ಗುರುವಾರ , ಏಪ್ರಿಲ್ 15, 2021
30 °C

ಹಂತಕರ ಕಥೆ ಮುಂದುವರಿದಾಗ...

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

`ದಂಡುಪಾಳ್ಯ~ದ ಹಂತಕರ ಕಥನವಿನ್ನೂ ಮುಗಿದಿಲ್ಲ. ಅದರ ಹಿಂದಿರುವ ಶಕ್ತಿಗಳು, ಅವರ ಮತ್ತಷ್ಟು ಕ್ರೌರ್ಯ ಕೃತ್ಯಗಳು, ಅದರ ಹಿನ್ನೆಲೆ ಎಲ್ಲವುಗಳಿಗೂ ಉತ್ತರ- ದಂಡುಪಾಳ್ಯ 2~!

`ದಂಡುಪಾಳ್ಯ~ ಚಿತ್ರದ ಅಂತ್ಯಕ್ಕೆ ಹೀಗೊಂದು ಘೋಷಣೆ ನೀಡಿದ್ದಾರೆ ನಿರ್ದೇಶಕ ಶ್ರೀನಿವಾಸರಾಜು.ಈಗ ತೆರೆಮೇಲೆ ಚಿತ್ರಿಸಿರುವುದು ದಂಡುಪಾಳ್ಯ ಗ್ಯಾಂಗ್‌ನ ಕೊಲೆಪಾತಕದ ಒಂದು ಮುಖವನ್ನಷ್ಟೆ. ಈ ಹತ್ಯೆಗಳ ಹಿಂದೆ ಹಲವು ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಅವುಗಳನ್ನು ಎರಡನೇ ಭಾಗ ಅನಾವರಣಗೊಳಿಸಲಿದೆ ಎನ್ನುತ್ತಾರೆ ಶ್ರೀನಿವಾಸರಾಜು. ಚಿತ್ರಕ್ಕೆ ಮೊದಲ ಕೆಲವು ದಿನಗಳಲ್ಲಿ ರಾಜ್ಯದಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬ ಖುಷಿ ಅವರದು.`ಮೊದಲನೇ ಭಾಗದಲ್ಲಿ ಹಂತಕರ ತಂಡ ಬಂಧನಕ್ಕೊಳಗಾಗಿ ಶಿಕ್ಷೆಗೆ ಒಳಗಾಗುವವರೆಗಿನ ಕಥೆಯನ್ನು ಮಾತ್ರ ತೆಗೆದುಕೊಳ್ಳಲಾಗಿದೆ. ಅವರು ಪೊಲೀಸರಿಂದ ತಪ್ಪಿಸಿಕೊಳ್ಳುವ ಕಥೆ ಈ ಭಾಗದಲ್ಲಿ ಮುಂದುವರಿಯುತ್ತದೆ. ಪೂಜಾ ಗಾಂಧಿ, ಮಕರಂದ್ ದೇಶಪಾಂಡೆ ಸೇರಿದಂತೆ ಇಲ್ಲಿರುವ ಕಲಾವಿದರ ಚಿತ್ರತಂಡ ಅಲ್ಲಿಯೂ ಇರುತ್ತದೆ. ಜತೆಗೆ ಓಂಪುರಿ, ಮನೋಜ್ ಬಾಜಪೇಯಿ ಮತ್ತು ಕೆಲವು ಖ್ಯಾತ ಕಲಾವಿದರನ್ನು ಕರೆತರುವ ಉದ್ದೇಶವಿದೆ. ಇದೇ ತಾಂತ್ರಿಕ ವರ್ಗವೇ ಕೈಜೋಡಿಸಲಿದೆ~ ಎನ್ನುತ್ತಾರೆ ಅವರು.ಅವರ ಪ್ರಕಾರ `ದಂಡುಪಾಳ್ಯ~ ಚಿತ್ರದಲ್ಲಿನ ಹಸಿ ಬಿಸಿ ದೃಶ್ಯಗಳು ಕಾಲ್ಪನಿಕವಲ್ಲ. ವಾಸ್ತವವಾಗಿ ನಡೆದಿರುವಂಥದ್ದು. ಅದನ್ನು ನೇರವಾಗಿಯೇ ತೋರಿಸುವುದು ಅವರ ಉದ್ದೇಶವಂತೆ. ಒಂದು ಸಿನಿಮಾದಲ್ಲಿ ಆ ಕಥೆಯನ್ನು ಹೇಗೆ ಕಟ್ಟಿಕೊಡಬಹುದೋ ಹಾಗೆ ಚಿತ್ರಿಸಿದ್ದೇನೆಂಬುದು ಅವರ ವಾದ.ಅದೇನೇ ಇದ್ದರೂ ತೆರೆಯ ಮೇಲೆ ತೋರಿಸಿದ ಕ್ರೌರ್ಯ ಹೆಚ್ಚಾಯಿತು ಎನ್ನುವವರಿಗೆ ಎರಡನೇ ಭಾಗ ಉತ್ತರ ನೀಡಲಿದೆಯಂತೆ. ಇಲ್ಲಿ ಮತ್ತಷ್ಟು ನೈಜ ಅಂಶಗಳು, ರಾಜಕೀಯ ಇತಿಹಾಸದ ಪುಟಗಳು ತೆರೆದುಕೊಳ್ಳಲಿವೆ. ದಂಡುಪಾಳ್ಯದ ದಂಡಯಾತ್ರೆ ಇನ್ನಷ್ಟು ರೋಚಕವಾಗಿ ಮೂಡಿಬರಲಿದೆ ಎಂದು ವಿಶ್ವಾಸದಿಂದ ನುಡಿಯುತ್ತಾರೆ ಶ್ರೀನಿವಾಸರಾಜು.ವಿವಾದ ಪಾಳ್ಯ

ಚಿತ್ರದ ಆರಂಭದಿಂದ ಬಿಡುಗಡೆಯಾದ ಬಳಿಕವೂ ದಂಡುಪಾಳ್ಯ ವಿವಾದದಿಂದಾಗಿ ಸುದ್ದಿಯಲ್ಲಿದೆ. `ದಂಡುಪಾಳ್ಯ~ ಎಂಬ ಶೀರ್ಷಿಕೆಯನ್ನು ಇಡುವುದರ ಬಗ್ಗೆಯೇ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಆಂಧ್ರ ಮೂಲದವರಾದ ಹಂತಕರು ದಂಡುಪಾಳ್ಯದ ಸಮೀಪ ನೆಲೆಸಿದ್ದರು. ಅವರನ್ನು ದಂಡುಪಾಳ್ಯದ ಹಂತಕರು ಎಂದೇ ಕರೆಯಲಾಗುತ್ತದೆ.ಆದರೆ ಅದೇ ಹೆಸರನ್ನು ಚಿತ್ರಕ್ಕೆ ಇಡುವುದು ಎಷ್ಟು ಸಮಂಜಸ. ಇದರಿಂದ ಊರಿಗೆ ಮತ್ತಷ್ಟು ಕಳಂಕ ಅಂಟುತ್ತದೆ. ರಾಜ್ಯದ ಜನರಲ್ಲಿ ಈ ಊರಿನ ಬಗ್ಗೆ ಕೆಟ್ಟ ಭಾವನೆ ಮೂಡುತ್ತದೆ ಎನ್ನುವುದು ದಂಡುಪಾಳ್ಯದ ನಿವಾಸಿಗಳ ಆಕ್ರೋಶವಾಗಿತ್ತು. ಆದರೆ ಶೀರ್ಷಿಕೆ ಬದಲಿಸುವಂತೆ ಒಬ್ಬರು ಕೋರಿದ್ದ ಮನವಿಯನ್ನು ಕೋರ್ಟ್ ಪುರಸ್ಕರಿಸಲಿಲ್ಲ.ಚಿತ್ರದ ಪೋಸ್ಟರ್‌ಗಳಲ್ಲಿ ಪೂಜಾ ಗಾಂಧಿ ಬೆನ್ನು ಪ್ರದರ್ಶನ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ದಂಡುಪಾಳ್ಯದ ಗ್ಯಾಂಗ್‌ನ ಸದಸ್ಯೆ ಲಕ್ಷ್ಮಿಯಾಗಿ ನಟಿಸಿರುವ ಪೂಜಾ ಗಾಂಧಿ ಅರೆನಗ್ನರಾಗಿ ಕಾಣಿಸಿಕೊಂಡಿದ್ದಾರೆ ಎಂದು ಹಲವು ಪ್ರತಿಭಟನೆಗಳು ನಡೆದವು. ಚಿತ್ರ ಬಿಡುಗಡೆಯಾದ ದಿನವೂ ಸಂಘಟನೆಯೊಂದರ ಸದಸ್ಯರು ಅನುಪಮ ಚಿತ್ರಮಂದಿರ ಮುಂದೆ ಹಾಕಲಾಗಿದ್ದ ಪೋಸ್ಟರ್‌ಗಳನ್ನು ಹರಿದು ಪೂಜಾ ಗಾಂಧಿಗೆ ಧಿಕ್ಕಾರ ಕೂಗಿದರು.ಇವುಗಳಿಗೆಲ್ಲಾ ಚಿತ್ರತಂಡ ಸೊಪ್ಪುಹಾಕಲಿಲ್ಲ. ಇದು ಸಂಪೂರ್ಣ ಮನರಂಜನಾತ್ಮಕ ಚಿತ್ರ ಎಂದು ಹೇಳಿದ್ದರು ಶ್ರೀನಿವಾಸರಾಜು. ಆದರೆ ಚಿತ್ರದ ತುಂಬಾ ಇರುವುದು ರಕ್ತಪಾತದ, ಅತ್ಯಾಚಾರದ, ದರೋಡೆಯ ಹಸಿ ಹಸಿ ಚಿತ್ರಣಗಳು. ತಲ್ಲಣ ಉಂಟು ಮಾಡುವ ಅಪರಾಧಗಳು ಮನರಂಜನೆಯೇ ಎಂಬ ಪ್ರಶ್ನೆ ಉದ್ಭವಿಸಿತ್ತು.ವಿವಾದಗಳ ನಡುವೆಯೂ ಚಿತ್ರಕ್ಕೆ ಸಿಕ್ಕಿರುವ ಆರಂಭಿಕ ಪ್ರತಿಕ್ರಿಯೆಯಿಂದ ಪುಳಕಿತರಾಗಿರುವ ಶ್ರೀನಿವಾಸರಾಜು ಕತ್ತು ಕೊಯ್ಯುವ ದೃಶ್ಯಗಳ `ಅಭಿಯಾನ~ವನ್ನು ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ. ಇದರ ಮೂಲಕ ಮತ್ತಷ್ಟು `ಮನರಂಜನೆ~ ನೀಡುವುದು ಅವರ ಬಯಕೆ!

ಚಿತ್ರ: ಕೆ.ಎನ್. ನಾಗೇಶ್‌ಕುಮಾರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.