದ್ದರು. ಜೂನ್ 4ರಂದು ಸಹೋದರನ ವಿವಾಹಕ್ಕಾಗಿ ಸ್ವಗ್ರಾಮಕ್ಕೆ ಬಂದಿದ್ದರು. ಕಳೆದ ವಾರವಷ್ಟೇ ರಜೆ ಮುಗಿಸಿ ಕರ್ತವ್ಯಕ್ಕೆ ತೆರಳಿದ್ದರು. `ಸ್ನೇಹಮಯ ವ್ಯಕ್ತಿಯಾಗಿದ್ದ ರಾಜಶೇಖರ್ ಅವರು ಕರ್ತವ್ಯದ ಬಿಡುವಿನ ಅವಧಿಯಲ್ಲಿ ಊರಿಗೆ ಬಂದಾಗ ಗ್ರಾಮದ ಜನರನ್ನೆಲ್ಲ ಮಾತನಾಡಿಸುತ್ತಿದ್ದರು' ಎಂದು ಗ್ರಾಮಸ್ಥರು ಸ್ಮರಿಸುತ್ತಾರೆ.ಸ್ವಗ್ರಾಮಕ್ಕೆ ಮೃತದೇಹ ಇಂದು

ರಾಜಶೇಖರ್ ಮೃತದೇಹವನ್ನು ಜೂನ್ 24ರಂದು ಸ್ವಗ್ರಾಮ ಗೋಪಾಲಪುರಕ್ಕೆ ತರಲಾಗುತ್ತಿದೆ. ಜೂನ್ 24ರಂದು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಮೃತದೇಹ ಆಗಮಿಸಲಿದೆ. ಬೆಂಗಳೂರಿನಿಂದ ಗುಂಡ್ಲುಪೇಟೆಗೆ ವಾಹನದಲ್ಲಿ ಮಧ್ಯಾಹ್ನ 1ಗಂಟೆಗೆ ತರಲಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.