ಗುರುವಾರ , ಮೇ 6, 2021
23 °C

ಹಗರಿಬೊಮ್ಮನಹಳ್ಳಿ ಬಂದ್: ನೀರಸ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ. Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಂಧನ ವಿರೋಧಿಸಿ ಬುಧವಾರ ಬಿಜೆಪಿ ಕ್ಷೇತ್ರ ಘಟಕ ನಡೆಸಿದ ಪ್ರತಿಭಟನಾ ಮೆರವಣಿಗೆ ಮತ್ತು ರಸ್ತೆ ತಡೆ ಶಾಂತ ರೀತಿಯಲ್ಲಿ ಜರುಗಿದರೂ ಪಟ್ಟಣದ ಬಂದ್‌ಗೆ ನೀಡಿದ್ದ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ಪಕ್ಷದ ಅಧ್ಯಕ್ಷ ಪಿ. ಚನ್ನಬಸವನ ಗೌಡರ ನೇತೃತ್ವದಲ್ಲಿ ಕ್ಷೇತ್ರ ವ್ಯಾಪ್ತಿಯ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇಲ್ಲಿನ ಈಶ್ವರ ದೇವಸ್ಥಾನದ ಆವರಣದಿಂದ ಪ್ರತಿಭಟನಾ ರ‌್ಯಾಲಿಯ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸುವ ಮುನ್ನ ಬಸವೇಶ್ವರ ಬಜಾರ್‌ನ ಸರ್ಕಲ್ ಬಳಿ ಬಹಿರಂಗ ಸಮಾವೇಶ ಹಮ್ಮಿಕೊಂಡಿದ್ದರು.ಪ್ರತಿಭಟನಾ ರ‌್ಯಾಲಿಯಲ್ಲಿ ಭಾಗ ವಹಿಸಿದ್ದ ಸಾವಿರಾರು ಕಾರ್ಯಕರ್ತರು ರ‌್ಯಾಲಿಯುದ್ದಕ್ಕೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ ಸಿಂಗ್ ವಿರುದ್ಧ ಘೋಷಣೆಗಳನ್ನು ಕೂಗಿದರು. ರ‌್ಯಾಲಿಯ ಕೊನೆಗೆ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನರೇಗಲ್ ಕೊಟ್ರೇಶ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ, ಸಿಬಿಐ ಯಾವುದೇ ಪೂರ್ವಭಾವಿಯಾಗಿ ನೋಟಿಸ್ ನೀಡದೆ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ ಯಾಗಿದೆ ಎಂದು ದೂರಿದರು.ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗಿರಿರಾಜರೆಡ್ಡಿ ಮಾತನಾಡಿ, ಸಿಬಿಐ ಕೇಂದ್ರ ಸರಕಾರದ ಕೈಗೊಂಬೆ, ಸೋನಿಯಾ ಗಾಂಧಿ ದೇಶದಲ್ಲಿ ಕಾಂಗ್ರೆಸ್ ಹೊರತುಪಡಿಸಿ ಬೇರಾವ ರಾಜಕೀಯ ಪಕ್ಷಗಳು ಅಧಿಕಾರ ನಡೆಸಬಾರದು ಎಂಬ ದುರುದ್ದೇಶದಿಂದ ಸಿಬಿಐ ತನಿಖೆಯಲ್ಲಿ ಅನಗತ್ಯ ಹಸ್ತಕ್ಷೇಪ ನಡೆಸಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದ್ದಾರೆ ಎಂದು ಕಿಡಿಕಾರಿದರು.ನಂತರ ಪ್ರತಿಭಟನೆಕಾರರು ದೇಶದ ಜನತೆ ಸಿಬಿಐ ಮೇಲೆ ವಿಶ್ವಾಸವಿಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವ ಮನವಿಯನ್ನು ತಹಸೀಲ್ದಾರರ ಮೂಲಕ ರಾಷ್ಟ್ರಪತಿ ಗಳಿಗೆ ಸಲ್ಲಿಸಿದರು.ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳು, ಸಹಕಾರಿ ಸಂಘ ಸಂಸ್ಥೆಗಳು, ರಾಷ್ಟ್ರೀಕೃತ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಪಟ್ಟಣದ ಜನನಿಬಿಡ ಪ್ರದೇಶಗಳಾದ ತರಕಾರಿ ಮಾರುಕಟ್ಟೆ, ಹಳೇ ಹಗರಿಬೊಮ್ಮನ ಹಳ್ಳಿ, ಕೂಡ್ಲಿಗಿ ಸರ್ಕಲ್ ಮತ್ತು ಸಿನಿಮಾ ಸರ್ಕಲ್‌ಗಳಿಗೆ ಬಂದ್ ಬಿಸಿ ತಟ್ಟಲಿಲ್ಲ.ಪಟ್ಟಣದ ಮುಖ್ಯ ವ್ಯಾಪಾರ ಕೇಂದ್ರವಾದ ಬಸವೇಶ್ವರ ಬಜಾರ್‌ನ ಅಂಗಡಿ ಮುಂಗಟ್ಟುಗಳು ಪ್ರತಿಭಟನಾ ರ‌್ಯಾಲಿ ಹಾದು ಹೋಗುತ್ತಿದ್ದ ಸಂದರ್ಭ ದಲ್ಲಿ ಮಾತ್ರ ಮುಚ್ಚಲ್ಪಟ್ಟಿದ್ದವು. ಪ್ರತಿಭಟನೆ ಮುಗಿಯುತ್ತಿದ್ದಂತೆ ಎಂದಿ ನಂತೆ ಈ ಪ್ರದೇಶದ ವ್ಯಾಪಾರಸ್ಥರು ವಹಿವಾಟಿನಲ್ಲಿ ತೊಡಗಿಕೊಂಡರು.ಹೊಸಪೇಟೆ, ಕೂಡ್ಲಿಗಿ ಮತ್ತು ಹರಪನಹಳ್ಳಿ ಹಾಗೂ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ ಬಸ್‌ಗಳು ಬೈಪಾಸ್ ರಸ್ತೆಯ ಮೂಲಕ ಬಸ್ ನಿಲ್ದಾಣಕ್ಕೆ ತೆರಳಿದವು. ಯಾವುದೇ ಬಸ್‌ಗಳು ಗ್ರಾಮೀಣ ಬಸ್ ನಿಲ್ದಾಣಕ್ಕೆ ಆಗಮಿಸಲಿಲ್ಲ.ಪರಿಣಾಮವಾಗಿ ಹಲವಾರು ಜನರು ಆಟೋಗಳ ಮೂಲಕ ಮನೆಗಳಿಗೆ ತೆರಳಿದರೆ, ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ರೈತರು ಖರೀದಿ ಪ್ರಕ್ರಿಯೆ ನಡೆಸಲು ನಡೆದುಕೊಂಡು ಬಸವೇಶ್ವರ ಬಜಾರ್‌ನತ್ತ ದೌಡಾಯಿಸಿದರು.ಎಪಿಎಂಸಿ ಅಧ್ಯಕ್ಷ ಕೆ.ರೋಹಿತ್, ತಾ.ಪಂ. ಮಾಜಿ ಅಧ್ಯಕ್ಷ ಪಿ.ಸೂರ್ಯ ಬಾಬು, ತಾ.ಪಂ.ಸದಸ್ಯ ಬಾಳಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಎಂ. ಚೋಳರಾಜ್, ಚಿಂತ್ರಪಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಟಿ.ಕಾಸೀಂಸಾಹೇಬ್, ಸದಸ್ಯರಾದ ಎಸ್. ಅಂಬಣ್ಣ, ಸೆರೆಗಾರ್ ಹುಚ್ಚಪ್ಪ, ಹಬೊಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಸೋಮಶೇಖರಗೌಡ ಪಾಟೀಲ್, ಮುಖಂಡರಾದ ಮಾತಾ ಗ್ಯಾಸ್ ಎರಿಸ್ವಾಮಿ, ಹೊಳಗುಂದಿ ಶೇಖರಪ್ಪ, ಮಹೇಶ್, ಖಲೀಲ್‌ಸಾಬ್, ಸಿದ್ದಪ್ಪ, ಬಡಿಗೇರ್, ತರುಣಿ ಬಸವ ರಾಜ್, ಗುತ್ತಿಗೆದಾರ ದೊಡ್ಡಬಸಪ್ಪ, ಮಂಜುಗೌಡ ಹಾಗೂ ಸಿದ್ದಪ್ಪ ಪೂಜಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.