ಸೋಮವಾರ, ಮೇ 10, 2021
25 °C

ಸ್ಥಳಾಂತರಕ್ಕೆ ಕಾದಿರುವ ನೆರೆಪೀಡಿತ ಗ್ರಾಮಸ್ಥರು

ಪ್ರಜಾವಾಣಿ ವಾರ್ತೆ/ಶರತ್ ಹೆಗ್ಡೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಬಾಧಿಸಿದ ನೆರೆ, ಸ್ಥಳಾಂತರಗೊಳ್ಳದ ಬದುಕು, ಅತಂತ್ರ ಸ್ಥಿತಿಯ ಜೀವನ ತಾಲ್ಲೂಕಿನ ಹಿರೇಹಳ್ಳ ಯೋಜನಾ ಪ್ರದೇಶದ ನಾಲ್ಕು ಗ್ರಾಮಗಳ ನಾಗರಿಕರನ್ನು ಹಿಂಡಿ ಹಿಪ್ಪೆಯಾಗಿಸಿದೆ.ತಾಲ್ಲೂಕಿನ ಮುದ್ಲಾಪುರ, ವೀರಾಪುರ, ಮುತ್ತಾಳ ಮತ್ತು ಶಿರೂರು ಗ್ರಾಮಗಳ ಜನರು ಇದೇ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.ಹಿರೇಹಳ್ಳ ಯೋಜನೆಯ ಮುಳುಗಡೆ ಪ್ರದೇಶದ ಗ್ರಾಮಗಳಿವು. ಪ್ರತಿ ಗ್ರಾಮದಲ್ಲಿ ಸುಮಾರು 5,00ರಿಂದ 2,000 ಮಂದಿ ಇದ್ದಾರೆ. ಯೋಜನೆ ಪ್ರಾರಂಭ ಆದ ದಿನದಿಂದಲೂ ಇವರ ಬದುಕು ಅಡಕತ್ತರಿಯಲ್ಲಿ ಸಿಲುಕಿದೆ. 2010ರಲ್ಲಿ ಬಾಧಿಸಿದ ನೆರೆ ಗ್ರಾಮಗಳ ಬದುಕನ್ನು ಮತ್ತಷ್ಟು ಅಸಹನೀಯವಾಗಿಸಿತು.ಕೆಲವು ಚಿತ್ರಗಳು: ಮುದ್ಲಾಪುರ ಗ್ರಾಮ ಹಿರೇಹಳ್ಳ ಅಣೆಕಟ್ಟೆಯ ಗೇಟು ಇರುವ ಸ್ಥಳ. ವೀರಪ್ಪ ದೊಡ್ಡಮನಿ ಅವರ ಮನೆಯೊಳಗೆ ಹೊಕ್ಕು ನೋಡಿದರೆ, ಸೂರಿಲ್ಲದ ಗೋಡೆಗಳ ಮಧ್ಯೆ ಅವರ ಹರೆಯದ ಮಗಳು ರೊಟ್ಟಿ ತಟ್ಟುತ್ತಿದ್ದಳು. ಮಳೆ ಬಂದರೆ ಅಂದಿನ ಅಡುಗೆಯೂ ಇಲ್ಲ.`ಅಣೆಕಟ್ಟೆ ತುಂಬಿದರೆ ಮನೆಯ ನೆಲದಲ್ಲಿ ನೀರು ಜಿನುಗುತ್ತದೆ. ಹೊಸ ಸೂರು ಮಾಡಿಕೊಳ್ಳುವ ಸಾಮರ್ಥ್ಯ ನನ್ನಲ್ಲಿಲ್ಲ' ಎಂದು ಕೊರಗಿದರು ವೀರಪ್ಪ. ಪಕ್ಕದಲ್ಲಿರುವ ಉಡಚವ್ವ ಅವರ ಮನೆಗೆ ಭೇಟಿ ನೀಡಿದರೂ ಇದೇ ಚಿತ್ರ.ಮುದ್ಲಾಪುರ, ವೀರಾಪುರ, ಮುತ್ತಾಳ ಮತ್ತು ಶಿರೂರು ನಾಗರಿಕರಿಗೆ ಮುತ್ತಾಳು ಗ್ರಾಮದ ಸಮೀಪ ಹಿರೇಹಳ್ಳ ಅಣೆಕಟ್ಟೆಯ ಶೂನ್ಯಭಾಗದಲ್ಲಿ (ಝೀರೋ ಪಾಯಿಂಟ್) 55 ಎಕರೆ ಪ್ರದೇಶದಲ್ಲಿ ಪರ್ಯಾಯ ವಸತಿ ನಿವೇಶನಗಳನ್ನು ಗುರುತಿಸಲಾಯಿತು. ಆದರೆ, ಅದಿನ್ನೂ ಫಲಾನುಭವಿಗಳ ಕೈಸೇರಿಲ್ಲ. ಕೊಟ್ಟ ಹಕ್ಕುಪತ್ರದಲ್ಲಿ ದೋಷವಿದೆ ಎಂದು ಹೇಳಿ ಅವುಗಳನ್ನು ವಾಪಸ್ ಪಡೆಯಲಾಯಿತು.ಇದೇ ವಿಷಯ ಮುಂದಿಟ್ಟುಕೊಂಡು ಗ್ರಾಮಸ್ಥರು ಹಲವಾರು ಬಾರಿ ಮುನಿರಾಬಾದ್‌ನ ಜಲಸಂಪನ್ಮೂಲ ಇಲಾಖೆ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.ಇದೇ ಯೋಜನೆಯ ಸಂತ್ರಸ್ತರಾದ ನರೇಗಲ್ ಗ್ರಾಮಸ್ಥರಿಗೆ ಅಲ್ಲಿಂದ 2 ಕಿಮೀ ದೂರದಲ್ಲಿ ಹೊಸ ಮನೆಗಳನ್ನು ಕಟ್ಟಿಕೊಡಲಾಯಿತು. ಆದರೆ, ತೀರಾ ದುರ್ಬಲವಾಗಿ ಕಟ್ಟಿರುವ ಈ ಮನೆಗಳಲ್ಲಿ ವಾಸಿಸಲು ಅಸಾಧ್ಯ. ಹಾಗಾಗಿ ನಾವ್ಯಾರೂ ಅಲ್ಲಿಗೆ ಹೋಗಿಲ್ಲ ಎಂದು ಗ್ರಾಮಸ್ಥ  ಬಸವರಾಜ ಯಲಬುರ್ಗಿ ಹೇಳಿದರು.ಈಗ ಏನಾಗಿದೆ?: 2005ರಲ್ಲಿ ಹಿರೇಹಳ್ಳ ಯೋಜನಾ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಯಿತು. ಅಂದು ರೂ 30ರಿಂದ 40 ಸಾವಿರ ಪರಿಹಾರಧನ 2010ರಲ್ಲಿ ಫಲಾನುಭವಿಗಳ ಕೈಸೇರಿತು. ಪ್ರತಿವರ್ಷ ಬಾಧಿಸುವ ಪ್ರವಾಹ, ಉಕ್ಕುವ ಒಸರು. ಮತ್ತದೇ ಸಮೀಕ್ಷೆ, ಪರಿಹಾರ ವಿತರಣೆ ಎಂಬ ನಿರಂತರ ಪ್ರಹಸನಗಳು ನಡೆಯುತ್ತವೆ ಎನ್ನುತ್ತಾರೆ ಮಾದನೂರು ಗ್ರಾಮ ಪಂಚಾಯ್ತಿ ಸದಸ್ಯ ವೀರಪ್ಪ ಹೊಸಮನಿ.

ಬೇಡಿಕೆ ಏನು?: ನಮ್ಮನ್ನು ಸ್ಥಳಾಂತರಗೊಳಿಸಿ ಹಕ್ಕುಪತ್ರ ಕೊಡಿಸಿ. ಮನೆಕಟ್ಟಲು ನೆರವು ನೀಡಿ ಎನ್ನುತ್ತಾರೆ ವೀರಪ್ಪ ದೊಡ್ಡಮನಿ ಮತ್ತು ಮಾಯಮ್ಮ ದೇವಿ ಮಹಿಳಾ ಸಂಘದ ಅಧ್ಯಕ್ಷೆ ಕಳಕವ್ವ.ನಾವು ರೈತಾಪಿ ಮಂದಿ. ಎಲ್ಲರಿಗೂ ಏಕರೂಪದ ವಿಶಾಲ ನಿವೇಶನ ನೀಡಿ ಎನ್ನುತ್ತಾರೆ ಹಿರೇಬಿಡನಾಳ್ ಗ್ರಾಮ ಪಂಚಾಯ್ತಿ ಸದಸ್ಯ, ಮುತ್ತಾಳು ಗ್ರಾಮಸ್ಥ ಮೈಲಾರಪ್ಪ.ಹಕ್ಕುಪತ್ರ, ಸ್ಥಳಾಂತರ ಸಂಬಂಧಿತ ಗೊಂದಲಗಳ ಬಗ್ಗೆ ಶೀಘ್ರವೇ ಪರಿಶೀಲಿಸಿ ಪರಿಹಾರ ಕಲ್ಪಿಸಲು ಪ್ರಯತ್ನಿಸುವುದಾಗಿ ತಹಶೀಲ್ದಾರ್ ತಿಪ್ಪೇರುದ್ರಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.