ಸೋನಾಲ್ ಇಷ್ಟಗಳು...

7

ಸೋನಾಲ್ ಇಷ್ಟಗಳು...

Published:
Updated:
ಸೋನಾಲ್ ಇಷ್ಟಗಳು...

ಬಿಲ್ಲಿನಂಥ ಕಾಯ. ಮತ್ತೇರಿಸುವ ಪ್ರಾಯ. ಬಾಣದಂಥ ನೋಟ. ಐದು ಅಡಿ ಆರು ಅಂಗುಲ ಎತ್ತರವಿರುವ ಈಕೆ ಮೋಹಕ ಚೆಲುವಿನ ಒಡತಿ. ನೀಳಕಾಯದ ಈಕೆಯ ಚಿತ್ತ ಸಹಜವಾಗಿಯೇ ರ‌್ಯಾಂಪ್‌ನತ್ತ ಹರಿಯಿತು. ಹವ್ಯಾಸಕ್ಕೆಂದು ಆರಂಭಿಸಿದ ಮಾಡೆಲಿಂಗ್ ನಂಟು ಈಕೆಯನ್ನು ಬಾಲಿವುಡ್ ಅಂಗಳಕ್ಕೆ ತಂದು ನಿಲ್ಲಿಸಿತು. ನಟಿಸಿದ ಮೊದಲ ಚಿತ್ರದಲ್ಲೇ ನಾಯಕನ ಜತೆ ಲಿಪ್‌ಲಾಕ್ ಮಾಡಿ ಪಡ್ಡೆಗಳ ನಿದ್ದೆಕದ್ದ ಹುಡುಗಿಯ ಹೆಸರು ಸೋನಾಲ್ ಚೌಹಾಣ್.

ಚೊಚ್ಚಿಲ ಚಿತ್ರ `ಜನ್ನತ್'ನಲ್ಲಿ ಕಿಸ್ಸರ್‌ಬಾಯ್ ಇಮ್ರಾನ್ ಹಶ್ಮಿ ಜತೆ ಲಿಪ್‌ಲಾಕ್ ಮಾಡಿದ್ದ ನಟಿ ಸೋನಾಲ್ ಚೌಹಾಣ್, ಆನಂತರ ತೆರೆಕಂಡ `3ಜಿ' ಸಿನಿಮಾದಲ್ಲಿ ನಟ ನೀಲ್‌ನಿತಿನ್ ಮುಖೇಶ್ ಅವರೊಂದಿಗೆ ತೆರೆಯ ಮೇಲೆ ಮುತ್ತಿನ ಮಳೆಯನ್ನೇ ಸುರಿಸಿದ್ದರು. ಬಾಲಿವುಡ್ ಜತೆಗೆ ಟಾಲಿವುಡ್ ಚಿತ್ರಗಳಿಗೂ ಬಣ್ಣ ಹಚ್ಚಿರುವ ಸೋನಾಲ್ ಕನ್ನಡದ `ಚೆಲುವೆಯೇ ನಿನ್ನೇ ನೋಡಲು' ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿದ್ದರು.ಭಾನುವಾರ ನಡೆದ ಕಿಂಗ್‌ಫಿಷರ್ ಡರ್ಬಿಯ `ಪ್ರೀ-ಡರ್ಬಿ ಪಾರ್ಟಿ'ಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದ ಅವರು `ಮೆಟ್ರೊ'ದೊಂದಿಗೆ ತಮ್ಮ ಬಣ್ಣದ ಬದುಕಿನ ಕನಸುಗಳನ್ನು ಹಂಚಿಕೊಂಡರು.`ಕುದುರೆ ರೇಸ್‌ಗಳ ಮೇಲೆ ನನಗೆ ಮೊದಲಿನಿಂದಲೂ ಒಲವು. ಎಲ್ಲೇ ರೇಸ್ ನಡೆದರೂ ಬಿಡುವು ಮಾಡಿಕೊಂಡು ಹೋಗುವುದು ನನ್ನ ಇಷ್ಟದ ಕೆಲಸಗಳಲ್ಲಿ ಒಂದು. ದೇಶದಲ್ಲಿ ನಡೆವ ಶ್ರೀಮಂತ ರೇಸ್‌ಗಳಲ್ಲಿ ಕಿಂಗ್‌ಫಿಷರ್ ಡರ್ಬಿಯೂ ಒಂದು. ಈ ಡರ್ಬಿಯ ಒಂದು ಭಾಗ ನಾನೂ ಆಗಿರುವುದು ತುಂಬಾ ಖುಷಿ ನೀಡಿದೆ. ಕುದುರೆ ರೇಸ್‌ಗಳಲ್ಲಿ ಮೋಜು-ಮಸ್ತಿ, ರೋಚಕತೆ ಎಲ್ಲವೂ ಇರುತ್ತದೆ. ನನ್ನೊಳಗಿನ ರೇಸ್ ಗೀಳು ಮುಂದಿನ ವರ್ಷವೂ ಬೆಂಗಳೂರಿಗೆ ಬರುವಷ್ಟು ಪ್ರೇರಣೆ ನೀಡಿದೆ' ಎನ್ನುತ್ತಾರೆ ಅವರು. `ಜನ್ನತ್' ಸಿನಿಮಾ ಚಿತ್ರೀಕರಣದಲ್ಲಿ ಆದ ನೆನಪುಗಳ ಬಗ್ಗೆ ಕೇಳಿದರೆ ಇಂದಿಗೂ ಪುಳಕಗೊಳ್ಳುವ ಸೋನಾಲ್ ಆ ಮಧುರ ನೆನಪುಗಳನ್ನು ಖುಷಿಯಿಂದ ಹೇಳಿಕೊಳ್ಳುವುದು ಹೀಗೆ: “ನನ್ನ ಮೊದಲ ಹಿಂದಿ ಸಿನಿಮಾ `ಜನ್ನತ್' ಚಿತ್ರದ ಬಗ್ಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ತುಂಬ ಮೆಚ್ಚುಗೆ ವ್ಯಕ್ತವಾಯಿತು. ಈ ಚಿತ್ರದಲ್ಲಿ ನನ್ನ ಅಭಿನಯ ನೋಡಿದ ವೀಕ್ಷಕರು ಮೆಚ್ಚಿಕೊಂಡರು. ಮುಂದೆಯೂ `ಜನ್ನತ್' ಸಿನಿಮಾದಲ್ಲಿ ನಿರ್ವಹಿಸಿದಂತಹ ಪಾತ್ರದಲ್ಲಿ ತೆರೆದುಕೊಳ್ಳುವ ಬಯಕೆಯಂತೂ ನನಗೆ ಇದ್ದೇ ಇದೆ”.“ಇಮ್ರಾನ್ ಹಶ್ಮಿ ಅದ್ಭುತ ನಟ. `ಜನ್ನತ್' ಸಿನಿಮಾದಲ್ಲಿ ಆತನೊಂದಿಗೆ ಸಿಕ್ಕ ಒಡನಾಟದ ನೆನಪು ಅವಿಸ್ಮರಣೀಯ. ಅವಕಾಶ ಸಿಕ್ಕರೆ ಹಶ್ಮಿ ಜತೆ ಮತ್ತೊಮ್ಮೆ ಖಂಡಿತ ನಟಿಸುತ್ತೇನೆ” ಎಂದು ಹಶ್ಮಿ ಜಪ ಮಾಡುತ್ತಾರೆ ಸೋನಾಲ್. ಸುಂದರವಾಗಿ ಕಾಣುವ ವಸ್ತ್ರಗಳನ್ನು ಧರಿಸುವುದೇ ತಮ್ಮ ಫ್ಯಾಷನ್ ಮಂತ್ರ ಎನ್ನುವ ಸೋನಾಲ್ ಇವತ್ತಿನವರೆಗೂ ಡಯೆಟ್ ಮಾಡುವ ಸಾಹಸಕ್ಕೆ ಕೈಹಾಕಿಲ್ಲವಂತೆ. ಮನಸ್ಸು ಬಯಸಿದ್ದೆಲ್ಲವನ್ನೂ ಚೆನ್ನಾಗಿ ತಿನ್ನುವ ಅವರು ಆನಂತರ ಜಿಮ್‌ನಲ್ಲಿ ಬೆವರಿಳಿಸಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾರಂತೆ.ಇಲ್ಲಿನ ಹವಾಗುಣವನ್ನು ಆಸ್ವಾದಿಸುವ ಸೋನಾಲ್ ಇಷ್ಟಪಡುವ ನಗರಿಗಳಲ್ಲಿ ಬೆಂಗಳೂರು ಕೂಡ ಒಂದು. ಕಿಂಗ್‌ಫಿಷರ್ ಡರ್ಬಿ ಕಾರಣದಿಂದಾಗಿ ಇಲ್ಲಿಗೆ ಬರುವ ಅವಕಾಶ ಸಿಕ್ಕಿದ್ದನ್ನು ಅವರು ಖುಷಿಯಿಂದ ನೆನಪಿಸಿಕೊಳ್ಳುತ್ತಾರೆ. ಇಂಥದ್ದೊಂದು ಒಳ್ಳೆಯ ಕಾರಣ ಸಿಗುತ್ತಿದ್ದರೆ ಆಗಾಗ ಬೆಂಗಳೂರಿಗೆ ಬರುತ್ತಿರುತ್ತೇನೆ ಎಂಬುದು ಅವರು ನೀಡುವ ವಿವರಣೆ. “ಶಿವಣ್ಣನ ಜತೆ `ಚೆಲುವೆಯೇ ನಿನ್ನೇ ನೋಡಲು' ಚಿತ್ರ ಜೀವನದಲ್ಲಿ ಮರೆಯಲಾಗದಂಥ ಅನುಭವ ಕಟ್ಟಿಕೊಟ್ಟಿದೆ. ಪ್ರಪಂಚದ ಏಳು ಅದ್ಭುತಗಳನ್ನು ಏಕಕಾಲಕ್ಕೆ ನೋಡಿದ ಅನುಭವನ್ನಂತೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿ ಹಾಗೆಯೇ. ಕನ್ನಡ ಚಿತ್ರಗಳನ್ನು ನಾನು ಇಷ್ಟಪಡುತ್ತೇನೆ. ಉತ್ತಮ ಕಥೆ, ಒಳ್ಳೆ ಬ್ಯಾನರ್ ಸಿಕ್ಕರೆ ಕನ್ನಡ ಚಿತ್ರಗಳಲ್ಲಿ ಖಂಡಿತವಾಗಿಯೂ ನಟಿಸುತ್ತೇನೆ” ಎನ್ನುವ ಸೋನಾಲ್ ಕೈಯಲ್ಲಿ ಈಗ ಎರಡು ಬಾಲಿವುಡ್ ಚಿತ್ರಗಳಿವೆಯಂತೆ.     

                       

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry