ಹಣದುಬ್ಬರ ಇನ್ನಷ್ಟು ಇಳಿದರೆ ಬಡ್ಡಿ ದರ ಕಡಿತ: ಆರ್ಬಿಐ
ನವದೆಹಲಿ(ಪಿಟಿಐ): ಇಳಿಮುಖವಾಗಿರುವ ಹಣದುಬ್ಬರ ಪ್ರಮಾಣವು ಇದೇ ರೀತಿ ಸಾಗುತ್ತಿದ್ದರೆ ಬಡ್ಡಿದರ ತಗ್ಗಿಸುವ ಬಗ್ಗೆ ಪರಾಮರ್ಶಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗುರುವಾರ ತಿಳಿಸಿದೆ.
ಸಗಟು ಮಾರಾಟ ದರಸೂಚಿ ಆಧರಿಸಿದ ಹಣದುಬ್ಬರ ಜೂನ್ನಲ್ಲಿ ಶೇ 7.25ರಷ್ಟಿದ್ದುದು ಜುಲೈನಲ್ಲಿ ಶೇ 6.87ಕ್ಕೆ ತಗ್ಗಿದೆ. ಹಾಗಿದ್ದೂ `ಆರ್ಬಿಐ~ನ ನಿರೀಕ್ಷೆಯ `ಸಮಾಧಾನಕರ ಮಟ್ಟ~ವಾದ ಶೇ 5-6ಕ್ಕಿಂತಲೂ ತುಸು ಮೇಲೆಯೇ ಇದೆ.
`ಹಣದುಬ್ಬರ ಮತ್ತಷ್ಟು ಇಳಿಯುತ್ತಿದ್ದಂತೆಯೇ ಬಡ್ಡಿದರ ಕಡಿತ ಬಗ್ಗೆ ಚಿಂತಿಸಲಾಗುವುದು. ಹಣದುಬ್ಬರ ಶೇ 5ರಷ್ಟಿದ್ದರೆ ಅದು ಸಮಾಧಾನಕರ ಮಟ್ಟವಾಗಿದೆ~ ಎಂದು ಆರ್ಬಿಐ ಉಪ ಗವರ್ನರ್ ಕೆ.ಸಿ.ಚಕ್ರವರ್ತಿ ಸುದ್ದಿಗಾರರಿಗೆ ತಿಳಿಸಿದರು.
ಆರ್ಬಿಐ ಸೆಪ್ಟೆಂಬರ್ 17ರಂದು `ಹಣಕಾಸು ನೀತಿ ಪರಾಮರ್ಶೆ~ ನಡೆಸಲಿದೆ. ಜುಲೈನಲ್ಲಿನ ಪರಾಮರ್ಶೆ ವೇಳೆ ಬಡ್ಡಿದರದಲ್ಲಿ (ಶೇ 8) ಯಾವುದೇ ಬದಲಾವಣೆ ಮಾಡಿರಲಿಲ್ಲ. ಸಚಿವ ಪಿ.ಚಿದಂಬರಂ ಅವರು ಹಣಕಾಸು ಖಾತೆ ವಹಿಸಿಕೊಂಡ ನಂತರ ಈಗಿನ ಬಡ್ಡಿದರ ಸಾಲ ಪಡೆಯುವವರಿಗೆ ಭಾರಿ ಹೊರೆ ಎನಿಸುವಂತಿದೆ ಎಂದು ಪ್ರತಿಕ್ರಿಯಿಸಿದ್ದರು. ಹಾಗಾಗಿ ಸೆ. 17ರ ಪರಾಮರ್ಶೆ ವೇಳೆ ಬಡ್ಡಿದರವನ್ನು ಆರ್ಬಿಐ ತಗ್ಗಿಸುವ ನಿರೀಕ್ಷೆ ಇದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.