ಬುಧವಾರ, ಮೇ 12, 2021
18 °C

ಹರಿಹರ ನಗರಸಭೆ ಅಧ್ಯಕ್ಷರಾಗಿ ವಿಶ್ವನಾಥ ಭೂತೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ನಗರದಲ್ಲಿ ಬುಧವಾರ ನಡೆದ ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್‌ನ ವಿಶ್ವನಾಥ ಭೂತೆ ಜಯಗಳಿಸಿದರು.ರಾಧಾ ಸಿ.ಎನ್ ಹುಲಿಗೇಶ್ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ ಭೂತೆ, ರಮೇಶ ಮೆಹರ‌್ವಾಡೆ, ಬಿ.ಕೆ. ಸೈಯದ್ ರೆಹಮಾನ್ ಹಾಗೂ ಗಜಾನನ ದಲಬಂಜನ್ ನಾಮಪತ್ರ ಸಲ್ಲಿಸಿದ್ದರು. ಸೈಯದ್ ರೆಹಮಾನ್ ಹಾಗೂ ದಲಬಂಜನ್ ನಾಮಪತ್ರ ಹಿಂಪಡೆದರು. ವಿಶ್ವನಾಥ ಭೂತೆ ಹಾಗೂ ರಮೇಶ ಮೆಹರ‌್ವಾಡೆ ಅವರ ಮಧ್ಯೆ ನೇರ ಪೈಪೋಟಿ ಇತ್ತು.ನಗರಸಭೆ 20 ಜೆಡಿಎಸ್, 8 ಕಾಂಗ್ರೆಸ್, 1 ಬಿಜೆಪಿ, 2 ಪಕ್ಷೇತರ ಒಟ್ಟು 31ಸದಸ್ಯರು ಹಾಗೂ ಒಬ್ಬ ಶಾಸಕ, ಒಬ್ಬ ಸಂಸದ ಸೇರಿ 33 ಸದಸ್ಯರ ಬಲ ಹೊಂದಿದೆ. ಚುನಾವಣೆಗೆ ಗೈರುಹಾಜರಾದ ಗೌರಮ್ಮ ಕುಂಬಣ್ಣ (31ನೇ ವಾರ್ಡ್) ಹಾಗೂ ಅಬ್ದುಲ್‌ಸಾಬ್ (22ನೇ ವಾರ್ಡ್) ಅವರನ್ನು ಬಿಟ್ಟು ಉಳಿದ 29 ನಗರಸಭೆ ಸದಸ್ಯರು, ಶಾಸಕ ಬಿ.ಪಿ. ಹರೀಶ್ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಮತ ಚಲಾವಣೆ ಮಾಡಿದರು.ಕೈ ಎತ್ತಿ ಬೆಂಬಲ ಸೂಚಿಸುವ ಮೂಲಕ ಚುನಾವಣೆ ನಡೆಯಿತು. ವಿಶ್ವನಾಥ ಭೂತೆ 16 ಮತಗಳು ಹಾಗೂ ರಮೇಶ ಮೆಹರ‌್ವಾಡೆ 15 ಮತಗಳನ್ನು ಪಡೆದುಕೊಂಡರು. ಒಂದು ಮತದ ಅಂತರದಿಂದ ಜಯ ಗಳಿಸಿದ ವಿಶ್ವನಾಥಭೂತೆ ಅವರನ್ನು ವಿಜೇತರು ಎಂದು ಚುನಾವಣಾ ಅಧಿಕಾರಿಯಾದ ಉಪ ವಿಭಾಗಾಧಿಕಾರಿ ಎಸ್. ನಾಗರಾಜ್ ಘೋಷಣೆ ಮಾಡಿದರು.ವಿಶ್ವನಾಥ ಭೂತೆಗೆ ಜೆಡಿಎಸ್‌ನಿಂದ ಚುನಾಯಿತರಾದ 15 ಸದಸ್ಯರು ಹಾಗೂ ಪಕ್ಷೇತರ 1 ಸದಸ್ಯರ ಬೆಂಬಲ ದೊರೆಯಿತು. ರಮೇಶ ಮೆಹರ‌್ವಾಡೆಗೆ ಜೆಡಿಎಸ್‌ನಿಂದ ಚುನಾಯಿತರಾದ 5 ಸದಸ್ಯರು ಹಾಗೂ ಕಾಂಗ್ರೆಸ್‌ನಿಂದ ಚುನಾಯಿತರಾದ 6 ಸದಸ್ಯರು, ಪಕ್ಷೇತರ 1 ಹಾಗೂ ಶಾಸಕ ಮತ್ತು ಸಂಸದ ಬೆಂಬಲ ನೀಡಿದರು.ತಹಶೀಲ್ದಾರ್ ಜಿ. ನಜ್ಮಾ, ಪೌರಾಯುಕ್ತ ಎಂ.ಕೆ. ನಲವಡಿ ಉಪಸ್ಥಿತರಿದ್ದರು. ವಿಶ್ವನಾಥ ಭೂತೆ ಅವರಿಗೆ ನಗರಸಭೆ ಸದಸ್ಯರು ಅಭಿನಂದಿಸಿದರು. ಕಾರ್ಯಕರ್ತರು ನಗರಸಭೆ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.