ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗಲೇ ನಕ್ಸಲರು ಮತ್ತೆ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಛತ್ತೀಸಗಡದ ಸುಕ್ಮಾ ಜಿಲ್ಲೆಯ ಜೀರಮ್ನುಲ್ಲಾ ಬಳಿ ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ಮಳೆಗರೆದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಿಬ್ಬಂದಿಯೂ ಸೇರಿದಂತೆ 15 ಪೊಲೀಸರು ಹಾಗೂ ಒಬ್ಬ ನಾಗರಿಕನನ್ನು ಹತ್ಯೆ ಮಾಡಲಾಗಿದೆ. ಇವರೆಲ್ಲ ಭದ್ರತಾ ಪಡೆಯ ಬೆಂಗಾವಲು ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಕೈಗೊಂಡಿದ್ದ ರಸ್ತೆ ಸುಧಾರಣೆ ಕಾರ್ಯಕ್ಕೆ ನಿಯೋಜನೆಗೊಂಡವರು.

ಇಡೀ ತುಕಡಿಯಲ್ಲಿ ಇದ್ದವರು ಸಿಆರ್ಪಿಎಫ್ ಯೋಧರೂ ಸೇರಿ 48 ಜನ. ಬೆಳಗಿನ 10.20ರ ಸುಮಾರಿಗೆ ಇವರನ್ನು ಸುತ್ತುವರಿದ ತಂಡದಲ್ಲಿ 100ಕ್ಕೂ ಹೆಚ್ಚು ನಕ್ಸಲರು ಇದ್ದರು ಎನ್ನಲಾಗಿದೆ. ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿದರೂ ನಕ್ಸಲರ ಕಡೆಯ ಸಾವು ನೋವಿನ ಮಾಹಿತಿ ಸಿಕ್ಕಿಲ್ಲ. ಪೊಲೀಸರ ಬಳಿ ಇದ್ದ ಸ್ವಯಂಚಾಲಿತ ಬಂದೂಕುಗಳನ್ನೂ ನಕ್ಸಲರು ಅಪಹರಿಸಿದ್ದಾರೆ ಎಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇಡೀ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಭದ್ರತಾ ಪಡೆಗಳ ಕಡೆಯಿಂದ ಸನ್ನದ್ಧತೆಯ ಕೊರತೆ, ಗುಪ್ತಚರ ವೈಫಲ್ಯ ಎದ್ದು ಕಾಣುತ್ತದೆ.

ಏಕೆಂದರೆ ಈ ಹೇಯ ಹತ್ಯೆ ನಡೆದ ಪ್ರದೇಶದಲ್ಲಿ ನಕ್ಸಲೀಯರದ್ದೇ ಪ್ರಾಬಲ್ಯ ಎನ್ನುವುದು ಹೊಸ ಸಂಗತಿಯೇನಲ್ಲ. ಕಳೆದ ವರ್ಷದ ಮೇ ತಿಂಗಳಲ್ಲಿ ಇದೇ ಭಾಗದಲ್ಲಿ ನಕ್ಸಲರು ದಾಳಿ ನಡೆಸಿ ರಾಜ್ಯ ಕಾಂಗ್ರೆಸ್ನ ಅನೇಕ ಮುಖಂಡರೂ ಸೇರಿದಂತೆ 25 ಜನರನ್ನು ಕೊಂದಿದ್ದರು. 2010ರ ಏಪ್ರಿಲ್ನಲ್ಲಿ ಭದ್ರತಾ ಪಡೆಯ 76 ಜನರನ್ನು ಹತ್ಯೆ ಮಾಡಿದ್ದರು. ಇವೆರಡೂ ಘಟನೆಗಳ ನಂತರ ಇಡೀ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಪೊಲೀಸ್ ಕಾರ್ಯಾಚರಣೆ ಮಾಡಲಾಗಿತ್ತು. ನಂತರ ನಕ್ಸಲರ ಆರ್ಭಟ ಕಡಿಮೆಯಾಗಿತ್ತು. ಹೀಗಾಗಿ, ಅವರ ಪ್ರಭಾವ ಕ್ಷೀಣಿಸಿದೆ ಎಂದು ಭದ್ರತಾ ಪಡೆಗಳು ಭಾವಿಸಿದಂತೆ ಕಾಣುತ್ತದೆ. ಮೈಮರೆತಿದ್ದಕ್ಕೆ ದುಬಾರಿ ಬೆಲೆಯನ್ನೇ ತೆರುವಂತಾಗಿದ್ದು ದುಃಖದ ಸಂಗತಿ.

ಈ ಹತ್ಯಾಕಾಂಡದ ನಂತರ ಕೇಂದ್ರ ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ ಮತ್ತು ಛತ್ತೀಸಗಡ ಮುಖ್ಯಮಂತ್ರಿ ರಮಣಸಿಂಗ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇನ್ನಷ್ಟು ಭದ್ರತಾ ಸಿಬ್ಬಂದಿಯನ್ನು ಕಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ಕೆಲಸ ಮೊದಲೇ ಮಾಡಬಹುದಿತ್ತು. ‘ಅಲ್ಲಿ ಕೈಗೊಂಡಿದ್ದ ರಸ್ತೆ ನಿರ್ಮಾಣ ತಡೆಯುವುದೇ ದಾಳಿಯ ಉದ್ದೇಶವಾಗಿತ್ತು, ಅಭಿವೃದ್ಧಿ ಎಂದರೆ ನಕ್ಸಲರಿಗೆ ಭಯ’ ಎಂದು ಸಿಂಗ್ ಹೇಳಿದ್ದಾರೆ. ನಕ್ಸಲರ ನಿಲುವುಗಳೇನು ಎಂಬುದು ಸರ್ಕಾರಕ್ಕೆ ಮೊದಲೇ ಗೊತ್ತಿದೆ. ಭದ್ರತಾ ಲೋಪದಲ್ಲಿ ಕೇಂದ್ರ ಮತ್ತು ರಾಜ್ಯ ಎರಡರ ಪಾಲೂ ಇದೆ.

ಈಗಲೂ ಕಾಲ ಮಿಂಚಿಲ್ಲ. ಸ್ಥಳೀಯ ಆದಿವಾಸಿಗಳ ಕಷ್ಟಕ್ಕೆ ಸ್ಪಂದಿಸಿ ಒಲವು ಗಳಿಸಿಕೊಳ್ಳಬೇಕು. ವಿವಿಧ ಅಭಿವೃದ್ಧಿ ಯೋಜನೆಗಳ ಮೂಲಕ ನಕ್ಸಲ್ ಹಾವಳಿಯನ್ನು ನಿಯಂತ್ರಿಸುವ ಪ್ರಯೋಗ ದೇಶದ ಅನೇಕ ಕಡೆ ಯಶಸ್ವಿಯಾಗಿದೆ. ಅದನ್ನು ಇಲ್ಲೂ ಅನುಸರಿಸಬೇಕು. ಆದರೆ ಹಿಂದೆಂದಿಗಿಂತ ಹೆಚ್ಚು ಎಚ್ಚರದಿಂದ ಮೈಯೆಲ್ಲ ಕಣ್ಣಾಗಿ ಹೆಜ್ಜೆ ಇಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.