ಮಂಗಳವಾರ, ಮೇ 11, 2021
21 °C

ಹಂಪಿ ರಥಬೀದಿ ತೆರವು-ಸ್ವಾಗತಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂಪಿಯ ವಿರೂಪಾಕ್ಷ ದೇವಾಲಯದ ಮುಂಭಾಗದಿಂದ ಮಾತಂಗ ಪರ್ವತದ ಬುಡದ ಎದುರು ಬಸವನ ವಿಗ್ರಹದವರೆಗಿನ ರಥಬೀದಿಯ ಅಕ್ಕಪಕ್ಕದ ಮಂಟಪಗಳಲ್ಲಿ ಅಕ್ರಮ ಕಟ್ಟಡಗಳನ್ನು ಕಟ್ಟಿಕೊಂಡು ವಾಸವಾಗಿರುವವರನ್ನು ತೆರವುಗೊಳಿಸುವ ಕೆಲಸ ಆರಂಭವಾಗಿರುವುದು ಬಹು ಶ್ಲಾಘನೀಯವಾದುದು.ಆ ಕಟ್ಟಡಗಳಲ್ಲಿ ಮತ್ತು ಹಿಂಭಾಗದ ಮನೆಗಳಲ್ಲಿ ಅನೇಕ ಬಗೆಯ ಅಕ್ರಮಗಳು ನಡೆಯುತ್ತಿದ್ದುವು-ಅಲ್ಲಿ ಕಾಫಿ ಟೀ ದೋಸೆ ಸಿಗರೇಟು ಮಾತ್ರವಲ್ಲದೆ ಮಾದಕ ದ್ರವ್ಯಗಳ ಜೊತೆ ಮಾಂಸಾಹಾರ ಲಭ್ಯವಿತ್ತು. ಅಶ್ಲೀಲ ಕೃತ್ಯಗಳೂ ಅಲ್ಲಿ ನಡೆಯುತ್ತಿದ್ದುವು.ಹಂಪಿ ಬರೀ ಪ್ರವಾಸಿ ಕೇಂದ್ರವಲ್ಲ ಅದು ಇಡೀ ಭಾರತೀಯರ ಪವಿತ್ರ ಯಾತ್ರಾ ಕ್ಷೇತ್ರ. ಈಗ ಹಂಪಿ ಅಭಿವೃದ್ಧಿ ಪ್ರಾಧಿಕಾರವು ಅದನ್ನು ಗಮನದಲ್ಲಿಟ್ಟುಕೊಂಡು ಇರುವ ಮಂಟಪಗಳನ್ನು ಹಾಗೇ ಉಳಿಸಿ ಅವುಗಳ ಒಳಗೆ ಅಥವಾ ಪಕ್ಕಗಳಲ್ಲಿ ಕಟ್ಟಿಕೊಂಡಿದ್ದ ಮನೆಗಳನ್ನು ಧ್ವಂಸಗೊಳಿಸುತ್ತಿದೆ.

 

ಈ ಕಾರ್ಯ ಮುಂದುವರಿದು ಕ್ರಮೇಣ ಹಂಪಿಯಲ್ಲಿನ ಪವಿತ್ರ ವಾತಾವರಣವನ್ನು ಉಳಿಸುವ ಕೆಲಸ ಸಾಗಬೇಕು. ಮಹಾರಾಷ್ಟ್ರ ಸರ್ಕಾರವು ಪ್ರಸಿದ್ಧ ಪ್ರವಾಸಿ ಕೇಂದ್ರಗಳಾದ ಎಲ್ಲೋರ ಅಜಂತಗಳನ್ನು ಸಂರಕ್ಷಿಸಿರುವ ರೀತಿ ನಮಗೆ ಮಾದರಿಯಾಗಬೇಕು.ಅಷ್ಟೇ ಮುಖ್ಯವಾದುದು ರಥ ಬೀದಿಯಿಂದ ಒಕ್ಕಲೆಬ್ಬಿಸುತ್ತಿರುವ ನಿವಾಸಿಗಳಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರವು ಸೂಕ್ತ ಕಡೆ ಜಾಗ ನೀಡಿ, ಮನೆ ಕಟ್ಟಿಸಿಕೊಟ್ಟು ಅವರ ಜೀವನ ಹಾಳಾಗದಂತೆ ಏನು ಸಹಾಯ ಮಾಡಬೇಕೋ ಅದನ್ನು ಮಾಡಬೇಕು.ಅವರು ನಿರಾಶ್ರಿತರಾಗಿ ಕಷ್ಟದಿಂದ ಜೀವನ ಸಾಗಿಸುವಂತಾದರೆ ಅದು ಒಂದು ಅಕ್ಷಮ್ಯ ಅಪರಾಧವಾಗುತ್ತದೆ. ಈ ಕಡೆಗೂ ಸರ್ಕಾರ, ಹಂಪಿ ಅಭಿವೃದ್ಧಿ ಪ್ರಾಧಿಕಾರವು ತೀವ್ರ ಗಮನಹರಿಸುತ್ತಿದೆಯೆಂದು ನಾನು ಕೇಳಿದ್ದೇನೆ. ಅದು ನಿಜವಾಗಿರಲಿ ಎಂದು ಹಾರೈಸುತ್ತೇನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.