ಹನುಮಂತಪ್ಪನನ್ನು ಮೇಲೆತ್ತಿದ್ದೇ ವಿಸ್ಮಯ

ಭಾನುವಾರ, ಜೂಲೈ 21, 2019
25 °C
ಯೋಧನ ಜೊತೆ ಕೆಲಸ ಮಾಡಿದ್ದ ಸೈನಿಕರ ಮಾತು

ಹನುಮಂತಪ್ಪನನ್ನು ಮೇಲೆತ್ತಿದ್ದೇ ವಿಸ್ಮಯ

Published:
Updated:
ಹನುಮಂತಪ್ಪನನ್ನು ಮೇಲೆತ್ತಿದ್ದೇ ವಿಸ್ಮಯ

ಹುಬ್ಬಳ್ಳಿ: ಮದ್ರಾಸ್ ಲೈಟ್ ಇನ್‌ಫಂಟ್ರಿಯ 19ನೇ ರೆಜಿಮೆಂಟ್‌ನ 80ಕ್ಕೂ ಹೆಚ್ಚು ಸೈನಿಕರು ಕೊರೆಯುವ ಚಳಿಯನ್ನೂ ಲೆಕ್ಕಿಸದೆ 35 ಅಡಿ ಆಳದಲ್ಲಿ ಹುದುಗಿಹೋಗಿದ್ದ ಹನುಮಂತಪ್ಪ ಕೊಪ್ಪದ ಅವರನ್ನು ಮೇಲಕ್ಕೆತ್ತಿದ್ದು ಹಾಗೂ ಅವರು ಹಿಮದ ಹೆಬ್ಬಂಡೆಯೊಳಗೆ ಸಿಲುಕಿಯೂ ಆರು ದಿನ ಸಾವನ್ನು ಮುಂದಕ್ಕೆ ಹಾಕಿದ್ದು ವಿಸ್ಮಯವೇ ಸರಿ!ಫೆಬ್ರುವರಿ 3ರಂದು ಸಿಯಾಚಿನ್‌ ಪ್ರದೇಶದ ಸೋನಂ ಪೋಸ್ಟ್‌ನಲ್ಲಿ ನಡೆದ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದ ಹವಾಲ್ದಾರ್‌ ಜಿ. ರಮೇಶ್‌ ಅವರು ಹೊರಹಾಕಿದ ಉದ್ಘಾರವಿದು.‘ನಮ್ಮ ಸೇನಾ ನೆಲೆ ಯಾವ ಪರಿ ಹಾಳಾಗಿ ಹೋಗಿದೆ ಎಂದರೆ ಇಂದು ಅದನ್ನು ಗುರುತಿಸುವುದೇ ಕಷ್ಟವಾಗಿದೆ’ ಎನ್ನುತ್ತಾರೆ ಸಿಯಾಚಿನ್‌ನಲ್ಲಿರುವ 40 ಸೇನಾ ತುಕಡಿಗಳ ಪೈಕಿ ತುಕಡಿಯೊಂದರ ಭಾಗವಾಗಿರುವ ರಮೇಶ್‌. ಸಿಯಾಚಿನ್‌ನಿಂದ ಬೆಟದೂರಿಗೆ ಹನುಮಂತಪ್ಪ ಅವರ ಶವವನ್ನು ಕರೆತಂದ ಮದ್ರಾಸ್‌ ರೆಜಿಮೆಂಟ್‌ನ ಆರು ಜನರ ಪೈಕಿ ಇವರೂ ಒಬ್ಬರು.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರಮೇಶ್, ‘ಸಿಯಾಚಿನ್‌ ಪ್ರದೇಶದಲ್ಲಿ ಉಷ್ಣಾಂಶವೂ ರಾತ್ರಿ ವೇಳೆ ಮೈನಸ್‌ 45 ಡಿಗ್ರಿ ಸೆಲ್ಸಿಯಸ್‌ನಿಂದ ಮೈನಸ್‌ 60 ಡಿಗ್ರಿ ಸೆಲ್ಸಿಯಸ್‌ಗೆ ಏರು ತ್ತದೆ. ಹಿಮ ಕುಸಿತದ ಸಂದರ್ಭದಲ್ಲಿ ಮನುಷ್ಯ ಒಂದು ದಿನವೂ ಬದುಕುಳಿದ ಉದಾಹರಣೆಗಳಿಲ್ಲ. ಹನುಮಂತಪ್ಪ ದೇಹವನ್ನು ಹಿಮ ಬಂಡೆಗಳ ಅಡಿ ಯಿಂದ ಮೇಲಕ್ಕೆತ್ತಿದ್ದಾಗ ಅವರ ನಾಡಿಮಿಡಿತ ಹಾಗೂ ಹೃದಯ ಬಡಿತ ಚಲನೆ ಸ್ಥಿತಿಯಲ್ಲಿದ್ದುದನ್ನು ವೈದ್ಯರು ಪತ್ತೆ ಹಚ್ಚಿದ್ದರು’ ಎಂದರು.ಇದೇ ರೆಜಿಮೆಂಟ್‌ನ ಇನ್ನೊಬ್ಬ ಸೈನಿಕ ಲ್ಯಾನ್ಸ್ ನಾಯಕ್‌ ರಾಜು ಶಿರಗುಪ್ಪಿ ಮಾತನಾಡಿ, ‘ಹಿಮವನ್ನು ಕಡಿದು ಎಲ್ಲ 10 ಯೋಧರನ್ನು ಮೇಲಕ್ಕೆತ್ತುವ ಕೆಲಸವೂ ಅತ್ಯಂತ ವೇಗವಾಗಿ ನಡೆಯಿತು. ಹಿಮಕುಸಿತದ ಹಿಂದಿನ ಘಟನೆಗಳ ಪೈಕಿ ಈ ಕಾರ್ಯಾಚರಣೆಯೇ ಕೇವಲ ಆರು ದಿನಗಳಲ್ಲಿ ಮುಕ್ತಾಯವಾಗಿದೆ. ಕೆಲ ಘಟನೆಗಳಲ್ಲಿ 25 ವರ್ಷ ಕಳೆದ ಬಳಿಕವೂ ಯೋಧರ ಶವಗಳನ್ನು ಮೇಲಕ್ಕೆತ್ತುವ ಕೆಲಸ ಇನ್ನೂ ಆಗಿಲ್ಲ’ ಎನ್ನುವ ಮೂಲಕ ಅವರು ಪರಿಸ್ಥಿತಿಯ ಭೀಕರತೆಯನ್ನು ಬಿಚ್ಚಿಟ್ಟರು.ಕಾರ್ಯಾಚರಣೆ: ಆರು ದಿನಗಳ ಕಾರ್ಯಾಚರಣೆ  ವಿವರಿಸಿದ ರಾಜು, ‘ಸಮುದ್ರಮಟ್ಟದಿಂದ 19,600 ಅಡಿ ಎತ್ತರದಲ್ಲಿ ನೆಲೆಗೊಳಿಸಲಾದ 800 ಮೀಟರ್‌ ವಿಸ್ತಾರದ ಸೇನಾ ಶಿಬಿರದ ಮೇಲೆ 600 ಅಡಿ ಉದ್ದ, 400 ಅಡಿ ಅಗಲದ ಹಿಮಬಂಡೆ ಕುಸಿದಿದ್ದರಿಂದ ನೆಲೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಸಂಪೂರ್ಣ ಕತ್ತಲು ಕವಿದ ಹಿಮಬಂಡೆಯಡಿ ಭಾರತೀಯ ವಾಯುಸೇನೆಯ ಚೀತಾ ಹೆಲಿಕಾಪ್ಟರ್‌ ತೆರಳಿತು. ಆ ಹೆಲಿಕಾಪ್ಟರ್‌ ಚಲಾಯಿಸುತ್ತಿದ್ದ ಪೈಲಟ್‌ ಹೆಸರು ನೆನಪಿಲ್ಲ. ಆದರೆ, ಆತ ತನ್ನ ಜೀವವನ್ನೂ ಲೆಕ್ಕಿಸದೆ ಕಾರ್ಯಾಚರಣೆಗಿಳಿದ. ಏಕೆಂದರೆ, ಗುಟುಕು ಜೀವ ಹಿಡಿದುಕೊಂಡು ಹನುಮಂತಪ್ಪ ರಕ್ಷಣೆಗಾಗಿ ಕಾಯುತ್ತಿರುವುದು ಪೈಲಟ್‌ ಉತ್ಸಾಹಕ್ಕೆ ಕಾರಣವಾಗಿತ್ತು’ ಎಂದರು.ಪ್ರತಿಕೂಲ ಹವಾಮಾನದಲ್ಲೂ ಹೆಲಿಕಾಪ್ಟರ್‌ ಮೂಲಕ ಮೇಲಕ್ಕೆತ್ತಿ ಆಸ್ಪತ್ರೆಗೆ ತರಲಾಯಿತು. ದುರದೃಷ್ಟವಶಾತ್‌ ಬದುಕುಳಿಯಲಿಲ್ಲ ಎಂದು ಕಣ್ಣೀರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry