ಮಂಗಳವಾರ, ಜನವರಿ 28, 2020
24 °C

ಹಡಗು ಕ್ಯಾಪ್ಟನ್‌ಗೆ ಗೃಹ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಮ್ (ಐಎಎನ್‌ಎಸ್): ಇಲ್ಲಿನ ಗಿಗ್ಲಿಯೊ ದ್ವೀಪದ ಬಳಿ `ಕೋಸ್ಟಾ ಕಾನ್‌ಕಾರ್ಡಿಯಾ~ ಹಡಗು ದುರಂತಕ್ಕೀಡಾದ ಸಂದರ್ಭದಲ್ಲಿ ಪ್ರಯಾಣಿಕರ ಜೀವ ಉಳಿಸಬೇಕಾಗಿದ್ದ ಕ್ಯಾಪ್ಟನ್, ಎಲ್ಲರಿಗಿಂತ ಮೊದಲು ಜೀವರಕ್ಷಕ ದೋಣಿಯಲ್ಲಿ ತೆರಳಿದ್ದರು ಎಂಬ ವಿಷಯ ಇದೀಗ ದೃಢಪಟ್ಟಿದೆ.ಬಂದರು ಅಧಿಕಾರಿಗಳು ಮತ್ತು ಕ್ಯಾಪ್ಟನ್ ನಡುವೆ ನಡೆದ ಸಂಭಾಷಣೆಯಲ್ಲಿ ಈ ವಿಷಯ ಸ್ಪಷ್ಟವಾಗಿದ್ದು, ದುರಂತ ಸಂಭವಿಸಿದ ಬಳಿಕ ನಡೆದ ಈ ಸಂಭಾಷಣೆಯ ವಿವರವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಲಾಗಿದೆ.

ಕ್ಯಾಪ್ಟನ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.`ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸುವಂತೆ ಸ್ಥಳೀಯ ಅಧಿಕಾರಿಗಳು ಮಾಡಿದ ಕೋರಿಕೆಯನ್ನು ಕ್ಯಾಪ್ಟನ್ ಫ್ರಾನ್ಸೆಸ್ಕೊ ಶೆಟ್ಟಿನೊ ನಿರ್ಲಕ್ಷಿಸಿದ್ದರು.  ನೀವು ಹಡಗಿಗೆ ಹಿಂತಿರುಗಿ ಎಷ್ಟು ಮಂದಿ ಪ್ರಯಾಣಿಕರು ಇದ್ದಾರೆ ಎಂಬ ಮಾಹಿತಿಯನ್ನು ಕೂಡಲೇ ನೀಡಲೇಬೇಕು. ಇದು ನಮ್ಮ ಆದೇಶ ಎಂದು ಹೇಳಿದ್ದರೂ ಅದಕ್ಕೆ ಅವರು ಕಿವಿಗೊಡಲಿಲ್ಲ~ ಎಂದು ಬಂದರು ಅಧಿಕಾರಿ ಡಿ ಫಾಲ್ಕೊ ದೂರಿದ್ದಾರೆ.

 

`ಪ್ರಯಾಣಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರಿದ್ದಾರೆ, ನನಗೆ ಜೀವರಕ್ಷಕ ದೋಣಿಯಲ್ಲಿ ಸಾಗದೇ ಬೇರೆ ಮಾರ್ಗವಿಲ್ಲ. ಜತೆಗೆ ಈಗಾಗಲೇ ಕತ್ತಲೆ ಆವರಿಸಿದೆ~ ಎಂದು ಕ್ಯಾಪ್ಟನ್ ಉತ್ತರಿಸಿದರು ಎಂದು ಫಾಲ್ಕೊ ತಿಳಿಸಿದ್ದಾರೆ.ಗೃಹ ಬಂಧನ: ಶೆಟ್ಟಿನೊ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಹತ್ಯೆ ಮತ್ತು ಜವಾಬ್ದಾರಿಯಿಂದ ನುಣುಚಿಕೊಂಡ ಆರೋಪದ ಮೇರೆಗೆ ಅವರು ಹಲವು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬರಬಹುದು ಎಂದು ಹೇಳಲಾಗಿದೆ.ಈ ಮಧ್ಯೆ, ರಕ್ಷಣಾ ಕಾರ್ಯಕರ್ತರು ಮಂಗಳವಾರ ಇನ್ನೂ ಐದು ಶವಗಳನ್ನು ಪತ್ತೆಹಚ್ಚುವುದರೊಂದಿಗೆ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 11ಕ್ಕೆ ಏರಿದೆ.

 

ಪ್ರತಿಕ್ರಿಯಿಸಿ (+)