ಸೋಮವಾರ, ಮಾರ್ಚ್ 1, 2021
24 °C
ನನ್ನ ಹೊಸ ಓದು

ಸ್ವಾರ್ಥಿ ವಂಶವಾಹಿ ಕಣಗಳ ರೋಚಕ ಕಥನ

ಎಂ.ಆರ್. ದತ್ತಾತ್ರಿ Updated:

ಅಕ್ಷರ ಗಾತ್ರ : | |

ಸ್ವಾರ್ಥಿ ವಂಶವಾಹಿ ಕಣಗಳ ರೋಚಕ ಕಥನ

ಇದು ಹೊಸ ಪುಸ್ತಕವಲ್ಲ. ಪ್ರಕಟವಾಗಿ ಮೂವತ್ತು ವರ್ಷಗಳಾಗಿವೆ. ವಿಜ್ಞಾನ ಒಳ ಹುರುಳಿನ ಪುಸ್ತಕ ಇದು. ವಿಜ್ಞಾನವನ್ನು ಕನ್ನಡದಲ್ಲಿ ಬರೆಯುವುದು ಕಷ್ಟ ಎನ್ನುವುದನ್ನು ಸಾಮಾನ್ಯವಾಗಿ ಕೇಳುವಾಗ ನನಗನ್ನಿಸುವುದು, ವಿಜ್ಞಾನವನ್ನು ಜನಸಾಮಾನ್ಯರಿಗೆ ಮುಟ್ಟುವಂತೆ ಯಾವ ಭಾಷೆಯಲ್ಲಿ ಬರೆಯುವುದೂ ಕಷ್ಟವೇ. ವಿಜ್ಞಾನದ ಭಾಷೆ ಗಣಿತ.ಗಣಿತಕ್ಕೆ ಉಪಮೆ ಅಲಂಕಾರಗಳು ಬೇಕಿಲ್ಲ. ಹಾಗಾಗಿ ಅದರ ಧ್ವನಿ ಜನ ಸಾಮಾನ್ಯರನ್ನು ಮುಟ್ಟುವುದಿಲ್ಲ. ಹಾಗೆ ಮುಟ್ಟಿಸುವ ಮಹಾನ್ ಪ್ರಯತ್ನಗಳಲ್ಲಿ ರಿಚರ್ಡ್ ಡಾಕಿನ್ಸ್‌ರ ‘ದ ಸೆಲ್ಫಿಷ್ ಜೀನ್’ ಕೂಡ ಒಂದು. ತಕ್ಷಣಕ್ಕೆ ನೆನಪಾಗುವ ಮತ್ತೊಂದು ಪುಸ್ತಕ ಸ್ಟೀವನ್ ಹಾಕಿಂಗ್‌ರ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’.ಒಂದು ರೀತಿಯಲ್ಲಿ ‘ದ ಸೆಲ್ಫಿಷ್ ಜೀನ್’ ಡಾರ್ವಿನ್ನನ ನೈಸರ್ಗಿಕ ಆಯ್ಕೆಯ (ನ್ಯಾಚುರಲ್ ಸೆಲೆಕ್ಷನ್‌ನ) ಮುಂದುವರೆದ ಭಾಗ ಎನ್ನಬಹುದು. ಈ ಪುಸ್ತಕವು ಪ್ರತಿಪಾದಿಸುವ ಅಂಶಗಳನ್ನು ಸಾರಾಂಶದಲ್ಲಿ ಹೀಗೆ ಹೇಳಬಹುದು: ಮನುಷ್ಯನ ಬದುಕು ವಂಶವಾಹಿ ಕಣಗಳನ್ನು (ಜೀನ್ಸ್) ಹೊತ್ತು ಓಡಾಡುವ ಒಂದು ತಾತ್ಕಾಲಿಕ ಸಾಧನ ಮಾತ್ರ. ತಾವು ಸಾವಿಲ್ಲದೆ ಅಮರರಾಗಲು ಜೀನ್‌ಗಳು ನಮ್ಮನ್ನು ಉಪಯೋಗಿಸಿಕೊಳ್ಳುತ್ತವೆ. ಅವೆಷ್ಟು ಸ್ವಾರ್ಥಿಗಳೆಂದರೆ ನಮ್ಮೆಲ್ಲ ರಸಗಳು, ಬಯಕೆಗಳು ಮತ್ತು ಬದುಕಿನೆಡೆಗಿನ ನಮ್ಮ ಉತ್ಸಾಹ ಉಮೇದುಗಳೆಲ್ಲ ಈ ವಂಶವಾಹಿ ಕಣಗಳ ಸ್ವಾರ್ಥ ಸಂಧಾನ.ಉದಾಹರಣೆಗೆ, ನಾಯಿ, ಬೆಕ್ಕು, ಹಂದಿ ಮುಂತಾದ ಪ್ರಾಣಿಗಳು ತಮಗೆ ಜನಿಸುವ ದುರ್ಬಲ ಮರಿಗಳನ್ನು ಆ ಕ್ಷಣದಲ್ಲೇ ಭಕ್ಷಿಸುತ್ತವೆ ಅಥವಾ ಮರಿಗಳಿಗೆ ಹಾಲನ್ನು ನಿರಾಕರಿಸುತ್ತವೆ. ಈ ರೀತಿ ಮರಿಗಳನ್ನು ನಾಶ ಮಾಡುವ ಪ್ರಾಣಿಗಳ ಪ್ರವೃತ್ತಿಗೆ ಪ್ರಚೋದನೆಯನ್ನು ಕೊಡುವುದು ಜೀನ್‌ಗಳು ಎನ್ನುವುದನ್ನು ಡಾಕಿನ್ಸ್ ತೋರಿಸುತ್ತಾರೆ. ಅಲ್ಲಿ ತಾಯಿಯ ಮಮತೆಯನ್ನು ಮೀರುವಂತೆ ಕೆಲಸ ಮಾಡುವುದು ಜೀನ್‌ಗಳ ಲೆಕ್ಕಾಚಾರ. ದುರ್ಬಲವಾಗಿ ಹುಟ್ಟಿದ ಮರಿಗಳು ಎಂದಿಗೂ ದುರ್ಬಲವೇ. ಅವುಗಳಿಂದ ಆರೋಗ್ಯವಂತ ಪೀಳಿಗೆಯು ಹುಟ್ಟಿ ವಂಶವಾಹಿಗಳನ್ನು ಮುಂದಿನ ಕಾಲಹಂತಕ್ಕೆ ದಾಟಿಸುವ ಸಾಧ್ಯತೆಯು ಕಡಿಮೆ. ಅವು ಬದುಕುಳಿದರೆ ಆಗುವ ಸಂಪನ್ಮೂಲ ಖರ್ಚುಗಳು (ಉದಾಹರಣೆಗೆ, ತಾಯಿಯ ಹಾಲು) ತನ್ನವೇ ಆರೋಗ್ಯವಂತ ಪೀಳಿಗೆಗೇ ದಕ್ಕುವಂತಾದರೆ ಆ ಮಟ್ಟಕ್ಕೆ ಅನಂತವಾಗುವಲ್ಲಿ ಜೀನ್‌ಗಳ ಬಯಕೆ ಯಶಸ್ವಿಯಾದಂತೆ.ಡಾಕಿನ್ಸ್‌ರ ಪ್ರಕಾರ ನಮ್ಮೊಳಗಿರುವ ವಂಶವಾಹಿ ಕಣಗಳು ನಮ್ಮನ್ನು ಸ್ವಾರ್ಥಿಗಳಾಗಿಸುತ್ತವೆ. ಆದರೆ ಇಲ್ಲಿಯ ‘ಸ್ವಾರ್ಥ’ವನ್ನು ಅನೇಕ ಬಗೆಯಲ್ಲಿ ಅರ್ಥೈಸಬೇಕಾಗುತ್ತದೆ. ಮಗು ಅಪಾಯದಲ್ಲಿದ್ದಾಗ ತಾಯಿ/ತಂದೆ ತಮ್ಮ ಜೀವದ ಹಂಗನ್ನು ತೊರೆದು ರಕ್ಷಿಸಲು ಹೋಗುವುದು ಜೀನ್‌ಗಳ ಒಂದು ಲೆಕ್ಕಾಚಾರವೇ.ಸ್ವತಂತ್ರ ಯೋಚನಾಶಕ್ತಿಯೇ ಮನುಷ್ಯನ ಅತ್ಯುತ್ತಮ ಗುಣವಂತಿಕೆ ಎಂದು ಬೀಗುವ ನಾವು, ಅದೆಲ್ಲವೂ ಜೀನ್‌ಗಳೆಂಬ ನಮಗಿನ್ನೂ ಪೂರ್ತಿ ಅರ್ಥವಾಗದ ಕಣಗಳ ನಿಯಂತ್ರಣದಲ್ಲಿ ನಡೆಯುವ ಕ್ರಿಯೆ ಮತ್ತು ಆ ಕ್ರಿಯೆಯಲ್ಲಿ ನಾವು ಹೇಳಿದ್ದನ್ನಷ್ಟೇ ಕೇಳಬೇಕಾದ ಜೀತದಾಳುಗಳು ಎಂದಾಗ ಸಹಜವಾಗಿಯೇ ಗಾಬರಿಯಾಗುತ್ತದೆ. ರಕ್ತ, ಮಾಂಸ ಮತ್ತು ಯೋಚನಾಶಕ್ತಿಯ ನಾವು ಜೀನ್‌ಗಳ ಪಾಲಿಗೆ ಬರೀ ‘ಸರ್ವೈವಲ್ ಮೆಷಿನ್ಸ್’ ಅಷ್ಟೇ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಗೌರವಾನ್ವಿತ ಪ್ರೊಫೆಸರ್ ಆಗಿರುವ ಡಾಕಿನ್ಸ್‌ ಅಂಥವರು ಹೇಳಿದಾಗ ಗಾಬರಿಯಾಗದೇ ಏನಾದೀತು? ಇಡೀ ಪುಸ್ತಕ ಹಾಲಿವುಡ್‌ನ ಏಲಿಯನ್ ಸಿನಿಮಾಗಳನ್ನು ನೋಡಿದಷ್ಟೇ ರೋಚಕವಾಗಿದೆ.ಪರಾರ್ಥತೆ (Altruism) ಎನ್ನುವುದು ಇಲ್ಲ, ಇದ್ದರೂ ನಮ್ಮ ವ್ಯಾಖ್ಯಾನಕ್ಕೆ ಅನುಗುಣವಾಗಿ ಇಲ್ಲ. ನಮ್ಮೆಲ್ಲ ವ್ಯವಸ್ಥೆಗಳು ಜೀನ್‌ಗಳು ತಮ್ಮ ಉಳಿವಿಗಾಗಿ ಮಾಡಿಕೊಂಡಿರುವುದಷ್ಟೇ ಎನ್ನುವ ಈ ಪುಸ್ತಕದ ಬೋಧೆಯನ್ನು ಅರಗಿಸಿಕೊಳ್ಳಲು ಕಷ್ಟವಾದೀತು. ಆದರೆ ಡಾಕಿನ್ಸ್‌ರ ಸಂಶೋಧನೆ ಮತ್ತು ವಾದಸರಣಿಯನ್ನು ಸುಲಭವಾಗಿ ಅಲ್ಲಗಳೆಯಲೂ ಬರುವುದಿಲ್ಲ. ಈ ಪುಸ್ತಕವು ಪ್ರಕಟವಾದಾಗ ಡಾಕಿನ್ಸ್‌ರು ಬಹಳಷ್ಟು ವಿರೋಧವನ್ನು ಎದುರಿಸಬೇಕಾಯಿತು. ಅದರಲ್ಲಿಯೂ ಹೇಳಿಕೇಳಿ ಅವರು ನಾಸ್ತಿಕವಾದಿಗಳು.ಏಸುವಿನ ತಾಯಿ ಕನ್ಯೆ ಮೇರಿ ಎನ್ನುವ ಕ್ರಿಶ್ಚಿಯನ್ ನಂಬಿಕೆಯಲ್ಲಿ, ಹೀಬ್ರೂವಿನ ‘ಚಿಕ್ಕ ಹುಡುಗಿ’ ಎನ್ನುವ ಅರ್ಥದ ಪದ ಗ್ರೀಕ್‌ಗೆ ಭಾಷಾಂತರವಾಗುವಾಗ ಕನ್ಯೆ ಎಂದಾಗಿ ಹೇಗೆ ಸೇರಿಕೊಂಡಿತು ಎನ್ನುವುದನ್ನು ಸಾಕ್ಷಿ ಸಮೇತ ತಿಳಿಸುವಾಗಲೂ ಯಾರ ನಂಬಿಕೆಗೂ ಘಾತವಾಗದಂತೆ ಎಚ್ಚರ ವಹಿಸುವಷ್ಟು ಸೂಕ್ಷ್ಮಮತಿಗಳು ಅವರು. ಭಗವದ್ಗೀತೆ, ರಾಮ, ಕೃಷ್ಣ, ಶಂಕರ, ರಾಮಾನುಜ ಮುಂತಾಗಿ ಚರ್ಚಿಸುವಾಗ ಮತ್ತೊಬ್ಬರ ನಂಬಿಕೆಗಳ ಮೇಲೆ ಅನಾಗರಿಕವಾಗಿ ಪ್ರಹಾರ ಮಾಡುವ ಇಂದಿನ ನಮ್ಮ ಸ್ಥಿತಿಯಲ್ಲಿ ಡಾಕಿನ್ಸ್‌ರಿಂದ ಕಲಿಯುವುದು ಬಹಳವಿದೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.