ಹರಳು–ಬೆಳಕಿನ ರಾಖಿಗೆ ಬೇಡಿಕೆ

ಹುಬ್ಬಳ್ಳಿ: ಸಹೋದರ–ಸಹೋದರಿಯರ ಬಾಂಧವ್ಯ ಬೆಸೆಯುವ ರಕ್ಷಾಬಂಧನ ಹಬ್ಬದ ಸಡಗರ ನಗರದಲ್ಲಿ ಮನೆ ಮಾಡಿದೆ. ಹರಳು ಹೊಂದಿರುವ ರಾಖಿಗಳನ್ನು ಯುವತಿಯರು ಹೆಚ್ಚಾಗಿ ಆಯ್ಕೆ ಮಾಡಿಕೊಂಡರೆ, ಬೆಳಕು (ಲೈಟ್) ಹೊತ್ತಿಕೊಳ್ಳುವ ರಾಖಿಗಳನ್ನು ಚಿಕ್ಕಮಕ್ಕಳು ಆಯ್ಕೆ ಮಾಡಿಕೊಳ್ಳುತ್ತಿದ್ದರು.
‘ಕಳೆದ ವರ್ಷಕ್ಕಿಂತ ಈ ಬಾರಿ ಶೇ 25ರಷ್ಟು ವ್ಯಾಪಾರ ಹೆಚ್ಚಾಗಿದೆ. ರಾಖಿ ಕೊಳ್ಳಲು ಹೆಚ್ಚು ಯುವತಿಯರು, ಮಹಿಳೆಯರು ಬರುತ್ತಿದ್ದಾರೆ. ಹರಳು ಮತ್ತು ಬಿಂದಿಯಿಂದ ತಯಾರಿಸಿದ ರಾಖಿಯನ್ನು ಹೆಚ್ಚು ಜನ ಕೊಳ್ಳುತ್ತಿದ್ದಾರೆ. ಜೊತೆಗೆ ಬ್ರೇಸ್ಲೆಟ್ ಮಾದರಿಯ ರಾಖಿಗೂ ಬೇಡಿಕೆ ಹೆಚ್ಚಾಗಿದೆ. ₹350–400 ದರ ಇದ್ದರೂ ಬ್ರೇಸ್ಲೆಟ್ಗಳನ್ನೇ ಹೆಚ್ಚು ಜನ ಇಷ್ಟಪಡುತ್ತಿದ್ದಾರೆ ’ ಎಂದು ದುರ್ಗದ ಬೈಲ್ನಲ್ಲಿ ರಾಖಿ ಮಾರಾಟ ಮಾಡುವ ವರ್ತಕ ಎ.ಎಂ. ದೇವರ್ ಹೇಳಿದರು.
ಅಹ್ಮದಾಬಾದ್, ಸೂರತ್, ಮುಂಬೈ, ಬೆಂಗಳೂರಿನಿಂದ ರಾಖಿಗಳನ್ನು ತರಿಸಲಾಗಿದ್ದು, ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ಹುಬ್ಬಳ್ಳಿಯಲ್ಲಿ ತಯಾರಾಗುವ ರೇಷ್ಮೆ ದಾರದ ರಾಖಿಗಳಿಗೂ ಬೇಡಿಕೆ ಕಡಿಮೆ ಇಲ್ಲ. ಇದಕ್ಕಿಂತ, ಮುಖ್ಯವಾಗಿ ಛೋಟಾ ಭೀಮ್, ಆ್ಯಂಗ್ರಿ ಬರ್ಡ್ನಂತಹ ಕಾರ್ಟೂನುಗಳ ರಾಖಿಗಳು ಪುಟಾಣಿ ಸಹೋದರಿಯರನ್ನು ಹೆಚ್ಚಾಗಿ ಆಕರ್ಷಿಸಿದವು.
‘₹ 10–15 ಮೊತ್ತದ ರಾಖಿಯಿಂದ ಹಿಡಿದು, ₹100ರಿಂದ 150ರವರೆಗಿನ ರಾಖಿಗಳು ಮಾರುಕಟ್ಟೆಯಲ್ಲಿವೆ. ಸಹೋದರರಿಗೆ ಕಡಿಮೆ ಬೆಲೆಗಿಂತ ಹೆಚ್ಚು ಬೆಲೆಯ ರಾಖಿ ಕೊಂಡರೇನೇ ಸಹೋದರಿಯರಿಗೆ ಹೆಚ್ಚು ಖುಷಿ. ಹೀಗಾಗಿ, ಕಡಿಮೆ ಬೆಲೆಗಿಂತ ಹೆಚ್ಚು ಬೆಲೆ ಹೊಂದಿರುವ ರಾಖಿಗಳನ್ನು ಕೊಂಡುಕೊಳ್ಳಲು ಯುವತಿಯರು ಇಷ್ಟಪಡುತ್ತಾರೆ’ ಎಂದು ವ್ಯಾಪಾರಿ ಸದಾನಂದ ಹಬೀಬ ಹೇಳಿದರು.
‘ವಿವಿಧ ವಿನ್ಯಾಸದ ರಾಖಿಗಳು ಮಾರುಕಟ್ಟೆಗೆ ಬಂದಿವೆ. ಗುಣಮಟ್ಟಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಿದ್ದಾರೆ. ಈವರೆಗೆ ನಾನು ಹರಳು ಇರುವ ರಾಖಿಯನ್ನೇ ತಮ್ಮನಿಗೆ ಕಟ್ಟಿದ್ದೇನೆ. ಈ ಬಾರಿಯೂ ಅದೇ ಮಾದರಿಯ ರಾಖಿ ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದು ಹುಬ್ಬಳ್ಳಿಯ ರಾಜೇಶ್ವರಿ ಹೇಳಿದರು.
ಕೈಯಲ್ಲಿ ₹20 ಹಿಡಿದುಕೊಂಡು ಬಂದಿದ್ದ ಚಿಕ್ಕ ಹುಡುಗಿಯರು ಕೂಡ, ತಮ್ಮಂದಿರಿಗೆ ರಾಖಿ ಕೊಳ್ಳಲು ಓಡಾಡುತ್ತಿದ್ದುದು ಗಮನ ಸೆಳೆಯಿತು.
‘ನನ್ನ ತಮ್ಮನಿಗೆ ಛೋಟಾ ಭೀಮ್ ತುಂಬಾ ಇಷ್ಟ. ಹಾಗಾಗಿ ಅದೇ ವಿನ್ಯಾಸದ ರಾಖಿ ಕೊಂಡುಕೊಂಡಿದ್ದೇನೆ. ಅಣ್ಣನಿಗೆ ಸ್ಟಾರ್ ಇರುವ ರಾಖಿ ಕಟ್ಟುತ್ತೇನೆ’ ಎಂದು ಖುಷಿಯಿಂದ ಹೇಳುತ್ತಾಳೆ ಚಿಂತನಾ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.