ಭಾನುವಾರ, ಜನವರಿ 17, 2021
22 °C
ನಿನ್ನಂಥ ಅಪ್ಪ ಇಲ್ಲ

ಸ್ವತಂತ್ರ ಮನೋಭಾವ ರೂಪಿಸಿದ ಅಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವತಂತ್ರ ಮನೋಭಾವ ರೂಪಿಸಿದ ಅಪ್ಪ

ಭಾರತದ ಸೃಜನಶೀಲ ಕಾದಂಬರಿಕಾರರ ಪೈಕಿ ಶಶಿ ದೇಶಪಾಂಡೆ ಪ್ರಮುಖರು. 1990ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 2009ರಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾದವರು. ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಹತ್ಯೆ ಖಂಡಿಸಿ ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೋರಾಟದ ಜೊತೆ ಕೈಜೋಡಿಸಿದವರು.

ಅಕಾಡೆಮಿ ಕೇವಲ ಪ್ರಶಸ್ತಿಗಳನ್ನು ನೀಡುವುದಕ್ಕೆ ಸೀಮಿತವಾಗಿರದೆ ಲೇಖಕರ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ ಬೆಂಬಲಕ್ಕೆ ನಿಲ್ಲಬೇಕು ಎನ್ನುವ ನೇರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನನ್ನ ಈ ನಡೆಗೆ ಅಪ್ಪನ ಪ್ರಭಾವ ಇದೆ ಎನ್ನುವ ಅವರು ಆ ಕುರಿತ ಕೆಲವು ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ನಮ್ಮದು ಅತ್ಯಂತ ಸಂಪ್ರದಾಯಸ್ತ ಕಟುಂಂಬ. ಆದರೆ ಅಪ್ಪನ ಕ್ರಾಂತಿಕಾರಕ ಚಿಂತನೆಗಳ ಕಾರಣ ದೇವರು, ಧರ್ಮ, ಮೇಲು–ಕೀಳು, ಬಡವ–ಶ್ರೀಮಂತ – ಈ ಯಾವುದರ ಸೋಂಕೂ ನಮಗೆ ತಗುಲಲಿಲ್ಲ.ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವಿದ್ದಿದ್ದರಿಂದಲೇ ಅಕ್ಕ ಉಷಾ ವೈದ್ಯೆಯಾಗಿ ಮತ್ತು ನಾನು ಲೇಖಕಿಯಾಗಿ ಬೆಳೆಯಲು ಸಾಧ್ಯವಾಯಿತು. ಚಿಕ್ಕಂದಿನಿಂದಲೇ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಲು ಅಪ್ಪನ ಪ್ರಭಾವವೇ ಪ್ರಧಾನ.ಕೈಲಾಸಂ ಅವರ ಅನಂತರ ಆಧುನಿಕ ಕನ್ನಡ ರಂಗಭೂಮಿಯನ್ನು ತಮ್ಮ ನಾಟಕಗಳು, ರಂಗಪ್ರಯೋಗಗಳ ಮೂಲಕ ಬೆಳೆಸಿದ ಕೀರ್ತಿ ಅಪ್ಪನಿಗೆ ಇದೆ. ನಾಟಕಕಾರ, ರಂಗಭೂಮಿ ನಿರ್ದೇಶಕ, ನಟ, ಸಂಸ್ಕೃತಪ್ರಾಧ್ಯಾಪಕ, ಪತ್ರಿಕೋದ್ಯಮಿ, ಅಂಕಣಕಾರ, ಸರ್ಕಾರದ ವಿವಿಧ ಸಂಘ–ಸಂಸ್ಥೆಗಳ ಸ್ಥಾನಗಳನ್ನು ಅಲಂಕರಿಸಿದ ಬಹುಮುಖ ಪ್ರತಿಭೆ ಅವರದ್ದು.ಆಗಿನ ವಿಜಾಪುರ ಜಿಲ್ಲೆಯ ಅತ್ಯಂತ ಹಿಂದುಳಿದ ಇಂಡಿ ತಾಲ್ಲೂಕಿನ ಅಗರಖೇಡ ಅಪ್ಪನ ಹುಟ್ಟೂರು. ವಾಸುದೇವಾಚಾರ್ಯ ಮತ್ತು ರಮಾಬಾಯಿ ದಂಪತಿಯ ಮೊದಲನೇ ಮಗನಾಗಿ 1904ರಲ್ಲಿ ಜನಿಸಿದ್ದರು. ಆದ್ಯ ರಂಗಾಚಾರ್ಯ ಅವರ ಹೆಸರು. ‘ಶ್ರೀರಂಗ’ ಅವರ ಕಾವ್ಯನಾಮ. ನಮ್ಮ ಕುಟುಂಬದ ಯಾರಿಗೂ ರಂಗಭೂಮಿ ಹಿನ್ನೆಲೆ ಇರಲಿಲ್ಲ. ನಮ್ಮ ಅಜ್ಜಿ ರಮಾಬಾಯಿ ತಂದೆಯವರ (ಅಪ್ಪನ ಅಜ್ಜ) ನಾಟಕದ ಅಭಿರುಚಿ ನಮ್ಮ ಅಪ್ಪನಿಗೆ ವರ್ಗವಾಗಿತ್ತು.ಜಹಗೀರಾಗಿ ಬಂದಿದ್ದ ಜಮೀನಿನಲ್ಲಿ ಕೆಲಸ ಮಾಡಲು ಬರುತ್ತಿದ್ದ ರೈತಕುಟುಂಬಗಳ ಮಕ್ಕಳೊಂದಿಗೆ ಅಪ್ಪನಿಗೆ ಹೆಚ್ಚು  ಒಡನಾಟವಿತ್ತು. ಯಾವುದೇ ಅವರ ಮನೆಗಳಿಗೆ ಹೋಗುತ್ತಿದ್ದರು. ಅವರೊಟ್ಟಿಗೆ ಊಟ ಮಾಡಿ ಜಾತಿಯ ಗಡಿಗಳನ್ನು ಮೀರಿದ್ದರು.ಪ್ರಾಥಮಿಕ ಶಿಕ್ಷಣವನ್ನು ಅಪ್ಪ ಅಗರಖೇಡದಲ್ಲಿಯೇ ಮುಗಿಸಿದರು. ಶಿಕ್ಷಕರಾಗಿದ್ದ ತಾತ ವಾಸುದೇವಾಚಾರ್ಯ ಸಂಸ್ಕೃತ–ಕನ್ನಡಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು.ತಮ್ಮ ಮಗನಿಗೆ ಇಂಗ್ಲಿಷ್‌ ಶಿಕ್ಷಣ ಕೊಡಿಸಲು ಬಯಸಿದ್ದರು. ಇದಕ್ಕೆ ಅಪ್ಪ ಒಪ್ಪದಿದ್ದರೂ, ಒತ್ತಾಯದಿಂದ ವಿಜಾಪುರ ಶಾಲೆಗೆ ಸೇರಿಸಿದ್ದರು. ಆದರೆ ಅಪ್ಪನಿಗೆ ಅವರ ಅಮ್ಮನನ್ನು ಬಿಟ್ಟಿರಲಾಗದೇ ಶಾಲೆಯನ್ನೇ ತೊರೆದು ಬಂದಿದ್ದರಂತೆ.ಮಗನ ಶಿಕ್ಷಣದ ಸಲುವಾಗಿ ತಾತನೇ ವಿಜಾಪುರಕ್ಕೆ ವರ್ಗ ಮಾಡಿಸಿಕೊಂಡಿದ್ದರು. ಹಳ್ಳಿಯ ಸಹಪಾಠಿಗಳೂ ಅಪ್ಪನ ಶಾಲೆಗೇ ಬಂದು ಸೇರಿದ ನಂತರ ಅಲ್ಲಿನ ಕೋಟೆಗಳಲ್ಲಿ ಅವರ ಆಟ. ಈ ಐತಿಹಾಸಿಕ ಸ್ಥಳದ ಶಿವಾಜಿ, ಅಫಜಲ್‌ ಖಾನರ ಕತೆಗಳು ಅವರ ಆಟದ ವಿಷಯಗಳಾಗಿದ್ದವು.ಕನಕದಾಸರ, ಪುರಂದರದಾಸರ ಕೀರ್ತನೆಗಳನ್ನು ಭಜನೆ ಮಾಡುವುದು ಬಾಲ್ಯದಲ್ಲಿ ಅಪ್ಪನಿಗೆ ಅತ್ಯಂತ ಪ್ರಿಯವಾದ ಕಾರ್ಯಕ್ರಮವಾಗಿತ್ತು. ಹಳ್ಳಿಯಲ್ಲಿ ಪ್ರತಿವರ್ಷ ಏರ್ಪಡಿಸುತ್ತಿದ್ದ  ಹರಿಕಥೆಗಳು ಅವರ ಮೇಲೆ ಗಾಢ ಪರಿಣಾಮ ಬೀರಿದ್ದವು.ಪುಣೆಯ ಡೆಕ್ಕನ್‌ ಕಾಲೇಜಿನಲ್ಲಿ ಪದವಿ ಮುಗಿಸಿದ ನಂತರ ಉನ್ನತ ಶಿಕ್ಷಣವನ್ನು ಇಂಗ್ಲೆಂಡ್‌ನಲ್ಲಿ ಪಡೆದರು. ಅಪ್ಪ ಓದಿನಲ್ಲಿ ತುಂಬ ಮುಂದಿದ್ದರು. ತಮಗಿಂತ ಹಿಂದುಳಿದ ಸಹಪಾಠಿಗಳಿಗೆ ಪ್ರಶ್ನೋತ್ತರಗಳನ್ನು ತಿಳಿ ಹೇಳುವ ಅಭ್ಯಾಸಕ್ರಮವನ್ನು ರೂಢಿಸಿಕೊಂಡಿದ್ದರು.ವಿಜಾಪುರ, ಪುಣೆಗಳಲ್ಲಿರುವಾಗ ಪ್ರಸಿದ್ಧ ನಾಟಕ ಕಂಪೆನಿಗಳ ನಾಟಕಗಳನ್ನು ನೋಡುವ ಹವ್ಯಾಸ ರೂಢಿಸಿಕೊಂಡಿದ್ದರು. ಇಂಗ್ಲೆಂಡ್‌ನಲ್ಲಿದ್ದಾಗ ಭಾಷಾಶಾಸ್ತ್ರದ ಅಧ್ಯಯನ ಮತ್ತು ಸಂಶೋಧನೆ ನಡೆಸಿದರು. ಆಗಲೇ ಪಾಶ್ಚಾತ್ಯ ರಂಗಭೂಮಿ ಸ್ವರೂಪದ ಪರಿಚಯವಾಯಿತು. ಅವರ ನಾಟಕಾಸಕ್ತಿಗೆ ರೆಕ್ಕೆ ಮೂಡಿದ್ದೂ ಅಲ್ಲಿಯೇ.ಲಂಡನ್‌ನ ಹೆಸರಾಂತ ಥಿಯೇಟರ್‌ಗಳ ಹತ್ತಿರ ಅಪ್ಪ ಹಲವು ತಿಂಗಳು ಸುಮ್ಮನೆ ಸುತ್ತಾಡಿದ್ದರಂತೆ. ಅಲ್ಲಿ ದುಬಾರಿ ಬೆಲೆ ತೆತ್ತು ನಾಟಕ ನೋಡುವುದು ಸಾಧ್ಯವಿರದ ಕಾರಣ ಕಡಿಮೆ ಬೆಲೆಗೆ ನಿಂತು ನೋಡಲು ಸಾಧ್ಯವಿದ್ದ ಕಡೆ ಹೋಗಿ ನಾಟಕಗಳನ್ನು ನೋಡುತ್ತಿದ್ದರು.ಪಾತ್ರಧಾರಿಗಳು ಬಣ್ಣ ಹಚ್ಚಿಕೊಳ್ಳುತ್ತಿದ್ದ ರೀತಿ, ನೈಜ ಅಭಿನಯ, ವೇದಿಕೆಯ ಬಳಕೆ, ಸ್ತ್ರೀಯರೇ ಪಾತ್ರಗಳನ್ನು ನಿರ್ವಹಿಸುತ್ತಿದ್ದುದನ್ನು ಕಂಡು ಆಕರ್ಷಿತರಾಗಿದ್ದರು. ಭಾಷಾಶಾಸ್ತ್ರದ ಏಕೈಕ ವಿದ್ಯಾರ್ಥಿಯಾಗಿದ್ದ ಅಪ್ಪನಿಗೆ ಅವರ ಪ್ರಾಧ್ಯಾಪಕರೊಬ್ಬರು ನಲವತ್ತು ಮೈಲಿ ದೂರದಿಂದ ಬಂದು ಪಾಠ ಹೇಳುತ್ತಿದ್ದರಂತೆ.ಆದರೆ ಅಪ್ಪ ವಾರಪೂರ್ತಿ ನಾಟಕ ನೋಡಲು ಟಿಕೆಟ್‌ ಖರೀದಿಸಿ, ತರಗತಿಗೆ ಗೈರುಹಾಜರಾಗಲು ಪ್ರಾಧ್ಯಾಪಕರ ಅನುಮತಿ ಕೇಳಿದ್ದರಂತೆ. ಅಪ್ಪನಿಗಿದ್ದ ನಾಟಕ ಕುರಿತ ಆಸಕ್ತಿಯನ್ನು ತಿಳಿದಿದ್ದ ಅವರು, ‘ಸದ್ಯ ತರಗತಿಗೆ ಬರಲು ಆಗುವುದಿಲ್ಲವೆಂದು ಮೊದಲೇ ತಿಳಿಸಿದಿರಲ್ಲ’ ಎಂದು ಥ್ಯಾಂಕ್ಸ್‌ ಹೇಳಿದ್ದರಂತೆ.ಉದ್ಯೋಗಕ್ಕಾಗಿ ಅಪ್ಪ ಬಹಳ ಕಷ್ಟಪಟ್ಟಿದ್ದರು. ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಸೇರಿಕೊಂಡಿದ್ದರು. ಅಲ್ಲಿಂದ ರಂಗ ಚಟುವಟಿಕೆಗಳು ಆರಂಭವಾದವು.ಪಂಡಿತ ತಾರಾನಾಥರಿಂದ ಮುದವೀಡು ಕೃಷ್ಣರಾಯರು ಮತ್ತು ಗರೂಡ ಸದಾಶಿವರಾಯರಂಥ ನಾಟ್ಯ–ಸಾಹಿತ್ಯ ದಿಗ್ಗಜರನ್ನು ಪರಿಚಯ ಮಾಡಿಕೊಂಡಿದ್ದರು. ‘ಉದಯವೈರಾಗ್ಯ’ ಮೊದಲ ಪ್ರಯೋಗದಲ್ಲಿಯೇ ಯಶಸ್ಸು ಕಂಡಿತ್ತು.ಮುಂದೆ ‘ಅಮೆಚುರ್‌ ಥಿಯೇಟರ್‌’ ಸ್ಥಾಪಿಸಿದ್ದರು. ‘ಹರಿಜನ್ವಾರ’, ‘ಶೋಕಚಕ್ರ’, ‘ಸಂಸಾರಿಗ ಕಂಸ’, ‘ಸಂಧ್ಯಾಕಾಲ’, ‘ಜರಾಸಂಧಿ, ‘ಜೀವನಜೋಕಾಲಿ’ ಮುಂತಾದ ನಾಟಕಗಳ ಪ್ರಯೋಗ ನಡೆಸಿದರು. ಮಹಿಳೆಯರಿಂದಲೇ ಸ್ತ್ರೀಪಾತ್ರಗಳನ್ನು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.‘ಹರಿಜನ್ವಾರ’ ನಾಟಕ ಬ್ರಾಹ್ಮಣ ವಿರೋಧಿ ಎಂಬ ಕಾರಣಕ್ಕೆ ಅಪ್ಪ, ಹಲವು ಟೀಕೆಗಳಿಗೂ ಗುರಿಯಾಗಿದ್ದರು. ನಾಟಕದ ಎರಡು ಅಂಕಗಳನ್ನು ಮಾತ್ರ ಪ್ರದರ್ಶಿಸುವುದಾಗಿ ಹೇಳಿ ಕಥೆ ಹೇಳುವ ನೆಪದಲ್ಲಿ ಮೂರನೇ ಅಂಕವನ್ನೂ ಪ್ರದರ್ಶಿಸಿದ್ದರು.ಪ್ರತಿಭಟನೆಗಳಿಂದಲೇ ನಾಟಕಕ್ಕೆ ಪ್ರಚಾರ, ಪ್ರಸಿದ್ಧಿ ದೊರಕಿತೆಂದು ನಗೆಯಾಡಿದ್ದರು. ಅಪ್ಪ ಎಲ್ಲಿಯಾದರೂ ಭಾಷಣ ಮಾಡಬೇಕೆಂದರೆ ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿರಲಿಲ್ಲ. ನಿರರ್ಗಳವಾಗಿ ಮಾತನಾಡುತ್ತಿದ್ದರು.ನಾಡಹಬ್ಬದ ಸಂದರ್ಭಗಳಲ್ಲಿ ಭಗವದ್ಗೀತೆ ಕುರಿತು ಮಾಡಿದ ಭಾಷಣಗಳೇ ಮುಂದೆ ‘ಗೀತಗಾಂಭೀರ್ಯ’ ಎಂಬ ಗ್ರಂಥದ ರೂಪದಲ್ಲಿ ಪ್ರಕಟವಾಯಿತು. ನಾಟಕ, ಕಾದಂಬರಿ, ಲಲಿತಪ್ರಬಂಧ, ವೈಚಾರಿಕ ಬರಹ, ಹಾಸ್ಯ ಮತ್ತು ವ್ಯಂಗ್ಯ ಲೇಖನಗಳನ್ನು ಸತತವಾಗಿ ಬರೆದರೂ ಅಪ್ಪ ಎಂದಿಗೂ ಅದರ ಲೆಕ್ಕ ಇಡಲಿಲ್ಲ. ‘ನಾಟ್ಯಶಾಸ್ತ್ರ’ವನ್ನು ಕನ್ನಡಕ್ಕೆ ಅನುವಾದಿಸುವಾಗ ಮೊದಲ ಐದು ಅಧ್ಯಾಯಗಳನ್ನು ನನಗೆ ಸರಿ ಇದೆಯೇ ಎಂದು ನೋಡಲು ಕೊಟ್ಟಿದ್ದರು.ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಮತ್ತು ಆ ಪ್ರದೇಶದ ವಿವಿಧೆಡೆ ಕಾಲೇಜುಗಳನ್ನು ಆರಂಭಿಸಬೇಕು ಎಂದು ಚಳವಳಿ ನಡೆಸಿದ್ದರು.ಭಾರತೀಯರು ಸ್ವರಾಜ್ಯ ಪಡೆಯಲು ಎಷ್ಟು ಅರ್ಹರು ಎಂಬುದನ್ನು ಅಳೆಯಲು ಸೈಮನ್‌ ಕಮಿಷನ್‌ ಭಾರತಕ್ಕೆ ಬಂದಿದ್ದಾಗ ಅವರ ಮೇಲೆ ಬಾಂಬ್‌ ಎಸೆದ ಘಟನೆ ನಡೆದಿತ್ತು. ಆಗ ಇಂಗ್ಲೆಂಡ್‌ನಲ್ಲಿ ಓದುತ್ತಿದ್ದ ಅಪ್ಪ ಅಲ್ಲಿಯೇ ವಿದ್ಯಾರ್ಥಿಗಳ ಸಭೆ ನಡೆಸಿದ್ದರು.ರಾಜ್ಯದ ಏಕೀಕರಣ ಚಳವಳಿ ಮತ್ತು ತುರ್ತು ಪರಿಸ್ಥಿತಿ ವಿರೋಧಿ ಹೋರಾಟಗಳಲ್ಲಿ ಭಾಗವಹಿಸಿದ್ದರು. ಪ್ರಜಾಪ್ರಭುತ್ವ, ನಾಗರಿಕಹಕ್ಕು, ವ್ಯಕ್ತಿಸ್ವಾತಂತ್ರ್ಯ, ಜಾತಿ ಸಮಸ್ಯೆ, ಮುಂತಾದ ವಿಷಯಗಳ ಬಗ್ಗೆ ‘ಜಯಂತಿ’ ಪತ್ರಿಕೆಯಲ್ಲಿ ಲೇಖನಗಳನ್ನು ಪ್ರಕಟಿಸಿದ್ದರು.ಬೆಂಗಳೂರು ಆಕಾಶವಾಣಿ, ರಾಷ್ಟ್ರೀಯ ನಾಟಕ ಶಾಲೆ ಸಲಹಾ ಸಮಿತಿ ಸದಸ್ಯರಾಗಿ, ಸಂಗೀತ–ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ ಅಪ್ಪ, ಶಿಕ್ಷಕರಿಗಾಗಿ ನಾಟಕ ನಿರ್ದೇಶನ, ದೇಹ–ಧ್ವನಿ ಬಳಕೆ, ನಡಿಗೆ, ರಂಗದ ಮೇಲೆ ಚಲನೆ, ಸಾಮೂಹಿಕ ಸಾಮರಸ್ಯ, ಸಂಯೋಜನೆ, ಬೆಳಕು, ಸಾಹಿತ್ಯ ಉಚ್ಚಾರಣೆ, ಮುಂತಾದ ವಿಷಯಗಳ ಬಗ್ಗೆ ಶಿಬಿರಗಳನ್ನು ನಡೆಸಿದ್ದರು.ಭಾರತ ಸರ್ಕಾರದ ಆಹ್ವಾನದ ಮೇರೆಗೆ ಬರ್ಲಿನ್‌ನಲ್ಲಿ ನಡೆದ 13ನೇ ಸಂಗೀತ ಮಹೋತ್ಸವಕ್ಕೆ ಅಪ್ಪ ಅತಿಥಿಯಾಗಿದ್ದರು. ‘ಭಾರತೀಯ ರಂಗಭೂಮಿ–ಸಂಸ್ಕೃತಿ’ ಕುರಿತು ಉಪನ್ಯಾಸ ನೀಡಿದ್ದರು. ಸಂಗೀತ–ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಮತ್ತು ‘ಕಾಲಿದಾಸ’ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.ಕನ್ನಡ ಸಾಹಿತ್ಯ ಪರಿಷತ್ತು ‘ರಂಗಭೂಮಿ ನಡೆದುಬಂದ ದಾರಿ’ ಬಗ್ಗೆ ಗ್ರಂಥವನ್ನು ಸಂಪಾದಿಸಿಕೊಡುವಂತೆ ಅಪ್ಪನಿಗೆ ಜವಾಬ್ದಾರಿ ವಹಿಸಿತ್ತು. ಶ್ರಮವಹಿಸಿ ಸಿದ್ಧಪಡಿಸಿದ ಹಸ್ತಪ್ರತಿಯನ್ನು ಪರಿಷತ್ತಿಗೆ ನೀಡಿದ್ದರು. ಆದರೆ ಪ್ರಕಟಣೆ ಆಗಲಿಲ್ಲ.ಈ ರೀತಿಯ ಉದಾಸೀನತೆ ಕಂಡು ಬದುಕಿನ ಕೊನೆಯ ದಿನಗಳಲ್ಲಿ ತುಂಬ ನೊಂದುಕೊಂಡಿದ್ದರು. ತಮ್ಮ ಕಣ್ಣ ಮುಂದೆ ಪಟ್ಟ ಶ್ರಮ ಸಫಲವಾದುದನ್ನು ಕಂಡು ಸಂತೋಷ ಪಡುವ ಅವಕಾಶ ಸಿಗಲಿಲ್ಲ. ಇದು ಅತ್ಯಂತ ಬೇಸರದ ಸಂಗತಿ.ತಮ್ಮ ಎಲ್ಲ ಕೆಲಸಗಳ ಮಧ್ಯೆ ಮಕ್ಕಳ ಭವಿಷ್ಯದ ಬಗ್ಗೆ ಅಪ್ಪ ಬಹಳ ಕಾಳಜಿ ಹೊಂದಿದ್ದರು. ಉತ್ತಮ ಅಭ್ಯಾಸ, ಸ್ವತಂತ್ರ ಮನೋಭಾವದ ಬೀಜ ನಮ್ಮಲ್ಲಿ ಬಿತ್ತಿದ್ದರು. ಅಮ್ಮ ಮೂಲತಃ ಪುಣೆಯವರು. ಬಿ. ಎ. ಪದವೀಧರೆ; ವಿಶಾಲ ಮನೋಭಾವದವರಾಗಿದ್ದರು.ಆದಕಾರಣ ಇತರೆ ಹೆಣ್ಣುಮಕ್ಕಳಂತೆ ನಮಗೆ ಯಾವ ನಿರ್ಬಂಧಗಳೂ ಇರಲಿಲ್ಲ. ಆದರೆ ಎಲ್ಲಿಗೇ ಹೋದರೂ ರಾತ್ರಿ ಏಳು ಗಂಟೆ ಒಳಗೆ ಮನೆ ಸೇರಬೇಕಿತ್ತು. ಅಪ್ಪ ನನಗೆ ಶಾಲೆಯಲ್ಲಿ ಸಂಸ್ಕೃತವನ್ನೇ ಕಲಿಯುವಂತೆ ಹೇಳಿದ್ದರು. ನನಗದು ಸ್ವಲ್ಪವೂ ಇಷ್ಟವಿರಲಿಲ್ಲ.ಆದರೂ ಕಷ್ಟಪಟ್ಟು ಎಸ್ಸೆಸ್ಸೆಲ್ಸಿವರೆಗೆ ಓದಿದೆ. ಇಂಟರ್‌ಮೀಡಿಯೆಟ್‌ ಓದುವಾಗ ವ್ಯಾಕರಣಕ್ಕಿಂತ ಪಠ್ಯ ಹೆಚ್ಚಾಗಿ ಇದ್ದಿದ್ದು  ಖುಷಿಯಾಗಿತ್ತು. ಅಪ್ಪ ಉದ್ಯೋಗದ ನಿಮಿತ್ತ ದೆಹಲಿಯಲ್ಲಿದ್ದಾಗ ಸಂಸ್ಕೃತ ಪಠ್ಯ ಕುರಿತ ಅನುಮಾನಗಳನ್ನು ಪತ್ರದಲ್ಲಿ ಬರೆದು ಕಳುಹಿಸುತ್ತಿದ್ದೆ.ಅವರೂ ಪತ್ರದ ಮೂಲಕವೇ ಉತ್ತರಿಸುತ್ತಿದ್ದರು. ಒಮ್ಮೆ ಮೂರು ದಿನ ಬಿಡುವು ತೆಗೆದುಕೊಂಡು ಬಂದಿದ್ದರು. ಆಗ ಕುಮಾರಸಂಭವ ಹೇಳಿಕೊಟ್ಟಿದ್ದರು. ವಿಶ್ವವಿದ್ಯಾಲಯಕ್ಕೇ ಎರಡನೇ ರ್‍್ಯಾಂಕ್‌ ಬಂದಿದ್ದೆ. ಅಪ್ಪನಿಗೂ ಖುಷಿಯಾಗಿತ್ತು.ಶಾಲಾದಿನಗಳಲ್ಲಿ ನಾನು ಕಾದಂಬರಿಗಳನ್ನು ಓದುತ್ತಿದ್ದುದು ಅಪ್ಪನಿಗೆ ಇಷ್ಟವಾಗುತ್ತಿರಲಿಲ್ಲ. ಮೊದಲು ವಿದ್ಯಾಭ್ಯಾಸಕ್ಕೆ ಗಮನ ಕೊಡು ಎನ್ನುತ್ತಿದ್ದರು. ಆದರೆ ನಾನು ಲೇಖಕಿಯಾಗಿ ರೂಪುಗೊಂಡ ನಂತರ ತಾವು ಹೇಳಿದ್ದರ ಬಗ್ಗೆ ವಿಮರ್ಶೆ ಮಾಡಿಕೊಂಡಿದ್ದರು.ನನ್ನ ಮೊದಲ ಕಾದಂಬರಿ ‘ರೂಟ್ಸ್‌ ಶ್ಯಾಡೊಸ್‌’ಗೆ ಪ್ರಶಸ್ತಿ ಬಂದಾಗ ಅಪ್ಪನಿಗೆ ತುಂಬ ಸಂತೋಷವಾಗಿತ್ತು. ಅದನ್ನು ನನ್ನ ಮುಂದೆ ತೋರಿಸಿಕೊಳ್ಳಲಿಲ್ಲ. ಅಮ್ಮನನ್ನು ಕರೆದು ನನ್ನ ಮಗಳ ಸಾಧನೆ ನೋಡು ಎಂದು ಹೇಳಿದ್ದರು.ಅಪ್ಪ ಎಷ್ಟರಮಟ್ಟಿಗೆ ಸಂಪ್ರದಾಯ ವಿರೋಧಿಯಾಗಿದ್ದರೆಂದರೆ ಯಾರ ಮದುವೆಗೂ ಹೋಗುತ್ತಿರಲಿಲ್ಲ. ಪುಣೆಯಲ್ಲಿ ಮಾವನ (ತಾಯಿಯ ತಮ್ಮ) ಮಗನ ಮದುವೆ ಇತ್ತು. ಎಷ್ಟೇ ಕರೆದರೂ ಬರಲಿಲ್ಲ.ಕನ್ನಡ, ಸಂಸ್ಕೃತ, ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣತಿ ಹೊಂದಿದ್ದ ಅಪ್ಪನಿಗೆ ಮರಾಠಿ ಬರುತ್ತಿರಲಿಲ್ಲ. ಆ ಕಾರಣಕ್ಕೂ  ಅವರು ಬರಲು ನಿರಾಕರಿಸಿದ್ದರು. ಎಲ್ಲ ಮಕ್ಕಳ ಮದುವೆಯನ್ನು ಸರಳವಾಗಿಯೇ ಮಾಡಿದರು.ನನ್ನ ಮದುವೆ ಮಾವನ ಮನೆಯಲ್ಲಿ ನಡೆದಾಗ ಅನಿವಾರ್ಯವಾಗಿ ಶರತ್ತಿನ ಮೇಲೆ ಪೂಜೆಗೆ ಕುಳಿತಿದ್ದರು. ಅಪ್ಪನ ಸ್ವಭಾವ ಕಂಡು ಮದುವೆ ಮಾಡಿಸಲು ಬಂದಿದ್ದ ಪೂಜಾರಿ ಹೆದರಿಹೋಗಿದ್ದರು!ಒಂದು ವರ್ಷ ಲಂಡನ್‌ನಲ್ಲಿದ್ದೆವು. ಇಲ್ಲಿಗೆ ಬಂದ ಮೇಲೆ, ಅಲ್ಲಿಯ ಅನುಭವಗಳನ್ನು ಬರೆಯುವಂತೆ ನನ್ನ ಪತಿ ಹೇಳಿದ್ದರು. ಮೂರು ಲೇಖನಗಳನ್ನು ಬರೆದು ಅಪ್ಪನಿಗೂ ಓದಲು ಕಳುಹಿಸಿದ್ದೆ.ಅಪ್ಪ ಅದನ್ನು ನನಗೆ ತಿಳಿಸದೇ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗೆ ಕಳುಹಿಸಿಕೊಟ್ಟಿದ್ದರು. ಒಟ್ಟು ಮೂರು ಸಂಚಿಕೆಯಲ್ಲಿ ಲೇಖನ ಪ್ರಕಟವಾಗಿತ್ತು. ಅಪ್ಪ ಅದರ ಕಟಿಂಗ್‌ಗಳನ್ನು ಸಂಗ್ರಹಿಸಿ ಅಂಚೆ ಮೂಲಕ ಕಳುಹಿಸಿದ್ದರು. ನೋಡಿ ಆಶ್ಚರ್ಯವಾಯಿತು.ನಾನು ಬರೆದ ಲೇಖನಗಳು  ಅದೇ ಮೊದಲ ಬಾರಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಪತ್ರಿಕಾ ಕಚೇರಿಯಿಂದ ₹ 75 ಕಳುಹಿಸಿದ್ದರು. ₹ 50 ರಲ್ಲಿ ಪತಿಗೆ ಅಂಗಿಯನ್ನೂ ₹ 25ರಲ್ಲಿ ಮಕ್ಕಳಿಗೆ ಆಟಿಕೆಯನ್ನೂ ಕೊಂಡು ಕೊಟ್ಟಿದ್ದೆ. ಸ್ವತಂತ್ರವಾಗಿ ಸಂಪಾದಿಸಿದ ಹಣ ಅದಾಗಿತ್ತು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ!ನಾನು ಇಂಗ್ಲಿಷ್‌ ಲೇಖಕಿಯಾಗಿದ್ದರೂ, ರಾಮಾಯಣ, ಮಹಾಭಾರತ, ಬಸವಣ್ಣ, ದಾಸರ ವಚನಪದಗಳು ನನ್ನ ತಲೆಯಲ್ಲಿ ಅಚ್ಚೊತ್ತಿ ಕೂತಿದೆಯೆಂದರೆ ಅದಕ್ಕೆ ಅಪ್ಪನೇ ಕಾರಣ.ಬಹುತೇಕ ಇಂಗ್ಲಿಷ್‌ ಲೇಖಕರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಅಪ್ಪ ಮಹಾಭಾರತವನ್ನು ಸಂಸ್ಕೃತದಲ್ಲಿಯೇ ಓದಿದ್ದರು. ದಾಸರ ಸಾಹಿತ್ಯ ಬಾಯಲ್ಲೇ ಇತ್ತು. ಅವುಗಳನ್ನು ಹಾಡುತ್ತಲೇ ಕ್ಷೌರ  ಮಾಡಿಕೊಳ್ಳುತ್ತಿದ್ದರು.ಅವರು ಹಾಡುತ್ತಿದ್ದುದು ನಮ್ಮ ಕಿವಿಗಳ ಮೇಲೂ ಬೀಳುತ್ತಿದ್ದವು. ಅಮ್ಮನಿಗೆ ಅಪ್ಪನ ಮೇಲೆ ಅಪಾರ ಪ್ರೀತಿ, ಗೌರವ. ಮದುವೆಯಾದ 50ನೇ ವರ್ಷದ ನೆನೆಪಿಗೆ ‘ಶ್ರೀರಂಗ ಜೊತೆ 50 ವರ್ಷ’ ಕೃತಿ ರಚಿಸಿದ್ದರು.ಅದರಲ್ಲಿ ತನ್ನ ಬಗ್ಗೆ ಒಂದು ಅಕ್ಷರವನ್ನೂ ಹೇಳಿಕೊಂಡಿರದ ಅಮ್ಮ, ಅಪ್ಪನ ಕುರಿತಾಗಿಯೇ ಎಲ್ಲವನ್ನೂ ಬರೆದಿದ್ದಳು. ನಾವು ‘ಏನಮ್ಮಾ ಅಪ್ಪನ ಸಾಧನೆಯಲ್ಲಿ ನಿನ್ನ ಪಾತ್ರವೇನೂ ಇಲ್ಲವೇ. ನಿನ್ನ ಬಗ್ಗೆ ಒಂದು ಅಕ್ಷರವನ್ನೂ ಬರೆದುಕೊಂಡಿಲ್ಲವಲ್ಲ’ ಎಂದು ರೇಗಿಸುತ್ತಿದ್ದೆವು. ಆದರೆ ಅದು ನನ್ನ ತಾಯಿಯ ಭಾವಕ್ಕೆ ಬಿಟ್ಟ ವಿಚಾರವಾಗಿತ್ತು.ಅಪ್ಪ ಎಷ್ಟು ನೇರ, ನಿಷ್ಠುರ ನಡೆ ಹೊಂದಿದ್ದರೋ ಅಷ್ಟೇ ಭಾವನಾಜೀವಿಯೂ ಆಗಿದ್ದರು. ಅಕ್ಕ ಮೂರು ತಿಂಗಳ ಕೂಸಾಗಿದ್ದಾಗ ಕೆಲಸದ ಕಾರಣ ಅಪ್ಪ ಬೇರೆ ಊರಿನಲ್ಲಿದ್ದರು. ಆಕೆಯನ್ನು ಬಿಟ್ಟಿರಲಾಗದೆ ಚಡಪಡಿಸಿದ್ದ ಅಪ್ಪ ಪತ್ರವನ್ನೇ ಬರೆದಿದ್ದರು.ಅಮ್ಮನ ಆರೋಗ್ಯ ಅಷ್ಟೇನೂ ಸರಿ ಇರಲಿಲ್ಲ. ಹಣಕಾಸಿನ ತೊಂದರೆ. ಔಷಧೋಪಚಾರಕ್ಕೆ ತನ್ನ ತಂದೆ ಮನೆಯವರನ್ನು ಅವಲಂಬಿಸದೇ ಇರಲೆಂದು ಅಪ್ಪನೇ ಹೊಂದಿಸಿ ಕಳುಹಿಸುತ್ತಿದ್ದರು.ಎಂತಹ ಕಷ್ಟ  ಎದುರಾದರೂ ಆತ್ಮವಿಶ್ವಾಸದಿಂದ ಎದುರಿಸುತ್ತಿದ್ದ ಅಪ್ಪನ ಮನೋಬಲವನ್ನು ಅಮ್ಮ ಸ್ಮರಿಸುತ್ತಲೇ ಇದ್ದರು. ಅಪ್ಪನ ಸಾಹಿತ್ಯ ಮುದ್ರಣಕ್ಕೆ ಯಾರೇ ಕೇಳಿದರೂ ಅಕ್ಕ ಮತ್ತು ನಾನು ಇಲ್ಲ ಎನ್ನುವುದಿಲ್ಲ.ಉದಾರ ಮನಸ್ಸಿನಿಂದ ನೀಡುತ್ತೇವೆ. ಅಪ್ಪನ ಎರಡು ನಾಟಕಗಳನ್ನು ನಾನು ಇಂಗ್ಲಿಷ್‌ಗೆ ಅನುವಾದ ಮಾಡಿದ್ದೇನೆ. ಅಕ್ಕ, ಅಪ್ಪನ ನೆನಪಿನಲ್ಲಿ ಕಳೆದ ಎರಡು ವರ್ಷಗಳಿಂದ ಮುಂಬೈನಲ್ಲಿ ನಾಟಕಸ್ಪರ್ಧೆ ನಡೆಸಿಕೊಂಡು ಬಂದಿದ್ದಾರೆ.  ಅಪ್ಪ ನನ್ನ ಪಾಲಿಗೆ ಒಂದು ದೊಡ್ಡ ಭಂಡಾರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.